Select Your Language

Notifications

webdunia
webdunia
webdunia
webdunia

ಹೇಸಿಗೆ ರಾಜಕೀಯದ ಆಡುಂಬೊಲದಲ್ಲಿ ಅರಳಿದ ಶಾಸ್ತ್ರೀಯತೆ

ಹೇಸಿಗೆ ರಾಜಕೀಯದ ಆಡುಂಬೊಲದಲ್ಲಿ ಅರಳಿದ ಶಾಸ್ತ್ರೀಯತೆ
ನಾಗೇಂದ್ರ ತ್ರಾಸಿ
2008 ಭಯೋತ್ಪಾದಕರ ಅಟ್ಟಹಾಸ, ನಕ್ಸಲೀಯರ ರಕ್ತದಾಹ, ರಾಜ್ಯರಾಜಕಾರಣ ಹಿಂದೆಂದೂ ಕಾಣದಂತಹ ಹೇವರಿಕೆ ಹುಟ್ಟಿಸುವ ರಾಜಕಾರಣ ಸೇರಿದಂತೆ ಹಲವಾರು ಬೀಭತ್ಸ ಘಟನೆಗಳಿಗೆ ಸಾಕ್ಷಿಯಾಗುವ ಮೂಲಕ ನಮ್ಮನ್ನು ಹೊಸವರ್ಷದತ್ತ ಕೊಂಡೊಯ್ದಿದೆ. ಜನತಾಪರಿವಾರ ಸರಕಾರದ ನಂತರ ರಾಜ್ಯರಾಜಕಾರಣದಲ್ಲಿ ಅದರಲ್ಲೂ ದಕ್ಷಿಣಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಏರಿರುವುದು ರಾಜ್ಯದ ಪ್ರಮುಖ ಬೆಳವಣಿಗೆಯಲ್ಲಿ ಒಂದಾಗಿದೆ. ಅದರಂತೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗರಿ ಹೀಗೆ ಹಲವು ಸಿಹಿ-ಕಹಿ ಘಟನಾವಳಿಗಳ ಹಿನ್ನೋಟ ಇಲ್ಲಿದೆ.....
PTI

ಉಗ್ರರು ಬಾಯ್ಬಿಟ್ಟ ಸ್ಫೋಟ ನಂಟು:
ದಾವಣಗೆರೆ ಸಮೀಪದ ಹೊನ್ನಾಳಿಯಲ್ಲಿ ಬೈಕ್ ಕಳ್ಳತನದ ಮೇಲೆ ಪೊಲೀಸರಿಗೆ ಸೆರೆಸಿಕ್ಕ ಮಹಮ್ಮದ್ ಗೌಸ್ ಅಲಿಯಾಸ್ ರಿಯಾಸುದ್ದೀನ್ ನಾಸೀರ್ ಮತ್ತು ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ತನಿಖೆ ವೇಳೆ ಬಹಿರಂಗ ಪಡಿಸಿದ ನಗ್ನ ಸತ್ಯಗಳು ಕರ್ನಾಟಕವನ್ನು ಬೆಚ್ಚಿ ಬೀಳಿಸಿತ್ತು.ಧಾರವಾಡದ ಕಲಘಟಗಿ ಬಳಿ ಅರಣ್ಯದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡಿರುವ ಬಗ್ಗೆಯೂ ವಿವರ ನೀಡಿದ್ದರು. ಕರ್ನಾಟಕದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಗಟ್ಟಿಗೊಳಿಸಲು ದಾರ್ ಇ ರಿಬಾತ್ ಎಂಬ ಸಂಘಟನೆ ಮೂಲಕ ತರಬೇತಿ ಪಡೆದಿರುವುದಾಗಿ ಗೌಸ್ ತಿಳಿಸಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಕಿಮ್ಸ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಆಸೀಫ್‌‌ನನ್ನು ಬಂಧಿಸುವ ಮೂಲಕ ಮತ್ತಷ್ಟು ಸ್ಫೋಟಕ ವಿವರಗಳು ಬಯಲಾಗಿದ್ದವು.ಹುಬ್ಬಳ್ಳಿ ಸಿಮಿ ಸಂಘಟನೆಯ ನಾಯಕನಾಗಿರುವ ಆಸೀಫ್ ಕರ್ನಾಟಕ ಮತ್ತು ಗೋವಾದ ಒಟ್ಟು 11 ಪ್ರಮುಖ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸುವ ಸಂಚು ಕೂಡ ಬಯಲಾಗಿತ್ತು.

