Select Your Language

Notifications

webdunia
webdunia
webdunia
webdunia

ನಿನ್ನ ನೆನಪು ಮರೆಯುವುದೆಂತು?

ನಿನ್ನ ನೆನಪು ಮರೆಯುವುದೆಂತು?
ಅಮೃತಾ

ಹಲೋ ಬಾಪು,
ಪ್ರೇಮಿಗಳ ದಿನದ ಶುಭಾಶಯಗಳು ಕಣೋ,

WD
ಭಾವನೆಗಳಿಗೆ ಭಾವನೆಗಳ ಬೆರೆಸಿ, ನಯನಗಳು ನಯನಗಳ ಆಕರ್ಷಿಸಿ, ಒಂದು ಹೃದಯಕ್ಕಾಗಿ ಮತ್ತೊಂದು ಹೃದಯ ಮಿಡಿಯುವುದೇ ಪ್ರೀತಿಯ ವಿಷಯ.. ಅಲ್ವಾ ಗೆಳೆಯ?

ನಾ ಏನೆಂದು ಬರೆಯಲಿ ಹೇಳು, ಈ ಹೃದಯ ಬರೆಯುವ ಕವನದಲ್ಲಿ ಭಾವನೆಗಳು ನೂರಾರು, ಭಾವನೆಗಳ ಮಡಿಲಿನಲಿ ಕನಸು ಹಲವಾರು. ನಾ ಕಂಡ ಕನಸಿಗೆ ಜೊತೆಯಾದವ ನೀನು.

ನೆನಪಿದೆಯಾ ಬಾಪು, ನಮ್ಮ ಮೊದಲ ಭೇಟಿ? ನನ್ನೊಂದಿಗೆ ಸ್ನೇಹ ಬೆಳೆಸಬೇಕು ಎಂದು ನನ್ನ ಫ್ರೆಂಡ್ಸ್ ಬಳಿ ವಿಚಾರಿಸಿ ನನ್ನ ಹಿಂದೆ ಬಂದು, ಒಂದು ಚೀಟಿ ಎಸೆದು ಹೋಗಿದ್ದೆ. ಅದನ್ನು ನಾ ನೋಡಿಯೂ ನೋಡದಂತೆ ಹಾಗೆಯೇ ಇಟ್ಟು, ದಿನಾ ನಿನಗೆ ಬೇರೆ ಬೇರೆ ನಂಬರ್‌ಗಳಿಂದ ಮಿಸ್ ಕಾಲ್ ಕೊಟ್ಟು ಆಟವಾಡಿಸುತ್ತಿದ್ದೆ ಅಲ್ವಾ? ಅಂತೂಇಂತು ಒಂದಿನ ಮರೆಯಲ್ಲಿ ನಿಂತು ಮಿಸ್ ಕಾಲ್ ಬಂದಾಗ ರಿಸೀವ್ ಮಾಡಿ ಕಂಡು ಹಿಡಿದ್ಬಿಟ್ಟೆ!

ನೀನೇನೂ ಅತಿ ಸುಂದರನಲ್ಲ, ತುಂಬಾ ಓದಿಯೂ ಇಲ್ಲ. ಆದರೂ ಗೊತ್ತಿಲ್ಲದಂತೆ ನನ್ನನ್ನು ಗೆದ್ದುಬಿಟ್ಟೆ. ಹತ್ತಿರದಲ್ಲೇ ಸ್ನೇಹಿತರೆಲ್ಲರೂ ಟ್ರಿಪ್ ಹೋಗೊಣ ಅಂತ ಹೇಳಿ ಗೋಪಾಲಸ್ವಾಮಿ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದೆ. ನನ್ನ ಜೀವನದಲ್ಲಿ ಅದೇ ಮೊದಲ ದೂರ ಪ್ರಯಾಣ. ಅದೂ ಒಬ್ಬ ಹುಡುಗನ ಜೊತೆ. ಅಂದು ನಿನಗಾಗಿ ನಾ ಬರೆದ ಕವನ...

