ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ.
ಮತ್ತೆ ಬಂದಿದೆ ನವ ಯುಗ. ಪ್ರತೀ ಹೊಸ ಯುಗದ ಆದಿಯಲ್ಲಿ ನಾವು ಹೇಳೋದು "ಕಳೆದ ವರ್ಷ ತೀರಾ ಚಿಂತಾಜನಕವಾಗಿತ್ತು. ಸಿಹಿಗಿಂತ ಕಹಿಯೇ ಹೆಚ್ಚಿತ್ತು"!. ಈ ಬಾರಿಯೂ ಹೇಳುವುದು ಅದನ್ನೇ. ಬೇಕಿದ್ದರೆ ಒಂದಷ್ಟು ಜೋರಾಗಿಯೇ.
ಯಾಕೆ? ಸರ್ವಧಾರಿ ಸಂವತ್ಸರದತ್ತ ಕಣ್ಣು ಹಾಯಿಸಲು ಭಯಾತಂಕ. ಉಗ್ರರ ದಾಳಿಗಳು, ಹಿಂಸೆ, ಸಾವು ನೋವಿನ ಜೊತೆಗೆ ಈ ಬಾರಿ ಬಂದೆರಗಿತಲ್ಲ... ಬುಡಕ್ಕೇ ಕೊಡಲಿಯೇಟು! ಅದೇ ಆರ್ಥಿಕ ಹಿಂಜರಿತವೆಂಬ ಮಹಾಮಾರಿ. ಅದೆಷ್ಟು ಮಂದಿ ಉದ್ಯೋಗ ಕಳೆದುಕೊಂಡರು, ಅದೆಷ್ಟು ಮಂದಿಯ ವೇತನ ಕಡಿತವಾಯಿತು, ಅದೆಷ್ಟು ನಷ್ಟವಾಯಿತು! ಛೆ, ಛೆ... ಇದ್ದದ್ದೇ ಇದೆಲ್ಲಾ...ಮರೆತು ಬಿಡೋಣ ಅವನ್ನು...
ಪರಸ್ಪರ ಸಂಘರ್ಷಮಯ, ತದ್ವಿರುದ್ಧ ಗುಣಗಳ ಪ್ರತೀಕವಾಗಿರುವ ಬೇವು ಮತ್ತು ಬೆಲ್ಲದ ಬಗ್ಗೆ ಒಂದು ಮಾತು. ಬೇವನ್ನು ನೋವು ಎಂದೂ ಬೆಲ್ಲವನ್ನು ಗೆಲುವೆಂದೂ ನಿಜಜೀವನದಲ್ಲಿ ಪರಿಗಣಿಸಿ ನೋಡಿದರೆ, ಬೆಲ್ಲದ ಪಕ್ಕದಲ್ಲಿ ಬೇವು ಇದ್ದಾಗ ಮಾತ್ರವಷ್ಟೇ ಬಲ್ಲವನೇ ಬಲ್ಲ ಬೆಲ್ಲದಾ ರುಚಿ ಯ! ಹಂದಿಯಿದ್ದರಷ್ಟೇ ಕೇರಿ ಎನಿತು ಶುದ್ಧಿಯೋ ಹಾಗೆ, ಶುದ್ಧಾಚಾರಕ್ಕೆ ಮಹತ್ವ ಬರುವುದು ಅಲ್ಲೇ ಎಂದು ದಾಸರು ಹೇಳಿದ್ದೂ ಇದೇ ಕಾರಣಕ್ಕೆ. ಯುಗಾದಿಯ ಬೇವು-ಬೆಲ್ಲ, ವಿರಸ-ಸರಸದ ಪ್ರತೀಕವೂ ಹೌದು. ಅದಕ್ಕಲ್ಲವೇ ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂದಿದ್ದು ತಿಳಿದವರು!