ಅಧಿಕಾರದ ಗದ್ದುಗೆ ಏರಿದ ಬಿಜೆಪಿ:
ಕರ್ನಾಟಕ ರಾಜ್ಯರಾಜಕಾರಣದಲ್ಲಿ ಅತಿ ಹೆಚ್ಚು ಆಳ್ವಿಕೆ ನಡೆಸಿದ್ದು ಕಾಂಗ್ರೆಸ್ ಬಳಿಕ ಜನತಾ ಪರಿವಾರ ಸಡ್ಡು ಹೊಡೆಯುವ ಮೂಲಕ 1983ರಲ್ಲಿ ಕಾಂಗ್ರೆಸ್ಸೇತರ ಸರಕಾರ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಭಾರತೀಯ ಜನತಾ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಕನಸು ಕೊನೆಗೂ ನನಸಾಗಿದ್ದು, 2008ರಲ್ಲಿ. ಅದು ಭಾಜಪದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾದ ಪ್ರಮುಖ ಘಟನೆಯಾಗಿತ್ತು. ಯಾಕೆಂದರೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ ಏರಿದ ಕೀರ್ತಿಗೆ ಭಾಜನಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ , ಬಳಿಕ ಜೆಡಿಎಸ್-ಬಿಜೆಪಿ ಮೈತ್ರಿ, ರಾಷ್ಟ್ರಪತಿ ಆಳ್ವಿಕೆ, ವಚನಭ್ರಷ್ಟತೆಯೊಂದಿಗೆ ಕೆಳಮಟ್ಟದ ರಾಜಕೀಯದಿಂದ ಮತದಾರರಲ್ಲಿ ಅಸಮಾಧಾನ ಹುಟ್ಟು ಹಾಕುವ ಮೂಲಕ, ಕೊನೆಗೂ ಬಿಜೆಪಿ ಚುನಾವಣೆಯಲ್ಲಿ ಜಯಬೇರಿ ಬಾರಿಸಿ, ಆಡಳಿತ ಚುಕ್ಕಾಣಿ ಹಿಡಿದಿತ್ತು. ಈ ಯಶಕ್ಕೆ ಕಾರಣರಾದವರು ಬೂಕನಕೆರೆ ಎಸ್. ಯಡಿಯೂರಪ್ಪ. ಬಿಜೆಪಿ ಅಧಿಕಾರದೊಂದಿಗೆ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸುವ ಮೂಲಕ ಭಾಜಪ ತನ್ನ ಛಾಪು ಮೂಡಿಸಿತ್ತು.
webdunia
PTI

ರಸಗೊಬ್ಬರ ಮತ್ತು ಗೋಲಿಬಾರ್:
ರೈತ ಹೆಸರಲ್ಲಿ ಹಸಿರು ಶಾಲು ಹೊದ್ದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಾರೂಢ ಸರಕಾರ ಕೊನೆಗೂ ರಾಜ್ಯದಲ್ಲಿ ರಸಗೊಬ್ಬರದ ಅಭಾವ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗುವ ಮೂಲಕ ರೈತರ ಆಕ್ರೋಶಕ್ಕೆ ಸಿಲುಕಿತ್ತು. ಧಾರವಾಡ-ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ರೈತರ ಆಕ್ರೋಶ ಹಿಂಸಾಚಾರಕ್ಕೆ ತಿರುಗಿತ್ತು. ಕೊನೆಗೂ ಹಾವೇರಿಯಲ್ಲಿ ಉದ್ರಿಕ್ತ ರೈತರ ಗುಂಪಿನ ಮೇಲೆ ಪೊಲೀಸರು ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ರೈತನೋರ್ವ ಬಲಿಯಾಗಬೇಕಾಯಿತು. ಈ ಘಟನೆ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರಿಗೆ ಕಳಂಕ ತಂದಿತ್ತು. ಅಲ್ಲದೇ ಪ್ರತಿಪಕ್ಷಗಳ, ರೈತರ ತೀವ್ರ ಟೀಕೆಗೆ ಒಳಗಾಗಬೇಕಾಗಿದ್ದು ವಿಪರ್ಯಾಸ.

