ದೇವೇಗೌಡ್ರ ಮಾತು ಕನ್ನಡಿಗರೆಲ್ಲಾ ಒಪ್ತಾರೆ!

Webdunia
ಅವಿನಾಶ್ ಬಿ.
" ನಾ' ನೊಬ್ಬ ಕನ್ನಡಿಗ ಆಗಿರುವುದಕ್ಕೇ ನಾಚಿಕೆಯಾಗ್ತಿದೆ. ಯಾವುದೋ ಪಾಪ ಮಾಡಿ ಕರ್ನಾಟಕದಲ್ಲಿ ಹುಟ್ಟಿದ್ದೀನಿ. ಇಲ್ಲಿ ಹುಟ್ಬಾರ್ದಿತ್ತು. ಆದ್ರೆ ಹುಟ್ಟಿದ್ದು ನನ್ನ ಕರ್ಮ" ಅನ್ನೋ ಆಣಿಮುತ್ತುಗಳು ಒಂದು ಕಾಲದಲ್ಲಿ ದೇಶವನ್ನೇ ಆಳಿದ್ದ ಮಾಜಿ ಪ್ರಧಾನಿಯೊಬ್ಬರ ಬಾಯಿಂದ ಉದುರಿವೆ ಎಂಬುದನ್ನು ಕೇಳಿದ್ದೇವೆ, ಓದಿದ್ದೇವೆ. ಬೀದರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಮ್ಮನ್ನು ಟೀಕಿಸುತ್ತಿರುವ ಪಕ್ಷಗಳ ವಿರುದ್ಧ ಕೆಂಡ ಕಾರುತ್ತಾ ಕಾರುತ್ತಾ ಅವರು ಒಳಗಿದ್ದ ತಳಮಳವನ್ನು ಕಾರಿದ್ದು, ತಮ್ಮ ನಿಜರೂಪವನ್ನು ತೋರಿದ್ದು ಈ ವಾಕ್ಯಗಳ ಮೂಲಕ.

ಅವರ ಇತ್ತೀಚಿನ ರಾಜಕೀಯದಾಟಗಳನ್ನು ಕಂಡವರಿಗೆ ಅಂಥವರ ಬಾಯಿಯಿಂದ ಇಂಥ ಪದಗಳು ಉದುರಿರುವುದರಲ್ಲೇನೂ ಅಚ್ಚರಿ ಇಲ್ಲ ಅನ್ನಿಸದಿರದು. ಹಾಗಾಗಿ ಇಂಥವರನ್ನು "ನಮ್ಮ ಕನ್ನಡಿಗ ಪ್ರಧಾನಿ" ಅಂತ ಒಂದು ಕಾಲದಲ್ಲಿ ಹೆಮ್ಮೆಯಿಂದ ಒಪ್ಪಿಕೊಂಡಿದ್ದವರೆಲ್ಲಾ ಅವರ ಇದೇ ಮಾತನ್ನು ಅವರಿಗೇ ತಿರುಗಿಸಿ ಹೇಳಲು ಸಜ್ಜಾಗುತ್ತಿದ್ದಾರೆ.

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಆದರೆ ನಮ್ಮ ರಾಜಕಾರಣಿಗಳಂತೂ ಸಿಟ್ಟಿನ ಭರದಲ್ಲೋ, ಅಥವಾ ಉದ್ವೇಗದಲ್ಲೋ, ಆವೇಶದಲ್ಲೋ ಆಡಿದ ಮಾತನ್ನು ಒಂದು ಪತ್ರಿಕಾಗೋಷ್ಠಿ ಕರೆದು, 'ನಾನು ಆ ರೀತಿ ಹೇಳಿಯೇ ಇಲ್ಲ, ಇದು ಮಾಧ್ಯಮದವರು ತಿರುಚಿದ್ದು' ಅಂತ ಗೂಬೆ ಕೂರಿಸುವುದೂ, 'ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಇದು ಪ್ರತಿಪಕ್ಷಗಳ ಸಂಚು' ಅಂತ ಜಾರಿಕೊಳ್ಳುವುದೂ ಅತ್ಯಂತ ಸುಲಭವಾಗಿಬಿಟ್ಟಿದೆ ಮತ್ತು ಅದೊಂದು ಪರಂಪರೆಯೂ ಆಗಿಬಿಟ್ಟಿದೆ. ಹಾಗಾಗಿ ರಾಜಕೀಯದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಪರಿಸ್ಥಿತಿಯನ್ನೇ ಅವರೆಲ್ಲಾ ನೆಚ್ಚಿಕೊಂಡಿದ್ದಾರೆ.

ಕನ್ನಡ ಮಣ್ಣಿನಲ್ಲೇ ಹುಟ್ಟಿ, ಕನ್ನಡ ಮಣ್ಣಿನದೇ ಅನ್ನ ತಿಂದು, ಕನ್ನಡಿಗರಿಂದಲೇ ಮೇಲೆ ಬಂದ ವ್ಯಕ್ತಿ, ತಮ್ಮ ಸಡಿಲ ನಾಲಿಗೆಯ ಮೂಲಕ ಆರು ಕೋಟಿ ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ ಈ ರೀತಿ ಹೇಳಿಕೆ ನೀಡಿದ್ದಿದ್ದರೆ ಆತನ ಕಥೆ ಏನಾಗುತ್ತಿತ್ತೆಂದು ಊಹಿಸುವುದೂ ಸಾಧ್ಯವಾಗದ ಮಾತು. ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಅಂತ ನಾವೆಲ್ಲಾ ತಿಳಿದುಕೊಂಡಿರುವ ವ್ಯಕ್ತಿ ತಮ್ಮ ಜವಾಬ್ದಾರಿ ಯಾವ ಮಟ್ಟದಲ್ಲಿದೆ, ತಾವು ಯಾವ ಸ್ಥಾನಕ್ಕೆ ಅರ್ಹರು ಎಂಬುದನ್ನು ಬಟಾಬಯಲಾಗಿಸಿದ್ದಾರೆ.