ಯುಗದ ಆದಿಯ ದಿನ ಕೆಟ್ಟ ಘಳಿಗೆಗಳನ್ನೆಲ್ಲಾ ಬೇವು ಎಂಬಂತೆ ಮರೆತು ವಿರೋಧಿಯನ್ನು ಸ್ವಾಗತಿಸಲು ಸಿದ್ಧರಾಗೋಣ. ವಾಸ್ತವಿಕ ಪ್ರಪಂಚದಲ್ಲಿಯೂ ನಿಜ ವೈರಿಗಳನ್ನು ಪ್ರೀತಿಯಿಂದಲೇ ಗೆಲ್ಲಬಹುದಲ್ಲವೇ? ಸ್ವಾಗತಿಸೋಣವಂತೆ. ಆ ಒಂದು ಅನರ್ಘ್ಯ ನಿಯಮವನ್ನು ಅನುಸರಿಸಲು ಸಿದ್ಧರಾಗಬೇಕಿದೆ ಜನ. ಹೊಸ ವರ್ಷ, ಹೊಸ ಹರ್ಷ, ಹೊಸ ಆಶಾವಾದ, ನವ ಭರವಸೆಗಳ ಒಸಗೆ, ಸರ್ವರ ಜೀವನದಲ್ಲಿಯೂ ಚಿಗುರೊಡೆಯಬೇಕು. ಆಶಾವಾದವೇ ಮನುಷ್ಯನ ಜೀವನೋತ್ಸಾಹಕ್ಕೆ, ಬೆಟ್ಟದಷ್ಟು ಕನವರಿಕೆಗಳಿಗೆ ಮೂಲ ಪ್ರೇರಣೆಯಾಗುತ್ತದೆ. ಹೀಗಿರಲು, ಯುಗಾದಿ ಹಬ್ಬದಂದು ನೋವ ಮರೆತು ನಲಿವಿಗಾಗಿ ಕಾತರಿಸೋಣ. ಈ ಮೂಲಕ ತುಕ್ಕು ಹಿಡಿದಂತಿರುವ ಮನಸ್ಸಿಗೆ ಒರೆ ಹಚ್ಚಿ ಶುಭ್ರಗೊಳಿಸಿ, ಹೊಸ ಸಂವತ್ಸರಕ್ಕೆ ಸಿದ್ಧಗೊಳಿಸೋಣ.
ಬೇವು ಬೆಲ್ಲವು ಬೇಕು ಸುಖದ ಬಾಳುವೆಗೆ, ಬಾಳುವೆಯಾ ಆ ಸುಖಕೆ. ಅನಿವಾರ್ಯವೆನಿಸೋ ಕಹಿಯೊಡಗೂಡಿ ಬಾಳಲು ಕಲಿತು, ಸಿಹಿಯ ಬಾಳುವೆಗಾಗಿ ಹಂಬಲಿಸೋಣ. ಎಲ್ಲಕ್ಕೂ ಮಿಗಿಲಾಗಿ, ನವ ನವೋನ್ಮೇಷಕ್ಕಾಗಿ ಕಾತರಿಸುತ್ತಾ, ಹೊಸ ವರುಷದಲ್ಲಿ ಏನೆಲ್ಲಾ ಮಾಡಬಹುದೆಂಬುದರ ಪ್ರಣಾಳಿಕೆ ಸಿದ್ಧಪಡಿಸಿ, 'ವಿರೋಧಿ'ಯನ್ನು ಎದುರುಗೊಳ್ಳೋಣ...
ವಿರೋಧಿ ಸಂವತ್ಸರವು ವಿರೋಧಿಗಳ ಮನ ಗೆಲ್ಲುವಲ್ಲಿ ಪೂರಕವಾಗಿರಲಿ, ಸಂಭ್ರಮ ಪಡುವ ಹೊಸ ಅವಕಾಶಗಳನ್ನು ಹೆಚ್ಚಿಸಲಿ. ಸಂತಸವುಳ್ಳ ಪ್ರತಿ ದಿನವೂ ಹೊಸ ಯುಗವಾಗಲಿ, ಆದರೆ ಬೇಸರವಿರುವ ಪ್ರತಿ ದಿನ ಮಾತ್ರ ಯುಗವಾಗಿ ಭಾಸವಾಗದಿರಲಿ..!