Select Your Language

Notifications

webdunia
webdunia
webdunia
webdunia

ಅಪ್ಪನ ಆರ್ಥಿಕ ಬಿಕ್ಕಟ್ಟು; ಮಕ್ಕಳ ಬೇಡಿಕೆ ದುಪ್ಪಟ್ಟು!

ಅಪ್ಪನ ಆರ್ಥಿಕ ಬಿಕ್ಕಟ್ಟು; ಮಕ್ಕಳ ಬೇಡಿಕೆ ದುಪ್ಪಟ್ಟು!
ವೆಂಕಟರಮಣ ಪೊಳಲಿ
PTI
ದೀಪಾವಳಿ ಅಂದರೆ ಸಂತಸ, ಆನಂದ, ಸಂಭ್ರಮ, ಬೆಳಕಿನ ಆವಳಿ, ಪಟಾಕಿಗಳ ಹಾವಳಿ. ಆದರೆ ಈ ಬಾರಿ ಮಾತ್ರ ಇವುಗಳ ಮಧ್ಯೆ, ಮಕ್ಕಳಿಗೆ ಆರ್ಥಿಕ ಕುಸಿತ, ಸೆನ್ಸೆಕ್ಸ್ ಕುಸಿತ ಎಂಬ ಅಪಶಕುನಗಳು ವಕ್ಕರಿಸಿಕೊಂಡಿವೆ. ಇದೇನಪ್ಪಾ ಈ ಮಹಾಶಯ ದೀಪಾವಳಿ ಹಬ್ಬದ ಮಧ್ಯೆ ಭಿನ್ನ ರಾಗ ಎಳೆತಿದ್ದಾನೆ ಎಂದು ಅಂದ್ಕೊಳ್ಳಬೇಡಿ. ಅದ್ದೂರಿ ದೀಪಾವಳಿ ಆಚರಣೆಯ ಮೈನ್ ಸ್ವಿಚ್ ಇರೋದೇ ಇದ್ರಲ್ಲಿ. ಈ ಬಾರಿಯ ದೀಪಾವಳಿ ಆಚರಣೆ ಆರ್ಥಿಕ ಕುಸಿತದ ಬ್ಯಾರೋಮೀಟರ್ ಇದ್ದಂತೆ. ಎಲ್ಲಿ ದೀಪಾವಳಿ ಧಾಂಧೂಂ ಕಡಿಮೆಯೋ ಅಲ್ಲಿ ಆರ್ಥಿಕ ದಿವಾಳಿಯ ಕಾವು ತಟ್ಟಿದೆ ಎಂದೇ ಅರ್ಥ. ಹಾಗಾಗಿ ಈ ಬಾರಿಯ ದಿವಾಳಿ(ದೀಪಾವಳಿ)ಯಲ್ಲಿ ಯಾರಾಗಿದ್ದಾರೆ ಆರ್ಥಿಕ ದಿವಾಳಿ ಎಂಬುದು ಗೊತ್ತಾಗೋದು ಬಲು ಸುಲಭ!.