ಆಪರೇಶನ್ ಕಮಲ:
ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಪಟ್ಟ ಅಲಂಕರಿಸಿದ್ದ ಬಿಜೆಪಿ ತನ್ನ ಸರಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಸರಿಸಿದ 'ಆಪರೇಶನ್ ಕಮಲ'ದ ತಂತ್ರಗಾರಿಕೆ ಎಲ್ಲ ನೀತಿ, ನಿಯಮ, ತತ್ವಬದ್ದ ರಾಜಕಾರಣಕ್ಕೆ ತಿಲಾಂಜಲಿ (ಈ ಮೊದಲು ಕಾಂಗ್ರೆಸ್ , ಜನತಾಪರಿವಾರದಿಂದ ಆಗಿತ್ತಾದರೂ ಈ ಪ್ರಮಾಣದಲ್ಲಿ ಆಗಿರಲಿಲ್ಲ) ನೀಡುವ ಮೂಲಕ ಕೊಳಕು ರಾಜಕೀಯಕ್ಕೆ ಇಳಿದ ಅಪವಾದಕ್ಕೆ ಗುರಿಯಾಗಬೇಕಾಯಿತು. ಕ್ಷಿಪ್ರ ರಾಜಕೀಯ ಬೆಳವಣಿಗೆ ಎಂಬಂತೆ ಜೆಡಿಎಸ್‌ನ ಇಬ್ಬರು ಕಾಂಗ್ರೆಸ್‌ನ ಇಬ್ಬರು ಶಾಸಕರು ಜನಾದೇಶವನ್ನು ದಿಕ್ಕರಿಸಿ, ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಮತ್ತೆ ಕಾಂಗ್ರೆಸ್‌ನ ಓರ್ವ ಹಾಗೂ ಜೆಡಿಎಸ್‌ನ ಇಬ್ಬರು ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
webdunia
PTI

ಜೆಡಿಎಸ್‌ನ ಮಧುಗಿರಿ ಕ್ಷೇತ್ರದ ಗೌರಿಶಂಕರ್, ಹುಕ್ಕೇರಿಯ ಉಮೇಶ್ ಕತ್ತಿ, ದೇವದುರ್ಗದ ಶಿವನಗೌಡ, ಅರಬಾವಿಯ ಬಾಲಚಂದ್ರ ಜಾರಕಿಹೊಳಿ, ಕಾಂಗ್ರೆಸ್‌ನ ಕಾರವಾರದ ಆನಂದ ಅಸ್ನೋಟಿಕರ್, ಜಗ್ಗೇಶ್-ತುರುವೇಕೆರೆ, ದೊಡ್ಡಬಳ್ಳಾಪುರ ನರಸಿಂಹ ಸ್ವಾಮಿ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ, ರಾಜ್ಯದ ಏಳು ಕ್ಷೇತ್ರಗಳಲ್ಲಿ ಮತ್ತೆ ಉಪಚುನಾವಣೆ ನಡೆಸುವ ಹೊರೆಯನ್ನು ಹೊರಿಸಿದ್ದಾರೆ. ಆ ನಿಟ್ಟಿನಲ್ಲಿ ಜನಾದೇಶ ದಿಕ್ಕರಿಸಿ, ಅಧಿಕಾರದ ಆಸೆಗಾಗಿ ಬಿಜೆಪಿ ಸೇರ್ಪಡೆಗೊಂಡ ಶಾಸಕರಿಗೆ ಉಪಚುನಾವಣೆಯಲ್ಲಿ ಯಾವ ಪಕ್ಷದ ಪರ ತೀರ್ಪು ನೀಡುತ್ತಾನೆ ಎಂಬುದು ರಾಜಕಾರಣಗಳಿಗೆ ತಕ್ಕ ಪಾಠವಾಗಲಿದೆ.

