Select Your Language

Notifications

webdunia
webdunia
webdunia
webdunia

ಗಣಿ-ಯಡಿಯೂರಪ್ಪ ವಿರುದ್ಧದ ಎಫ್ಐಆರ್ ರದ್ದು; ಮತ್ತೆ ಸಿಎಂ?

ಗಣಿ-ಯಡಿಯೂರಪ್ಪ ವಿರುದ್ಧದ ಎಫ್ಐಆರ್ ರದ್ದು; ಮತ್ತೆ ಸಿಎಂ?
ಬೆಂಗಳೂರು , ಬುಧವಾರ, 7 ಮಾರ್ಚ್ 2012 (11:25 IST)
PR
ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ನೀಡಿದ್ದ ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ ರದ್ದುಪಡಿಸಿದ್ದು, ಇದರಿಂದ ಬಿಎಸ್‌ವೈ ಅಕ್ರಮ ಗಣಿಗಾರಿಕೆ ಆರೋಪದಿಂದ ಮುಕ್ತರಾಗುವ ಮೂಲಕ ಪೂರ್ಣವಾಗಿ ನಿರಾಳರಾದಂತಾಗಿದೆ.

ಅಕ್ರಮ ಗಣಿಗಾರಿಕೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪಾತ್ರವಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಅವರು ಶಾಮೀಲಾಗಿದ್ದಾರೆ. ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲ ಎಂಬುದಾಗಿ ಹೈಕೋರ್ಟ್ ನ್ಯಾಯಾಪೀಠ ಅಭಿಪ್ರಾಯವ್ಯಕ್ತಪಡಿಸಿ, ಎಫ್ಐಆರ್ ಅನ್ನು ರದ್ದು ಪಡಿಸಿದೆ.

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆಯವರು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರು. ಅಲ್ಲದೇ ಲೋಕಾಯುಕ್ತರು ನೀಡಿದ್ದ ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದರು.

ಅದರಂತೆ ಲೋಕಾಯುಕ್ತ ಪೊಲೀಸರು ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಸೌತ್ ವೆಸ್ಟ್ ಮೈನಿಂಗ್ ಕಂಪನಿಗೆ ನೆರವು ನೀಡಿರುವ ಆರೋಪ ಯಡಿಯೂರಪ್ಪ ಮೇಲಿತ್ತು. ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಯಡಿಯೂರಪ್ಪ ಪುತ್ರರ ಪ್ರೇರಣಾ ಟ್ರಸ್ಟ್‌ಗೆ ಸುಮಾರು 20 ಕೋಟಿ ರೂ.ಕಿಕ್ ಬ್ಯಾಕ್ ಸಂದಾಯವಾಗಿತ್ತು ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.

ಗಣಿ ಆರೋಪದಿಂದ ಮುಕ್ತರಾದ ಯಡ್ಡಿ-ಮತ್ತೆ ಸಿಎಂ ಆಗ್ತಾರಾ?
ಹೈಕೋರ್ಟ್ ಆದೇಶದಿಂದ ಯಡಿಯೂರಪ್ಪ ಪೂರ್ಣ ಪ್ರಮಾಣದಲ್ಲಿ ರಿಲೀಫ್ ಸಿಕ್ಕಂತಾಗಿದೆ. ಆ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ಆರೋಪದಿಂದ ಯಡಿಯೂರಪ್ಪ ಮುಕ್ತರಾಗಿರುವುದು ಆನೆ ಬಲ ಬಂದಂತಾಗಿದೆ. ನೀವು ಮೊದಲು ಗಣಿ ಆರೋಪದಿಂದ ಮುಕ್ತರಾಗಿ, ನಂತರ ಮುಖ್ಯಮಂತ್ರಿ ಗಾದಿ ಏರುವ ಬಗ್ಗೆ ಚರ್ಚೆ ನಡೆಸುವ ಎಂದು ಹೈಕಮಾಂಡ್ ತಿಳಿಸಿತ್ತು. ಇದೀಗ ಹೈಕೋರ್ಟ್ ತೀರ್ಪು ಯಡಿಯೂರಪ್ಪನವರಿಗೆ ವರವಾಗಿದ್ದು, ಮತ್ತೆ ಸಿಎಂ ಗಾದಿಗೆ ಏರುವ ಕಸರತ್ತು ಮುಂದುವರಿಯಲಿದೆ.

ಹೈಕೋರ್ಟ್ ಆದೇಶಕ್ಕೆ ಬಿಎಸ್‌ವೈ ಹರ್ಷ:
ಹೈಕೋರ್ಟ್ ಆದೇಶದಿಂದ ತುಂಬಾ ಖುಷಿಯಾಗಿದೆ. ಹೈಕೋರ್ಟ್ ಆದೇಶದ ಮಾಹಿತಿ ಇನ್ನೂ ಪೂರ್ಣವಾಗಿ ಸಿಕ್ಕಿಲ್ಲ. ನಾನು ದೇವರಲ್ಲಿ ಪ್ರಾರ್ಥನೆ ಮಾಡಿರುವುದು ಇಷ್ಟೇ, ನನ್ನನ್ನು ಎಲ್ಲಾ ಆರೋಪಗಳಿಂದ ಮುಕ್ತ ಮಾಡಿ. ಜನಸೇವೆಗೆ ಅವಕಾಶ ಮಾಡಿಕೊಡುವಂತಾಗಲಿ ಎಂಬುದೇ ನನ್ನ ಇಚ್ಛೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

Share this Story:

Follow Webdunia kannada