ಕೇಂದ್ರ ಸರ್ಕಾರ ಅತ್ಯಾಚಾರಿಗಳ ವಿರುದ್ದ ತರಲು ನಿರ್ಧರಿಸಿರುವ ನೂತನ ಕಾಯ್ದೆಗೆ ತಮ್ಮ ಮಗಳ ಹೆಸರು ಇಟ್ಟರೆ ಆಕೆಯ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ ಎಂದು ಇತ್ತೀಚೆಗೆ ದೆಹಲಿಯ ಚಲಿಸುತ್ತಿದ್ದ ಬಸ್‌ನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಆತ್ಯಾಚಾರಕ್ಕೀಡಾದ ಯುವತಿಯ ತಂದೆ ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರಿ ಈ ಸಮಾಜದಲ್ಲಿ ಗೌರವಯುತವಾಗಿ ಬಾಳಲು ತೀರ್ಮಾನಿಸಿದ್ದಳು. ಆಕೆ ವೈದ್ಯಳಾಗಿ ಸಮಾಜದ ಸೇವೆ ಮಾಡಲು ನಿರ್ಧರಿಸಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದಳು ಎಂದು ದುಃಖದಿಂದ ನುಡಿದರು.
ತಮ್ಮ ಮಗಳ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತಾಗಬೇಕು ಎಂದು ಹೇಳಿದ ಅವರು, ತಮ್ಮ ಪುತ್ರಿಗಾದ ದುಃಸ್ಥಿತಿ ದೇಶದ ಇನ್ಯಾವ ಹೆಣ್ಣು ಮಕ್ಕಳಿಗೂ ಬರಬಾರದೆಂದರಲ್ಲದೆ ಈ ನಿಟ್ಟಿನಲ್ಲಿ ಸರ್ಕಾರ ಅತ್ಯಾಚಾರಿಗಳ ವಿರುದ್ದ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೆ ತರಬೇಕೆಂದು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಯ್ದೆಗೆ ಮೃತಪಟ್ಟ ಯುವತಿಯ ಹೆಸರಿಡಬೇಕೆಂದು ಸಚಿವ ಶಶಿ ತರೂರ್ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.