ಬಿಜೆಪಿಯ ಪಿಲಿಭಿತ್ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ತನ್ನ ಚುನಾವಣಾ ಪ್ರಚಾರದ ವೇಲೆ ದ್ವೇಷ ಭಾಷಣ ಮಾಡಿರುವುದು ನಿಜವೆಂದು ಕಂಡುಕೊಂಡಿರುವ ಚುನಾವಣಾ ಆಯೋಗವು, ಅವರನ್ನು ಚುನಾವಣಾ ಕಣಕ್ಕೆ ಇಳಿಸುವುದರ ವಿರುದ್ಧ ಪಕ್ಷಕ್ಕೆ ಎಚ್ಚರಿಕೆ ನೀಡಿದೆ.
ತನ್ನ ಭಾಷಣವನ್ನು ತಿರುಚಲಾಗಿದೆ ಎಂಬ ವರುಣ್ ಗಾಂಧಿ ಅವರ ಸಮರ್ಥನೆಯನ್ನು ತಳ್ಳಿ ಹಾಕಿರುವ ಆಯೋಗ ವರುಣ್ ಗಾಂಧಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ಹೇಳಿದೆ.
" ವರುಣ್ ಮಾಡಿರುವ ಎರಡು ಭಾಷಣಗಳು ತೀರಾ ಅವಹೇಳನಕಾರಿಯಾಗಿದ್ದು, ಉದ್ರೇಕಕಾರಿಯಾಗಿದೆ. ಒಟ್ಟಾರೆಯಾಗಿ ನಿರ್ದಿಷ್ಟ ಸಮುದಾಯವು ಸ್ವೀಕರಿಸಲಾರದ ಸ್ವರೂಪದಲ್ಲಿದೆ" ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. ಇದಲ್ಲದೆ, ವರುಣ್ ಅವರನ್ನು ಬಿಜೆಪಿ ಅಥವಾ ಯಾವುದೇ ಪಕ್ಷವು ಚುನಾವಣಾ ಕಣಕ್ಕೆ ಇಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಆದರೆ ಬಿಜೆಪಿಯು ವರುಣ್ ಅವರನ್ನೇ ಪಿಲಿಭಿತ್ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಹೇಳಿದೆ.
ವರುಣ್ ಗಾಂಧಿ ಸಲ್ಲಿಸಿರುವ ಉತ್ತರದ ವಿಚಾರಣೆಗಾಗಿ ಚುನಾವಣಾ ಆಯೋಗವು ಶನಿವಾರ ಸಭೆ ಸೇರಿದ್ದು, ಶನಿವಾರ ರಾತ್ರಿ ತನ್ನ ತೀರ್ಪು ನೀಡಿದೆ. ಅಲ್ಲದೆ ಬಿಜೆಪಿಯು ವರುಣ್ ಗಾಂಧಿಯನ್ನು ಕಣಕ್ಕೆ ಇಳಿಸಿದರೆ ಅದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.