ಜಾಗತಿಕ ಆರ್ಥಿಕ ಬಿಕ್ಕಟ್ಟು, ಶೇರು ಮಾರುಕಟ್ಟೆ ಕುಸಿತ, ಬೋನಸ್ ಕಡಿತ, ಉದ್ಯೋಗ ಕಡಿತ, ವೇತನ ಕಡಿತಗಳ ಈ ಜಮಾನಾದಲ್ಲಿ ಅದು ಹ್ಯಾಗೆ ಸ್ವಾಮೀ ನಮ್ಮ ಬ್ಯಾಂಕ್ ಬ್ಯಾಲೆನ್ಸು ಏರೋಕೆ ಸಾಧ್ಯ? ಈ ಕಡಿತ-ಕುಸಿತಗಳ ಗಲಾಟೆಯಲ್ಲಿ ದೀಪಾವಳಿ ಸದ್ದು ಕೇಳ್ಸುತ್ತೋ ಇಲ್ಲವೋ ಎಂಬುದೇ ಅನುಮಾನ ಪಡುವಂತಹ ಪರಿಸ್ಥಿತಿ. ದೀಪಾವಳಿ ಬೇರೆ ದೊಡ್ಡ ಬಜೆಟ್ ಹಬ್ಬ, ಖರ್ಚುಗಳು ಒಂದರ ಹಿಂದೊಂದರಂತೆ ಕ್ಯೂ ನಿಲ್ಲುತ್ವೆ. ಹೊಸ ಬಟ್ಟೆ, ಶಾಪಿಂಗ್, ವಿಧ ವಿಧದ ತಿಂಡಿ ತಿನಿಸು, ನೆಂಟರು, ಪಟಾಕಿ ಒಂದೇ ಎರಡೇ... ಇದರ ಲೆಕ್ಕ ಹಾಕಿದ್ರೆ ಇನ್ನೊಂದು ದೀಪಾವಳಿಯೇ ಬಂದು ಬಿಡಬಹುದು. ಆದ್ದರಿಂದ ಲೆಕ್ಕ ಹಾಕೋದಿಕ್ಕೆ ಇಲ್ಲಿಗೇ ಫುಲ್‌ಸ್ಟಾಪ್.

ಅದ್ಯಾರೆಲ್ಲಾ ದೀಪಾವಳಿ ಹಬ್ಬದ ಭರ್ಜರಿ ಆಚರಣೆಗೆ ಈ ಮುಂಚೆನೇ ಸ್ಕೆಚ್ ಹಾಕಿದ್ರೋ, ಅವರೆಲ್ಲಾ ನಿರಾಶೆ ಅನುಭವಿಸ್ತಿದಾರೆ. ಒಂದೆಡೆ ವೇತನ-ಬೋನಸ್ ಕಡಿತ, ಇನ್ನೊಂದೆಡೆ ಮನೆಯವರ ಶಾಪಿಂಗ್, ಬಟ್ಟೆ, ಪಟಾಕಿಗಳಿಗಾಗಿನ ತುಡಿತ... ಈ ಮಧ್ಯೆ ಏರಿದೆ ಮನೆಯೊಡೆಯನ ಹೃದಯದ ಬಡಿತ. ಅತ್ತ ಮಕ್ಕಳ ಪಟಾಕಿ ವರಸೆ, ಇತ್ತ ನಂಟರ ಭಾರೀ ವಲಸೆ, ಈ ಮಧ್ಯೆ ಮಡದಿಯ ಸಾವಿರ ಆಸೆ, ಇದೆನ್ನೆಲ್ಲ ಕೇಳಿ ಮನೆಯೊಡೆಯ ಹಿಡಿವನು ಹಸೆ!.

ಈ ಆರ್ಥಿಕ ಕುಸಿತ, ಸೆನ್ಸೆಕ್ಸ್ ಕುಸಿತಗಳೆಲ್ಲಾ ದೀಪಾವಳಿಯ ಹಂಬಲದಲ್ಲಿರುವ ಈ ಮಕ್ಕಳಿಗೆ ಅರ್ಥವಾಗೋದು ಸಾಧ್ಯವೇ? ಅವುಗಳದ್ದು ಒಂದೇ ಆಲಾಪ... ಪಟಾಕಿ, ಪಟಾಕಿ, ಪಟಾಕಿ. ಈ ದೀಪಾವಳಿಗೆ ಬೇರೆ ಅವು ಹೋದ ವರ್ಷದಿಂದಲೇ ಪಂಚವಾರ್ಷಿಕ ಯೋಜನೆ ತರದ ಒಂದು ದೊಡ್ಡ ಪಟಾಕಿ ಯೋಜನೆಯನ್ನೇ ರೂಪಿಸಿರುತ್ತವೆ. ಈ ಪಟಾಕಿ ಗಲಾಟೆ ಎದುರು ಅಪ್ಪನ ಆರ್ಥಿಕ ಕುಸಿತ, ಕಡಿತ ಲೆಕ್ಕಾಚಾರವೆಲ್ಲಾ ಅರಣ್ಯರೋದನವೇ ಸರಿ. ಪಾಪ, ಅವಕ್ಕೇನು ಗೊತ್ತಾಗುತ್ತೆ? ಒಟ್ಟಿನಲ್ಲಿ ಹಬ್ಬವೆಂದರೆ ಸಂಭ್ರಮ ಸಡಗರ ಮಾತ್ರವೇ ಕಂಡು ಕೇಳಿ ಅರಿತಿದ್ದ ಈ ಚಿಣ್ಣರಿಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟುತ್ತಿರುವುದು ವಿಪರ್ಯಾಸವೇ ಸರಿ.

