Select Your Language

Notifications

webdunia
webdunia
webdunia
webdunia

ಹಗರಣ, ಬೆಲೆ ಏರಿಕೆ, ಪ್ರತ್ಯೇಕ ರಾಜ್ಯದ ಕೂಗು...

ಏಳು ಬೀಳುಗಳನ್ನು ಕಂಡ 2009ಕ್ಕೆ ವಿದಾಯ

ಹಗರಣ, ಬೆಲೆ ಏರಿಕೆ, ಪ್ರತ್ಯೇಕ ರಾಜ್ಯದ ಕೂಗು...
ಅವಿನಾಶ್ ಬಿ.
WD
2009 ಸಂದು ಹೋಗುತ್ತಿದೆ. ಪುಟ ಬದಲಾಯಿಸುತ್ತಿರುವ ವರ್ಷ ದೇಶದಲ್ಲಿ ಸಂಭವಿಸಿದ ಘಟನಾವಳಿಗಳಿಗೆ ಹಿನ್ನೋಟ ಹರಿಸಿದರೆ, ಬೇಡ ಬೇಡವೆಂದರೂ ಕಣ್ಣಿನ ಮುಂದೆ ಸುಳಿಯುವುದು ಈಗಷ್ಟೇ ಕೂಗೆದ್ದಿರುವ ಪ್ರತ್ಯೇಕ ರಾಜ್ಯ ರಚನೆಯ ಸಂಘರ್ಷ. ಅದು ಬಿಟ್ಟರೆ, 26/11 ಮುಂಬೈ ದಾಳಿ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದರೂ, ಅಮೆರಿಕ ಸೇರಿದಂತೆ ದೇಶ-ವಿದೇಶಗಳ ಸಮರ್ಥ ಬೆಂಬಲವಿದ್ದಾಗ್ಯೂ ಪಾಕಿಸ್ತಾನದಿಂದ ಸಮರ್ಪಕ ಕ್ರಮ ಹೊರಬರುವಂತೆ ಮಾಡುವಲ್ಲಿ ಭಾರತ ವಿಫಲವಾಗಿರುವುದು, ಮಧು ಕೋಡಾ ಹಗರಣ, ಸತ್ಯಂ ಮುಳುಗಿದ ಕರಾಳ ಅಧ್ಯಾಯ, ಲಿಬರ್ಹಾನ್ ವರದಿ ಸೋರಿಕೆ, ಪ್ರವಾಹ ಮತ್ತು ಕ್ಷಾಮ ಮತ್ತು ಕೊಟ್ಟಕೊನೆಯಲ್ಲಿ ರಾಜ್ಯಪಾಲರೆಂಬ ಸಾಂವಿಧಾನಿಕ ಹುದ್ದೆಗೆ ಕಳಂಕ ತಂದ ಆಂಧ್ರ ರಾಜಭವನದಲ್ಲಿ ನಡೆದ ಸಂಗತಿ...

ಇವೆಲ್ಲವೂ ರಾಜಕೀಯ ಘಟನಾವಳಿಗಳೆಂದು ಪರಿಗಣಿಸಿ ಸುಮ್ಮನಾಗುವ ಜನಸಾಮಾನ್ಯನಿಗೆ ಮಾತ್ರ ಎಲ್ಲಕ್ಕಿಂತ ಮಿಗಿಲಾಗಿ ಕಾಡಿದ್ದು ಬೆಲೆ ಏರಿಕೆಯ ಬಿಸಿ. ಏರಿದ ಬೆಲೆ ಇಳಿಯುತ್ತಲೇ ಇಲ್ಲ, ಅಕ್ಕಿ, ಬೇಳೆ-ಕಾಳು, ತರಕಾರಿಗಳು ಕೈಗೆಟಕುತ್ತಿಲ್ಲ. ಇದುವೇ ಪ್ರತಿಯೊಬ್ಬ ಜನಸಾಮಾನ್ಯನ ಚಿಂತೆ. ಅಧಿಕಾರದಲ್ಲಿರುವವರೆಲ್ಲರೂ ಉಳ್ಳವರೇ ಆಗಿರುವುದರಿಂದ ಮಧ್ಯಮ ವರ್ಗದವರು ಮತ್ತು ಬಡತನ ರೇಖೆಯ ಆಸುಪಾಸಿನಲ್ಲಿರುವವರೆಲ್ಲರೂ ತುತ್ತಿನ ಕೂಳಿಗೆ ತತ್ವಾರ ಅನುಭವಿಸುತ್ತಿದ್ದರೆ, ರಾಜಕಾರಣಿಗಳು ಸಂಸತ್ತಿನಲ್ಲಿ ಈ ವಿಷಯವೊಂದನ್ನು ಬಿಟ್ಟು (ವರ್ಷದ ಕೊನೆಗೆ ಎಲ್ಲೋ ಒಂದಿಷ್ಟು ಠುಸ್ ಪುಸ್ ಸದ್ದು ಸಂಸತ್ತಿನೊಳಗೆ ಕೇಳಿಬಂದಿದ್ದು ಒಂದಿಷ್ಟು ಸಮಾಧಾನಕರ ಬೆಳವಣಿಗೆ) ಬೇರೆಲ್ಲವುಗಳ ಬಗೆಗೂ ಚರ್ಚಿಸಿದ್ದಾರೆ. ವರ್ಷಾಂತ್ಯದಲ್ಲಿ ನಡೆದ ರಾಜಕೀಯ ವಿಪ್ಲವವೊಂದರಲ್ಲಿ, ಹಿರಿತಲೆಗಳು ಹಿಂದೆ ಸರಿದು, ಒಂದಿಷ್ಟು ಯುವ ಆಲೋಚನೆಗಳನ್ನು ತುಂಬುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿರುವ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ. ಇವೆಲ್ಲವುಗಳ ನಡುವಿನ ಒಂದಿಷ್ಟು ಘಟನಾವಳಿಗಳ ಪಟ್ಟಿ ಇಲ್ಲಿದೆ.

