ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕೇತ್ರದಲ್ಲಿ ಸ್ಪರ್ಧಿಸಲಿದ್ದು, ಅವರ ವಿರುದ್ಧವೇ ಚುನಾವಣಾ ಕಣಕ್ಕಿಳಿಯಲು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಚಿಂತಿಸುತ್ತಿದ್ದಾರೆ.
ಚುನಾವಣಾ ಪ್ರಚಾರಾರ್ಥ ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಿದ ಕೇಜ್ರಿವಾಲ್ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಗುಜರಾತನಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ರೈತರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡು ಅದಾನಿ, ಅಂಬಾನಿ ಸಮೂಹಗಳಿಗೆ ಮಾರಾಟ ಮಾಡಲಾಗಿದೆ. ಇದರಿಂದ ನಾಲ್ಕೈದು ಪ್ರಭಾವಿ ಉದ್ಯಮಿಗಳು ಉದ್ದಾರವಾಗಿದ್ದಾರೆಯೇ ಹೊರತು, ಬಡವ ಬಡವನಾಗಿಯೇ ಇದ್ದಾನೆ. ಜನಸಾಮಾನ್ಯರು ಈಗಲೂ ಸಮರ್ಪಕ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ" ಎಂದರು.
" ರಾಷ್ಟ್ರದ ಪ್ರಭಾವಿ ಎರಡು ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೇಶೋದ್ಧಾರ ಎನ್ನುತ್ತಲೇ ರಾಜಕೀಯ ಮಾಡಿಕೊಂಡು ಬಂದಿದೆ. ಆದರೆ ಸಾಧನೆ ಮಾತ್ರ ಶೂನ್ಯ. ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಕೂಡಾ ಅಂಬಾನಿಯ ಒಂದೊಂದು ಜೇಬಿನಲ್ಲಿದ್ದಾರೆ. ಇವರಿಬ್ಬರ ಚುನಾವಣಾ ಪ್ರಚಾರದ ವೆಚ್ಚವನ್ನು ಪ್ರತಿಷ್ಠಿತ ಉದ್ಯಮಿಗಳು ವಹಿಸಿಕೊಂಡಿದ್ದಾರೆ. ಈ ಗಣ್ಯ ಉದ್ಯಮಿಗಳು ರಾಜಕೀಯ ನಾಯಕರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ದೇಶವನ್ನು ಆಳುತ್ತಿದ್ದಾರೆ" ಎಂದು ಆರೋಪಿಸಿದರು.
" ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಅವರ ವಿರುದ್ಧ ಸ್ಪರ್ಧಿಸುವ ಗುರುತರ ಸವಾಲನ್ನು ಸ್ವೀಕರಿಸುತ್ತಿದ್ದೇನೆ. ಇ ಕುರಿತು ದಿನಾಂಕ 23ರಂದು ವಾರಣಾಸಿಯಲ್ಲಿ ಆಮ್ಆದ್ಮಿ ಪಕ್ಷದ ಸಭೆ ಕರೆಯಲಾಗಿದೆ. ಪಕ್ಷದ ಮುಖಂಡರ ಹಾಗೂ ಸಾರ್ವಜನಿಕರ ನಿಲುವಿನ ಮೇರೆಗೆ ಸೂಕ್ತ ತೀರ್ಮಾನ ತೆಗೆದುಕೊಂಡು ನನ್ನ ನಿರ್ಧಾರ ಪ್ರಕಟಿಸುತ್ತೇನೆ" ಎಂದರು.