ಹೊಗೇನಕಲ್ ವಿವಾದ:
ತಮಿಳುನಾಡಿನ ಫ್ಲೈ ಓವರ್ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರು, ಹೊಗೇನಕಲ್ ನೀರಾವರಿ ಯೋಜನೆ ಬಗ್ಗೆ ಮಾತನಾಡುತ್ತ, ಜೀವ ತೆತ್ತಾದರೂ ಹೊಗೇನಕಲ್ ಯೋಜನೆ ಮಾಡಿಯೇ ಸಿದ್ದ ಎಂಬ ಹೇಳಿಕೆ, ಕರ್ನಾಟಕದಾದ್ಯಂತ ಆಕ್ರೋಶ ಭುಗಿಲೇಳಲು ಕಾರಣವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದಲ್ಲದೇ, ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಅದರ ಪರಿಣಾಮ ಎಂಬಂತೆ ತಮಿಳುನಾಡಿನಲ್ಲೂ ಕೆಲವು ಕನ್ನಡಿಗರ ಸಂಸ್ಥೆ, ಹೋಟೆಲುಗಳ ಮೇಲೂ ದಾಳಿ ನಡೆದಿತ್ತು. ತಮಿಳು ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿ. ಬಳಿಕ ಬೆಂಗಳೂರಿನ ತಮಿಳಿಗರಿಗೆ ಒತ್ತಡ, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮಧ್ಯಸ್ಥಿಕೆಯಿಂದಾಗಿ, ಕರುಣಾನಿಧಿಯವರು ಕರ್ನಾಟಕದಲ್ಲಿ ನೂತನ ಸರಕಾರ ಬರುವವರೆಗೆ ಹೊಗೇನಕಲ್ ಯೋಜನೆ ಮುಂದುವರಿಸುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ತಣ್ಣಗಾಗಿತ್ತು.

ನಕ್ಸಲರ ಅಟ್ಟಹಾಸ:
ಕುದುರೆಮುಖ, ಉಡುಪಿ, ಶೃಂಗೇರಿ ಅಭಯಾರಣ್ಯಗಳಲ್ಲಿ ತಳವೂರಿದ್ದ ನಕ್ಸಲೀಯರು, ಸಾಕೇತ್ ರಾಜನ್,ಶಿವಲಿಂಗು, ಹಾಜೀಮಾ ಹತ್ಯೆಯ ಬಳಿಕ ಸ್ವಲ್ಪ ತಟಸ್ಥವಾಗಿದ್ದರು. ಆಗಾಗ ಪಶ್ಚಿಮಘಟ್ಟಗಳಲ್ಲಿ ತಮ್ಮ ಅಟ್ಟಹಾಸ ಮೆರೆಯುತ್ತಿದ್ದ ನಕ್ಸಲ್ ತಂಡದ ವಿರುದ್ಧ ಪೊಲೀಸ್ ಪಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಮೇ.16ರಂದು ಸೋಮೇಶ್ವರ ಸಮೀಪದ ಹೆಬ್ರಿಯ ಶಿಕ್ಷಕ ಭೋಜ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಎಂಬಿಬ್ಬರು ನಕ್ಸಲ್‌ರ ಗುಂಡಿಗೆ ಬಲಿಯಾಗುವ ಮೂಲಕ, ಮತ್ತೆ ನಕ್ಸಲ್ ರಕ್ತದಾಹದ ಬಗ್ಗೆ ಪಶ್ಚಿಮಘಟ್ಟ ಬೆಚ್ಚಿಬಿದ್ದಿತ್ತು. ತದನಂತರ ನಕ್ಸಲ್ ಚಟುವಟಿಕೆ ಮತ್ತೆ ತಣ್ಣಗಾದಂತೆ ಕಂಡು ಬಂದಿದ್ದರೂ ಕೂಡ, ಪಶ್ಚಿಮಘಟ್ಟದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ಬಂಧಿಸಲಾಗಿತ್ತು, ಎನ್‌ಕೌಂಟರ್ ಮಾಡಲಾಯಿತು ಎಂಬ ವದಂತಿಗಳು ಹಬ್ಬಿದ್ದವು. ಆದರೆ ಸ್ವತಃ ಬಿಜಿಕೆಯೇ ಹೇಳಿಕೆ ನೀಡಿದ ನಂತರ ಊಹಾಪೋಹಗಳಿಗೆ ತೆರೆಬಿದ್ದಿತ್ತು. ಹಾಗೆ ಶೃಂಗೇರಿಯ ಬಿಜೆಪಿ ಪ್ರಮುಖ ನಾಯಕರೊಬ್ಬರು ಸೇರಿದಂತೆ ಎಂಟು ಮಂದಿಯನ್ನು ನಕ್ಸಲ್ ತಂಡವೊಂದು ರಹಸ್ಯವಾಗಿ ಮಾತುಕತೆ ನಡೆಸಿ,ಅವರನ್ನು ಸುರಕ್ಷಿತವಾಗಿ ಬಿಟ್ಟಿತ್ತು. ಇದು ಪೊಲೀಸ್ ಇಲಾಖೆಗೆ ತಲೆನೋವು ತಂದ ವಿಚಾರವಾಗಿತ್ತು. ಕೂಡಲೇ ರಹಸ್ಯವಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಪಡೆ ಹೊರನಾಡಿನ ಮಾವಿನಹೊಲದ ಬಳಿ ನಕ್ಸಲರು ಹಾಗೂ ಪೊಲೀಸ್ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲೀಯರು, ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಬಲಿಯಾಗಿದ್ದರು.ಇವೆಲ್ಲ ಘಟನೆ ನಡೆಯುತ್ತಿದ್ದಂತೆಯೇ ಕುಂದಾಪುರ ತಾಲೂಕಿನ ಹಳ್ಳಿಹೊಳೆಯಲ್ಲಿ ಭೂಮಾಲೀಕ ಕೇಶವ ಯಡಿಯಾಳರನ್ನು ಮರಕ್ಕೆ ಕಟ್ಟಿಹಾಕಿ ಗುಂಡು ಹಾರಿಸಿ ಹತ್ಯೆಗೈಯುವ ಮೂಲಕ ನಕ್ಸಲೀಯರ ಅಟ್ಟಹಾಸ ಮುಂದುವರಿಯುವ ಮುನ್ಸೂಚನೆ ನೀಡುವ ಮೂಲಕ, ಪಶ್ಚಿಮಘಟ್ಟದ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.
webdunia
PTI