ನಾ ಕಾಣದಿರುವ ಸ್ಥಳ,
ಮನದಲೆಲ್ಲಾ ತಳಮಳ,
ಜೊತೆಯಲ್ಲಿದ್ದ ನನ್ನ ಗೆಳೆಯ
ಆ ದಿನ ಹೊಸ ಅನುಭವದ ಸಮಯ
ಸ್ವಲ್ವ ನನಗಾಗುತ್ತಿತ್ತು ಭ

ಆದರೂ ಅರಿಯದ ಸಂತೋಷ. ಆ ಹಸಿರಿನ ಪರಿಸರದಲ್ಲಿ ನಿನ್ನೊಡನೆ ಬೈಕಿನಲ್ಲಿ, ಬೆಟ್ಟ ಗುಡ್ಡಗಳ ಮಧ್ಯೆ ನಿನ್ನೊಡನೆಯೇ ನಾನಿದ್ದೆ. ಆಗಲೇ ನೀ ನನ್ನ ಮನಸ್ಸನ್ನು ಕದ್ದಿದ್ದೆ. ನನ್ನ ಹುಟ್ಟಿದ ದಿನಕ್ಕಾಗಿ ನೀ ಕೊಟ್ಟ ಸೀರೆ, ಗೊಂಬೆ, ಮುಂಗಾರು ಮಳೆ ವಾಚು ಇವು ನನಗೆ ಮರೆಯದ ಮಾಣಿಕ್ಯ ಕಣೋ!

ಇಂದಿಗೆ 5 ವರ್ಷ ನಮ್ಮ ಪ್ರೀತಿಗೆ. ಮನೆಯವರಿಗೆ ಪ್ರೀತಿಯ ಸ್ವಲ್ಪ ಸುಳಿವೂ ಗೊತ್ತಾಗದಂತೆ, ನಮ್ಮ ಓದು, ಕೆಲಸ ಎಲ್ಲವೂ ಅವರ ಇಷ್ಟದಂತಾಯಿತು. ನಿಮ್ಮ ಮನೆಯವರು ಒಪ್ಪಿದ ಹಾಗೆ, ನಮ್ಮ ಮನೆಯಲ್ಲೂ ಒಪ್ಪಿದರೆ ಸಾಕು ಅನ್ನಿಸುತ್ತದೆ. ಆದರೆ ಇದುವರೆಗೂ ಬೇರೆ ಮಾಡಲು ಎಷ್ಟೋ ಜನರು ಪ್ರಯತ್ನಿಸಿದರೂ ನಮ್ಮ ಪ್ರೀತಿ ಅದನ್ನೆಲ್ಲಾ ಎದುರಿಸಿ ಇಷ್ಟು ದೂರ ಪ್ರಯಾಣ ಮಾಡಿದೆ.

ಇನ್ನು ಮುಂದಿನ ಪ್ರೇಮಿಗಳ ದಿನಕ್ಕಾದರೂ ನಾವಿಬ್ಬರೂ ಗಂಡ-ಹೆಂಡತಿಯಾಗಿ ಇರಬೇಕು ಎನ್ನುವುದೆ ನನ್ನಾಸೆ. ಅದು ನಮ್ಮನ್ನು ಬೇರೆ ಮಾಡಬೇಕು ಅಂದುಕೊಂಡಿದ್ದವರನ್ನು ತಪ್ಪದೇ ಮದುವೆಗೆ ಕರೆಯಬೇಕು. ನಮ್ಮನ್ನು ನೋಡಿ ಎಲ್ಲ ಸ್ನೇಹಿತರು ಮೊದಲು ಹೇಳೋ ಮಾತು ‘ನಿಮ್ಮ ಮದುವೆ ಖಂಡಿತ’ ಅಂತ, ನಮ್ಮನ್ನು ಕರೆಯೋದನ್ನು ಮರೆಯಬೇಡಿ ಅಂತ. ಹಾಗೆ ಹೇಳಿದಾಗ ನಮ್ಮ ಪ್ರೀತಿಯ ಬಗ್ಗೆ ತುಂಬಾ ಖುಷಿಯಾಗುತ್ತದೆ ಕಣೋ, ನಿನ್ನಂತ ಗೆಳೆಯನನ್ನು ಸಂಗಾತಿಯಾಗಿ ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ.

