ಇವತ್ತು ಭಾರತ ಒಕ್ಕೂಟದಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನ. ಸರಿಯಾಗಿ 55 ವರ್ಷದ ಹಿಂದೆ ಇದೇ ದಿನದಂದು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಹಲವು ಭಾಗಗಳು ಆಲೂರು ವೆಂಕಟರಾಯರ ಮುಂದಾಳುತ್ವದಲ್ಲಿ ನಡೆದ ದಶಕಗಳ ಕಾಲದ ಹೋರಾಟದ ಫಲವಾಗಿ ಒಂದಾದ ಸುದಿನ. ಇಂತಹ ದಿನವೊಂದನ್ನು ನೆನೆಯಲು ನಮ್ಮ ರಾಜ್ಯ ಸರ್ಕಾರ ಎಲ್ಲ ಕನ್ನಡಿಗರಿಗೆ ಒಂದು ಭರ್ಜರಿ ಉಡುಗೊರೆ ಕೊಡುತ್ತಿದೆ. ಏನು ಗೊತ್ತೇ? ಮಕ್ಕಳ ಸಂಖ್ಯೆ ಕಡಿಮೆಯಿದೆ ಅನ್ನುವ ನೆಪವೊಡ್ಡಿ ಸರಿ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚುವ ನಿರ್ಧಾರ! ಕನ್ನಡದ ಮಕ್ಕಳ ಏಳಿಗೆಗೆ ಬುನಾದಿ ಹಾಕಬೇಕಾದ ಶಾಲೆಗಳನ್ನು ಒಳ್ಳೆ ಅವೆನ್ಯೂ ರಸ್ತೆಯಲ್ಲಿ ಅಂಗಡಿ ಇಟ್ಟಿರೋ ವ್ಯಾಪಾರಿ ರೀತಿಯಲ್ಲಿ ಲಾಭ-ನಷ್ಟದ ಕಣ್ಣಿಂದ ಅಳೆದು ಮುಚ್ಚುವ ನಿಲುವಿಗೆ ಬಂದಿರುವ ಸರ್ಕಾರ "ಸರಿಯಾದ ಕಲಿಕೆ ರೂಪಿಸುವುದು" ನಾಡಿನ ಮಕ್ಕಳ ಬಗ್ಗೆ ತನಗಿರುವ ಕರ್ತವ್ಯದಂತೆ ಕಾಣದೇ ವ್ಯಾಪಾರವೆಂಬಂತೆ ಕಾಣುತ್ತಿರುವುದು ಬರಲಿರುವ ದಿನಗಳ ದಿಕ್ಸೂಚಿಯೇನೊ ಅನ್ನಿಸುವಂತಿದೆ.
ಮೂರು ಸಾವಿರ ಶಾಲೆಗಳಿಗೆ ಬೀ ಗ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಕಾರಣ? ಆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5ಕ್ಕಿಂತ ಕಡಿಮೆ ಇದೆ ಅನ್ನುವುದು. ಅಲ್ಲದೇ ಮುಖ್ಯಮಂತ್ರಿಯವರು ಹೇಳಿದ ಇನ್ನೂ ಕೆಲವು ಮಾತುಗಳೆಂದರೆ "ಕೇಂದ್ರ ಸರ್ಕಾರ 20 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕೆಂದು ಆದೇಶಿಸಿದೆ", "ಕೇಂದ್ರದಿಂದಲೇ ಆದೇಶ ಬಂದಿರುವಾಗ ನಾನೇನು ಮಾಡಲು ಸಾಧ್ಯ?", "ಇಂದು ಹಳ್ಳಿಗಳಲ್ಲಿ ಬಹಳಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿಲ್ಲ. ಖಾಸಗಿ ಶಾಲೆಗಳ ಕಡೆ ಹೊರಳುತ್ತಿದ್ದಾರೆ. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಶಿಕ್ಷಣ ಪೂರೈಸುವುದು ಸಾಧ್ಯವಾಗುತ್ತಿಲ್ಲ" ಅನ್ನುವಂತಹ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮಾತುಗಳು.