ಕಳ್ಳಭಟ್ಟಿ ದುರಂತ:
ಸಾರಾಯಿ ನಿಷೇಧ ಮಾಡುವ ಮೂಲಕ ತಮ್ಮ ಸರಕಾರ ಘನಂದಾರಿ ಕೆಲಸ ಮಾಡಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವಾಗಲೇ, ಬಿಜೆಪಿ ಸರಕಾರಕ್ಕೆ ತ್ಸುನಾಮಿಯಂತೆ ಬಂದರೆಗಿದ್ದು, ಕಳ್ಳಭಟ್ಟಿ ದುರಂತ. ಬೆಂಗಳೂರಿನ ಆನೇಕಲ್, ನೆರೆಯ ಧರ್ಮಪುರಿ, ಕೃಷ್ಣಗಿರಿ ಸೇರಿದಂತೆ ಕೆಲವೆಡೆ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು, ಆ ನಂತರ ನಡೆದು ಕೇವಲ ರಾಜಕೀಯ ಕೆಸರೆಚಾಟ. ಇದು ಮುಖ್ಯಮಂತ್ರಿಯ ವಿರುದ್ದ ವಿರೋಧ ಪಕ್ಷಗಳು ನಡೆಸಿದ ಸಂಚು ಎಂಬುದಾಗಿ ಯಡಿಯೂರಪ್ಪ ಅವರು ತಿಪ್ಪೆ ಸಾರಿದರು. 1981ರಲ್ಲಿ ದೇವರಜೀವನಹಳ್ಳಿಯಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 323ಮಂದಿ ಬಲಿಯಾಗಿದ್ದರು, ಆಗ ದುರಂತದ ಕುರಿತು ನ್ಯಾಯಾಂಗ ತನಿಖೆ ನಡೆಸಿದ ನ್ಯಾ.ಆರ್.ಜಿ.ದೇಸಾಯಿ, ಅವರು ಮಾರಿಮುತ್ತು ಮತ್ತು ಅಮೀರ್ ಸುಲ್ತಾನ್ ಎಂಬಿಬ್ಬರೇ ಕಾರಣ ಎಂದು ವರದಿ ಸಲ್ಲಿಸಿದ್ದರು. ಆದರೆ ಅವರಿಬ್ಬರ ವಿರುದ್ಧದ ಆರೋಪ ಸಾಬೀತಾಗಿಲ್ಲ. ಆದರೆ ಇಂತಹ ಖದೀಮರ ಅಟ್ಟಹಾಸದಿಂದ ಜನಸಾಮಾನ್ಯರ ಬದುಕು ಚಿಂದಿಯಾಗುತ್ತಿದ್ದರೂ, ಆರೋಪಿಗಳು ಮಾತ್ರ ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಮತ್ತೊಂದು ದೊಡ್ಡ ದುರಂತ !
webdunia
NRB