ಆದರೂ ನಿನಗೆ ಭಯಂಕರ ಕೋಪ ಕಣೋ, ಆದರೂ ಇಷ್ಟ ಆಗುತ್ತೀಯಾ. ಯಾಕೆ ಗೊತ್ತಾ? ನೀನು ನನ್ನ ನೋಡದೆ ಕೆಲಸಕ್ಕಾಗಲೀ, ಮನೆಗಾಗಲೀ ಹೋಗುವುದೇ ಇಲ್ಲ. ಇಷ್ಟೊತ್ತಾದರೂ ನಮ್ಮ ಮನೆಯ ಮುಂದೆ ನಿಂತೂ ಫೋನ್ ಮಾಡಿ ನೋಡಿಕೊಂಡು ಐ ಲವ್ ಯು ಅಂತ ಹೇಳಿದರೇನೇ ಆ ದಿನ ಪೂರ್ತಿ ಆಗೋದು ಅಲ್ವಾ? ಈ ಐ ಲವ್ ಯು ಎಂಬುದನ್ನು ನಾವು ದಿನದಲ್ಲಿ ಎಷ್ಟು ಸಲ ಹೇಳುತ್ತೀವೋ ಲೆಕ್ಕ ಇಲ್ಲ ಅಲ್ವಾ ಬಾಪು? ಪ್ರತಿಯೊಬ್ಬರೂ ಈ ಮಾತನ್ನ ಹೇಳಿದ್ರೆ ಎಷ್ಟೇ ಕೋಪ ಇದ್ರೂ ಮಾಯವಾಗುತ್ತೆ ಅಲ್ವಾ?

ನಾಯಿ, ಗೂಬೆ ಅಂತ ನಾನು ಬೈದಾಗ ನೀನು ನನಗೆ ಮನೆ ಮೇಲಿರುವ ಕೋತಿ ಅಂತೀಯಾ! ಪ್ರೀತಿಯೆಂದರೆ ಪಾರ್ಕು, ಸಿನಿಮಾ, ಹೋಟೆಲ್‌ಗೆ ಹೋಗೋದು ಅಲ್ಲ ಅಂತ ಎಲ್ಲರೂ ತಿಳಿದರೆ ನಮ್ಮ ಹಾಗೆ ಎಲ್ಲರೂ ಪ್ರೀತಿಯಿಂದ ಇರಬಹುದು ಅಲ್ವಾ ಗೆಳೆಯಾ?

ಲೋ, ಮುಖ್ಯವಾದ ಒಂದು ವಿಷಯಾನೇ ಮರೆತಿದ್ದೆ ಕಣೋ, ಐ ಲವ್ ಯು, ನಾನು ನಿನ್ನ ತುಂಬಾ ತುಂಬಾ ಪ್ರೀತಿಸುತ್ತೀನಿ ಕಣೋ. ಎಷ್ಟು ಅಂದ್ರೆ, ಮಗುವಿನ ತರಹ. ನಿನಗೆ ಗೊತ್ತಾ ನಮ್ಮನ್ನು ದೂರ ಮಾಡಲು ‘ದೊಡ್ಡ ಕಾರಣಬೇಕು’. ಆದರೆ, ನಾವಿಬ್ಬರೂ ಸನಿಹ ಸೇರಲು ‘ಸಣ್ಣ ನೆಪ ಸಾಕು’.....

ಬಾಪು, ಈ ನಿನ್ನ ಹೆಸರಲ್ಲಿ ನಮ್ಮಿಬ್ಬರ ಹೆಸರು ಹೇಗೆ ಸೇರಿದೆಯೋ, ಹಾಗೆಯೇ ನನ್ನ ಪ್ರೀತಿ, ಸಾವು ನಿನ್ನ ಸನಿಹದಲ್ಲೇ ಆಗಬೇಕು. ಇದು ನನ್ನ ಆಸೆ, ಗುರಿ ಎಲ್ಲವೂ. ಹಣವನ್ನು ಯಾರು ಬೇಕಾದರೂ ಸಂಪಾದಿಸಬಹುದು ಆದರೆ, ಪ್ರೀತಿ? ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಅಲ್ವಾ? ನನ್ನಷ್ಟು ನಿನ್ನನ್ನ ಇಷ್ಟ ಪಡೋರು ಯಾರೂ ಇಲ್ಲ ಕಣೋ, ನೀನು ಕೂಡ, ನೆನಪಿರಲಿ!

ಆ ಚಂದಿರನಾ ನೋಡುವ ವೇಳೆ
ಮೋಡ ಮುಚ್ಚಿದ ಹಾಗೆ,
ನಿನ್ನ ನೋಡದ ನಾಳೆ
ನಾನಿರುವುದು ಹೇಗೆ!?...

ಮರೆವು ಎಲ್ಲವನ್ನು ಮರೆಸುತ್ತದೆ ಕಣೋ
ನಿನ್ನ ನೆನಪು ಒಂದನ್ನ ಬಿಟ್ಟು,....!

ಇಂತಿ ನಿನ್ನ ಪ್ರೀತಿ

ಜೀವನದ ಸಂಗಾತಿಯಾಗುವ ಗೆಳತಿ


Share this Story:

Follow Webdunia kannada