Select Your Language

Notifications

webdunia
webdunia
webdunia
webdunia

ಕೊಡಗಿನಲ್ಲಿ 'ಬೇಟೆಗಾರ ಹುಲಿ' ಪತ್ತೆಗೆ ಹೈಟೆಕ್ ಕ್ಯಾಮರಾ

ಕೊಡಗಿನಲ್ಲಿ 'ಬೇಟೆಗಾರ ಹುಲಿ' ಪತ್ತೆಗೆ ಹೈಟೆಕ್ ಕ್ಯಾಮರಾ
ಮಡಿಕೇರಿ , ಮಂಗಳವಾರ, 15 ನವೆಂಬರ್ 2011 (13:20 IST)
PR
ಕಳೆದ ಕೆಲವು ದಿನಗಳಿಂದ ಹುಲಿಯೊಂದು ದಕ್ಷಿಣ ಕೊಡಗಿನ ಕೋತೂರು ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಸುಮಾರು 26 ಜಾನುವಾರುಗಳನ್ನು ಬಲಿತೆಗೆದುಕೊಳ್ಳುವುದರೊಂದಿಗೆ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಹುಲಿ ಸೆರೆಗೆ ಹೈಟೆಕ್ ಕ್ಯಾಮರಾ ಅಳವಡಿಸಲಾಗಿದೆ.

ಈ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮಾಡಿದ ಪ್ರಯತ್ನವೆಲ್ಲವೂ ವಿಫಲವಾಗಿದೆ. ಬೋನ್ ಇಟ್ಟು ಸೆರೆ ಹಿಡಿಯಲು ಮುಂದಾದರೂ ಹುಲಿ ಮಾತ್ರ ಬೋನಿಗೂ ಬೀಳದೆ ಜನತೆಯ ಕಣ್ಣಿಗೂ ಕಾಣಿಸದೆ ರಹಸ್ಯ ಸ್ಥಳದಲ್ಲಿ ಅಡಗಿ ಕುಳಿತುಕೊಂಡು ರಾತ್ರಿಯಾಗುತ್ತಿದ್ದಂತೆಯೇ ದನದ ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳ ರಕ್ತಹೀರಿ ಬಳಿಕ ಕಾಡು ಸೇರುತ್ತಿತ್ತು. ಈ ನಡುವೆ ಹುಲಿಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮತ್ತಿಗೋಡಿನ ಆನೆ ಶಿಬಿರದ ಸಾಕಾನೆ ಅಭಿಮನ್ಯುವನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿದರಾದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಈಗಾಗಲೇ ದಕ್ಷಿಣ ಕೊಡಗಿನ ಕೋತೂರು, ಕೋಣಗೇರಿ, ಹೈಸೊಡ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಉಪಟಳ ನಡೆಸುತ್ತಿರುವ ಹುಲಿ ಎಲ್ಲಿ ಅಡಗಿದೆ ಎಂಬುವುದು ರಹಸ್ಯವಾಗಿದೆ. ಅರಣ್ಯಾಧಿಕಾರಿಗಳ ಪ್ರಕಾರ ಹುಲಿ ಕಲ್ಲಳ್ಳ ಅರಣ್ಯವನ್ನು ಸೇರಿರುವ ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಅದು ಕಾಡುಸೇರಿದ್ದೇ ಆದರೆ ಈ ವ್ಯಾಪ್ತಿಯ ಗ್ರಾಮಗಳ ಬೆಳೆಗಾರರು ನೆಮ್ಮದಿಯಾಗಿರಬಹುದು.

ಸಾಮಾನ್ಯವಾಗಿ ಹುಲಿಗಳು 15 ದಿನಗಳ ಆಹಾರವಿಲ್ಲದೆ ಹಸಿವನ್ನು ನಿಭಾಯಿಸುವ ಶಕ್ತಿ ಹೊಂದಿರುವುದರಿಂದ ಸದ್ಯದ ಮಟ್ಟಿಗೆ ಅದು ಕಾಣಿಸದಿರಬಹುದು. ಅದರಿಂದ ಅದು ಮರಳಿ ಕಾಡಿಗೆ ಹೋಗಿದೆ ಎನ್ನಲಾಗುವುದಿಲ್ಲ ಏಕೆಂದರೆ ಈಗಾಗಲೇ ಜಾನುವಾರುಗಳ ರಕ್ತದ ರುಚಿಯನ್ನು ನೋಡಿರುವುದರಿಂದ ಯಾವ ಸಂದರ್ಭದಲ್ಲಾದರು ದನದ ಕೊಟ್ಟಿಗೆಯಲ್ಲಿ ಪ್ರತ್ಯಕ್ಷವಾದರೆ ಅಚ್ಚರಿಪಡುವಂತಿಲ್ಲ.

ಹೀಗಾಗಿ ಹುಲಿಯ ಚಲನವಲನವನ್ನು ಕಂಡುಹಿಡಿಯಲು ಎರಡು ಹೈಟೆಕ್ ಕ್ಯಾಮರಾವನ್ನು ಕಾಡಿನಲ್ಲಿ ಅಳವಡಿಸಲಾಗಿದ್ದು, ಆ ಮೂಲಕ ಹುಲಿ ಎಲ್ಲಿ ಅಡಗಿದೆ ಎಂಬುವುದನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂಬುವುದು ಅರಣ್ಯಾಧಿಕಾರಿಗಳ ಅಭಿಪ್ರಾಯವಾಗಿದೆ. ಆದರೆ ಹುಲಿ ಸೆರೆ ಸಿಕ್ಕದ ಹೊರತು ಅಕ್ಕಪಕ್ಕದ ಬೆಳೆಗಾರರು ನೆಮ್ಮದಿಯಾಗಿ ಓಡಾಡುವುದು ಕೂಡ ಕಷ್ಟಸಾಧ್ಯವೇ.

ಫೋಟೋ: ಬಿ.ಎಂ.ಲವಕುಮಾರ್, ಕಗ್ಗೌಡ್ಲು

Share this Story:

Follow Webdunia kannada