* ಸರಕಾರದ ನಿಯಂತ್ರಣ ಮೀರಿ ಮೇಲಕ್ಕೆ ಹೋಗುತ್ತಲೇ ಇರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ

* ವರ್ಷದ ಕೊನೆಯಲ್ಲಿ, ಆಂಧ್ರಪ್ರದೇಶ ವಿಭಜಿಸಿ ತೆಲಂಗಾಣ ರಾಜ್ಯಕ್ಕಾಗಿ ಟಿಆರ್ಎಸ್ ಮುಖಂಡ ಉಪವಾಸ ಸತ್ಯಾಗ್ರಹದೊಂದಿಗೆ ಪ್ರತ್ಯೇಕ ರಾಜ್ಯ ಸ್ಥಾಪನೆಗಾಗಿ ಎದ್ದಿರುವ ಕೂಗು.
webdunia
WD

* ಬರೋಬ್ಬರಿ 17 ವರ್ಷ ತನಿಖೆ ನಡೆಸಿದ ಬಳಿಕ ನ್ಯಾಯಮೂರ್ತಿ ಲಿಬರ್ಹಾನ್ ಅವರು ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣ ಕುರಿತ ತನಿಖಾ ವರದಿಯನ್ನು ಪೂರ್ಣಗೊಳಿಸಿದ್ದು ಮತ್ತು ಅದು ಮಾಧ್ಯಮಗಳಿಗೆ ಸೋರಿ ಹೋಗಿದ್ದು ಹೇಗೆ ಎಂಬ ಸಂಗತಿ ಸದ್ದಿಲ್ಲದೇ ಮುಚ್ಚಿ ಹೋದದ್ದು. ಆಡ್ವಾಣಿ, ವಾಜಪೇಯಿ, ಸಂಘ ಪರಿವಾರದ ಇತರ ನಾಯಕರು ದೋಷಿಗಳೆಂದು ಸಾರಿದ್ದು.

* ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನೀಯರು ಅತಿಕ್ರಮಿಸಿ ಭಾರತದ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡಿದರೂ, ಇಲ್ಲ, ಏನೂ ಆಗಿಲ್ಲ ಎಂದು ಕೇಂದ್ರ ಸರಕಾರದಿಂದ ಸ್ಪಷ್ಟನೆ ದೊರೆತದ್ದು.

* ಸರಕಾರಿ ಕೆಲಸ ಕಾರ್ಯಗಳಾಗಬೇಕಿದ್ದರೆ ಲಂಚ ನೀಡಲೇಬೇಕಾದ ಅನಿವಾರ್ಯತೆ ಸ್ಥಿತಿ ಮತ್ತು ಸರಕಾರಿ ಇಲಾಖೆಗಳಲ್ಲಿ ವ್ಯಾಪಕವಾಗಿ ಹಾಸುಹೊಕ್ಕಾಗಿಬಿಟ್ಟಿರುವ ಭ್ರಷ್ಟಾಚಾರ.

* ತೀವ್ರವಾಗಿ ಕಾಡಿದ ಪ್ರಾಕೃತಿಕ ವೈಪರೀತ್ಯ. ಮಳೆಗಾಲ ವಿಳಂಬ, ಬರಗಾಲ, ಬೆನ್ನಿಗೇ ಅತಿವೃಷ್ಟಿ-ಪ್ರವಾಹ. ಇದರಿಂದಾಗಿ ಭಾರತದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಅಪಾರ ಹೊಡೆತ.

* ಚಿನ್ನದ ಬೆಲೆ ಯದ್ವಾತದ್ವಾ ಏರಿಕೆ.

* ಸುಳ್ಳು ಲಾಭಾಂಶ ತೋರಿಸುತ್ತಲೇ ಕೊನೆಗೊಂದು ದಿನ ಸತ್ಯಂ ಮಾಹಿತಿ ತಂತ್ರಜ್ಞಾನ ಸಂಸ್ಥೆಯೇ ಮುಳುಗುವಂತೆ ಮಾಡಿದ ಅದರ ಸ್ಥಾಪಕ ರಾಮಲಿಂಗಾ ರಾಜು ನೂರಾರು ಉದ್ಯೋಗಿಗಳನ್ನು ಬೀದಿಗೆ ಬರುವಂತೆ ಮಾಡಿದ್ದರೂ, ಪ್ರಭಾವೀ ರಾಜಕಾರಣಿಗಳ ನೆರವಿನಿಂದ ಜೈಲಿನಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವುದು.

* ಮಹಾರಾಷ್ಟ್ರದಲ್ಲಿ 'ಹೊರಗಿನವರು' ಎಂದು ಅವರನ್ನು ತುಚ್ಛೀಕರಿಸುವ ಮತ್ತು ಮರಾಠಿ ಓಟುಬ್ಯಾಂಕಿಗಾಗಿ ಶಿವಸೇನೆ ಹಾಗೂ ಅದರದೇ ಒಡೆದ ತುಂಡು ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಆಟಾಟೋಪ.

webdunia
PTI
* ಗಣಿಗಾರಿಕೆಯಿಂದ ಕೋಟಿ ಕೋಟಿ ಸಂಪಾದನೆ ಮಾಡಿದ ಆರೋಪದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ (ಸ್ವತಂತ್ರನಾಗಿದ್ದುಕೊಂಡು ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಗೇರಿದ್ದ ಸಾಧನೆ ಈತನದು) ಮಧು ಕೋಡಾ ಅವರ ಅಪಾರ ಸಂಪತ್ತು ಬಯಲು, ಸಿಬಿಐ ತನಿಖೆ.

* ರಾಣಾ-ಹೆಡ್ಲೀ ಎಂಬಿಬ್ಬರು ಭಯಾನಕ ಆತಂಕವಾದಿಗಳು ಮುಂಬೈ ದಾಳಿಯ ಹಿಂದಿದ್ದರು ಎಂಬ ಸತ್ಯವು ಎಫ್‌ಬಿಐ ತನಿಖೆಯಿಂದ ಬಯಲಿಗೆ ಬಂದಿರುವುದು. ಇವರ ಮೇಲೆ ಎಫ್‌ಬಿಐ ಹದ್ದಿನ ಕಣ್ಣಿಟ್ಟಿದ್ದರೂ, ಹೆಡ್ಲೀ 2009ರ ಏಪ್ರಿಲ್-ಮೇ ತಿಂಗಳಲ್ಲಿ ಭಾರತವಿಡೀ ಆರಾಮವಾಗಿ ಸುತ್ತಾಡಿದ್ದರೂ, ಅಮೆರಿಕವು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಸುಮ್ಮನಿದ್ದುದು. ಮತ್ತು ಭಾರತೀಯ ಬೇಹು ಪಡೆಗಳ ಗಮನಕ್ಕೆ ಇದು ಬಾರದಿರುವುದು.

webdunia
PTI
* ಕಳೆದ ವರ್ಷದ ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದ ಏಕೈಕ ಉಗ್ರಗಾಮಿ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನೀಯನೆಂದು ಸಾಬೀತಾದರೂ, ಈ ಬಗ್ಗೆ ಪಾಕಿಸ್ತಾನವು 'ಅವ ನಮ್ಮವನಲ್ಲ ಮತ್ತು ಅವ ನಮ್ಮವನೇ' ಎಂಬಿತ್ಯಾದಿ ಪದೇ ಪದೇ ಎಡಬಿಡಂಗಿತನ ತೋರುತ್ತಾ ಕಾಲ ಕಳೆದದ್ದು ಮತ್ತು ವಿಶ್ವದ ಗಮನವನ್ನು ಬೇರೆಡೆ ಹೊರಳಿಸುವಲ್ಲಿ ಸಫಲವಾಗಿದ್ದು.

* ಕರ್ನಾಟಕದಲ್ಲಿ ಗಣಿ ರೆಡ್ಡಿಗಳು ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರವನ್ನು ಉರುಳಿಸುವಷ್ಟರ ಮಟ್ಟಕ್ಕೆ ಹೋಗಿ, ಕೊನೆಗೆ ಯಾವುದೇ ಭ್ರಷ್ಟಾಚಾರಗಳಿಲ್ಲದ ಸಚಿವೆ ಶೋಭಾ ಕರಂದ್ಲಾಜೆಯನ್ನು ಮಂತ್ರಿಪದವಿಯಿಂದ ಇಳಿಸಿ ತೃಪ್ತಿಪಟ್ಟುಕೊಂಡದ್ದು, ಮತ್ತು ಬಿಜೆಪಿ ಸರಕಾರದ ಬಿಕ್ಕಟ್ಟು ರಾಷ್ಟ್ರೀಯ ಮಟ್ಟದ 'ಗಂಡಾಂತರ' ಪ್ರಕರಣವಾಗಿ ಬಿಂಬಿಸಲ್ಪಟ್ಟಿದ್ದು.

* ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಬಳಿಕ ಕರ್ನಾಟಕದ ಗಣಿ ಧಣಿಗಳ ಕುತ್ತಿಗೆಗೆ ಕುಣಿಕೆ ಬಿಗಿಯಾದದ್ದು, ಮತ್ತು ನ್ಯಾಯಾಲಯದ ಮೂಲಕ ಸಿಬಿಐ ತನಿಖೆಗೂ ತಡೆ ಬಿದ್ದದ್ದು. ಈ ಮಧ್ಯೆ, ಆಂಧ್ರದಲ್ಲಿ ರಾಜಕೀಯ ಬಿಕ್ಕಟ್ಟು- ವೈಎಸ್ಆರ್ ಪುತ್ರನಿಗೇ ಮುಖ್ಯಮಂತ್ರಿ ಪಟ್ಟ ಬೇಕೆಂಬ ಬಗ್ಗೆ ಎದ್ದ ಕೂಗಾಟ, ಕೊನೆಗೂ ತಣ್ಣಗಾಗಿದ್ದು.

* 2008ರ ಅಂತ್ಯದಲ್ಲಿ ಅಪ್ಪಳಿಸಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ್ದು 2009ರ ಮಧ್ಯಭಾಗದಲ್ಲಿ.

* ಚಂದ್ರಯಾನದ ವಿಜ್ಞಾನಿಗಳು ಮಹತ್ಕಾರ್ಯ ಸಾಧಿಸಿ, ಚಂದ್ರನಲ್ಲಿ ನೀರಿನ ಸೆಲೆ ಇರುವುದನ್ನು ಪತ್ತೆ ಹಚ್ಚಿದ್ದು ಕೂಡ ಇದೇ ವರ್ಷ. ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾರತದ ಅಂತರಿಕ್ಷ ಸಂಸ್ಥೆ ಇಸ್ರೋ ಖ್ಯಾತಿಯ ಶಿಖರವೇರಿತು.

* ಯಾವುದೇ ಹೇಳಿಕೊಳ್ಳಬಹುದಾದ ಭಯೋತ್ಪಾದನಾ ದಾಳಿಯಿಲ್ಲದೆ ಭಾರತವು ಪಾಕಿಸ್ತಾನಕ್ಕೆ 'ಕ್ರಮ ಕೈಗೊಳ್ಳಿ, ಕ್ರಮ ಕೈಗೊಳ್ಳಿ' ಎನ್ನುತ್ತಲೇ ಒಂದಿಷ್ಟು ನೆಮ್ಮದಿಯ ದಿನಗಳನ್ನು ಕಂಡದ್ದು 2009ರಲ್ಲಿ.

webdunia
PTI
* ಕೇಂದ್ರದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ, ಮತ್ತಷ್ಟು ಸ್ಥಿರವಾಗಿ ಮೇಲೆದ್ದು ಬಂದ ಯುಪಿಎ ಮಿತ್ರಕೂಟದಿಂದ ಸ್ಥಿರ ಸರಕಾರದ ಭರವಸೆ ದೊರೆತದ್ದು ಇದೇ ವರ್ಷ.

* ಭಾರತೀಯ ಮೂಲದ, ಇಂಗ್ಲೆಂಡ್‌ನ ಕೇಂಬ್ರಿಜ್ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಅವರು ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದದ್ದೊಂದು ಹೆಗ್ಗಳಿಕೆ.

* ಭಯೋತ್ಪಾದಕರ ದಾಳಿ ಇರಲಿಲ್ಲ, ಆದರೆ ವೈರಸ್ ದಾಳಿ! - ಎಚ್1ಎನ್1 ಹೆಸರಿನ ಸ್ವೈನ್ ಫ್ಲೂ ಇಡೀ ವಿಶ್ವದಂತೆಯೇ ಭಾರತವನ್ನೂ ಕಂಗೆಡಿಸಿಬಿಟ್ಟಿದ್ದು ಕರಾಳ ಅಧ್ಯಾಯವಾಗಿ ಉಳಿಯಿತು.

ರಾಜಕೀಯ ವಿವಾದಗಳು - 2009 ಕ್ಲಿಕ್ ಮಾಡಿ.

2009ರ ಪ್ರಮುಖ ರಾಜಕೀಯ ವಿವಾದಗಳು
* ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲುಂಡು, ಆಂತರಿಕ ಜಗಳಗಳಿಂದಾಗಿ ಕುಸಿದು ಹೋಗಿದ್ದು. ಕೆಲ ವರ್ಷಗಳ ಹಿಂದೆ ಆಡ್ವಾಣಿ ಅವರು ಮಹಮ್ಮದಾಲಿ ಜಿನ್ನಾರನ್ನು ಹೊಗಳಿದಾಗ ಅವರನ್ನು ಬೆಂಬಲಿಸಿದ್ದ ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ 'ಜಿನ್ನಾ: ಇಂಡಿಯಾ-ಪಾರ್ಟಿಷನ್ ಇಂಡಿಪೆಂಡೆನ್ಸ್' ಎಂಬ ತಮ್ಮ ಪುಸ್ತಕದಲ್ಲಿ ಜಿನ್ನಾರನ್ನು ಹೊಗಳಿ ಬಿಜೆಪಿಯಿಂದ ಹೊರ ಹಾಕಲ್ಪಟ್ಟರು. ಅವರಿಗೆ ಯಾರೂ ಬೆಂಬಲಿಸದೇ ಇರುವುದು ಬಿಜೆಪಿಯ ಪರಿಸ್ಥಿತಿಗೆ ಕೈಗನ್ನಡಿಯಾಯಿತು. ಬಿಜೆಪಿಯೊಳಗೆ ಅಂತರ್‌ಕಲಹ ಮತ್ತು ಹುಳುಕುಗಳು ಒಂದೊಂದಾಗಿ ಹೊರಬರತೊಡಗಿದವು. ಹಿರಿಯ ಮುಖಂಡರಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಕಿಡಿ ಕಾರಿದರು. ಸುಧೀಂದ್ರ ಕುಲಕರ್ಣಿ ಪಕ್ಷಕ್ಕೇ ರಾಜೀನಾಮೆ ನೀಡಿದರು. ತತ್ಪರಿಣಾಮ ಜಸ್ವಂತ್ ಪುಸ್ತಕ ಬಿಸಿ ಬಿಸಿ ದೋಸೆಯಂತೆ ಖರ್ಚಾಯಿತು. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆಗೂ ನಾಂದಿ ಹಾಡಲಾಯಿತು. ಭಾವಿ ಪ್ರಧಾನಿ ಎಂಬ ಹುಮ್ಮಸ್ಸಿನಲ್ಲಿ ಕಣಕ್ಕಿಳಿದಿದ್ದ ಆಡ್ವಾಣಿ, ರಾಜಕೀಯ ಸನ್ಯಾಸ ಘೋಷಣೆ ಮಾಡಿದರು. ಕೊನೆಯಲ್ಲಿ ನಿತಿನ್ ಗಡ್ಕರಿ ಅವರು ಬಿಜೆಪಿ ಅಧ್ಯಕ್ಷರಾಗಿ, ಆಡ್ವಾಣಿಯವರ ಲೋಕಸಭಾ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸುಷ್ಮಾ ಸ್ವರಾಜ್ ಸ್ಥಾನಾಂತರವಾದರು.

* ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ 'ಮಿತವ್ಯಯ' ಮಂತ್ರವು ತೀವ್ರ ಟೀಕೆಗೆ ಗುರಿಯಾಯಿತು ಮತ್ತು ಅದರ ಘೋಷಣೆಯ ಹುಳುಕೂ ಬಯಲಿಗೆ ಬಂತು. ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ ಮತ್ತು ಶಶಿ ತರೂರ್ ಅವರು ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದು ಕೆಂಗಣ್ಣಿಗೆ ಪಾತ್ರರಾದರು. ಕೊನೆಗೂ ಅವರು ಆ ಹೋಟೆಲಿನಿಂದ ಜಾಗ ಖಾಲಿ ಮಾಡಬೇಕಾಯಿತು. ಆದರೆ, ಟ್ವಿಟ್ಟರ್ ಎಂಬ ಅಂತರಜಾಲ ಸಮುದಾಯ ತಾಣದಲ್ಲಿ ತರೂರ್ ಗದ್ದಲ ಎಬ್ಬಿಸಿದರು. 'ನಮ್ಮೆಲ್ಲಾ ಪವಿತ್ರ ಹಸುಗಳ ಜತೆಗೆ ತಾನು ಕೂಡ ಜಾನುವಾರು ದರ್ಜೆಯಲ್ಲಿ ಪ್ರಯಾಣ ಮಾಡುತ್ತೇನೆ' ಎಂದು ಟ್ವೀಟ್ ಮಾಡಿದ ತರೂರ್ ಪಕ್ಷದೊಳಗೆ ಗಲಾಟೆಗೆ ಕಾರಣರಾದರು. ಇಂದರಿಂದೇನೂ ಪ್ರಯೋಜನವಾಗಿಲ್ಲ, ಟ್ವಿಟ್ಟರ್ ಹೆಸರುವಾಸಿಯಾಯಿತು ಮತ್ತು ಶಶಿ ತರೂರ್ ಕೂಡ ಟ್ವಿಟ್ಟರ್ ತರೂರ್ ಆದರು. ಅಷ್ಟೆ.

* 1984ರ ಸಿಖ್ ವಿರೋಧಿ ದಂಗೆಯಲ್ಲಿ ಕೈವಾಡದ ಆರೋಪ ಹೊತ್ತಿದ್ದ ಕಾಂಗ್ರೆಸ್ ಮುಖಂಡರಾದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದ್ದು ಸಿಖ್ ಸಮುದಾಯವನ್ನು ಕೆರಳಿಸಿತಲ್ಲದೆ, ಸಿಖ್ ಪತ್ರಕರ್ತ ಜರ್ನೈಲ್ ಸಿಂಗ್ ಗೃಹ ಸಚಿವ ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ಅವರತ್ತ ಶೂ ಎಸೆದು ಕೋಲಾಹಲ ಎಬ್ಬಿಸಿದ. ಶೂ ತನ್ನ ಗುರಿ ತಪ್ಪಿತಾದರೂ, ಟೈಟ್ಲರ್, ಸಜ್ಜನ್‌ಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಯಿತು. ಪೆನ್ನಿಗಿಂತಲೂ ಶೂ ಹರಿತ ಎಂಬ ಉಕ್ತಿಗೂ ಕಾರಣವಾಯಿತು!

* ಲೋಕಸಭೆ ಚುನಾವಣೆಯಲ್ಲಿ ಗೃಹ ಸಚಿವ ಪಿ.ಚಿದಂಬರಂ ಆಯ್ಕೆಯ ಮೇಲೊಂದು ಕಪ್ಪು ಚುಕ್ಕೆಯಿತ್ತು. ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಟ್ಯಾಂಪರ್ ಮಾಡಿ, ಚಿದಂಬರಂ ಗೆಲ್ಲುವಂತೆ ಸಂಚು ರೂಪಿಸಲಾಗಿದೆ ಎಂಬ ಸಂಗತಿ ಕೋರ್ಟ್ ಮೆಟ್ಟಿಲೇರಿತು. ಸಮೀಪದ ಪ್ರತಿಸ್ಪರ್ಧಿ ಎಐಎಡಿಎಂಕೆಯ ರಾಜಾ ಕಣ್ಣಪ್ಪನ್ ಅವರು ಮೊದಲು ವಿಜಯಿಯೆಂದು ಘೋಷಿಸಲಾಗಿದ್ದರೂ, ಮರು ಮತ ಎಣಿಕೆ ಮಾಡಲಾಗಿ, ಚಿದಂಬರಂ 1400 ಮತಗಳ ಅಂತರದಿಂದ ಗೆದ್ದರೆಂದು ಘೋಷಿಸಲಾಯಿತು. ಎಲೆಕ್ಟ್ರಾನಿಕ್ ಮತ ಯಂತ್ರದ ಕರಾಮತ್ತು ಎಂಬ ಕೂಗೆದ್ದಿತು.

* ವರ್ಷಾಂತ್ಯದಲ್ಲಿ, ಮಾಧ್ಯಮಗಳಿಗೆ ಮೊದಲು ಸೋರಿಕೆಯಾದ 17 ವರ್ಷಗಳ ಹಿಂದಿನ ಅಯೋಧ್ಯೆ ಬಾಬರಿ ಮಸೀದಿ ಧ್ವಂಸ ಪ್ರಕರಣದ ತನಿಖಾ ಆಯೋಗದ ವರದಿಯು, ಅದರೊಳಗಿನ ವಿಷಯಗಳಿಗಾಗಿಯೂ ವಿವಾದಕ್ಕೆ ಕಾರಣವಾಯಿತು. ಜಸ್ಟಿಸ್ ಲಿಬರ್ಹಾನ್ ಮತ್ತು ಕೇಂದ್ರ ಗೃಹಸಚಿವಾಲಯಕ್ಕೆ ಮಾತ್ರವೇ ಲಭ್ಯವಿದ್ದ ಈ ವರದಿ ಮಾಧ್ಯಮಗಳಿಗೆ ಹೇಗೆ ಸೋರಿತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿಯಿತು. ಮಾಜಿ ಪ್ರಧಾನಿ ನರಸಿಂಹರಾವ್ ನಿರ್ದೋಷಿ ಎಂದೂ, ಆಯೋಗವು ಎಂದೂ ವಿಚಾರಣೆ ಮಾಡದಿದ್ದ ಅಟಲ್ ಬಿಹಾರಿ ವಾಜಪೇಯಿ ಕೂಡ ತಪ್ಪಿತಸ್ಥರಲ್ಲೊಬ್ಬರೆಂದು ವರದಿ ಹೇಳಿರುವುದು ವಿವಾದಕ್ಕೆ ಕಾರಣವಾಯಿತು. ಸಂಸತ್ತಿನ ಉಭಯ ಸದನಗಳಲ್ಲೂ ಗದ್ದಲವಾಯಿತು. ಅದು ಎಂದಿನಂತೆ ತಣ್ಣಗಾಯಿತು.

* ಇವೆಲ್ಲಕ್ಕೂ ಮೊದಲು, ಚುನಾವಣಾ ಘೋಷಣೆಯಾದ ನಂತರ ಅತ್ಯಂತ ವಿವಾದಾತ್ಮಕ ಯುವ ರಾಜಕಾರಣಿಯಾಗಿ ಹೊರಹೊಮ್ಮಿದ್ದು ದಿವಂಗತ ಸಂಜಯ್ ಗಾಂಧಿ ಪುತ್ರ ವರುಣ್ ಗಾಂಧಿ. ಹಿಂದೂಗಳ ಮೇಲೆ ಕೈಮಾಡುವವರ ಕೈ ಕತ್ತರಿಸುತ್ತೇನೆ ಎಂಬ ಹೇಳಿಕೆಯುಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಯಿತು. ಸಿಡಿ ಪ್ರದರ್ಶನವಾಯಿತು. ಸಿಡಿಯನ್ನು ತಿರುಚಿ ವಿತರಿಸಲಾಗಿದೆ ಎಂಬ ಸ್ಪಷ್ಟನೆ ಬಂತು. ಅವರ ಬಂಧನವೂ ಆಯಿತು. ಜೈಲಿನಲ್ಲಿ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಇದೇ ಕಾರಣದಿಂದ ಬಿಜೆಪಿಗೆ ಸೋಲಾಯಿತು ಎಂಬ ಟೀಕೆಯೂ ಕೇಳಿಬಂತು. ಕೊನೆಗೆ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಯುವ ನಾಯಕನ ಭರ್ಜರಿ ರಾಜಕೀಯ ಪ್ರವೇಶದ ಚಟುವಟಿಕೆಯಾಗಿ ಇದು ನೆನಪಿನಲ್ಲಿ ಉಳಿಯಿತು. ಕೊನೆಯಲ್ಲಿ ವರುಣ್ ಭರ್ಜರಿ ಮತಗಳಿಂದ ವಿಜಯಿಯಾಗಿ ರಾಜಕೀಯ ಪ್ರವೇಶ ಮಾಡಿದರು.

* ಕೇಂದ್ರ ಟೆಲಿಕಾಂ ಸಚಿವ ಎ.ರಾಜಾ ಹೆಸರು 60 ಸಾವಿರ ಕೋಟಿ ರೂ.ಗಳ ಸ್ಪೆಕ್ಟ್ರಂ ಹಗರಣದಲ್ಲಿ ಕೇಳಿಬಂತಾದರೂ, ಪ್ರಧಾನಿ ಅವರೊಬ್ಬ ಮುಗ್ಧ ಎಂದು ಘೋಷಿಸಿ ವಿವಾದ ತಣ್ಣಗಾಗಿಸಿದರು. ಆದರೂ, ಖಾಸಗಿಯವರಿಗೆ 2ಜಿ ಸ್ಪೆಕ್ಟ್ರಂ ವಿತರಣೆಯಲ್ಲಿ ಅವರ ಪಾತ್ರದ ಬಗ್ಗೆ ತನಿಖೆಯಾಗಬೇಕೆಂಬ ಪ್ರತಿಪಕ್ಷಗಳ ಕೂಗು ನಿಂತಿಲ್ಲ.

* 4000 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಅನುಷ್ಠಾನ ನಿರ್ದೇಶನಾಲಯ ಪತ್ತೆ ಮಾಡುವ ಮೂಲಕ, ಕಾಂಗ್ರೆಸ್ ಬೆಂಬಲದಿಂದ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದ್ದ ಸ್ವತಂತ್ರ ಅಭ್ಯರ್ಥಿ ಮಧು ಕೋಡಾ ಗಣಿಗಾರಿಕೆಯ ಮಹತ್ವವನ್ನು ಲೋಕಕ್ಕೆ ತೋರಿಸಿಕೊಟ್ಟರು. ಅಕ್ರಮ ಹೂಡಿಕೆ, ಹವಾಲಾ ಹಣ ಮುಂತಾದವುಗಳೂ ಕೇಳಿಬಂದವು. ಇದು ದೇಶದ ಚರಿತ್ರೆಯ ಎರಡನೇ ಅತಿದೊಡ್ಡ ಹಗರಣವಾಗಿ ಪರಿಗಣಿಸಲ್ಪಟ್ಟಿದೆ. ತನಿಖೆ ನಡೆಯುತ್ತಿದೆ.

