Webdunia - Bharat's app for daily news and videos

Install App

ಸಚಿನ್ 20ಡುಲ್ಕರ್: ಸಿಡಿಲ ಮರಿಯಿಂದ ಮಾಸ್ಟರ್ ಬ್ಲಾಸ್ಟರ್‌ವರೆಗೆ

Webdunia
ಅವಿನಾಶ್ ಬಿ.
PTI
ನವೆಂಬರ್ 15, 1989. ಕರಾಚಿ. ಮುಖದಲ್ಲಿನ್ನೂ ಬಾಲ್ಯ ಮಾಸಿಲ್ಲದ, ಅಗಲ ಕಂಗಳ ಹುಡುಗನೊಬ್ಬ ಪಾಕಿಸ್ತಾನ ಕ್ರಿಕೆಟ್ ಜಗತ್ತಿನ ಘಟಾನುಘಟಿಗಳಾದ ಇಮ್ರಾನ್ ಖಾನ್, ಅಬ್ದುಲ್ ಖಾದಿರ್, ವಕಾರ್ ಯೂನಿಸ್ ಅವರನ್ನು ಎದುರಿಸುತ್ತಿದ್ದರೆ, ಭಾರತದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುತ್ತಿದ್ದ ಮಂದಿ, ಓ ದೇವರೇ ಈ ಹುಡುಗನಿಗೆ ಏನೂ ಆಗದಿರಲಿ ಎಂದು ಹಾರೈಸುತ್ತಿದ್ದವರೇ. 16 ವರ್ಷದ ಹುಡುಗ ವಿಶ್ವದ ಘಟಾನುಘಟಿ ಬೌಲರುಗಳನ್ನು ಹೇಗೆ ಎದುರಿಸಬಲ್ಲ ಎಂದು ತತ್ತರಿಸುತ್ತಿದ್ದವರಿಗೆ ಸಮರ್ಥವಾಗಿ ಉತ್ತರ ನೀಡಿದ್ದ ಈ ಪೋರ. ಇದೆಲ್ಲಾ ಕಳೆದು, ಕ್ರಿಕೆಟ್ ಜಗತ್ತಿಗೆ ಮೊನ್ನೆ ಮೊನ್ನೆ ಬಂದಂತಿದ್ದ ನಮ್ಮ ಲಿಟ್ಲ್ ಮಾಸ್ಟರ್, ಈಗ ಮಾಸ್ಟರ್ ಬ್ಲಾಸ್ಟರ್ ಆಗಿದ್ದಾರೆ, ನಾಡಿದ್ದು ಭಾನುವಾರ 20 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಪೂರ್ಣಗೊಳಿಸುತ್ತಿದ್ದಾರೆ. ಅವರೇ ಟೆಸ್ಟ್, ಏಕದಿನ ರನ್ನುಗಳ ಮತ್ತು ಸೆಂಚುರಿಗಳ ಶಿಖರಾಗ್ರದಲ್ಲಿ ಝಂಡಾ ಹೂಡಿರುವ ಸಚಿನ್ ರಮೇಶ್ ತೆಂಡುಲ್ಕರ್!

ಸಚಿನ್ ವೃತ್ತಿ ಜೀವನ ಆರಂಭಿಸಿದ್ದಾಗ ಇ-ಮೇಲುಗಳಿರಲಿಲ್ಲ, ಅಂತರಜಾಲ ಎಂಬುದು ದೂರದಲ್ಲೆಲ್ಲೋ ಕೇಳಿಸುತ್ತಿದ್ದ ಸದ್ದಿನಂತಿತ್ತು, ನೆಲ್ಸನ್ ಮಂಡೇಲಾ ಆಗಿನ್ನೂ ಜೈಲಿನಲ್ಲಿದ್ದರು, ಆಗಷ್ಟೇ ರಾಜೀವ್ ಗಾಂಧಿ ಪ್ರಧಾನಿ ಅವಧಿ ಪೂರೈಸಿ, ವಿಶ್ವನಾಥ್ ಪ್ರತಾಪ ಸಿಂಗರ ಕೈಗೆ ಪ್ರಧಾನಿ ಪದವಿಯ ಸ್ಥಿತ್ಯಂತರವಾಗುತ್ತಿತ್ತು. ಆಗೇನೂ ಮೊಬೈಲ್ ಫೋನುಗಳ ಭರಾಟೆಯೂ ಇರಲಿಲ್ಲ. ಸಚಿನ್ ಅವರ ಹಾಲಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂದು ಕೇವಲ ಎಂಟು ವರ್ಷದ ಶಾಲಾ ಬಾಲಕ! ಸಹ ಆಟಗಾರರಾದ ರವೀಂದ್ರ ಜಡೇಜಾ, ವಿರಾಟ್ ಕೋಹ್ಲಿ ಮುಂತಾದವರು ಹಸುಗೂಸುಗಳು!

