Select Your Language

Notifications

webdunia
webdunia
webdunia
webdunia

ಬದುಕಿ ಮತ್ತು ಬದುಕಲು ಬಿಡಿ

ಬದುಕಿ ಮತ್ತು ಬದುಕಲು ಬಿಡಿ
PTI

ಚಂದ್ರಾವತಿ ಬಡ್ಡಡ್ಕ
ಅರೆ, ಒಂದು ವರ್ಷ ಮುಗಿದೇ ಹೋಯ್ತಲ್ಲ! ಸದ್ಯ ಮುಗಿಯಿತು ಅಂತ ನಿಟ್ಟಿಸಿರು ಬಿಡೋಣವೇ, ಇಲ್ಲ, ಈ ವರ್ಷದ ದುರಂತಗಳಿಗೆ ಮರುಗೋಣವೇ, ಅಥವಾ ಇನ್ನೊಂದು ವರ್ಷದ ಸ್ವಾಗತದ ಸುಖ ಪಡೋಣವೇ? ಗೊತ್ತಾಗುತ್ತಿಲ್ಲ.

ನಾವೇನೇ ಮಾಡಿದರೂ, ತಿಪ್ಪರಲಾಗ ಹಾಕಿದರೂ, 'ಮಂಕೆಗಳೇ ನನ್ನ ನೋಡಿ ಕಲಿಯಿರಿ' ಎಂಬಂತೆ ಕಾಲ ಸದ್ದಿಲ್ಲದೆ ಸಾಗುತ್ತಿದ್ದಾನೆ. ತನ್ನ ಕರ್ತವ್ಯಕ್ಕೆ ಚ್ಯುತಿಇಲ್ಲದಂತೆ ತೆರಳುತ್ತಿದ್ದಾನೆ. ವರ್ಷಗಳ, ಇತಿಹಾಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.

ಹೀಗಿರುತ್ತಾ, ಹೊಸವರ್ಷದ ನಿರ್ಧಾರವೇನೆಂಬ ಪ್ರಶ್ನೆಗೆ ಪಟ್ಟಂತ ಉತ್ತರಿಸಲಾಗುತ್ತಿಲ್ಲ. ನಾನು ಸೇರಿದಂತೆ ನಮ್ಮೆಲ್ಲರ ಅನೇಕಾನೇಕ ನಿರ್ಧಾರಗಳು ತಿಪ್ಪೆ ಸೇರಿದ ಉದಾಹರಣೆಗಳು ಸಾಕಷ್ಟಿವೆ ಎಂಬುದನ್ನು ಯಾವ ಸಂಶೋಧನೆಯೂ ಇಲ್ಲದೆ ಹೇಳಿಬಿಡಬಹುದು.

ಸಿಗರೇಟು ಸೇದಲಾರೆ, ಮದ್ಯಪಾನ ಮಾಡಲಾರೆ, ಸಿಟ್ಟು ಬಿಡುತ್ತೇನೆ ಎಂದೆಲ್ಲಾ ನಾವು ಹೇಳಿದರೂ ಅವುಗಳು ನಮ್ಮನ್ನು ಬಿಡುತ್ತಿಲ್ಲ ಎಂಬುದು ಅನುಭವಿಗಳ ಮಾತು.

ಆದರೂ, ನಿರ್ಧಾರಗಳನ್ನು ಕೈಗೊಳ್ಳುವುದು ತಪ್ಪಲ್ಲ. ದೊಡ್ಡ ಮಟ್ಟಿನ ನಿರ್ಧಾರಗಳನ್ನು ಕೈಗೊಂಡು ಪೂರೈಸುವವರೂ ಇದ್ದಾರೆ. ಎಲ್ಲರಿಗೂ ಇದು ಕಷ್ಟಸಾಧ್ಯ. ನಮ್ಮ ನಿರ್ಧಾರಗಳು ಹೀಗಿದ್ದರೆ ಚೆಂದವಲ್ಲವೇ.....

ದೇಶೋದ್ಧಾರ, ಸಮಾಜೋದ್ಧಾರ, ವ್ಯವಸ್ಥೆಯ ಬದಲಾವಣೆ ಎಲ್ಲರ ತುಡಿತ. ಆದರೆ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ ತಾನೆ. ಹಾಗಾಗಿ ಕೆಲವು ಮಾರ್ಪಾಡುಗಳು ನಮ್ಮಿಂದಲೂ ಆಗಬಹುದು. ಕೆಲವು ಕಾರ್ಯಗಳನ್ನು ನಾವೇ ಆರಂಭಿಸಬಹುದು. ಅದೇನೆಂಬುದನ್ನು ನಾವೇ ನಿರ್ಧರಿಸಬೇಕು.

ಹಳೆಯ ಅನುಭವಗಳನ್ನು ಪಟ್ಟಿ ಮಾಡೋಣ. ಎಲ್ಲಿ ಗೆದ್ದಿದ್ದೇವೆ, ಎಲ್ಲಿ ಬಿದ್ದಿದ್ದೇವೆ ಎಂಬುದರ ಕುರಿತು ಒಂದು ಅವಲೋಕನ ಮಾಡೋಣ. ಸೋತವುಗಳಿಗೆ ಕಾರಣ ನಮಗೆ ಗೊತ್ತಿರುತ್ತದೆ ಅದನ್ನು ಸರಿಪಡಿಸೋಣ. ಗೆಲುವಿನ ಅನುಭವವನ್ನು ಮುಂದಿನ ವರ್ಷಕ್ಕೂ ಒಯ್ಯೋಣ.

ಎಲ್ಲರೂ ಚೆನ್ನಾಗಿರೊಣ. 'ನೀವೂ ಬದುಕಿ ಇತರರನ್ನು ಬದುಕಲಿ ಬಿಡಿ' ಎಂಬುದು ಎಲ್ಲರ ತತ್ವವಾದರೆ ಸಮಾಜ ಎದುರಿಸುವ ಅರ್ಧದಷ್ಟು ಸಮಸ್ಯೆಗಳು ಮುಗಿದಂತೆ. ಸಾಧ್ಯವಾದರೆ ಸಣ್ಣಪುಟ್ಟ ಸಹಾಯಗಳನ್ನು ಇತರರಿಗೆ ಮಾಡೋಣ. ಇಲ್ಲವೇ, ಉಪಕಾರ ಮಾಡದಿದ್ದರೂ ಪರವಾಗಿಲ್ಲ; ಉಪದ್ರವನ್ನಂತೂ ಮಾಡದಿರೋಣ. ಏನಂತೀರಿ....?

Share this Story:

Follow Webdunia kannada