Select Your Language

Notifications

webdunia
webdunia
webdunia
webdunia

ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ...

ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ...
- ಸಂತೋಷ್ ಕುಮಾರ್, ನವದೆಹಲಿ

ಸುಂದರಿ ಎಂದಷ್ಟೇ ಹೇಳಿದರೆ ಅದು ಆಕೆಗೆ ಮದುವೆಯಾದ ನಂತರ ನಾನು ನೀಡುತ್ತಿರುವ ಶಾಪ ಎಂದು ನನ್ನ ನೆನಪೇ ಇಲ್ಲದಿರುವ ಆಕೆ ಅಂದುಕೊಳ್ಳಲು ಸಾಧ್ಯವಿಲ್ಲ. ಆದರೂ ಅವಳು ನಮ್ಮ ಕಾಲೇಜಿನಲ್ಲಿ ಎಲ್ಲರನ್ನೂ ಕಾಡುವಷ್ಟು ಸೌಂದರ್ಯವನ್ನು ಹೊಂದಿದ್ದಳು ಎನ್ನುವುದು ನಾನು ಪ್ರೇಮ ಪತ್ರವನ್ನು ಆಕೆಗೆ ಕೊಟ್ಟ ಬಳಿಕ ಸ್ನೇಹಿತರ ವರ್ತನೆಯಿಂದ ನನ್ನ ಅರಿವಿಗೆ ಬಂದಿತ್ತು.

ಕೈಕೆಗೊಬ್ಬಳು ಮಂಥರೆಯಂತೆ ನನ್ನ ಹುಡುಗಿಗೂ ಒಬ್ಬಳು ಜತೆಗಾತಿಯಿದ್ದಳು. ಎಲ್ಲಿ ಹೋದರೂ ಜತೆಗೇ ಹೋಗುತ್ತಿದ್ದ ಆಕೆ ಹುಡುಗರಿಗೆಲ್ಲ ಬೇತಾಳ. ಆದರೆ ಸಾಮಾನ್ಯವಾಗಿ ಪ್ರೀತಿಸುವ ಸಂದರ್ಭದಲ್ಲಿ ಹುಡುಗರಿಗೆ ಇಲ್ಲದೇ ಇರುವ ಬುದ್ಧಿಯನ್ನು ನಾನು ಬಳಸಿ ಆ ಮಂಥರೆಯ ಗೆಳೆತನವನ್ನು ಹೇಗೋ ಸಂಪಾದಿಸಿದ್ದೆ.

ಹೂವಿನೊಂದಿಗೆ ಹಗ್ಗವೂ ಸ್ವರ್ಗಕ್ಕೆ ಹೋದಂತೆ ನನ್ನ ಕೈಕೆಗಿಂತಲೂ ಮಂಥರೆಗೆ ಹೆಚ್ಚು ಅಹಂಕಾರ, ಬಿನ್ನಾಣ. ಸಹಿಸಿ-ಸಂಭಾಳಿಸಿ ನನ್ನ ಪ್ರೇಮವನ್ನು ಆಕೆಯಲ್ಲೇ ನಿವೇದಿಸಿಕೊಂಡರೆ, ಊಹುಂ.. ಅವಳು ಒಪ್ಪುವ ಸಾಧ್ಯತೆಯಿಲ್ಲ ಎಂದು ಬಿಟ್ಟಿದ್ದಳು. ಆದರೂ ಪತ್ರವೊಂದನ್ನು ಬೆಳದಿಂಗಳ ಸುಂದರಿಗೆ ನೀಡುವ ಭರವಸೆಯನ್ನು ಆಕೆಯಿಂದ ಹೇಗೋ ಪಡೆದುಕೊಂಡಿದ್ದೆ.

ಪ್ರೀತಿ ಮಾಡಲು ಸುಂದರಾಂಗರಿಗೇನೂ ಕೊರತೆಯಿರಲಿಲ್ಲವಾದರೂ, ಎದುರು ನಿಂತು ಮಾತನಾಡುವ ಧೈರ್ಯ ನನಗೂ ಸೇರಿದಂತೆ ಯಾರಿಗೂ ಇರಲಿಲ್ಲ. ಅದ್ಯಾವ ಕ್ಷಣದಲ್ಲಿ ನನಗೆ ಕೊಡಬೇಕೆನಿಸಿತೋ ಮತ್ತು ಮುಂದಿನ ಪರಿಣಾಮವನ್ನು ಮರೆತೆನೋ ನಾ ಕಾಣೆ. ಏನಾದರಾಗಲಿ, ಪತ್ರವನ್ನು ಕೊಟ್ಟೇ ಕೊಡುತ್ತೇನೆ ಎಂಬ ಘೋರ ನಿರ್ಧಾರಕ್ಕೆ ಬಂದಿದ್ದೆ.

ಆ ಪ್ರೀತಿಯ ಹುಡುಗಿಗೆ ಪತ್ರ ಬರೆಯಬೇಕೆಂದು ಹಲವು ನೋಟ್ ಬುಕ್‌ಗಳ ಮಧ್ಯದ ಹಾಳೆಯನ್ನು ಕಿತ್ತು ತೆಳ್ಳಗಾಗಿಸಿದ್ದೆ. ಆದರೆ ಯಾವ ಪತ್ರವೂ ಆಕೆಯನ್ನು ಮೆಚ್ಚಿಸುವ ಭರವಸೆ ಅದರಲ್ಲಿನ ಅಕ್ಷರಗಳಲ್ಲಿ ನನಗೆ ಮೂಡಿರಲಿಲ್ಲ. ಕೊನೆಗೂ ಏನೇನೋ ಗೀಚಿ, ನಾಲ್ಕು ಸಾಲು ಕವನಗಳನ್ನೂ ಬರೆದು ಭದ್ರವಾಗಿ ಜೇಬಿನಲ್ಲಿಟ್ಟುಕೊಂಡಿದ್ದೆ.