PTI
ಎರಡು ದಶಕಗಳ ಕಾಲ ಕ್ರಿಕೆಟ್ ಜಗತ್ತಿನ ಎರಡೂ ವಿಧಗಳಲ್ಲಿ (ಏಕದಿನ ಮತ್ತು ಟೆಸ್ಟ್) ಅಗ್ರಮಾನ್ಯ ಪಟ್ಟದಲ್ಲಿ ರಾರಾಜಿಸಿದ್ದ ಸಚಿನ್ ತೆಂಡುಲ್ಕರ್ ಎಂಬ ಸಿಡಿಲ ಮರಿ, ತನ್ನ ಕ್ರಿಕೆಟ್ ಜೀವನದ ಮೂರನೇ ದಶಕಕ್ಕೆ ಕಾಲಿರಿಸುತ್ತಿದ್ದಾರೆ. ಶಾಲಾ ದಿನಗಳಲ್ಲೇ ತನ್ನೊಳಗಿನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಪ್ರಚುರಪಡಿಸಿದ್ದ ಸಚಿನ್ ಈಗ ವಂಡರ್ ಕಿಡ್ ಆಗಿ ಉಳಿದಿಲ್ಲ, ಶತಕಗಳ ಸರದಾರನಾಗಿದ್ದಾರೆ, ರನ್ ಪರ್ವತಗಳ ಶಿಖರವಾಗಿಬಿಟ್ಟಿದ್ದಾರೆ, ಅದಕ್ಕಿಂತ ಹೆಚ್ಚಾಗಿ, ತಮ್ಮ ಅಭಿಮಾನಿಗಳೊಂದಿಗೆ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳ ಸಂಖ್ಯೆಯನ್ನೂ ಹೆಚ್ಚಿಸಿಬಿಟ್ಟಿದ್ದಾರೆ ಎಂದರೂ ತಪ್ಪಲ್ಲ.

" ಕ್ರಿಕೆಟ್ ಬಗೆಗಿನ ನನ್ನ ಪ್ರೀತಿ ಮತ್ತು ದೇಶಕ್ಕಾಗಿ ಆಡುತ್ತಿದ್ದೇನೆ ಎಂಬ ಹೆಮ್ಮೆಯೇ ಇಷ್ಟು ದಿನವೂ ನನ್ನನ್ನು ಕೈಹಿಡಿದು ನಡೆಸುತ್ತಿದ್ದ ಜ್ಯೋತಿ" ಎಂದು ಸಾರಿರುವ ಸಚಿನ್ ತೆಂಡುಲ್ಕರ್ ಅಹಮದಾಬಾದಿನಲ್ಲಿ ಶ್ರೀಲಂಕಾ ವಿರುದ್ಧ ತಮ್ಮ 160ನೇ ಟೆಸ್ಟ್ ಪಂದ್ಯ ಆಡಲಿದ್ದಾರೆ. ಅತೀ ಹೆಚ್ಚು ಟೆಸ್ಟ್ ಪಂದ್ಯ ಆಡಿದವರಲ್ಲಿ ಇವರಿಗಿಂತ ಮುಂದೆ ಇರುವವರು ಆಸ್ಟ್ರೇಲಿಯಾದ ಸ್ಟೀವ್ ವೋ (168). 16ರ ಹರೆಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭಿಸಿದ್ದ ಸಚಿನ್ ಈ ಇಪ್ಪತ್ತು ವರ್ಷಗಳಲ್ಲಿ ದಾಟದ ಮೈಲುಗಲ್ಲುಗಳಿಲ್ಲ. ಮೈಲುಗಲ್ಲುಗಳನ್ನು ದಾಟುತ್ತಲೇ ಅವರು ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಹೋದರು. ಟೆಸ್ಟ್ ಮತ್ತು ಏಕದಿನ ಪಂದ್ಯಗಳೆರಡರಲ್ಲೂ ಸಮರ್ಥ ರೀತಿಯಲ್ಲಿ ಆಡಿ, ದೀರ್ಘಕಾಲದ ದೈಹಿಕ ಕ್ಷಮತೆಯನ್ನೂ ಕಾಯ್ದುಕೊಂಡವರು.