ಬೆಂಗಳೂರು ಸರಣಿ ಸ್ಫೋಟ:
ಉದ್ಯಾನನಗರಿ ನೆಮ್ಮದಿ ಜೀವನಕ್ಕೆ ಪ್ರಸಕ್ತ ತಾಣ ಎಂದೇ ಜನರು ಭಾವಿಸಿದ್ದರು, ಆದರೆ ಯಾವತ್ತು ಐಐಎಎಸ್ಸಿ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸುವ ಮೂಲಕ ಓರ್ವ ವಿಜ್ಞಾನಿಯೂ ಬಲಿಯಾದರೋ ಆವಾಗ (ಇದಕ್ಕೂ ಮುನ್ನ ರಾಜೀವ್ ಗಾಂಧಿ ಹಂತಕರು ನಗರದ ಕೋಣನಕುಂಟೆಯಲ್ಲೇ ವಾಸ್ತವ್ಯ ಹೂಡಿದ್ದ ವಿಷಯವೇ ದೇಶವನ್ನು ಬೆಚ್ಚಿಬೀಳಿಸಿತ್ತು.) ರಾಜ್ಯದ ರಾಜಧಾನಿ ಉಗ್ರರ ಅಡಗುತಾಣವಾಗಿದೆ ಎಂಬ ಅಂಶ ಸ್ಪಷ್ಟವಾಗತೊಡಗಿತ್ತು. ಆದರೆ ಗುಪ್ತಚರ ಇಲಾಖೆಯ ವೈಫಲ್ಯ ಮತ್ತೊಮ್ಮೆ ಸಾಬೀತಾಗಿದ್ದು, ಜುಲೈ 25ರಂದು ಸರಣಿ ಬಾಂಬ್‌ಗಳು ಸ್ಫೋಟಿಸುವ (ಮಡಿವಾಳದಲ್ಲಿ 1.20ಕ್ಕೆ, ನಾಯಂಡನಹಳ್ಳಿಯಲ್ಲಿ 1.25, ಆಡುಗೋಡಿ-1.40ಕ್ಕೆ, ಕೋರಮಂಗಲ ಈಗಲ್ ಸ್ಟ್ರೀಟ್‌ನಲ್ಲಿ 2.10, ಮಲ್ಯ ಆಸ್ಪತ್ರೆ ಸಮೀಪ 2.25, ಲಾಂಗ್ ಫೋರ್ಡ್ ರಸ್ತೆ 2.35ಕ್ಕೆ ಸ್ಫೋಟ ಸಂಭವಿಸಿದ್ದವು.) ಮೂಲಕ ರಾಜ್ಯವೇ ತಲ್ಲಣಿಸಿಹೋಗಿತ್ತು. ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ನಗರ ಪೊಲೀಸರು 3ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದರು. ಸ್ಫೋಟಕ್ಕೆ ಬಳಸಿದ ರಾಸಾಯನಿಕ ಗ್ರೆನೇಡ್‌ಗೆ ಸಮನಾದದ್ದು ಎಂಬ ಅಂಶ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತ್ತು. ಆದರೆ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ತನಿಖೆ ಮಾತ್ರ ಸಮಾಧಿ ಸೇರಿದ ಶವದಂತಾಗಿದೆ.....

