250 ರೂ ಬಿಲ್ ಕಾರಣಕ್ಕೆ, ಮೂವರು ಸಹೋದರರು ಚಾಕು ಮತ್ತು ಗ್ರಿಲ್‌ಗಳಿಂದ ದಾಳಿ ಮಾಡಿ ಕೊಲೆಗೈದಿದ್ದಾರೆ. ಮೂವರು ಆರೋಪಿಗಳನ್ನು ರಶೀದ್ (21) , ಸಾಹೇಬ್ (19) ಮತ್ತು ಅಕ್ರಂ (21) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಹೊಟೆಲ್‌ಲೊಂದರಲ್ಲಿ ಊಟ ಮಾಡಿದ ಮೂವರು ಮಾರಾಟಗಾರರಿಗೆ, ಹೊಟೆಲ್ ಮಾಲೀಕ 25ರ ಯುಸುಫ್ 250 ರೂ ಬಿಲ್ ನೀಡಿದ. ಬಿಲ್ ಜಾಸ್ತಿ ಆಯಿತು ಎಂದು ಆ ಮೂವರು ಸಹೋದರರು ಯೂಸುಫ್ ಜತೆ ವಾದಿಸಿದರು. ವಾದದ ಕಾವು ಹೆಚ್ಚಿದಾಗ, ಯೂಸುಫ್‌ನನ್ನು ತಳ್ಳಿದ ರಶೀದ್ ಚಾಕು ಎತ್ತಿಕೊಂಡು ಆತನ ಹೊಟ್ಟೆಗೆ ಇರಿದ. ಸಾಹೇಬ್ ಮತ್ತು ಅಕ್ರಂ ಗ್ರಿಲ್ ತುಂಡುಗಳಿಂದ ಅವನ ಮೇಲೆ ದಾಳಿ ನಡೆಸಿದರು.
ಯೂಸುಫ್ ಸಹೋದರ ನವಾಬ್ ಮಧ್ಯಪ್ರವೇಶಿಸಿ ತನ್ನ ಸಹೋದರನನ್ನು ರಕ್ಷಿಸಲು ಪ್ರಯತ್ನಿಸಿದ, ಆದರೆ ಅವನಿಗೂ ಇರಿದ ಅವರು, ರಕ್ತಸ್ರಾವವಾಗುತ್ತಿದ್ದ ಅವರಿಬ್ಬರನ್ನು, ಅಲ್ಲಿಯೇ ಬಿಟ್ಟು ಸ್ಥಳದಿಂದ ಪಲಾಯನ ಮಾಡಿದರು.
ಸುತ್ತಮುತ್ತಲಿನ ಅಂಗಡಿಯವರು ಘಟನೆಯ ಕುರಿತು ಪೋಲಿಸರಿಗೆ ಮಾಹಿತಿ ನೀಡಿದರು. ಗಾಯಾಳುಗಳಿಬ್ಬರನ್ನು ಏಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿನ ವೈದ್ಯರು ಯೂಸುಫ್ ಸತ್ತಿದ್ದಾನೆ ಎಂದು ಘೋಷಿಸಿದರೆ, ನವಾಬ್ ಸ್ಥಿತಿ ಗಂಭೀರ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಮೂಲತಃ ಉತ್ತರಪ್ರದೇಶದವರಾಗಿರುವ, ಆರೋಪಿಗಳನ್ನು ನಿನ್ನೆ ಬಂಧಿಸಲಾಗಿದ್ದು ಭಾರತೀಯ ದಂಡ ಸಂಹಿತೆಯ ಕಲಂ 302 ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.