Select Your Language

Notifications

webdunia
webdunia
webdunia
webdunia

ಒಂದ್ಕೆಲ್ಸ ಮಾಡಿ, ನನ್ ಹೆಂಡ್ತೀನೇ ತಗೊಳಿ, ಲೆಕ್ಕ ಹಾಕಿ...!

ಮಾತಿನ ಮಂಟಪ ಕಟ್ಟಿದ ಪ್ರೊ.ಕೃಷ್ಣೇಗೌಡ

ಒಂದ್ಕೆಲ್ಸ ಮಾಡಿ, ನನ್ ಹೆಂಡ್ತೀನೇ ತಗೊಳಿ, ಲೆಕ್ಕ ಹಾಕಿ...!
ವಿದ್ಯಾಗಿರಿ, ಮೂಡುಬಿದಿರೆ , ಶನಿವಾರ, 29 ನವೆಂಬರ್ 2008 (11:18 IST)
ಶಿವಾನಿ

ಶುಕ್ರವಾರ ಮುಸ್ಸಂಜೆಯ ಹೊತ್ತು ಹೊರಗೆ ಧಾರಾಕಾರ ಮಳೆ ಸುರಿಯುತ್ತಿದ್ದರೆ ಸಭಾಂಗಣದ ಒಳಗೆ ಕೂತಿದ್ದ ಸಾವಿರಾರು ಪ್ರೇಕ್ಷಕರು ಅದನ್ನೆಲ್ಲ ಮರೆತು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. ಹೊರಗೆ ಅಪರೂಪದ ಮಳೆ ಸೃಷ್ಟಿಸಿದ ಅಷ್ಟೂ ಅವಾಂತರಗಳನ್ನು ಕೂಡಾ ಮರೆಸುವಂತೆ ಮಾಡಿತ್ತು ಒಳಗಿನ ಕಾರ್ಯಕ್ರಮ.

ವೇದಿಕೆಯಲ್ಲಿದ್ದವರು ಮಾತಿನ ಮಲ್ಲ ಪ್ರೊ. ಕೃಷ್ಣೇಗೌಡ. ಅವರು ವೇದಿಕೆ ಮೇಲೆ ನಿಂತು ಕ್ಷಣ ಕ್ಷಣಕ್ಕೂ ಹೊಸ ಹೊಸ ವರಸೆಯಲ್ಲಿ ಮಾತಿನ ಮಂಟಪ ಕಟ್ಟುತ್ತಲೇ ಹೋಗುತ್ತಿದ್ದರೆ ಸಭಾಸದರೆಲ್ಲ ಮೈಮರೆತು ನಗುತ್ತಿದ್ದರು. ಅವರ ಮಾತಿನ ವೈಖರಿಯ ತುಣುಕುಗಳು ಇಲ್ಲಿವೆ:

ನಮಗೆ ಒಬ್ರ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿರುತ್ತದೆ. ಅವನಿಗೆ ಯದ್ವಾತದ್ವಾ ಬಯ್ಯಬೇಕೆನಿಸುತ್ತದೆ. ಆಗ ಏನು ಮಾಡುತ್ತೇವೆ. ಬೈಯ್ದು ಬಿಡುತ್ತೇವೆ ತಾನೇ? ಆದರೆ ಕೆಲವರಿದ್ದಾರೆ. "ನಾನು ಸಿಟ್ಟು ಬಂದ್ರೆ ಮನುಷ್ಯನೇ ಅಲ್ಲ.. ನಾನು ದೊಡ್ಡ ಲೋಫರ್ ನನ್ಮಗ ಆಗ್ತೀನಿ... ನನ್ ವಿಷ್ಯ ಗೊತ್ತಿಲ್ಲ... ನಾಯಿ ಹಿಡ್ಕೊಂಡ್ಹಾಗೆ ಹಿಡ್ಕೋತೀನಿ" ಅಂತೆಲ್ಲಾ ಹೇಳ್ತಾರೆ. ಅಲ್ಲಾ ಬೈಬೇಕಾಗಿರುವುದು ಬೇರೆಯವ್ರಿಗೆ ತಾನೇ? ಆದ್ರೂ ತಮ್ಮನ್ನೇ ಬೈಕೊಳ್ತಾರೆ..!