ಚರ್ಚ್ ಮೇಲೆ ದಾಳಿ:
ಒರಿಸ್ಸಾದಲ್ಲಿ ಸಂಘ-ಪರಿವಾರ ಕ್ರೈಸ್ತ ಸಮುದಾಯದ ಮೇಲೆ ಹೊತ್ತಿಸಿದ ದ್ವೇಷಾಗ್ನಿ, ಕರ್ನಾಟಕದಲ್ಲೂ ಪ್ರತಿಧ್ವನಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಅಲ್ಪ ಸಮಯದಲ್ಲೇ ಮುಖಭಂಗ ಅನುಭವಿಸುವಂತಾಗಿದ್ದು. ಸೆಪ್ಟೆಂಬರ್ 21ರಂದು ನಗರದ ಮರಿಯಣ್ಣನಪಾಳ್ಯ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಚರ್ಚ್‌‌ಗಳ ಮೇಲೆ ದಾಳಿ ನಡೆಯುವ ಮೂಲಕ, ಸರಕಾರ ಪ್ರತಿಪಕ್ಷ ಸೇರಿದಂತೆ ಸಾರ್ವಜನಿಕವಾಗಿ ತೀವ್ರ ಟೀಕೆಗೆ ಒಳಗಾಯಿತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಇದು ಪ್ರತಿಪಕ್ಷಗಳ ಷಡ್ಯಂತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಏತನ್ಮಧ್ಯೆ ಬಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರು ಖಾಸಗಿ ಟಿವಿ ಚಾನೆಲ್‌ವೊಂದರ ಮುಖಾಮುಖಿ ಕಾರ್ಯಕ್ರಮವೊಂದರಲ್ಲಿ ಈ ದಾಳಿಗೆ ಬಜರಂಗದಳವೇ ಹೊಣೆ ಎಂದು ಹೇಳುವ ಮೂಲಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಆ ನಂತರ ಒತ್ತಡ, ಆರೋಪ-ಪ್ರತ್ಯಾರೋಪದ ಗೊಂದಲದಲ್ಲಿಯೇ ಮಹೇಂದ್ರ ಕುಮಾರ್ ಬಂಧನ, ಮತ್ತೆ ರಾಜ್ಯದ ಹಲವೆಡೆ ಪ್ರಾರ್ಥನಾ ಮಂದಿರ, ಚರ್ಚ್ ಮೇಲೆ ದಾಳಿ. ಪ್ರಧಾನಿ ಕಳವಳ, ಬಿಷಪ್‌ರಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಮಂಗಳಾರತಿ. ಪ್ರಕರಣ ಸಿಬಿಐ ತನಿಖೆಗೆ ವಹಿಸಲಾಯಿತು. ಆದರೂ ಚರ್ಚ್ ಮೇಲಿನ ದಾಳಿ ಬಿಜೆಪಿ ಸರಕಾರಕ್ಕೊಂದು ಕಪ್ಪು ಚುಕ್ಕೆಯಾಯಿತು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗರಿ:
ಸಾವಿರದ ಐನೂರು ವರ್ಷಗಳ ಇತಿಹಾಸ ಇರುವ ಕನ್ನಡಕ್ಕೆ 'ಅಭಿಜಾತ' ಸ್ಥಾನಮಾನ ನೀಡಬೇಕೆಂದು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಕೇಂದ್ರ ಸರಕಾರ ಅಕ್ಟೋಬರ್ 31ರಂದು ಅಧಿಕೃತವಾಗಿ ಘೋಷಿಸಿತ್ತು. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಳಿಕ ಎಚ್ಚೆತ್ತುಕೊಂಡ ಕನ್ನಡಿಗರು ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಸಾಹಿತಿಗಳು, ಕನ್ನಡಪರ ಸಂಘಟನೆಗಳು ಚಳವಳಿ ನಡೆಸಿದ್ದವು. ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಲೇಬೇಕು ಎಂಬ ನಿಟ್ಟಿನಲ್ಲಿ ಕನ್ನಡಿಗರ ಕೂಗು ಬಲವಾಗತೊಡಗಿತ್ತು. ಅದಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ನಂತರ, ಕೇಂದ್ರ ಸರಕಾರ ದಿಢೀರನೆ ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ಗೌರವ ನೀಡಿರುವ ಬಗ್ಗೆ ಘೋಷಣೆ ಹೊರಡಿಸಿತ್ತು. ಆದರೆ ಕನ್ನಡಕ್ಕೆ ಶಾಸ್ತ್ರೀಯ ನೀಡಿರುವ ಆಯ್ಕೆ ಸಮಿತಿಯನ್ನೇ ಪ್ರಶ್ನಿಸಿ ತಮಿಳುನಾಡಿನ ಆರ್.ಗಾಂಧಿ ಎಂಬವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಮಾನದಂಡದ ಬಗ್ಗೆ ವಿವರ ನೀಡುವಂತೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಇದೀಗ ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನ ಕೋರ್ಟ್ ಕಟಕಟೆಯಲ್ಲಿದೆ.
webdunia
PTI