ಕಳೆದ ಬಾರಿ ಬೀಡಿ ಪಟಾಕಿ, ಮಾಲೆ ಪಟಾಕಿ, ಲಕ್ಷ್ಮೀ ಪಟಾಕಿ, ರಾಕೆಟ್, ಮಳೆ ಪಟಾಕಿಗಳನ್ನು ತಂದು ರಾಶಿ ಹಾಕಿದ್ದ ತಂದೆ, ಈ ಬಾರಿ ಅದ್ಯಾಕೋ ಆರ್ಥಿಕತೆ, ಸೆನ್ಸೆಕ್ಸ್ ಎಂದು ಯಾವುದೋ ಬೇರೆ ರಾಗ ಎಳೆತಿದ್ದಾನಲ್ಲಾ ಎಂಬ ಗೊಂದಲ ಮಕ್ಕಳನ್ನು ಕಾಡುತ್ತೆ. ಆದರೆ ಎಷ್ಟು ತಿಪ್ಪರಲಾಗ ಹಾಕಿದ್ರು ಮಕ್ಕಳು ಮಾತ್ರ ತಮ್ಮ ಪಟಾಕಿ ಡಿಮಾಂಡನ್ನು ಕಡಿಮೆ ಮಾಡೋದಿಲ್ಲ. ಅಪ್ಪನ ತಲೆ ತುಂಬಾ ಆರ್ಥಿಕ ಬಿಕ್ಕಟ್ಟು, ಆದ್ರೆ ಮಕ್ಕಳ ಬೇಡಿಕೆ ಮಾತ್ರ ದುಪ್ಪಟ್ಟು, ಮಕ್ಕಳ ಈ ಹಠದಿಂದ ತಲೆ ಕೆಟ್ಟು, ಕೊನೆಗೆ ಮಗನ ಬೆನ್ನಿಗೆ ಆತನಿಂದ ಬಲವಾದ ಪೆಟ್ಟು. ಒಂದೆಡೆ ಮಕ್ಕಳ ಸ್ಟ್ರೈಕು, ಮತ್ತೊಂದೆಡೆ ಮಡದಿಯ ಜತೆ ಫೈಟು, ಆದರೆ ಏನು ಮಾಡೋದು... ಹಣ ಮಾತ್ರ ಸಿಕ್ಕಾಪಟ್ಟೆ ಟೈಟು. ಇದು ಹಲವು ಮನೆಗಳ ಕಥೆ-ವ್ಯಥೆ.

ಒಟ್ಟಿನಲ್ಲಿ ಹೇಳುವುದಾದರೆ, ಈ ಬಾರಿಯ ದೀಪಾವಳಿ ಅನೇಕ ರಾಮಾಯಣ, ಮಹಾಭಾರತಗಳಿಗೆ ಸಾಕ್ಷಿಯಾಗೋದಂತೂ ಗ್ಯಾರಂಟಿ!

Share this Story:

Follow Webdunia kannada