Webdunia - Bharat's app for daily news and videos

Install App

ವಿಶ್ವ ಕನ್ನಡ ಸಮ್ಮೇಳನ ಯೂರೋಪ್ 2011: ಲಂಡನ್‌ನಲ್ಲಿ ಕನ್ನಡದ ಕಹಳೆ

Webdunia
ಚಿತ್ರ, ವರದಿ: ಕುಮಾರ್, ಕುಂಟಿಕಾನಮಠ
WD
ಯೂರೋಪ್ ಕನ್ನಡಿಗರು ಸೇರಿಕೊಂಡು ಲಂಡನ್‌ನಲ್ಲಿ ಅಕ್ಟೋಬರ್ 22, 23ರಂದು ಎರಡು ದಿನಗಳ "ವಿಶ್ವ ಕನ್ನಡ ಸಮ್ಮೇಳನ ಯುರೋಪ್ 2011" ಆಯೋಜಿಸಿದ್ದು, ಹೊರ ನಾಡಿನ ಕನ್ನಡಿಗರು ಅಲ್ಲಿ ಕನ್ನಡದ ನುಡಿಯೊಂದಿಗೆ ಸಂಭ್ರಮಿಸಿದರು. ಇದರಲ್ಲಿ ಕನ್ನಡ ಚಿತ್ರರಂಗದ ಶ್ರೀನಾಥ್, ಅಂಬರೀಶ್, ಸುಮಲತಾ, ರಮ್ಯಾ, ದೊಡ್ಡರಂಗೇಗೌಡ, ಕರ್ನಾಟಕದ ರಾಜಕಾರಣಿಗಳಾದ ಡಿ.ಎಚ್.ಶಂಕರಮೂರ್ತಿ, ಡಿ.ಕೆ.ಶಿವಕುಮಾರ್, ನರೇಂದ್ರ ಸ್ವಾಮಿ ಮುಂತಾದವರು ಭಾಗವಹಿಸಿ, ಹೊರನಾಡ ಕನ್ನಡಿಗರಿಗೆ ಕನ್ನಡದ ನೆಲದ ಅನುಭವ ದೊರಕಿಸಿಕೊಟ್ಟರು.

ಲಂಡನ್ನಿನ ಪ್ರತಿಷ್ಠಿತ ಮರ್ಮೈದ್ ಸಭಾಂಗಣದ ಹಮ್ಮರ್‌ಸ್ಮಿತ್ ಟೌನ್‌ಹಾಲ್‌ನಲ್ಲಿ ನಡೆದ ಸಮ್ಮೇಳನವನ್ನು ಯುರೋಪ್‌ನಲ್ಲಿರುವ ಸಂಗಮ ಸಂಸ್ಥೆಯು ಇಂಡಿಯಾ ಕ್ಲಾಸಿಕ್ ಆರ್ಟ್ಸ್ ಸಹಯೋಗದೊಂದಿಗೆ ಏರ್ಪಡಿಸಿದ್ದು, ಕರ್ನಾಟಕ, ಯುರೋಪ್, ಕೊಲ್ಲಿ ರಾಷ್ಟ್ರ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ವಿಶೇಷ.

WD

ನಮ್ಮನ್ನಾಳಿದ ಬ್ರಿಟಿಷರ ಕೇಂದ್ರ ಸ್ಥಾನದಲ್ಲಿ ಈ ಕಾರ್ಯಕ್ರಮ ಆಯೋಜಿಸುವ 'ಸಂಗಮ'ದ ಬಹು ದಿನದ ಯೋಜನೆ ಕಾರ್ಯಗತಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ದೀಪ ಬೆಳಗುವುದು ಭಾರತೀಯರ ಕ್ರಮ. ಈ ವಿಶ್ವ ಕನ್ನಡ ಸಮ್ಮೇಳನದಿಂದ ನಮ್ಮ ಕನ್ನಡ ಮಾತೆ, ತಾಯಿ ಭುವನೇಶ್ವರಿಯನ್ನು ಲಂಡನ್ನಿನಲ್ಲಿ ಆರಾಧಿಸುವ ಅವಕಾಶ ದೊರಕಿದ್ದು ಬಹು ದೊಡ್ಡ ಭಾಗ್ಯ ಎಂದು ಹರ್ಷಿಸಿದರು.

WD
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರೇಂದರ್ ಶರ್ಮ (ಸಂಸದರು, ಸೌತ್ ಹಾಲ್, ಲಂಡನ್) ಮಾತನಾಡಿ, ಬ್ರಿಟನ್ ಮತ್ತು ಕರ್ನಾಟಕದೊಂದಿಗೆ ಸಾಂಸ್ಕೃತಿಕ, ಸಾಹಿತ್ಯಕ, ವ್ಯಾವಹಾರಿಕ ಬಾಂಧವ್ಯವನ್ನು ಬೆಸೆಯಲು ಈ ಸಮ್ಮೇಳನ ನಾಂದಿಯಾಗಲಿ ಎಂದು ಹಾರೈಸಿದರು.

