Select Your Language

Notifications

webdunia
webdunia
webdunia
webdunia

ಹಬ್ಬಗಳ ಆಚರಣೆಗೆ ಕಾರಣಗಳು ಬೇಕಿಲ್ಲ

ಹಬ್ಬಗಳ ಆಚರಣೆಗೆ ಕಾರಣಗಳು ಬೇಕಿಲ್ಲ
PTI
ಅವಿನಾಶ್ ಬಿ.
ನರಕಾಸುರನ ವಧೆಯ ಮೂಲಕ ಶ್ರೀಕೃಷ್ಣನು ಅಸುರನ ಕಪಿಮುಷ್ಟಿಯಲ್ಲಿದ್ದ ದೇವಾನುದೇವತೆಗಳು ಮತ್ತು ಮಾನವರನ್ನು ಮುಕ್ತಿ ನೀಡಿದ ಸಂಕೇತವಾಗಿ ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಇದು ಹಿಂಸೆ, ಅನ್ಯಾಯಗಳ ಮೇಲೆ ಅಹಿಂಸೆ ಮತ್ತು ನ್ಯಾಯದ ವಿಜಯ. ಕತ್ತಲು ಓಡಿಸಿ ಬೆಳಕು ನೀಡುವ ಹಬ್ಬ.

ಅಮಾವಾಸ್ಯೆಯಂದು ಭಾರತೀಯರೆಲ್ಲರೂ ಸಾಲು ಸಾಲು ದೀಪಗಳ ಮೂಲಕ ಕತ್ತಲು ಓಡಿಸುವ, ಆ ಮೂಲಕ ಸಾಂಕೇತಿಕವಾಗಿ ಜಗವನ್ನು ಬೆಳಗುವ ಕಾಯಕವನ್ನು ಸಂಭ್ರಮ ಸಡಗರಗಳಿಂದ ಆಚರಿಸುತ್ತಾರೆ.

ಆದರೆ ಉತ್ತರ ಭಾರತದತ್ತ ಗಮನ ಹರಿಸಿದರೆ ಅಲ್ಲಿನ ಆಚರಣೆ ಒಂದೇ ಆದರೂ, ಅದರ ಹಿಂದಿರುವ ನಂಬಿಕೆ ಮಾತ್ರ ಬೇರೆ. ಅಲ್ಲೊಬ್ಬ ರಾಜನಿದ್ದ. ಅವನಿಗೆ ಏಳು ಮಂದಿ ಹೆಣ್ಣುಮಕ್ಕಳು. ಅವರಲ್ಲಿ ಅತ್ಯಂತ ಕಿರಿಯವಳು ರಾಜನಿಗೆ ಅತ್ಯಂತ ಪ್ರೀತಿಪಾತ್ರಳಾದವಳು. ಆದರೆ ಅದೊಂದು ದಿನ, ತನ್ನ ಮಕ್ಕಳನ್ನು ಕರೆದು, ನಿಮ್ಮ ನಿಮ್ಮ ಜೀವನದ ಗುರಿ ಏನು, ಹಣೆಬರಹವೇನು ಎಂದು ಕೇಳಿದ. ಅದಕ್ಕೆ ಕಿರಿಯವಳು ಉತ್ತರಿಸಿದ್ದು, ನನ್ನದೇ ಆದ ಗುರಿಯೊಂದಿಗೆ ನಾನು ಹುಟ್ಟಿದ್ದೇನೆ ಎಂದಾಗಿತ್ತು.

ಇದರಿಂದ ಕೋಪೋದ್ರಿಕ್ತನಾದ ಆ ರಾಜನು, ಆಕೆಯನ್ನು ಒಬ್ಬ ಭಿಕ್ಷುಕನಿಗೆ ಮದುವೆ ಮಾಡಿ ಕಳುಹಿಸಿದ. ಆದರೂ, ಎಷ್ಟಾದರೂ ಮಗಳಲ್ಲವೇ? ಪಿತೃಪ್ರೇಮದಿಂದಾಗಿ ಅದರ ಜೊತೆಗೆ ಒಂದು ವರವನ್ನು ಬೇಡುವಂತೆಯೂ ಕೇಳಿದ. ಇದಕ್ಕೆ ಅವಳು ಕೇಳಿದ್ದೇನೆಂದರೆ, ಕಾರ್ತಿಕ ಅಮಾವಾಸ್ಯೆಯ ರಾತ್ರಿಯಂದು ಆತನ ಇಡೀ ಸಾಮ್ರಾಜ್ಯವು ಕತ್ತಲಲ್ಲಿ ಇರಬೇಕೆಂಬ ವಿಚಿತ್ರ ಬೇಡಿಕೆ. ಇದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ ರಾಜ.

ತತ್ಪರಿಣಾಮ, ಕಾರ್ತಿಕ ಅಮಾವಾಸ್ಯೆಯ ಕಗ್ಗತ್ತಲಲ್ಲಿ ಅವಳೊಬ್ಬಳು ಮಾತ್ರ ಕಾಡಿನಲ್ಲಿರುವ ತನ್ನ ಗುಡಿಸಲಿನಲ್ಲಿ ಹಣತೆ ದೀಪ ಉರಿಸಿದಳು. ಅಂದಿನ ಆ ದೀಪವನ್ನು ಗಮನಿಸಿ ಶ್ರೀ ಲಕ್ಷ್ಮೀದೇವಿಯು ಅಂದು ಆಕೆಯ ಮನೆಗೆ ಬಂದಳು. ಆದರೆ, ಮರಳಿ ಹೋಗದಂತಿದ್ದರೆ ಮಾತ್ರವೇ ಮನೆಯೊಳಗೆ ಬರಮಾಡಿಕೊಳ್ಳುವುದಾಗಿ ಈ ತರುಣಿ ಶರತ್ತು ಹಾಕಿದಳು. ಇದೇ ದಿನವನ್ನು ದೀಪಾವಳಿ ರೂಪದಲ್ಲಿ, ಶ್ರೀ ಲಕ್ಷ್ಮೀಯ ಆರಾಧನೆಯ ಸಂಕೇತವಾಗಿ ಆಚರಿಸಲಾಗುತ್ತದೆ.

ಕಾರಣಗಳೇನೇ ಇರಲಿ, ಭಾರತೀಯರಿಗೆ ಹಬ್ಬದ ಸಂಭ್ರಮ ಆಚರಿಸುವುದಕ್ಕೆ ಯಾವುದೇ ನೆಪಗಳು ಬೇಕಿಲ್ಲ. ಪ್ರತಿಯೊಬ್ಬ ಭಾರತೀಯರೂ ದೀಪಾವಳಿಯ ಹಬ್ಬದ ಸಡಗರದಲ್ಲಿ ತೇಲುತ್ತಾರೆ. ಈ ಮೂಲಕ ವರ್ಷವಿಡೀ ದುಡಿತದ ಜಂಜಾಟದಿಂದ ಒಂದಷ್ಟು ನೆಮ್ಮದಿಯನ್ನು ಕಾಣಬಯಸುತ್ತಾರೆ. ಬಂಧುಗಳು, ಗೆಳೆಯರೊಂದಿಗೆ ಸಂಭ್ರಮ ಆಚರಿಸಿ ಏಕತಾನತೆ ಕಳೆಯುತ್ತಾರೆ.

Share this Story:

Follow Webdunia kannada