ಟೀಕೆಗಳೆದುರಾದಾಗ ಮೌನವಾಗಿದ್ದುಕೊಂಡೇ 'ನಾನು ಮಾತನಾಡುವುದಿಲ್ಲ, ನನ್ನ ಬ್ಯಾಟು ಮಾತನಾಡುತ್ತದೆ' ಎಂದುಬಿಡುತ್ತಿದ್ದರು ಸಚಿನ್, ಇಂತಹ ಜೀನಿಯಸ್‌ನನ್ನು ಈಗಿನಂತೆ ತಾರಾ ಮೌಲ್ಯಗಳಿಲ್ಲದಿದ್ದ ದಿನಗಳ ಬ್ಯಾಟಿಂಗ್ ಹೀರೋ ಸರ್ ಡಾನ್ ಬ್ರಾಡ್ಮನ್ ಅವರನ್ನು ಹೋಲಿಸಲಾಗುತ್ತದೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 15 ರನ್ನುಗಳಿಗೆ ಔಟಾಗಿದ್ದರು ಸಚಿನ್. ಅವರ ವಿಕೆಟ್ ಕಿತ್ತ ವಕಾರ್ ಯೂನಿಸ್ ಅವರಿಗೆ ಕೂಡ ಇದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಆದರೆ ಪಾಕ್ ವೇಗಿಗಳನ್ನು ಅವರು ಎದುರಿಸಿದ ಪರಿ ಶ್ಲಾಘನೆಗೆ ಪಾತ್ರವಾಯಿತು. ಈ ಸರಣಿಯಲ್ಲಿ 35.83 ಸರಾಸರಿಯಲ್ಲಿ ಅವರು 215 ರನ್ ಸೇರಿಸಿದ್ದರು. ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ (ಅದೇ ಪ್ರವಾಸದಲ್ಲಿ) ಅವರ ರನ್ ಶೂನ್ಯ. ಆದರೆ ನಂತರ ಪೇಶಾವರದಲ್ಲಿ ನಡೆದಿದ್ದ 20 ಓವರುಗಳ ಪ್ರದರ್ಶನ ಪಂದ್ಯದಲ್ಲಿ 18 ಎಸೆತಗಳಲ್ಲಿ 53 ರನ್ ಸಿಡಿಸಿದ್ದ ಅವರು, ಆ ಕಾಲದ ಮಾರಕ ಬೌಲರ್ ಅಬ್ದುಲ್ ಖಾದಿರ್ ಅವರ ಒಂದೇ ಓವರಿನಲ್ಲಿ 28 ರನ್ ಸೂರೆಗೈದಿದ್ದರು!

PTI
ಅದು ಶಾರ್ಜಾದಲ್ಲಿ ಭಾರತ-ಪಾಕಿಸ್ತಾನ ಕದನ ಪ್ರಖ್ಯಾತಾಗಿದ್ದ ದಿನಗಳು. ಆವತ್ತು ಸ್ಟೇಡಿಯಂನಲ್ಲಿ ಕಾಣಿಸುತ್ತಿದ್ದ ಒಂದು ಬ್ಯಾನರ್ - I will see God when I die, but till then I will see Sachin! ( ನಾನು ಸತ್ತ ಮೇಲೆ ದೇವರನ್ನು ನೋಡುತ್ತೇನೆ, ಆದರೆ ಅದುವರೆಗೂ ಸಚಿನ್‌ರನ್ನು ನೋಡುತ್ತಿರುತ್ತೇನೆ!) ಅಂದರೆ ಸಚಿನ್ ಎಂದರೆ ಕ್ರಿಕೆಟಿನ ದೇವರು ಇದ್ದಂತೆ! ಈ ಅಭಿಮಾನದ ಭಾವನೆ ಈಗಲೂ ಭಾರತೀಯ ಅಭಿಮಾನಿಗಳಲ್ಲಿದೆ.

ಸಚಿನ್ ಬಂದ ಬಳಿಕ ಕ್ರಿಕೆಟಿನಲ್ಲಿ ಕೂಡ ಆಮೂಲಾಗ್ರ ಬದಲಾವಣೆಗಳಾಗಿವೆ. ಥರ್ಡ್ ಅಂಪೈರ್ ವ್ಯವಸ್ಥೆ ಬಂದಿದೆ, ಪವರ್ ಪ್ಲೇ ಸೇರ್ಪಡೆಯಾಗಿದೆ, ಟ್ವೆಂಟಿ-20 ಎಂಬ ಮಿಂಚಿನ ಕ್ರಿಕೆಟ್ ಆಗಮಿಸಿದೆ, ಏಕದಿನ ಪಂದ್ಯಗಳಲ್ಲಂತೂ 275 ಎಂಬುದು ಬರೇ ಸಾಮಾನ್ಯ ಮೊತ್ತ ಆಗಿಬಿಟ್ಟಿದೆ. ಹಿಂದೆಲ್ಲಾ ಬೋರ್ ಹೊಡೆಸುತ್ತಿದ್ದ ಟೆಸ್ಟ್ ಪಂದ್ಯಗಳು, ಆಸಕ್ತಿದಾಯಕವಾಗುತ್ತಾ, ಐದು ದಿನದೊಳಗೆ ಫಲಿತಾಂಶಗಳು ಕೂಡ ಬರುತ್ತಿವೆ. ಕ್ರಿಕೆಟ್ ರೋಚಕ ಘಟ್ಟದಲ್ಲಿದೆ.

ಸಚಿನ್‌ರಂತೆ 20 ವರ್ಷ ಕ್ರಿಕೆಟ್ ಆಡಿದವರಲ್ಲಿ ಪಾಕಿಸ್ತಾನದ ಇಮ್ರಾನ್ ಖಾನ್ ಮತ್ತು ಮುಷ್ತಾಕ್ ಮಹಮದ್, ವೆಸ್ಟ್ ಇಂಡೀಸ್‌ನ ಗ್ಯಾರಿಫೀಲ್ಡ್ ಸೋಬರ್ಸ್, ಇಂಗ್ಲೆಂಡಿನ ಕಾಲಿನ ಕೌಡ್ರೆ ಮತ್ತು ಆಸ್ಟ್ರೇಲಿಯಾದ ಬಾಬ್ಬಿ ಸಿಂಪ್ಸನ್ ಪ್ರಮುಖರು. ಆದರೆ ಅವರ್ಯಾರಿಗೂ ಸಚಿನ್‌ರಂತಹ ಪರಮಶ್ರೇಷ್ಠ ರನ್‌ಗಳ ಸಾಧನೆ ಮಾಡಲಾಗಿರಲಿಲ್ಲ ಎಂಬುದು ವಿಶೇಷ.

1989 ರಲ್ಲಿ ಪಾಕಿಸ್ತಾನ ವಿರುದ್ಧ ಆಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಂದಿನಿಂದ ತೆಂಡುಲ್ಕರ್ 159 ಟೆಸ್ಟ್ ಪಂದ್ಯಗಳನ್ನು ಆಡಿ 42 ಶತಕಗಳೊಂದಿಗೆ 54.58ರ ಸರಾಸರಿಯಲ್ಲಿ 12,773 ರನ್ನುಗಳನ್ನು ಸಂಪಾದಿಸಿದ್ದಾರೆ. ಅದೇ ವರ್ಷದ ಡಿಸೆಂಬರ್ 19ರಿಂದೀಚೆಗೆ (ಪಾಕ್ ವಿರುದ್ಧ ಗುಜ್ರಾನ್‌ವಾಲಾದಲ್ಲಿ ಚೊಚ್ಚಲ ಏಕದಿನ ಪಂದ್ಯ) 436 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ, 45 ಶತಕಗಳೊಂದಿಗೆ 44.50ರ ಸರಾಸರಿಯಲ್ಲಿ 17,178 ರನ್ನುಗಳ ರಾಶಿಯನ್ನು ಒಟ್ಟುಗೂಡಿಸಿದ್ದಾರೆ.