ಶಾಸಕರಾದ ಡಿ.ಕೆ.ಶಿವಕುಮಾರ್ ಮಾತನಾಡಿ, ಎಷ್ಟೇ ಕಷ್ಟ ಬಂದರೂ ಲೆಕ್ಕಿಸದೆ ಸಮ್ಮೇಳನವನ್ನು ಆಯೋಜಿಸಿದ್ದು ಪ್ರಶಂಸಾರ್ಹ. ಕಷ್ಟ ಪಡದೆ ಯಾವುದೇ ಕಾರ್ಯ ಸಿದ್ದಿಸದು ಎಂದರು.

WD
ಕಾರ್ಯಕ್ರಮಕ್ಕೆ ಮೊದಲು, ಸೈಂಟ್ ಪೌಲ್ ಕೆಥೆಡ್ರಲ್‌ನಿಂದ ಯಕ್ಷಗಾನ ವೇಷ, ಡೊಳ್ಳು, ಛತ್ರದೊಂದಿಗೆ ಚಿತ್ರನಟ ಶ್ರೀನಾಥ್, ಚಿತ್ರ ಸಾಹಿತಿ ಡಾ.ದೊಡ್ಡ ರಂಗೇಗೌಡ, ನಟಿ ರಮ್ಯಾ, ಶಾಸಕರಾದ ನರೇಂದ್ರ ಸ್ವಾಮಿ ಮೊದಲಾದ ಗಣ್ಯರು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಪ್ರವೇಶಿಸಿದ್ದು ಕರ್ನಾಟಕ ಸಾಂಸ್ಕೃತಿಕ ವೈಭವನ್ನು ಲಂಡನ್ನಿನ ಪ್ರಸಿದ್ದ ಸ್ಥಳದಲ್ಲಿ ಪ್ರದರ್ಶಿಸಿದಂತಾಯಿತು.

ಉದ್ಘಾಟನೆಗೆ ಮುಂಚಿತವಾಗಿ ಸಂಗಮದ ಅಧ್ಯಕ್ಷರಾದ ದ್ವಾರಕನಾಥ್ ಶಾಸ್ತ್ರಿ ಅವರು, ಬ್ರಿಟನಿನ ರಾಣಿ, ಬ್ರಿಟನಿನ ಪ್ರಧಾನಮಂತ್ರಿ, ಕರ್ನಾಟಕದ ಮುಖ್ಯಮಂತ್ರಿಯವರ ಸಂದೇಶವನ್ನು ಸಭಿಕರಿಗೆ ತಿಳಿಸಿದರು.

WD
ಸಂಗಮದ ಪರವಾಗಿ ಸಂಗಮ ಸಂಸ್ಥಾಪಕರಲ್ಲಿ ಒಬ್ಬರಾದ ಸಂಪತ್ ಯದವಾಡ್ ಸ್ವಾಗತಿಸಿದರು. ಸಂಗಮ ಬೆಳೆದು ಬಂದ ದಾರಿ, ಸಂಗಮದ ಉದ್ದೇಶವನ್ನು ಇನ್ನೊಬ್ಬ ಸಂಸ್ಥಾಪಕ ಕುಂಟಿಕಾನಮಠ ಕುಮಾರ್ ಅವರು ತಿಳಿಸಿದರು. ಯೂರೋಪ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನದ ಅಗತ್ಯತೆಯ ಬಗ್ಗೆ ಮತ್ತೊಬ್ಬ ಸಂಸ್ಥಾಪಕ ಶರತ್ ಅಯ್ಯರ್ ವಿವರಿಸಿದರು. ಸಮ್ಮೇಳನ ಆಯೋಜನೆಯಲ್ಲಿ ಬಂದಂತಹ ನೋವು ನಲಿವುಗಳನ್ನು ಇಂಡಿಯಾ ಕ್ಲಾಸಿಕ್ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ರೂಪಾ ಅಯ್ಯರ್ ಮತ್ತು ಮುಖ್ಯಸ್ಥ ರವಿ ರಾಜಗೋಪಾಲ್ ಹಂಚಿಕೊಂಡರು.

WD
ಕಾರ್ಯಕ್ರಮದ ಅಂಗವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ವೈದ್ಯಕೀಯ ಗೋಷ್ಠಿ, ವ್ಯಾವಹಾರಿಕ ಗೋಷ್ಠಿ, ಸಾಹಿತ್ಯ ಗೋಷ್ಠಿಗಳು ನಡೆದವು.