ನೀವೇ ಯೋಚನೆ ಮಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಅನ್ನುವುದು ಮೂಲಭೂತ ಹಕ್ಕು ಅನ್ನುವ ಕಾನೂನು ತರುತ್ತಿರುವ ಈ ದಿನಗಳಲ್ಲಿ ಇಲ್ಲಿ ಕಡಿಮೆ ಮಕ್ಕಳಿದ್ದಾರೆ, ಅದಕ್ಕೆ ನಷ್ಟ ಆಗುತ್ತೆ ಅದಕ್ಕೆ ಮುಚ್ಚಿ ಇನ್ನೊಂದು ಕಡೆ ಹಾಕ್ತೀವಿ ಅನ್ನಲು ಶಿಕ್ಷಣ ಅನ್ನುವುದು ಲಾಭ-ನಷ್ಟದ ವ್ಯಾಪಾರವೇ? ಕಲಿಕೆ ಅನ್ನುವುದು ಸಂವಿಧಾನದ ಜಂಟಿ ಪಟ್ಟಿಯಲ್ಲಿದ್ದರೂ (ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಕೈಯಲ್ಲಿರಬೇಕಿತ್ತು!) ಅದರ ಹೆಚ್ಚಿನ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಹೀಗಿರುವಾಗ ಕರ್ನಾಟಕದ ಮಕ್ಕಳ ಕಲಿಕೆಯ ಅಗತ್ಯಗಳ ಬಗ್ಗೆ ಏನೇನೂ ತಿಳಿಯದ ಯಾರೋ ದೆಹಲಿಯ ಯಜಮಾನರು ಆಜ್ಞೆ ಮಾಡಿದ್ದಾರೆ, ಅದಕ್ಕೆ ಮುಚ್ಚುತ್ತೀವಿ ಅನ್ನುವುದು ಮೈಗೆ ಎಣ್ಣೆ ಸವರಿಕೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸವಲ್ಲವೇ?
ಇನ್ನೂ ಮುಂದುವರೆದು, ಸ್ಪರ್ಧಾತ್ಮಕ ಶಿಕ್ಷಣದ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ ಅನ್ನುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಅಂತಹದೊಂದು ಶಿಕ್ಷಣ ಕೊಡಲಾಗುವುದಿಲ್ಲ, ಅಂತಹ ಶಿಕ್ಷಣ ಬೇಕಿದ್ದರೆ ಖಾಸಗಿ ಶಾಲೆಗಳಿಗೆ ಹೋಗಿ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿರುವುದು ಎಲ್ಲ ವರ್ಗದ ಕನ್ನಡಿಗರ ಕಲಿಕೆಯ ಅಗತ್ಯಗಳನ್ನು ಪೂರೈಸುವ ಬಗ್ಗೆ ಈ ಸರ್ಕಾರಕ್ಕೆ ಎಷ್ಟರ ಮಟ್ಟಿಗಿನ ಬದ್ಧತೆ, ಯೋಗ್ಯತೆ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ? ಸರ್ಕಾರಿ ಶಿಕ್ಷಣ ಕಳಪೆ, ಖಾಸಗಿ ಇಂಗ್ಲಿಷ್ ಶಿಕ್ಷಣವೇ ಶ್ರೇಷ್ಠ ಅನ್ನುವ ಕೆಲವು ಖಾಸಗಿ ಮಾರುಕಟ್ಟೆ ಶಕ್ತಿಗಳ ನಿಲುವನ್ನೇ ಸರ್ಕಾರ ಪ್ರತಿಪಾದಿಸುವುದು ಕನ್ನಡ ಮಾಧ್ಯಮ ಶಿಕ್ಷಣದ ಸಮಾಧಿಯನ್ನೇ ಕಟ್ಟುವ ದಿನಗಳನ್ನು ತಂದೀತು. ಇದೇ ರೀತಿ ಸರ್ಕಾರಿ ಶಾಲೆಗಳನ್ನು ಬೇಕಾಬಿಟ್ಟಿ ಎಂಬಂತೆ ನಡೆಸುತ್ತ ಹೋದಲ್ಲಿ ಇವತ್ತು ಮೂರು ಸಾವಿರ ಮುಚ್ಚಿದವರು ನಾಳೆ ಎಲ್ಲ ಶಾಲೆಗಳನ್ನು ಮುಚ್ಚಿ ಬೇಕಾದ್ರೆ ಖಾಸಗಿ ಶಾಲೆಗೆ ಹೋಗಿ, ಇಲ್ಲ ಮನೇಲಿ ಬೆಚ್ಚಗೆ ಮಲ್ಕೊಳ್ಳಿ, ನಾವೇನು ಮಾಡೋಕಾಗಲ್ಲ ಅನ್ನುವ ಉಡಾಫೆಯ ನಿಲುವು ತಳೆದರೂ ಅಚ್ಚರಿಯಿಲ್ಲ.