ನಮ್ಮ ಪ್ರಾಂಶುಪಾಲರ ಕೊಠಡಿಯ ಪಕ್ಕದಿಂದಲೇ ಕೆಳಗಿನ ಮಹಡಿಗಳಿಗೆ ಇಳಿದು ಹೋಗಬೇಕಿತ್ತು. ಅದು ಬಹುಶಃ ಶನಿವಾರ ಮತ್ತು ಮಧ್ಯಾಹ್ನದ ಹೊತ್ತು. ಒಂದು ಕಡೆಯಿಂದ ಹಸಿವು, ಮತ್ತೊಂದು ಕಡೆಯಿಂದ ಕಿಸೆಯಲ್ಲೇ ಬಾಕಿ ಉಳಿದಿರುವ ಪತ್ರ ಜರೂರತ್ತು.

ಅವರಿಬ್ಬರೂ ತರಗತಿಯಿಂದ ಹೊರಟಿದ್ದನ್ನು ಗಮನಿಸಿದ ನಾನು ಹಿಂದೆಯೇ ಫಾಲೋ ಮಾಡಿಕೊಂಡು ಹೋದೆ. ಮೆಟ್ಟಿಲಿಳಿಯುತ್ತಿದ್ದಂತೆ ಧುತ್ತನೆ ಪ್ರತ್ಯಕ್ಷವಾಗಿ, ನಿನ್ನಲ್ಲಿ ಸ್ವಲ್ಪ ಮಾತನಾಡುವುದಿದೆ ಎಂದು ತುಂಡು-ತುಂಡು ಅಕ್ಷರಗಳನ್ನು ಸೇರಿಸಿ ಉಸುರಿದ್ದೆ. ಅವಳ ತುಟಿ ನನ್ನೆದುರು ಆ ರೀತಿ ತೆರೆಯುವುದನ್ನು ನೋಡಿದ ಮೊದಲ ಸಲವದು, ಮಾತೇ ಹೊರಡುತ್ತಿರಲಿಲ್ಲ.

ಬೇಡ... ನಿಂಜೊತೆ ನನಗೇನೂ ಮಾತನಾಡಲಿಕ್ಕಿಲ್ಲ ಎಂದು ಅವಳು ಹೇಳಿದರೂ ಪತ್ರವನ್ನು ಕಿಸೆಯಿಂದ ಆಕೆಯ ಕೈಗೆ ಇಟ್ಟುಬಿಟ್ಟು ದೊಡ್ಡ ಭಾರವೊಂದನ್ನು ಕಳೆದುಕೊಂಡ ಭಾವವನ್ನು ನುಂಗಿ ಜಾಗ ಖಾಲಿ ಮಾಡಿದ್ದೆ.

ಪರೀಕ್ಷೆ ಬರೆದ ಹುಡುಗಿಯಂತೆ ಮರುದಿನದವರೆಗೆ ನನಗೆ ಪತ್ರದ ಫಲಿತಾಂಶದ್ದೇ ಚಿಂತೆ. ಆಕೆಯೆಂದರೆ ಆ ದಿನಗಳಲ್ಲಿ ನನಗೆ ಎಲ್ಲವೂ ಆಗಿದ್ದವಳು. ಸದಾ ಕುಳಿತಿರುತ್ತಿದ್ದ ಎದುರು ಬೆಂಚಿನ ತುತ್ತ ತುದಿಯನ್ನು ನೋಡುವ ಧೈರ್ಯವೂ ಸಾಲದೆ ನೇರ ನನ್ನ ತರಗತಿಗೆ ನಡೆದು ಹೋಗಿದ್ದೆ. ಹೇಳುವಂತಹ ಅವಘಡಗಳು ಪತ್ರ ಪ್ರಕರಣದಿಂದ ಸಂಭವಿಸಿರದಿದ್ದರೂ ಆಕೆ ನನ್ನ ಪ್ರೀತಿಯನ್ನು ಅಪ್ಪಿಕೊಂಡಿರಲಿಲ್ಲ.

ನನಗೆ ಆಸಕ್ತಿಯಿಲ್ಲ ಎಂದು ಹೇಳಿ ಬಿಡು ಎಂದು ಹೇಳಿದ್ದಾಳೆಂದು ಮಂಥರೆ ನನಗೆ ತಿಳಿಸಿದಷ್ಟಕ್ಕೆ ನನ್ನ ಮೊದಲ ಪ್ರೇಮ ಪತ್ರ ಹೇಳ ಹೆಸರಿಲ್ಲದಂತೆ ಇಲ್ಲದ ವಿಳಾಸವನ್ನು ಕಳೆದುಕೊಂಡಿತ್ತು. ಆದರೂ ನನ್ನ ಪ್ರೇಮಪತ್ರದ ಆ ಮೊದಲ ಮತ್ತು ಕೊನೆಯ ಪ್ರಕರಣ ನನಗಿನ್ನೂ ಹಚ್ಚಹಸಿರು.

ಅಂದ ಹಾಗೆ ಇದು ನಡೆದದ್ದು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ. ನಾನು ದ್ವಿತೀಯ ಪಿಯುಸಿಯಲ್ಲಿದ್ದೆ, ಆಕೆ ಆಗ ನನಗೆ ಜೂನಿಯರ್. ನನಗಿನ್ನೂ ಮದುವೆಯಾಗಿಲ್ಲ, ಹಾಗಾಗಿ ಈಗ ನಾನು ಜೂನಿಯರ್!

Share this Story:

Follow Webdunia kannada