ಗಾನಗಂಧರ್ವ ಭೀಮಸೇನ ಜೋಶಿಗೆ ಭಾರತ ರತ್ನ:
ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್ ಭೀಮಸೇನ ಜೋಶಿ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು. ಸರ್.ಎಂ.ವಿಶ್ವೇಶ್ವರಯ್ಯ ಅವರ ಬಳಿಕ ಈ ಅತ್ಯುನ್ನತ ಪ್ರಶಸ್ತಿಯನ್ನು ಭೀನಸೇನ ಜೋಶಿ ಅವರನ್ನು ಗುರುತಿಸಿ ಭಾರತ ರತ್ನ ನೀಡಿರುವುದು ಕನ್ನಡ ಸಂಗೀತಲೋಕಕ್ಕೆ ಸಂದ ಮುಕುಟವಾಗಿದೆ. ಜೋಶಿಯವರು 1922ರಲ್ಲಿ ಫೆಬ್ರುವರಿ 4ರಂದು ಗದಗದಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕಲಿಯಲೆಂದು ಮನೆ ಬಿಟ್ಟು ಧಾರವಾಡದ ಕುಂದಗೋಳಕ್ಕೆ ತೆರಳಿದ ಅವರು, ಸುಪ್ರಸಿದ್ಧ ಗಾಯಕ ಸವಾಯಿ ಗಂಧರ್ವರ ಶಿಷ್ಯರಾದರು. ಹಿಂದೂಸ್ತಾನಿ ಸಂಗೀತ ಕಿರಾಣಾ ಘರಾಣದಲ್ಲಿ ಪರಿಣತಿ ಸಾಧಿಸಿದರು. ಇದೀಗ 86ರ ಹರೆಯಕ್ಕೆ ಕಾಲಿಟ್ಟಿರುವ ಗಾನಗಂಧರ್ವನಿಗೆ ಈಗಾಗಲೇ ಪದ್ಮವಿಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮಡಿಲು ಸೇರಿದ್ದವು.

ಪದ್ಮಪ್ರಿಯಾ ಪ್ರಕರಣ:
ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ನಿಗೂಢ ಕಣ್ಣರೆ ಹಾಗೂ ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶವವಾಗಿ ಅವರು ಪತ್ತೆಯಾದ ಘಟನೆ ರಾಜ್ಯಾದ್ಯಂತ ಕುತೂಹಲ ಕೆರಳಿಸಿದ ಪ್ರಕರಣವಾಗಿತ್ತು. ಆರಂಭದಲ್ಲಿ ಪದ್ಮಪ್ರಿಯಾ ಅವರನ್ನು ಸುರಕ್ಷಿತವಾಗಿದ್ದಾರೆ ಅವರನ್ನು ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಹೇಳಿಕೆ ಮಧ್ಯೆಯೇ, ಪದ್ಮಪ್ರಿಯಾ ಅವರು ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೇಣಿಗೆ ಶರಣಾಗುವ ಮೂಲಕ ಗೃಹಸಚಿವ ವಿ.ಎಸ್.ಆಚಾರ್ಯ ಸೇರಿದಂತೆ ಪೊಲೀಸ್ ಇಲಾಖೆ ಕೂಡ ತಲೆತಗ್ಗಿಸುವಂತಾಗಿತ್ತು. ವಿರೋಧಪಕ್ಷಗಳು ಬಿಜೆಪಿ ಸರಕಾರವನ್ನು ಸಾಕಷ್ಟು ಹರಿದೆಳೆದಿದ್ದವು. ಮನೆಯ ಆಪ್ತರಾಗಿದ್ದ ಅತುಲ್ ಕುಮಾರ್ ತನ್ನ ಪತ್ನಿಯ ಅಪಹರಣ ಮತ್ತು ಸಾವಿನ ಹಿಂದಿನ ರೂವಾರಿ ಎಂದು ಶಾಸಕ ಭಟ್ ಆರೋಪಿಸಿ ದೂರು ದಾಖಲಿಸಿದ್ದರು. ಅತುಲ್ ಬಂಧನ ಬಿಡುಗಡೆಯ ಕೆಲವು ದಿನಗಳ ನಂತರ ಪದ್ಮಪ್ರಿಯಾ ಪ್ರಕರಣ ತೆರೆಯಮರೆಗೆ ಸರಿದಿತ್ತು.


Share this Story:

Follow Webdunia kannada