ಕನ್ನಡದ ಪ್ರತಿಭೆಗಳು, ಚಿತ್ರ ನಟ-ನಟಿಯರು
ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡತಿ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರು ಪಿಟೀಲು ವಾದನದೊಂದಿಗೆ ಸಭಿಕರನ್ನು ಮಂತ್ರ ಮುಗ್ಧಗೊಳಿಸಿದರು. ಕನ್ನಡ ಪ್ರತಿಭೆ ಮನೋರಮಾ ಪ್ರಸಾದ್ ಕರ್ನಾಟಕ ಸಂಗೀತದಲ್ಲಿ ಪುರಂದರದಾಸರ ಗಾಯನ, ಇಂಡಿಯಾ ಕ್ಲಾಸಿಕ್ ಸಂಸ್ಥೆಯ ವೇದಾಸ್ ಯುನಿವರ್ಸಲ್ ಟ್ರುತ್ ತಂಡದಿಂದ ನೃತ್ಯ ಬಹು ಸುಂದರವಾಗಿ ಮೂಡಿ ಬಂತು. ವಿದ್ಯಾರ್ಥಿ ಸಮಾವೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಾ ಪುತ್ತೂರಾಯ ಮತ್ತು ಭುವನೇಶ್ವರಿ ಹೆಗಡೆಯವರು ಸಭಿಕರನ್ನು ಹಾಸ್ಯದಿಂದ ರಂಜಿಸಿದರು.

WD
ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ, ರಮ್ಯಾ, ದೊಡ್ಡ ರಂಗೇಗೌಡ, ಶ್ರೀನಾಥ್, ಹಂಸಲೇಖಾ ಮೊದಲಾದವರು ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದ್ದು ವಿಶೇಷ.

2 ನೇ ದಿನದ ಗೋಷ್ಠಿ
ಎರಡನೇ ದಿನದ ಕಾರ್ಯಕ್ರಮದ ಸಾಹಿತ್ಯ ಗೋಷ್ಠಿಯಲ್ಲಿ ಹಿರಿಯ ಕವಿ ಪಾವಗಡ ಪ್ರಕಾಶ್ ಅವರು ಕರ್ನಾಟಕ ವೈಭವ ಎಂಬ ವಿಚಾರ ಮಂಡನೆ ಮಾಡಿದರು. ದೊಡ್ಡ ರಂಗೇಗೌಡರು ಕನ್ನಡದ ಹಿರಿಮೆಯ ಬಗ್ಗೆ, ಪುತ್ತೂರಾಯರು ಕರ್ನಾಟಕದ ಮೇಲೆ ಜಾಗತೀಕರಣದ ಪರಿಣಾಮದ ಕುರಿತು ಚರ್ಚಿಸಿದರು.

WD
ಸ್ಪಂದನ ತಂಡದಿಂದ ಹಚ್ಚೇವು ಕನ್ನಡ ದೀಪ ಹಾಡು ಕನ್ನಡಿಗರನ್ನು ರೋಮಾಂಚನಗೊಳಿಸಿತು. ಸ್ಥಳೀಯ ಪ್ರತಿಭೆ ಡಾ.ರಮ್ಯಾ ಮೋಹನ್ ಮತ್ತು ತಂಡದ ಹಾಡುಗಳು ಪ್ರೇಕ್ಷಕರನ್ನು ರಂಜಿಸಿತು. ಡಾ.ಬಾಲಕೃಷ್ಣ ಗುರೂಜಿಯವರ ಪುನರ್ಜನ್ಮದ ವಿಚಾರ ಪ್ರೇಕ್ಷಕರ ಚಿಂತನೆಗೆ ಆಹಾರವಾಯಿತು. ದೇವಿಕಾ ರಾವ್ ಅವರ ಭರತನಾಟ್ಯ ಮತ್ತು ಡಾ.ಬೆನಕ ಕಾರಂತ್ ಮತ್ತು ದೇವಿಕಾ ಯಕ್ಷಗಾನ ಪ್ರದರ್ಶಿಸಿದರು. ಕರ್ನಾಟಕದಿಂದ ಬಂದ ಪ್ರತಿಭೆಗಳಾದ ಬದರಿ ಪ್ರಸಾದ್, ದೇವ, ಪುಟಾಣಿ ಸಾನಿಯ ಅಯ್ಯರ್ ಎಲ್ಲರ ಮೆಚ್ಚುಗೆಗೆ ಕಾರಣರಾದರು.

ಒಟ್ಟಿನಲ್ಲಿ ಇಂತಹ ಒಂದು ದೊಡ್ಡ ಸಮ್ಮೇಳನ ಲಂಡನ್ನಿನಲ್ಲಿ ನಡೆದದ್ದು ಕನ್ನಡಿಗರ ಹೆಮ್ಮೆ. ಇಷ್ಟು ಅಲ್ಪಾವಧಿಯಲ್ಲಿ ಇಂತಹಾ ಕಾರ್ಯಕ್ರಮ ಯಶಸ್ಸು ಸಂಗಮ ಸಂಸ್ಥೆಯ ದೂರ ದೃಷ್ಟಿಯನ್ನು ಪ್ರಕಟಿಸುತ್ತದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments