Select Your Language

Notifications

webdunia
webdunia
webdunia
webdunia

ಹಣೆಯ ಸಿಂಧೂರದಲ್ಲಿ ವಿಷಕಾರಕ ಸೀಸ...

ಹಣೆಯ ಸಿಂಧೂರದಲ್ಲಿ ವಿಷಕಾರಕ ಸೀಸ...
ಸ್ತ್ರೀಯರಿಗೆ ಭೂಷಣಪ್ರಾಯವಾದುದು ಸಿಂಧೂರ. ಹಣೆಯಲ್ಲಿ ಕುಂಕುಮ ಅಥವಾ ಬಿಂದಿಯು ನಾರಿಯರ ಮುಖ ಲಕ್ಷಣ ಹೆಚ್ಚಿಸುತ್ತದೆ ಎಂದು ಭಾರತೀಯ ಸಂಪ್ರದಾಯದಲ್ಲಿ ನಂಬಲಾಗಿದೆ. ಇಷ್ಟು ಮಹತ್ವವಾದ, ಮಹಿಳೆಯರು ಉಪಯೋಗಿಸುವ ಬಿಂದಿ ಮತ್ತು ಇತರ ಸೌಂದರ್ಯ ಸಾಧನಗಳ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆಯಲ್ಲಿ ತಿರಸ್ಕೃತವಾಗುತ್ತಿರುವ ವರದಿಯನ್ನು ನಾವು ಕೇಳಿದ್ದೇವೆ.

ಇದಕ್ಕೆ ಪ್ರಧಾನ ಕಾರಣವೆಂದರೆ, ಈ ಬಿಂದಿಯಲ್ಲಿರುವ ಸೀಸದ ಅಂಶ. ಸೌಂದರ್ಯ ಸಾಧನಗಳಲ್ಲಿ ಅಥವಾ ಬಿಂದಿಗಳಲ್ಲಿ ಸೀಸದ ಪ್ರಮಾಣವು ಅತಿಯಾಗಿರುವುದರಿಂದ ಈಗಾಗಲೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಹಿಂತೆಗೆಯುವಂತೆ ಅಮೆರಿಕವು ಉತ್ಪಾದಕರಿಗೆ ಒತ್ತಡ ಹೇರಿತ್ತು.

ಈ ಹಣೆಯ ತಿಲಕದ ತವರೂರು ಭಾರತವೇ. ಆದರೆ ಇಲ್ಲಿ ಈ ಬಗ್ಗೆ ನಾವೆಷ್ಟು ಎಚ್ಚರಿಕೆ ವಹಿಸುತ್ತಿದ್ದೇವೆ? ಎಂಬುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಇಲ್ಲಿ ತಯಾರಿಸುವ ಬಿಂದಿ ಅಥವಾ ಇತರ ಸೌಂದರ್ಯ ಸಾಧನಗಳನ್ನು ಯಾವುದೇ ಪರೀಕ್ಷೆಗೆ ಅಥವಾ ತಪಾಸಣೆಗೆ ಒಳಪಡಿಸುವುದಿಲ್ಲ. ಅಲ್ಲದೆ ಈ ರೀತಿ ಪರೀಕ್ಷೆಗೆ ಗುರಿಪಡಿಸದ ಈ ಉತ್ಪನ್ನಗಳಲ್ಲಿ ಅನೇಕ ವಿಷಕಾರಕ ವಸ್ತುಗಳು ಇರುವ ಸಾಧ್ಯತೆಗಳು ಹೆಚ್ಚು. ಸೌಂದರ್ಯ ಸಾಧನ ಉದ್ಯಮಗಳ ಮೇಲೆ ಭಾರತದಲ್ಲಿ ಸೂಕ್ತ ನಿಯಂತ್ರಣ ಇಲ್ಲ, ಕಟ್ಟುಪಾಡುಗಳಿಲ್ಲ. ಅಲ್ಲದೆ ಈ ಉದ್ಯಮಗಳನ್ನು ನಿಯಂತ್ರಿಸಲು ಯಾವುದೇ ಪ್ರತ್ಯೇಕ ಮಂಡಳಿಗಳೂ ಇಲ್ಲ ಎಂಬುದು ಗಮನಿಸಬೇಕಾದ ವಿಚಾರ.