ಎಂದಿಗೂ ಹಿಂಪಡೆಯಲಾಗದ ಬದಲಾವಣ ೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಇರುವ ಶಾಲೆಗಳನ್ನು ಮುಚ್ಚಿ ಹೋಬಳಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆ ಮಾಡ್ತೀವಿ ಅನ್ನುವುದು, ಪಾಲಿಕೆ ಶಾಲೆಗಳನ್ನು ಸಿ.ಬಿ.ಎಸ್.ಈ. ತೆಕ್ಕೆಗೆ ದೂಡಿ ಧನ್ಯತಾ ಭಾವ ಅನುಭವಿಸುವುದು, ತಮ್ಮ ಸಿದ್ಧಾಂತವನ್ನು ಯಾವ ಯಾವುದೋ ರೂಪದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತೂರಿಸುವ ಪ್ರಯತ್ನ ಮಾಡುವುದು ಹೀಗೆ ಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿರುವ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಒಂದೆಡೆ ಶಾಲೆ ಮುಚ್ಚಿ, ಹಳ್ಳಿಗಾಡಿನ ಮಕ್ಕಳ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಕಲಿಕೆಯ ಹಕ್ಕನ್ನೇ ಕಸಿದುಕೊಳ್ಳುವ ತೊಂದರೆ ಇದ್ದರೆ, ಇನ್ನೊಂದೆಡೆ 'ಒಳ್ಳೆಯ ಶಿಕ್ಷಣ ಬೇಕಾ ಖಾಸಗಿ ಶಾಲೆಗೆ ಹೋಗಿ, ಸರ್ಕಾರಿ ಶಾಲೆಯಲ್ಲಿ ಅದನ್ನು ಕೊಡಲಾಗದು' ಅನ್ನುವ ಸಂದೇಶದ ಮೂಲಕ ಜನರು ಖಾಸಗಿ ಇಂಗ್ಲಿಷ್ ಶಾಲೆಗಳತ್ತ ಹೋಗುವಂತೆ ಮಾಡುತ್ತಿದ್ದಾರೆ.
ಇದರ ನೇರ ಪರಿಣಾಮ ತಿಳಿಯಬೇಕೇ? ಸುಮ್ಮನೆ ಬೆಂಗಳೂರನ್ನು ಗಮನಿಸಿ. ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಷ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಠೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಮಿತಿ ಮೀರಿ ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ನಾಳೆ ಇದು ಇಡೀ ಕರ್ನಾಟಕವನ್ನು ವ್ಯಾಪಿಸಿದರೂ ಅಚ್ಚರಿಯಿಲ್ಲ. ಇಡೀ ಕರ್ನಾಟಕಕ್ಕೆ ಸಮಗ್ರವಾದ, ಅತ್ಯುತ್ತಮ ಗುಣಮಟ್ಟದ, ಎಲ್ಲ ಹಂತದ ಒಳ್ಳೆಯ ಕಲಿಕೆಯನ್ನು ಕನ್ನಡದಲ್ಲೇ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊರದೇ ಹೋದರೆ ಆಗುವ ಕೆಟ್ಟ ಬದಲಾವಣೆಗಳು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಗಳಾಗಲಿವೆ.
ಒಂದಿಷ್ಟು ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು, ಮಾಣೇಕ್ ಶಾ ಮೈದಾನದಲ್ಲಿ ಒಂದು ಕಾರ್ಯಕ್ರಮ ಮಾಡಿ ಸಿಹಿ ತಿನ್ನುವುದು, ಆಮೇಲೆ ಕನ್ನಡ, ಕನ್ನಡಿಗರ ಉಳಿವಿಗೆ ತಾವೆಷ್ಟು ಬದ್ಧ ಎಂದು ಭಾಷಣ ಕೊರೆಯುವುದು, ಕಲೆ, ಸಾಹಿತ್ಯ, ಸಿನೆಮಾ ಅಂತ ಬೊಕ್ಕಸದಿಂದ ಒಂದಿಷ್ಟು ಹಣ ಕೊಡುವುದೇ ಕನ್ನಡದ ಕೆಲಸ ಅಂದುಕೊಂಡಿರುವ ಈ ಸರ್ಕಾರ, ನಾಡಿನ ನಾಳೆಯನ್ನು ರೂಪಿಸಬೇಕಾದ ಕಲಿಕಾ ವ್ಯವಸ್ಥೆಗಳತ್ತ ಇದೇ ಕಡೆಗಣನೆ ಮುಂದುವರೆಸಿದರೆ ಕನ್ನಡ, ಕನ್ನಡಿಗನಿಗೆ ಉಳಿಗಾಲವಿಲ್ಲ.
ಕೊನೆ ಹನಿ: ಉದ್ಯಮಿ ಅಜೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ ಮೂಲಕ ಎಲ್ಲ ರೀತಿಯ ವ್ಯವಸ್ಥೆಯುಳ್ಳ ಎರಡೆರಡು ಶಾಲೆಯನ್ನು ಎಲ್ಲ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತೆಗೆಯುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಈ ಶಾಲೆಗಳಲ್ಲಿ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲೇ ಕಲಿಕಾ ವ್ಯವಸ್ಥೆ ರೂಪಿಸುವುದು ಮತ್ತು ಅದನ್ನು ರಾಜ್ಯದ ಬೋರ್ಡ್‌ನೊಂದಿಗೆ ನೊಂದಾಯಿಸಿಕೊಳ್ಳುವ ಅತ್ಯಂತ ಸಂತೋಷದ ನಿಲುವು ಪ್ರಕಟಿಸಿದ್ದಾರೆ. ನಮ್ಮ ನಾರಾಯಣ ಮೂರ್ತಿ, ಕ್ಯಾ.ಗೋಪಿನಾಥ್ ಅವರು ಇದನ್ನು ಗಮನಿಸುತ್ತಿದ್ದಾರೆ ಅಂದುಕೊಳ್ಳುವೆ. ಇಂತಹ ಕ್ರಮಗಳು ಹೊಳಪು ಕಳೆದುಕೊಳ್ಳುತ್ತಿರುವ ತಾಯ್ನುಡಿ ಶಿಕ್ಷಣದತ್ತ ಎಲ್ಲರೂ ದೊಡ್ಡ ಮಟ್ಟದಲ್ಲಿ ತಿರುಗಿ ನೋಡುವಂತೆ ಮಾಡಲಿ ಆಗಲಾದರೂ ಸರ್ಕಾರಕ್ಕೆ ತನ್ನ ಹೊಣೆಗಾರಿಕೆ ನೆನಪಾಗುವುದಾ ನೋಡೋಣ.