ಅವನಿಗೆ ಕತ್ತೆ ಬೇಕಾಗಿದೆ. ಕತ್ತೆ ಕೇಳಲು ಬಂದಿದ್ದಾನೆ. ಕತ್ತೆಯ ಮಾಲೀಕ ಹೇಳ್ತಾನೆ ಅಲ್ಲಯ್ಯಾ ನನ್ ಮನೇಲಿ ಕತ್ತೆ ಇಲ್ಲ.. ಎಂದು. ಆದರೆ ಆಗಲೇ ಮನೆಯ ಹಿಂದಿನಿಂದ ಕತ್ತೆ ಅರಚುವುದು ಕೇಳುತ್ತದೆ. ನೋಡಿದ್ಯಾ.. 'ಕತ್ತೆ ತಾನೇ ಇದ್ದೇನೆ' ಅಂತಿದೆ ಎಂದು ಬಿಟ್ಟ. ಅದಕ್ಕೆ ಮಾಲೀಕನ ಉತ್ತರ ಏನು ಗೊತ್ತಾ? ನೋಡಯ್ಯಾ.. ಕತ್ತೆ ಬೇಕಾಗಿರುವುದು ನಿನಗೆ.. ಕತ್ತೆ ಕೊಡಬೇಕಾಗಿರುವವನು ನಾನು. ನೀನು ಮನುಷ್ಯ.. ನಾನೂ ಮನುಷ್ಯ. ಮನುಷ್ಯ ಮನುಷ್ಯ ಹೇಳಿದ ಮಾತನ್ನು ನಂಬಬೇಕೇ ಹೊರತು ಕತ್ತೆ ಮಾತನ್ನಲ್ಲ..! ಇದು ಏನನ್ನು ತೋರಿಸುತ್ತದೆ? ಆತನಿಗೆ ಕತ್ತೆ ಕೊಡಲು ಇಷ್ಟವಿಲ್ಲವಷ್ಟೆ. ಅದಕ್ಕೆ ಈ ರೀತಿಯ ಮೇಲೋಗರ.

ಕೆಲವೊಮ್ಮೆ ಮಾತಿನಲ್ಲಿ ವಾಚ್ಯಕ್ಕೆ ಅರ್ಥನೇ ಇರೋದಿಲ್ಲ. ಅಲ್ಲಿ ಕೇವಲ ಭಾವಕ್ಕೆ ಮಾತ್ರ ಅರ್ಥ. ಕೆಲವರು ಮಾತು ಮಾತಿಗೂ ನೀವು ನೋಡ್ಬೇಕೂ... ನೀವು ನೋಡ್ಬೇಕೂ ಎಂದು ರಾಗ ಎಳೆಯುತ್ತಾರೆ. ಏನನ್ನ ನೋಡೋದು..!? ಅದ್ಕೊಂದು ಉದಾಹರಣೆ: ನಮ್ ಯಜಮಾನ್ರ ಪಂಚೆ ಬಿಚ್ಚಿತ್ತು, ನೀವು ನೋಡ್ಬೇಕಿತ್ತೂ.... ಅಂತ

ಮತ್ತೆ ಕೆಲವರು ಭಾಷಣ ಶುರು ಮಾಡಿದರೆ ಇವತ್ತು ನಮ್ ದೇಶದೊಳಗೆ ಏನಾಗಿದೆ ಅಂತದ್ರ.. ಇವತ್ತು ನಮ್ ಸಾಹಿತ್ಯದೊಳಗಡೆ ಏನಾಗಿದೆ ಅಂತಂದ್ರ ಎಂದು ಮುಂದುವರಿಸುತ್ತಾರೆ. ಮತ್ತೊಂದು ಮಾತು 'ಒಂದ್ಕೆಲ್ಸ ಮಾಡಿ' ಎಂಬುದು. ಒಬ್ಬಾತ ರೈಲ್ವೇ ಸ್ಟೇಶನ್ ದಾರಿ ಕೇಳ್ತಾನೆ. ಅದಕ್ಕೆ ಈತ ಉತ್ತರಿಸುತ್ತಾನೆ. "ನಿನಗೆ ರೈಲ್ವೇ ಸ್ಟೇಶನ್‌ಗೆ ಹೋಗ್ಬೇಕು ತಾನೇ..? ನೀನೊಂದು ಕೆಲ್ಸ ಮಾಡು..' "ಅಲ್ಲ ಸ್ವಾಮೀ ನನಗೆ ರೈಲ್ವೇ ಸ್ಟೇಶನ್‌ಗೆ ದಾರಿ ಹೇಳಿ ಅಂದ್ರೆ ಒಂದು ಕೆಲಸ ಮಾಡು ಅಂತೀರಲ್ಲಾ..?" 'ಹೌದಲ್ಲ ನಿನಗೆ ದಾರಿ ಹೇಳಬೇಕು.. ನೀನೊಂದು ಕೆಲ್ಸ ಮಾಡು.. ಈ ಬಸ್ಸ್ ಹತ್ತಿ ಹೋಗು..." ಹೀಗೆ ಮುಂದುವರಿಯುತ್ತದೆ.