ವಾಸ್ತವವಾಗಿ, ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ಬ್ರಾಂಡೆಡ್ ಸೌಂದರ್ಯ ಸಾಧನಗಳ ಉತ್ಪನ್ನದಲ್ಲಿ ಬಳಸಲಾದ ವಸ್ತುಗಳ, ಉಪಯೋಗಿಸಲ್ಪಟ್ಟ ರಾಸಾಯನಿಕಗಳ ವಿವರಗಳನ್ನಾಗಲೀ ಅಥವಾ ಭಾರತೀಯ ಗುಣಮಟ್ಟ ಬ್ಯುರೋದ ಗುರುತನ್ನಾಗಲೀ ಹೊಂದಿಲ್ಲ. ಅಥವಾ ಕನಿಷ್ಠ ಪಕ್ಷ ಈ ಉತ್ಪನ್ನವು ಯಾವುದಾದರೂ ಹಾನಿಕಾರಕ ಅಂಶಗಳನ್ನು ಒಳಗೊಂಡಿದೆಯೇ ಇಲ್ಲವೇ ಎಂಬ ಪ್ರಕಟಣೆಯನ್ನು ಕೂಡಾ ಇವುಗಳು ಉತ್ಪನ್ನಗಳ ಮೇಲೆ ಪ್ರಕಟಿಸುವುದಿಲ್ಲ.

ಮಾರುಕಟ್ಟೆಯಲ್ಲಿ ಸಿದ್ಧವಾಗಿ ದೊರೆಯುವ ಕುಂಕುಮ ಅಥವಾ ಸಿಂಧೂರಗಳಲ್ಲಿ ಅತಿ ಹೆಚ್ಚು ಪ್ರಮಾಣದ ಸೀಸದ ಅಂಶವಿರುತ್ತವೆ. ಇದು ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ. ಅಲ್ಲದೆ ಈ ಸೀಸದ ಅಂಶವು ನಮ್ಮ ದೇಹದ ಮೇಲೆ ಗಂಭೀರ ಪರಿಣಾಮವನ್ನೂ ಬೀರುತ್ತದೆ ಎಂಬುದು ಪರಿಣತರ ಹೇಳಿಕೆ.

ಇಷ್ಟು ಮಾತ್ರ ಅಲ್ಲ, ಕೃತಕ ಸಿಂಧೂರಗಳು,ತುರಿಸುವಿಕೆ, ಬಿಳಿತೊನ್ನು ಅಲ್ಲದೆ ಇನ್ನೂ ಅನೇಕ ಚರ್ಮಸಂಬಂಧೀ ರೋಗಗಳಿಗೆ ದಾರಿ ಮಾಡಿಕೊಡುತ್ತವೆ. ಅಲ್ಲದೆ ಈ ಕುಂಕುಮ ಅಥವಾ ಸಿಂಧೂರದಲ್ಲಿರುವ ಅಲ್ಪ ಪ್ರಮಾಣದ ಸೀಸವನ್ನು ಸುದೀರ್ಘ ಸಮಯ ಬಳಸಿದಲ್ಲಿ ಸರಿಪಡಿಸಲಾಗದ ಮಾನಸಿಕ ಸಮಸ್ಯೆ, ಕಲಿಯುವಿಕೆಯಲ್ಲಿನ ಸಮಸ್ಯೆ, ನರಕ್ಕೆ ಸಂಬಂಧಿಸಿದ ಹಾಗೂ ದೈಹಿಕ ಬೆಳವಣಿಗೆಗೆ ಸಂಬಂಧಿಸಿದ ಅಡ್ಡಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ವೈದ್ಯರ ತಂಡವು ಎಚ್ಚರಿಸುತ್ತದೆ.

ಹಾಗಾಗಿ, ಸಿಂಧೂರವಿಡುವ ಮುನ್ನ ಅದರ ಗುಣಮಟ್ಟದ ಮೇಲೂ ಗಮನ ಕೊಡುವುದು ಸೂಕ್ತ.

Share this Story:

Follow Webdunia kannada