ದ್ವೇಷ ರಾಜಕಾರಣ ಮತ್ತು ವಂಶ ರಾಜಕಾರಣವನ್ನೇ ಬಂಡವಾಳವಾಗಿಸಿಕೊಂಡು ಒಂದು ಮಟ್ಟಕ್ಕೇರಿರುವವರಿಂದ ಇಂಥ ಮಾತುಗಳು ಬರುವುದಕ್ಕೆ, ಬಹುಶಃ ಇತ್ತೀಚಿನ ವಿದ್ಯಮಾನಗಳ ಫಲಿತವಾದ ಹತಾಶೆ ಕಾರಣವಿದ್ದಿರಬಹುದೇ? ಬರಲಿರುವ ಚುನಾವಣೆಗಳಲ್ಲಿ ಕನ್ನಡ ನಾಡಿನ ಪ್ರಜ್ಞಾವಂತ ಮತದಾರ ಸಮರ್ಥರಿಗೆ, ಅರ್ಹರಿಗೆ ಮತ ಹಾಕಲು ಸಿದ್ಧನಾಗಿದ್ದಾನೆ ಹಾಗೂ ಅನರ್ಹರನ್ನು, ಢೋಂಗಿ ಜಾತ್ಯತೀತರನ್ನು, ಕೇವಲವಾದ ರಾಜಕೀಯ ಪ್ರದರ್ಶಿಸಿದವರನ್ನು, ಮಾತಿಗೆ ತಪ್ಪಿದವರನ್ನು, ಸಭ್ಯತೆಯ ಎಲ್ಲಾ ಎಲ್ಲೆಯನ್ನು ಮೀರಿದವರನ್ನು ತಿರಸ್ಕರಿಸುತ್ತಾನೆ ಅಂತ ಅವರಿಗೆ ಮನದಟ್ಟಾಗಿದೆಯೇ? ಹಾಗೇನಾದರೂ ಇದ್ದರೆ ಅವರ ಬಗ್ಗೆ ಒಂದಷ್ಟು ಅಸಹನೀಯವಾದ ಮತ್ತು ಅಯ್ಯೋ ಪಾಪ, ಈ ಸ್ಥಿತಿ ಬರಬಾರದಿತ್ತು ಅನ್ನೋ ಅನುಕಂಪವಿದೆ.

ರಾಷ್ಟ್ರಮಟ್ಟದ ರಾಜಕಾರಣಿಯಾಗುವ ಎಲ್ಲಾ ಅರ್ಹತೆಗಳಿದ್ದೂ, ರಾಜ್ಯದಲ್ಲಿ ಕ್ಷುಲ್ಲಕ ಕಾಲೆಳೆಯುವ ರಾಜಕೀಯಕ್ಕೆ ಸೀಮಿತವಾಗಿಸಿಕೊಂಡಿದ್ದಲ್ಲದೆ, ರಾಜ್ಯ ರಾಜಕಾರಣವನ್ನೇ ಮನೆ ರಾಜಕೀಯವನ್ನಾಗಿಸಲು, ಅದಕ್ಕಾಗಿ ನಂಬಿದವರನ್ನೆಲ್ಲಾ ಪಕ್ಷ ತ್ಯಜಿಸುವಂತೆ ಮಾಡಲು ಹೇಸದವರಿಂದ ಇಂಥದ್ದೊಂದು ಮಾತನ್ನು ನಿರೀಕ್ಷಿಸುವುದೇನೂ ತಪ್ಪಿಲ್ಲ, ಬಿಡಿ. ಕನ್ನಡಿಗರ ದೌರ್ಭಾಗ್ಯವಿದು.

ಹಾಗಾಗಿ ಅವರ ಮಾತುಗಳನ್ನು ಕನ್ನಡಿಗರು ಒಪ್ಪುತ್ತಾರೆ. ಅವರೇ ಹೇಳಿದಂತೆ "ಅವರೊಬ್ಬ ಕನ್ನಡಿಗ ಆಗಿರುವುದಕ್ಕೇ ನಾಚಿಕೆಯಾಗ್ತಿದೆ, ಕರ್ನಾಟಕದಲ್ಲಿ ಹುಟ್ಟಿದ್ದಾರೆ, ಇಲ್ಲಿ ಹುಟ್ಬಾರ್ದಿತ್ತು. ಆದ್ರೆ ಹುಟ್ಟಿದ್ದು ಅವರದ್ದಲ್ಲ, ನಮ್ಮ ಕರ್ಮ" ಅಂತ ಅಂದುಕೊಳ್ಳೋ ಪರಿಸ್ಥಿತಿ ಕನ್ನಡಿಗರದು.

ಓದುಗರೇ, ನಿಮಗೇನನಿಸುತ್ತದೆ.... ಇಲ್ಲೇ ಕೆಳಗೆ ಬರೆಯಿರಿ...

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಂಚ ಪ್ರಕರಣ: ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ

ಖಾಸಗಿ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿನಿ ಮೇಲೆ ರೇಪ್‌: ಐವರು ಶಿಕ್ಷಕರು ಅಂದರ್‌

ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯಿನ್ ನುಂಗಿ ಎರಡನೇ ತರಗತಿ ವಿದ್ಯಾರ್ಥಿನಿ ಸಾವು

ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪಿತೂರಿ: ಐಎಸ್‌ಐ, ಬಾಂಗ್ಲಾದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಅರೆಸ್ಟ್‌

Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

Show comments