Select Your Language

Notifications

webdunia
webdunia
webdunia
webdunia

ಬೆಂಗಳೂರು ಸಿಬಿಐ ವಶಕ್ಕೆ ಜನಾರ್ದನ ರೆಡ್ಡಿ; ಮಧ್ಯರಾತ್ರಿ ನಗರಕ್ಕೆ

ಬೆಂಗಳೂರು ಸಿಬಿಐ ವಶಕ್ಕೆ ಜನಾರ್ದನ ರೆಡ್ಡಿ; ಮಧ್ಯರಾತ್ರಿ ನಗರಕ್ಕೆ
ಬೆಂಗಳೂರು , ಗುರುವಾರ, 1 ಮಾರ್ಚ್ 2012 (19:51 IST)
PR
ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುವ ನಿಟ್ಟಿನಲ್ಲಿ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಬೆಂಗಳೂರು ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಬಾಡಿ ವಾರಂಟ್‌ಗೆ ನಾಂಪಲ್ಲಿ ಸಿಬಿಐ ಕೋರ್ಟ್ ಗುರುವಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರೆಡ್ಡಿಯನ್ನು ನಗರಕ್ಕೆ ಕರೆತರುತ್ತಿದ್ದಾರೆ.

ಜನಾರ್ದನ ರೆಡ್ಡಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಬೆಂಗಳೂರು ಸಿಬಿಐ ಬಾಡಿ ವಾರಂಟ್ ಸಲ್ಲಿಸಿದ ನಂತರ, ತಮಗೆ ಜೀವಬೆದರಿಕೆ ಇದ್ದು, ತನ್ನನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಅನುಮತಿ ನೀಡಬೇಕೆಂದು ರೆಡ್ಡಿ ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದರು.

ಆದರೆ ಜನಾರ್ದನ ರೆಡ್ಡಿಯ ಮನವಿಯನ್ನು ಪುರಸ್ಕರಿಸದ ಸಿಬಿಐ ಕೋರ್ಟ್, ಸಾಮಾನ್ಯ ಕೈದಿಯಂತೆ ಬೆಂಗಳೂರಿಗೆ ಕರೆದೊಯ್ಯಲು ಸೂಚಿಸಿತು. ನ್ಯಾಯಾಲಯದ ಅನುಮತಿ ಸಿಕ್ಕ ನಂತರ ಸಿಬಿಐ ಅಧಿಕಾರಿಗಳು ರೆಡ್ಡಿಯನ್ನು ವಿಶೇಷ ಮಿನಿ ಬಸ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ 530 ಕಿ.ಮೀ.ದೂರವಿದ್ದು, ಜನಾರ್ದನ ರೆಡ್ಡಿಯನ್ನು ನಗರಕ್ಕೆ ಮುಂಜಾನೆ 3ಗಂಟೆ ಸುಮಾರಿಗೆ ಕರೆ ತರಲಿದ್ದಾರೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಾರೋ ಅಥವಾ ಶುಕ್ರವಾರ ಬೆಳಿಗ್ಗೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೋ ಎಂಬುದನ್ನು ಅಧಿಕಾರಿಗಳು ತೀರ್ಮಾನಿಸಲಿದ್ದಾರೆ.

ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಂಪನಿಯು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ಮತ್ತು ಪತ್ನಿ ಅರುಣಾಲಕ್ಷ್ಮಿ, ಮಾಜಿ ಸಚಿವ ಮುನಿಯಪ್ಪ ಸೇರಿದಂತೆ 21 ಮಂದಿ ವಿರುದ್ಧ ಕರ್ನಾಟಕ ಸಿಬಿಐ ಈಗಾಗಲೇ ಎಫ್ಐಆರ್ ದಾಖಲಿಸಿತ್ತು.

Share this Story:

Follow Webdunia kannada