ಮಾತುಮಾತಿಗೂ ನೀನೊಂದು ಕೆಲ್ಸ ಮಾಡು ಎನ್ನುತ್ತಾರೆ. ಇಲ್ಲೆಲ್ಲ ಮಾತಗಿಂತ ಅದರ ಹಿಂದಿನ ಭಾವ ಮತ್ತು ಅದರ ಅಭಿಪ್ರಾಯವೇ ಮುಖ್ಯ. ನೋಡ್ರೀ.. ನಮ್ ಮಗಳು ಬೆಳಗ್ಗೆ ಎರಡು ಇಡ್ಲಿ ತಿಂದಿದ್ದಾಳೆ.. ಎರಡೇ ಎರಡು ಇಡ್ಲಿ ತಿಂದಿದ್ದು. ನೀವು ಲೆಕ್ಕ ಹಾಕಿ... ಈಗ ಎಂಟು ಗಂಟೆಯಾಯಿತು.. ಏನೂ ತಿಂದಿಲ್ಲ.. ನೀವೇ ಲೆಕ್ಕ ಹಾಕಿ.. ಅಂತಾರೆ. ನಮ್ ತಂದೆಗೆ ಮೊದಲ ಹೆಂಡತಿಯಲ್ಲಿ ಎಂಟು ಮಕ್ಕಳು.. ಆದ್ರೂ ಅವರು ಒಂಚೂರು ನೊಡ್ಕೊಳ್ಳೋದಿಲ್ಲ.. ನೀವೇ ಲೆಕ್ಕ ಹಾಕಿ..! ಅಲ್ಲಾ ಸ್ವಾಮೀ ಅಷ್ಟು ಕ್ಲೀಯರ್ ಹೇಳಿದ ಮೇಲೆ ಲೆಕ್ಕ ಹಾಕೋದು ಯಾಕೆ..?

ಇನ್ನೂ ಒಂದು ಉದಾಹರಣೆ ನೋಡಿ. "ಈ ಹೆಂಗಸರು ಒಟ್ಟಿಗೆ ಸೇರಿದ್ರೆ ಬರೀ ಮಾತೇ..' ಅಂದ ಆತ. ಹೌದಪ್ಪಾ ಇರ್ಲಿ ಬಿಡು ಎಂದನೀತ. "ಹಾಗಲ್ರೀ.. ನಾ ಹೇಳಿದ್ದು ಖರೇ ಅದ.. ಈ ಹೆಂಗಸ್ರು ಸೇರಿದ್ರೆ ಬರೀ ಮಾತೇ.... ಬೇಕಾದ್ರೆ ನನ್ನ ಹೆಂಡ್ತೀನೆ ತೊಗೊಳ್ಳಿ..' ಎಂಥ ಅನಾಹುತ ನೋಡಿ. ಬೇಕಾದ್ರೆ ನನ್ನ ಹೆಂಡ್ತೀನೇ ತೊಗೊಳ್ಳಿ ಅಂತಾರೆ. ಇನ್ನು ಕೆಲವರು ಮಾತು ಮಾತಿಗೆ ಬೆಂಗಳೂರನ್ನೇ ತೊಗೊಳ್ಳಿ.. ಬೇಕಾದ್ರೆ ದಿಲ್ಲಿನೇ ತೊಗೊಳ್ಳಿ.. ಇಲ್ನೋಡಿ ಬೇಕಿದ್ರೆ ನಮ್ ದೇಶಾನೇ ತೊಗೊಳ್ಳಿ ಅಂತಾರೆ. ಅದೇನು ತೊಗೊಳೊಕಾಗುತ್ತಾ..? ಆದ್ರೂ ಮಾತಿನ ಮಧ್ಯೆ ಇಂಥ ಶಬ್ದಗಳೆಲ್ಲ ಅನಾಯಾಸವಾಗಿ ಬಂದು ಹೋಗುತ್ತವೆ. ಇದಕ್ಕೆಲ್ಲ ಅರ್ಥ ಕಟ್ಟಲು ಸಾಧ್ಯವಿಲ್ಲ..'

ಹೀಗೆ ಸುಮಾರು 25 ನಿಮಿಷಗಳ ಕಾಲ ಕೃಷ್ಣೆ ಗೌಡರು ಎಗ್ಗಿಲ್ಲದೆ ಮಾತಿನ ಮಂಟಪ ಕಟ್ಟುತ್ತಲೇ ಹೋದರು. ಕೊನೆಯಲ್ಲಿ ಅವರ 'ವಿಶ್ವ ವಿಖ್ಯಾತ' ಸುಪ್ರಭಾತವನ್ನೂ ಹಾಡಿದರು.

Share this Story:

Follow Webdunia kannada