ಪ್ರಮುಖ ಘಟನಾವಳಿಗಳ ಪಟ್ಟಿ ಕ್ಲಿಕ್ ಮಾಡಿ.

ಪ್ರಮುಖ ಘಟನಾವಳಿಗಳ ಪಟ್ಟಿ-2009
* ಜನವರಿ 24ರಂದು ಬರಾಕ್ ಒಬಾಮ ಅವರು ಅಮೆರಿಕದ ಮೊದಲ ಕರಿಯ ಅಧ್ಯಕ್ಷರಾಗಿ, 44ನೇ ರಾಷ್ಟ್ರಪತಿಯಾಗಿ ಪದಗ್ರಹಣ ಮಾಡಿದರು.

* ಫೆಬ್ರವರಿ 22ರಂದು ಎ.ಆರ್.ರೆಹಮಾನ್ ಅವರು ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಸಂಗೀತಕ್ಕೆ ಆಸ್ಕರ್ ಪ್ರಶಸ್ತಿ ಪಡೆದು ಭಾರತಕ್ಕೆ ಹೆಮ್ಮೆ ತಂದರು.

* ಫೆ.26ರಂದು ಇರಾಕಿನಿಂದ ಅಮೆರಿಕ ಸೈನಿಕರನ್ನು ಹಿಂದಕ್ಕೆ ಕರೆಸುವ ಮತ್ತು ಈ ಪ್ರಕ್ರಿಯೆ 2010ರೊಳಗೆ ಮುಗಿಸುವುದಾಗಿ ಒಬಾಮ ಘೋಷಿಸಿದರು.

* ಮಾ.6ರಂದು ಹರಾಜು ಹಾಕಲಾಗುತ್ತಿದ್ದ ಗಾಂಧೀಜಿ ಸೊತ್ತುಗಳನ್ನು ಉದ್ಯಮಿ ವಿಜಯ ಮಲ್ಯ ಅವರು 1.8 ದಶಲಕ್ಷ ಡಾಲರ್ ತೆತ್ತು ಖರೀದಿಸಿದರು.

* ಮಾರ್ಚ್ 16ರಂದು ಸಂಜಯ್ ಗಾಂಧಿ ಪುತ್ರ ವರುಣ್ ಗಾಂಧಿ 'ದ್ವೇಷ ಭಾಷಣ' ವಿವಾದದ ಮೂಲಕ ಭರ್ಜರಿಯಾಗಿಯೇ ರಾಜಕೀಯ ಪ್ರವೇಶ ಮಾಡಿದರುಯ

* ಏಪ್ರಿಲ್ 14ರಂದು ಲೋಕಸಭಾ ಸಮರದ ಮೊದಲ ಹಂತದ ಮತದಾನ ಆರಂಭ.

* ಮೇ 16ರಂದು ಮತ ಎಣಿಕೆ ನಡೆದು ಯುಪಿಎ ಭರ್ಜರಿ ಬಹುಮತದೊಂದಿಗೆ ಮನಮೋಹನ್ ಸಿಂಗ್ ಸರಕಾರ ಮತ್ತೆ ಅಧಿಕಾರಕ್ಕೇರಿತು. ಮೇ 19ರಂದು ಎರಡನೇ ಅವಧಿಗೆ ಪ್ರಧಾನಿಯಾಗಿ ಡಾ.ಸಿಂಗ್ ಆಯ್ಕೆ.

* ಮೇ 19ರಂದು ಸ್ವೈನ್ ಫ್ಲೂ ವೈರಸ್‌ನ ಮೊತ್ತ ಮೊದಲ ಪ್ರಕರಣ ಭಾರತದಲ್ಲಿ ಪತ್ತೆಯಾಯಿತು. ದೇಶಾದ್ಯಂತ ವ್ಯಾಪಕವಾಗಿ ಹರಡಿದ ಇದು ನೂರಾರು ಜನರನ್ನು ಬಲಿತೆಗೆದುಕೊಂಡಿತು.

* ಮೇ 18ರಂದು ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್‌ನನ್ನು ಶ್ರೀಲಂಕಾ ಸೇನಾಪಡೆಗಳು ಕೊಂದು, ದಶಕಗಳ ಕಾಲದಿಂದ ಶ್ರೀಲಂಕಾದಲ್ಲಿ ಕಾಡುತ್ತಿದ್ದ ಭಯೋತ್ಪಾದನೆಗೆ ಅಂತ್ಯ ಹಾಡಿದವು.

* ಜೂನ್ 3ರಂದು ದೇಶದ ಪ್ರಥಮ ಮಹಿಳಾ ಸ್ಪೀಕರ್ ಆಗಿ ಮೀರಾ ಕುಮಾರ್ ಆಯ್ಕೆ

* ಜೂನ್ 12ರಂದು ಮೆಹಮೂದ್ ಅಹಮದೀನೇಜಾದ್ ಇರಾನ್ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು.

* ಜೂನ್ 25ರಂದು ಪಾಪ್ ದೊರೆ ಮೈಕೆಲ್ ಜಾಕ್ಸನ್ ಸಾವಿಗೀಡಾಗಿ ವಿಶ್ವಾದ್ಯಂತ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದರು.

* ಜುಲೈ 2ರಂದು, ಸಲಿಂಗ ಕಾಮವು ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡುವ ಮೂಲಕ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿ, ದೇಶಾದ್ಯಂತ ಚರ್ಚೆಗೆ ಅವಕಾಶ ಒದಗಿತು.

* ಅದುವರೆಗೂ ನಿರಾಕರಿಸುತ್ತಲೇ ಇದ್ದ ಮುಂಬೈ ದಾಳಿಯ ಏಕೈಕ ಜೀವಂತ ಆರೋಪಿ ಅಜ್ಮಲ್ ಅಮೀರ್ ಕಸಬ್, ಜುಲೈ 20ರಂದು ತಪ್ಪೊಪ್ಪಿಗೆ ಹೇಳಿಕೆ ನೀಡಿ, ತಾನು ಪಾಕಿಸ್ತಾನೀಯ ಎಂದು ಜಗತ್ತಿಗೇ ಸಾದರಪಡಿಸಿದ.

* ಜುಲೈ 22ರಂದು ಶತಮಾನದ ಅತಿ ದೀರ್ಘ ಸೂರ್ಯ ಗ್ರಹಣ ನಡೆಯಿತು.

* ಆಗಸ್ಟ್ 27ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೂಡ ತಮ್ಮ ಆಸ್ತಿ ಬಹಿರಂಗಪಡಿಸಲು ಸಮ್ಮತಿಸಿದರು.

* ಆಗಸ್ಟ್ 29ರಂದು ಭಾರತದ ಚಂದ್ರಯಾತ್ರೆ ಯೋಜನೆಯಾಗಿರುವ ಚಂದ್ರಯಾನವು ಭೂಮಿಯ ಸಂಪರ್ಕ ಕಡಿದುಕೊಂಡು ಆತಂಕ ಮೂಡಿಸಿತು.

* ಸೆಪ್ಟೆಂಬರ್ 2ರಂದು ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದರು.

* ಸೆಪ್ಟೆಂಬರ್ 23ರಂದು ಪಿಎಸ್ಎಲ್‌ವಿ ಉಪಗ್ರಹ ವಾಹಕವು ಓಷಿಯನ್‌ಸ್ಯಾಟ್-2 ಸೇರಿದಂತೆ ಏಳು ಉಪಗ್ರಹಗಳನ್ನು ಅಂತರಿಕ್ಷದ ಕಕ್ಷೆಗೆ ಬಿಟ್ಟು ಸಾಧನೆ ಮೆರೆಯಿತು.

* ಸೆಪ್ಟೆಂಬರ್ 25ರಂದು ಚಂದ್ರಯಾನ ಯಾತ್ರೆಯು ಚಂದ್ರನ ಮೇಲೆ ಜಲದ ಸೆಲೆ ಇರುವುದನ್ನು ಪತ್ತೆ ಹಚ್ಚಿ ಬಹಿರಂಗಪಡಿಸಿತು.

* ಅಕ್ಟೋಬರ್ 1ರ ಆಸುಪಾಸಿನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸುರಿದು ಪ್ರವಾಹಕ್ಕೆ ಐನೂರಕ್ಕೂ ಹೆಚ್ಚು ಜನರು ಬಲಿಯಾದರು.

* ಅಕ್ಟೋಬರ್ 9ರಂದು ಮೂಲತಃ ತಮಿಳುನಾಡಿನ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಅವರಿಗೆ 2009ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ದೊರೆಯಿತು.

* ಅಕ್ಟೋಬರ್ 9ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಯಿತು ಮತ್ತು ಇದು ಜಗತ್ತಿನಾದ್ಯಂತ ಟೀಕೆಗೂ ಕಾರಣವಾಯಿತು.

* ನವೆಂಬರ್ 25ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸುಖೋಯ್ ಯುದ್ಧ ವಿಮಾನ ಹಾರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದರು.

* ಡಿಸೆಂಬರ್ ತಿಂಗಳಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯು ದೇಶಾದ್ಯಂತ ಪ್ರತಿಧ್ವನಿಸಿ ಬುಂದೇಲ್‌ಖಂಡ, ಪೂರ್ವಾಂಚಲ, ಮಿಥಿಲಾಂಚಲ, ವಿದರ್ಭ, ಕೊಡಗು ಮುಂತಾದ ಪ್ರತ್ಯೇಕ ರಾಜ್ಯ ರಚನೆಯ ಕೂಗಿನ ಬೆಂಕಿಗೆ ತುಪ್ಪ ಸುರಿಯಿತು.

* ವರ್ಷಾಂತ್ಯದಲ್ಲಿ, ಆಂಧ್ರ ರಾಜ್ಯಪಾಲ ಎನ್.ಡಿ.ತಿವಾರಿ ರಾಜಭವನದೊಳಗೆಯೇ ರಾಸಲೀಲೆಯಲ್ಲಿ ತೊಡಗಿದ್ದ ಸುದ್ದಿ ವೀಡಿಯೋ, ಚಿತ್ರ ಸಹಿತ ಮಾಧ್ಯಮಗಳಲ್ಲಿ ಪ್ರಕಟವಾಗಿ, ಭಾರೀ ಕೋಲಾಹಲ ಎಬ್ಬಿಸಿತು.

Share this Story:

Follow Webdunia kannada