ಸಚಿನ್ ಹುಟ್ಟಿದ್ದು ಮರಾಠಿ ಮಧ್ಯಮವರ್ಗದ ಕುಟುಂಬದಲ್ಲಿ. ತಂದೆ ರಮೇಶ್ ತೆಂಡುಲ್ಕರ್ ಮರಾಠಿ ಕಾದಂಬರಿಕಾರ. ಬಾಲಿವುಡ್ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ (ಎಸ್.ಡಿ.ಬರ್ಮನ್) ಅವರ ಅಭಿಮಾನಿಯಾಗಿದ್ದ ರಮೇಶ್, ತಮ್ಮ ಮಗನಿಗೂ ಸಚಿನ್ ಹೆಸರಿಟ್ಟಿದ್ದರು. ಈಗ ಸಚಿನ್ ಕ್ರಿಕೆಟ್ ಜಗತ್ತಿನ ಬಿಲಿಯಾಧಿಪತಿ ಮತ್ತು ಕ್ರಿಕೆಟ್ ದೇವರು ಎಂದೂ ಕರೆಯುವಷ್ಟರ ಎತ್ತರಕ್ಕೆ ಬೆಳೆದುಬಿಟ್ಟಿದ್ದಾರೆ. ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದು ಸಚಿನ್ ಕನಸು.

PTI
ಜನನ: ಏಪ್ರಿಲ್ 24, 1973
ತಂದೆ: ರಮೇಶ್ ತೆಂಡುಲ್ಕರ್
ತಾಯಿ: ರಜನಿ ತೆಂಡುಲ್ಕರ್
ಪತ್ನಿ: ಡಾಕ್ಟರ್ ಅಂಜಲಿ.
ಮಕ್ಕಳು: ಸಾರಾ (ಜನ್ಮದಿನ: ಅಕ್ಟೋಬರ್ 12, 1997) ಮತ್ತು ಅರ್ಜುನ್ (ಜನ್ಮದಿನ: ಸೆಪ್ಟೆಂಬರ್ 24, 1999)
ಕ್ರಿಕೆಟ್ ಗುರು: ಶಾರದಾಶ್ರಮ ವಿದ್ಯಾಮಂದಿರ ಹೈಸ್ಕೂಲಿನಲ್ಲಿ ರಮಾಕಾಂತ ಅಚರೇಕರ್.
ಅಭಿಮಾನಿಗಳ ಬಿರುದು: ಸಿಡಿಲ ಮರಿ, ಲಿಟ್ಲ್ ಮಾಸ್ಟರ್, ಮಾಸ್ಟರ್ ಬ್ಲಾಸ್ಟರ್
ಬಿರುದು: ಪದ್ಮವಿಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ, ವಿಸ್ಡನ್ ವರ್ಷದ ಕ್ರಿಕೆಟಿಗ
ಸಹೋದರ/ರಿ: ಅಜಿತ್, ನಿತಿನ್ ಮತ್ತು ಸವಿತಾಯಿ

ಕ್ರಿಕೆಟ್ ಜಗತ್ತು ಕಂಡ ಭಯಾನಕ ವೇಗಿ ಡೆನ್ನಿಸ್ ಲಿಲ್ಲೀ ಅವರ ಮುಂದಾಳುತ್ವದಲ್ಲಿದ್ದ ಎಂಆರ್ಎಫ್ ಪೇಸ್ ಫೌಂಡೇಶನ್ ಸೇರಿ, ವೇಗದ ಬೌಲರ್ ಆಗಹೊರಟಿದ್ದ ಸಚಿನ್ ಜೀವನ ಹಲವು ತಿರುವುಗಳನ್ನು ಕಂಡು, ಕ್ರಿಕೆಟ್ ಜಗತ್ತಿನ ಶಿಖರಾಗ್ರದಲ್ಲಿ ತಂದು ನಿಲ್ಲಿಸುವಂತಾಗಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪುಣ್ಯದ ಫಲ. ಇಂತಹ ಸಿಡಿಲ ಮರಿಯಿಂದ ಮತ್ತಷ್ಟು ಅಮೂಲ್ಯ ಕಾಣಿಕೆಗಳು ಭಾರತೀಯ ಕ್ರಿಕೆಟಿಗೆ ದೊರೆಯಲಿ, ಕ್ರಿಕೆಟ್ ಶ್ರೀಮಂತವಾಗಲಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments