Select Your Language

Notifications

webdunia
webdunia
webdunia
webdunia

ತುಳುನಾಡ ಬಲಿಯೇಂದ್ರ ಬರುವ ಕಥೆ ಹೀಗೆ

ತುಳುನಾಡ ಬಲಿಯೇಂದ್ರ ಬರುವ ಕಥೆ ಹೀಗೆ
- ಭುವನ್ ಪುದುವೆಟ್ಟು
PTI
ಆಟಿಡ್ ಬರ್ಪುಂಡು ಆನೆಂತಿ ಸಂಕ್ರಾಂತಿ
ಸೋಣೊಡು ಬರ್ಪುಂಡು ಗೌರಿ ಚೌತಿ
ನಿರ್ನಾಳೊಡು ಬರ್ಪುಂಡು ಒಂರ್ಬ ದಿನೊತ ಮಾರ್ಣೆಮಿ ಉತ್ಸವ
ಬೊಂತ್ಯೊಳುಡು ಬರ್ಪುಂಡು ದೀಪಾವಳಿ ಪರ್ಬ
ಮುಪ್ಪೊ ದಿನೊತ ಪುರದಕ್ಷಿಣೆ, ಮೂಜಿ ದಿನೊತ ಪೂವೊಡರ್
ಆವೂರ ಪೊಲಿ ಕೊಂಡೇ, ಈ ಊರಾ ಬಲಿ ಕೊಂಡೋಲೆ
ಅರಿಯರಿಯೆ ಬಲಿಯೇಂದ್ರ... ಅರಿಯರಿಯೆ...
(ಮುಂದುವರಿಯುತ್ತದೆ)

ಹೀಗೆ ತುಳುನಾಡಿನ ಅತಿ ದೊಡ್ಡ ಸಂಭ್ರಮದ ಹಬ್ಬವಾಗಿರುವ ದೀಪಾವಳಿ ಪರ್ಬದ ಸಾಂಪ್ರದಾಯಿಕ ಪಾಡ್ದನವಿದು. ಬಲಿಚಕ್ರವರ್ತಿಯನ್ನು ನಾಡಿಗೆ ಆಹ್ವಾನಿಸಿ ದೀಪ ಬೆಳಗಿಸಿ ಆರಾಧಿಸುವ ಪದ್ಧತಿ ಆರಂಭವಾದ ಬಗೆಯನ್ನು ಮುಂದಕ್ಕೆ ತಿಳಿದುಕೊಳ್ಳೋಣ ಬನ್ನಿ...

ರಾಕ್ಷಸಕುಲದಲ್ಲಿ ಹುಟ್ಟಿದವ ಬಲಿ ಚಕ್ರವರ್ತಿ. ಹಿರಣ್ಯಕಶಿಪು-ಹಿರಣ್ಯಾಕ್ಷರ ವಂಶ. ಆದರೂ ಬಲಿಯೇಂದ್ರ ಸದ್ಗುಣ-ಸಚ್ಛಾರಿತ್ರ್ಯವಂತ. ವೀರೋಚನಾ, ದೇವಾಂಬರ ಪುತ್ರನಾದ ಬಲಿಯು ಪ್ರಹ್ಲಾದನ ಮೊಮ್ಮಗನೂ ಹೌದು. ಪ್ರಹ್ಲಾದನ ಪ್ರಭಾವದಿಂದ ಈತ ವಿಷ್ಣು ಭಕ್ತನಾದ. ದಾನ ಶ್ರೇಷ್ಠನಾದ ಬಲಿಯೇಂದ್ರ ತುಳುನಾಡಿನ ಅರಸನಾಗಿದ್ದ ಎಂಬುದು ಪ್ರತೀತಿ. ಈತನ ಪತ್ನಿಯೇ ವಿಂದ್ಯಾವಳಿ. ಧರ್ಮನಿಷ್ಠನಾಗಿ ಪ್ರಜೆಗಳ ಕಷ್ಟ ಸುಖಗಳನ್ನು ಗಮನಿಸುತ್ತಾ ಆಡಳಿತ ನಡೆಸಿದವನೀತ. ಬೆಳಿಗ್ಗೆ ಬಿತ್ತಿದರೆ ಸಂಜೆ ಕೊಯ್ಲು ಮಾಡುವ ಸತ್ಯಕಾಲವದು. ಆಗ ದಿನಂಪ್ರತಿ ಹೊಸ ಅಕ್ಕಿ ಊಟ, ಹಬ್ಬಗಳು ನಡೆಯುತ್ತಿದ್ದವು. ಎಲ್ಲರೂ ಧರ್ಮಿಷ್ಠರಾಗಿದ್ದರು.

ಹೀಗಿರುವಾಗ ಆತ "ನಾಮಂದ ಸುದೆ ಬರಿಟ್ ಹೋಮಂದ ಶಾಲೆ"ಯನ್ನು (ನಾಮಂದ ನದಿ ತಟದಲ್ಲಿ ಹೋಮದ ಶಾಲೆ) ಕಟ್ಟಿ, ಅಲ್ಲಿ ಕಲಿಯುಗದ ಶೀಘ್ರ ಆರಂಭಕ್ಕಾಗಿ ಜಪ-ತಪ, ಯಾಗ-ಯಜ್ಞಾದಿಗಳನ್ನು ಆರಂಭಿಸಿದ. ದಿನಂಪ್ರತೀ ಮಡಿಯುಟ್ಟು ದಾನ-ಧರ್ಮ, ಪೂಜಾ ಕೈಂಕರ್ಯಗಳಲ್ಲಿ ಬಲಿಯೇಂದ್ರ ದಂಪತಿ ನಿರತರಾಗುತ್ತಿದ್ದರು. ಅರಸು-ಬಲ್ಲಾಳ, ಮಂತ್ರಿ-ಮಾದಿಗ, ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ, ಊರು ಕೇರಿಗಳ ಬಡವ-ಬಲ್ಲಿದರನ್ನು ಕುಲ-ನೆಲ ಬೇಧವಿಲ್ಲದೆ ಕಲಿಯುಗವನ್ನು ಶೀಘ್ರ ಸ್ಥಾಪಿಸುವ ಯಾಗಕ್ಕಾಗಿ ತುಳುನಾಡಿಗೆ ಆಹ್ವಾನಿಸುತ್ತಿದ್ದ ಚಕ್ರವರ್ತಿ.

ರಾಕ್ಷಸಕುಲಜ ಇಂತಹಾ ಯಾಗ-ಯಜ್ಞಾದಿಗಳನ್ನು ನಡೆಸುವುದೆಂದರೇನು? ದೇವತೆಗಳಿಗೆ ಚಿಂತೆ ಆರಂಭವಾಗಿತ್ತು. ಬಲೀಂದ್ರ ಧರ್ಮಿಷ್ಠ ಬೇರೆ. ಅದಲ್ಲದೇ ಆತ ನಡೆಸುತ್ತಿರುವ ಯಾಗ ಕಲಿಯನ್ನು ಭೂಲೋಕ್ಕೆ ಬೇಗನೆ ಕರೆಸಿಕೊಳ್ಳುವಂತಹುದು. ಹಾಗಾಗಬಾರದು ಎಂದುಕೊಂಡ ದೇವತೆಗಳೆಲ್ಲ ಒಟ್ಟು ಸೇರಿ ಸಂಚು ಮಾಡಿ ದೇವಲೋಕದಲ್ಲಿದ್ದ ಕಲಿಯನ್ನು ಹಿಡಿದು ತಲೆ ಕೆಳಗೆ ಮಾಡಿ ಕಟ್ಟಿಹಾಕಿ ಬಂಧನದಲ್ಲಿಟ್ಟರು.

ಆಗ ಕಲಿಯ ಆರ್ಭಟ ಶುರುವಾಯಿತು. ಮೂರು ಲೋಕ ಬಿರಿಯುವಂತೆ ಅರಚಲು ಶುರುವಿಟ್ಟುಕೊಂಡ ಕಲಿಯ ಆರ್ತನಾದ ಬಲಿಯೇಂದ್ರನ ಕರ್ಣಪಟಲಕ್ಕೂ ಬಡಿಯಿತು. ನೋವಿನಿಂದ ಚೀರುತ್ತಿರುವ ಕಲಿಯ ಕೂಗನ್ನು ಅರಗಿಸಿಕೊಳ್ಳಲಾಗದ ಬಲಿ ತಕ್ಕ ಉತ್ತರ ಕೊಡಲು ಸಿದ್ಧನಾದ. ಈ ಅನಾಹುತಕ್ಕೆ ಕಾರಣರಾದವರು ದೇವತೆಗಳಾದ ಕಾರಣ ಅವರನ್ನೇ ಹಿಡಿದು ಕಿರುಕುಳ ಕೊಡಲಾರಂಭಿಸಿದ. ಚಿತ್ರಹಿಂಸೆ ತಾಳಲಾರದ ಇಂದ್ರಲೋಕಾಧಿಪತಿ ದೇವೇಂದ್ರನ ಸಹಿತ ದೇವತೆಗಳು ಕೊನೆಗೆ ಶ್ರೀಮನ್ನಾರಾಯಣನ ಮೊರೆ ಹೋದರು. ಬಲಿ ನಡೆಸುತ್ತಿರುವ ಯಾಗದ ಪೂರ್ಣಾಹುತಿ ತಡೆದು, ತಮಗಾಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಭಿನ್ನವಿಸಿಕೊಂಡ ದೇವತೆಗಳು ವಿಷ್ಣುವಿನ ಅಭಯಹಸ್ತ ಪಡೆದು ನಿರಾಳರಾದರು.

ಬಲಿಯೇಂದ್ರ ಧರ್ಮಿಷ್ಠನಾದ ಕಾರಣ ಆತನನ್ನು ಮಣಿಸುವ ದಾರಿ ಕೂಡಾ ಧರ್ಮಯುತವಾಗಿಯೇ ಇರಬೇಕು. ಚಕ್ರವರ್ತಿ ದಾನ ಧರ್ಮದಲ್ಲಿ ಶ್ರೇಷ್ಠ ಎಂದು ಪ್ರಸಿದ್ಧಿಯಾಗಿದ್ದರಿಂದ ಆ ಮೂಲಕವೇ ಕಾರ್ಯ ಸಾಧನೆಗೆ ವಿಷ್ಣು ಅನುವಾದ.

ಕಚ್ಚೆಯುಟ್ಟ ಮಡಿವಂತ, ಕೈಯಲ್ಲೊಂದು ತೀರ್ಥ ಚೊಂಬು-ಊರುಗೋಲು, ಮತ್ತೊಂದು ಕೈಯಲ್ಲಿ ಪಣೆ ಛತ್ರ, ಮೈಯೆಲ್ಲಾ ನಾಮ ಬಳಿದು ಜುಟ್ಟನಿಟ್ಟ ಬಡಬ್ರಾಹ್ಮಣ ಬಾಲಕನ ವೇಷಧಾರಿಯಾಗಿ ಭೂಲೋಕಕ್ಕೆ ಕಾಲಿಟ್ಟ ಶ್ರೀಮನ್ನಾರಾಯಣ. ವಾಮನರೂಪೀ (ವಿಷ್ಣುವಿನ 5ನೇ ಅವತಾರ) ಬ್ರಾಹ್ಮಣಶ್ರೇಷ್ಠನನ್ನು ಕಂಡು ಹರ್ಷಗೊಂಡ ಬಲಿ ಚಕ್ರವರ್ತಿ ದಂಪತಿಗಳು ಭಕ್ತಿಯಿಂದ ವಿವಿಧೋಪಚಾರಗಳಲ್ಲಿ ನಿರತರಾದರು.

ಬಾಲ ಬ್ರಾಹ್ಮಣನ ಕಾಲು ತೊಳೆದು ತೀರ್ಥವೆಂದು ಸ್ವೀಕರಸಿದರು ಬಲಿ ದಂಪತಿಗಳು. ಎಡಬಲ ನಂದಾದೀಪ ಬೆಳಗಿಸಿ ಭಕ್ತಿ ಮೆರೆದರು. ಆಯಾಸ ಬಾಯಾರಿಕೆ ನೀಗಿಸಿದ ಬಲಿಯು ಬ್ರಾಹ್ಮಣನನ್ನು - "ದೂರದಿಂದ ಬಂದಂತಿದೆ.. ಬಂದ ವಿಷಯ ಏನು? ಯಾವ ಊರಿನಿಂದ ಬಂದಿದ್ದೀರಿ? ನಿಮ್ಮ ಸಂಸಾರ ಎಲ್ಲಿ.. ಹೇಗಿದ್ದಾರೆ? ಸೌಖ್ಯದಿಂದಿರುವರೇ? ಸುಖಕ್ಕೇನಾದರೂ ಕೊರತೆಯಿದೆಯೇ? ನೀವು ಸಂತೋಷವಾಗಿದ್ದೀರಿ ತಾನೇ?" ಹೀಗೆ ವಿಚಾರಿಸಿದ.

ಸೇವೆಯಿಂದ ಸಂತುಷ್ಟನಾದ ಬ್ರಾಹ್ಮಣ - ನನಗೆ ಹೋದಲೆಲ್ಲಾ ಊರು, ಸಂಸಾರ ಎಲ್ಲಿ ಎಂದು ಪ್ರಶ್ನಿಸಿದ್ದೀಯಾ... ನನಗೆ ಊರೇ ಸಂಸಾರ. ನೀನು ದಾನ ಶ್ರೇಷ್ಠನೆಂದು ಕೇಳಿಪಟ್ಟೆ. ಅದರಾಸೆಯಿಂದ ಬಂದಿದ್ದೇನೆ ಎಂದು ಉತ್ತರಿಸಿದ.

ನಿಮಗೇನು ಬೇಕು ಹೇಳಿ... ಧನ ಕನಕ ಬೇಕೇ, ಗೋದಾನ, ಭೂದಾನ ಪಡೆಯುವಿರೇ, ಬಾಳೆ-ತೆಂಗು, ಬೆಳೆ-ನೆಲೆ, ಕಂಬಳ ಏನು ಬೇಕು ಸ್ವಾಮೀ.. ಕೇಳಿ.. ಹೀಗೆ ಅತ್ಯಂತ ಗೌರವಪೂರ್ವಕವಾಗಿ ಬ್ರಾಹ್ಮಣನನ್ನು ಭಿನ್ನವಿಸಿಕೊಂಡ ರಾಕ್ಷಸಕುಲದ ಧರ್ಮಿಷ್ಠ ತುಳುನಾಡಿನ ಚಕ್ರವರ್ತಿ ಬಲೀಂದ್ರ.

ನೀನು ಧನ-ಕನಕ-ಬೆಳ್ಳಿ ಕೊಟ್ಟರೆ ಕಳ್ಳ-ಕಾಕರು ಕೊಂಡು ಹೋದಾರು. ಯಾರೂ ದಿಕ್ಕಿಲ್ಲದ ನನಗೆ ಸಂಪತ್ತು ಯಾಕೆ ಬೇಕು? ನನ್ನ ಆಸೆ ಈಡೇರಿಸುವ ಭಾಷೆ ಕೊಡುವಿಯಾದರೆ ಮೂರು ಹೆಜ್ಜೆ ಭೂಮಿ ಕೊಡು. ಸಂತೋಷದಿಂದ ಸ್ವೀಕರಿಸಿ ಮರಳುವೆ ಎಂದ ವಾಮನ.

ಯಕಶ್ಚಿತ್ ಮೂರು ಹೆಜ್ಜೆ ಭೂಮಿಯನ್ನಷ್ಟೇ ದಾನ ಕೇಳುತ್ತಿದ್ದೀರಾ? ಖಂಡಿತಾ ಕೊಡುತ್ತೇನೆಂದ ಬಲಿ.

ನಾಳೆ ಬೆಳಿಗ್ಗಿನ ಶುಭ ಮುಹೂರ್ತದಲ್ಲಿ ದಾನ ಪಡೆಯುವೆ. ಸಿದ್ಧನಾಗು ಎಂದ ಬ್ರಾಹ್ಮಣ ಅರಮನೆಯಿಂದ ಹೊರಟು ಹೋದ.

ಅಷ್ಟರಲ್ಲಿ ದಾನವಗುರು ಶುಕ್ರಾಚಾರ್ಯನಿಗೆ ಈ ವಿಚಾರ ತಿಳಿಯುತ್ತದೆ. ತನ್ನ ದಿವ್ಯದೃಷ್ಟಿಯಿಂದ ಎಲ್ಲವನ್ನೂ ತಿಳಿದುಕೊಂಡ ಶುಕ್ರಾಚಾರ್ಯನು ಬ್ರಾಹ್ಮಣನಿಗೆ ದಾನ ಮಾಡದಿರುವಂತೆ ಚಕ್ರವರ್ತಿಗೆ ಸಲಹೆ ಮಾಡುತ್ತಾನೆ. ಬಂದವನು ಬಾಲಬ್ರಾಹ್ಮಣ ರೂಪದ ನಾರಾಯಣ ಎಂದು ತಿಳಿ ಹೇಳುತ್ತಾನೆ. ಕೊಟ್ಟ ಮಾತಿಗೆ ತಪ್ಪಲಾರೆನೆಂದ ಬಲಿ ಮರುದಿನ ಮಾಡಲಿರುವ ದಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾನೆ.

ಮುಂದುವರಿದಿದೆ ಪುಟ 2

webdunia
PTI
ಬಲಿಯೇಂದ್ರ ದಂಪತಿ ಶುಚೀರ್ಭೂತರಾಗಿ ಮಡಿಯುಟ್ಟು ಶುಭ್ರ ಮನಸ್ಸಿನಿಂದ ಸಕಲ ಮರ್ಯಾದೆಯನ್ನೂ ನೀಡಿ ಬ್ರಾಹ್ಮಣನನ್ನು ಬರಮಾಡಿಕೊಂಡರು. ದಾನ ಮಾಡಲು ಕೊಂಬಿನ ಗಿಂಡಿಯೂ ಸಿದ್ಧವಾಯಿತು. ಭೂಮಿಯನ್ನು ಧಾರೆಯೆರೆಯಲು ದಂಪತಿ ಕೊಂಬಿನ ಗಿಂಡಿ ಹಿಡಿದು ನಿಂತಾಗ ಅದರಿಂದ ನೀರು ಹೊರ ಬರಲೇ ಇಲ್ಲ. ಆಗ ಬ್ರಾಹ್ಮಣ ರೂಪಿ ಶ್ರೀಮನ್ನಾರಾಯಣನು ದರ್ಭೆ ಕಡ್ಡಿ ತೆಗೆದು ಕೊಂಬಿನ ಗಿಂಡಿಯಿಂದ ತೀರ್ಥ ಬರುವುದನ್ನು ತಡೆಯಲು ಅಡ್ಡ ಕೂತಿದ್ದ ಕಪ್ಪೆ ರೂಪದ ಶುಕ್ರಾಚಾರ್ಯನಿಗೆ ಚುಚ್ಚುತ್ತಾನೆ. ತಕ್ಷಣವೇ ನೀರಿನ ಬದಲು ಕೊಂಬಿನ ಗಿಂಡಿಯಿಂದ ರಕ್ತ ಸುರಿಯಲಾರಂಭಿಸುತ್ತದೆ. ಹೆದರಿದ ಬಲಿಯು ತನ್ನಿಂದೇನಾದರೂ ತಪ್ಪಾಯಿತೇ ಎಂದು ವಾಮನನ್ನು ಪ್ರಶ್ನಿಸಿದಾಗ, ಶುಕ್ರಾಚಾರ್ಯ ದಾನ ಕೈಂಕರ್ಯಕ್ಕೆ ಅಡ್ಡ ನಿಂತಿದ್ದ ವಿಚಾರವನ್ನು ಹೇಳುತ್ತಾನೆ. ದಾನ ಧಾರೆಯೆರೆಯುವ ಕರ್ಮ ಸಮಾಪ್ತಿಯಾಗಿರುತ್ತದೆ. ಆದರೆ ಬ್ರಾಹ್ಮಣ ಚುಚ್ಚಿದ ದರ್ಭೆ ಕಡ್ಡಿಯಿಂದ ಕಪ್ಪೆ ರೂಪದಲ್ಲಿದ್ದ ಶುಕ್ರಾಚಾರ್ಯ ಒಂದು ಕಣ್ಣನ್ನೇ ಕಳೆದುಕೊಂಡಿರುತ್ತಾನೆ. (ಈಗಲೂ ಜಾತಕದಲ್ಲಿ ಶುಕ್ರದೆಸೆ ಆರಂಭವಾಯಿತೆಂದರೆ ಸೋಲು ಮತ್ತು ವ್ಯಕ್ತಿಗೆ ದೃಷ್ಟಿದೋಷವಿದೆ ಎಂಬುದನ್ನು ಬೊಟ್ಟು ಮಾಡಲಾಗುತ್ತದೆ).

ತಕ್ಷಣ ವಾಮನರೂಪಿ ಬ್ರಾಹ್ಮಣ ವಿಶ್ವರೂಪಿ ಶ್ರೀಮನ್ನಾರಾಯಣನಾಗಿ ಬದಲಾಗುತ್ತಾನೆ. ಕೊಟ್ಟ ಮಾತಿನಂತೆ ಬಲಿ ಚಕ್ರವರ್ತಿ ಮೂರು ಹೆಜ್ಜೆ ಭೂಮಿಯನ್ನು ನೀಡಬೇಕಾಗಿರುವುದರಿಂದ ಮೊದಲ ಹೆಜ್ಜೆಯನ್ನು ಭೂಮಿಗೆ ಇಡುತ್ತಾನೆ. ಪೂರ್ತಿ ಭೂಮಿ ಅವನ ಪಾದಕ್ಕೆ ಮುಗಿದುಹೋಗುತ್ತದೆ. ಎರಡನೇ ಹೆಜ್ಜೆಯನ್ನು ಆಕಾಶಕ್ಕಿಡುತ್ತಾನೆ. ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಬಲಿಯನ್ನು ವಿಷ್ಷು ಪ್ರಶ್ನಿಸುತ್ತಾನೆ. ಆಗ ಬಲಿಯು ತನ್ನ ತಲೆಯ ಮೇಲೆ ಇಡುವಂತೆ ಹೇಳುತ್ತಾನೆ. ವಾಮನಮೂರ್ತಿ ತಲೆಯ ಮೇಲೆ ಕಾಲಿಟ್ಟ ಕೂಡಲೇ ಬಲಿಯೇಂದ್ರ ಪಾತಾಳಲೋಕಕ್ಕೆ ತಳ್ಳಲ್ಪಡುತ್ತಾನೆ. ತೂತಾದ ದೋಣಿ, ತುಂಡಾದ ಹುಟ್ಟನ್ನು ಕೊಟ್ಟು ಪಾತಾಳಕ್ಕೆ ಕಳುಹಿಸುವಾಗಲೂ ಪ್ರಸನ್ನವದನನಾಗಿಯೇ ಎಲ್ಲವನ್ನೂ ಸ್ವೀಕರಿಸುವ ಬಲಿಯೇಂದ್ರನಿಗೆ ಭಗವಂತನನ್ನು ಕಣ್ಣಾರೆ ಕಂಡ ಸಂತಸವುಂಟಾಗಿ ಮೋಕ್ಷ ಸಿಕ್ಕಿತು ಎಂದುಕೊಳ್ಳುತ್ತಾನೆ. (ಕಲಿಯನ್ನು ಶೀಘ್ರ ಭೂಲೋಕಕ್ಕೆ ಕರೆಸುವ ಯಾಗದ ಪೂರ್ಣಾಹುತಿ ನಡೆಯುವುದಿಲ್ಲ)

ಆದರೆ ಪಾತಾಳ ದಾರಿಯಲ್ಲಿ ಸ್ವಲ್ಪ ದೂರ ಕ್ರಮಿಸುವಾಗ ಬಲಿಯು ಕಣ್ಣೀರು ಸುರಿಸುತ್ತಾನೆ. ವಿಶ್ವರೂಪ ನೋಡಿದ್ದೀಯಾ... ಭಾಗ್ಯ ಎಂದು ಕೊಂಡಿದ್ದಿ... ಮೋಕ್ಷವೂ ಸಿಕ್ಕಿದೆ ಎಂದ ಮೇಲೆ ನಿನಗೆ ಸ್ವರ್ಗ ಖಚಿತ. ಮತ್ಯಾಕೆ ಕಣ್ಣೀರು ಎಂದು ವಿಷ್ಣು ಪ್ರಶ್ನಿಸಲು, ಬಲಿಯೇಂದ್ರ "ಈ ಊರು, ಈ ಜನರನ್ನು ನಾನು ಇನ್ಯಾವಾಗ ನೋಡಲಿ. ಅವರ ಪ್ರೀತಿಯಿಂದ ನಾನು ವಂಚಿತನಲ್ಲವೇ?" ಎನ್ನುತ್ತಾನೆ. ಆಗ ವಿಷ್ಣುವು "ವರ್ಷಕ್ಕೊಮ್ಮೆ ಆಟಿ ತಿಂಗಳ ಅಮವಾಸ್ಯೆಗೆ ತಾಯಿಯನ್ನು, ಸೋಣ ಸಂಕ್ರಮಣದಂದು ಆಳನ್ನು ಕಳುಹಿಸು, ದೀಪಾವಳಿ ಅಮವಾಸ್ಯೆಯಂದು ನೀನೇ ಸ್ವತ: ನೀನೇ ಬಂದು ಬಲಿಯನ್ನು ಸ್ವೀಕರಿಸಿ, ನಿನ್ನ ಊರಿನ-ಜನರ ಕ್ಷೇಮ ಸಮಾಚಾರ ತಿಳಿದುಕೋ. ದೀಪಾವಳಿ ಆಚರಿಸದವನಿಗೆ ದರಿದ್ರ ಬರಲಿ" ಎಂದು ಬಲಿಯೇಂದ್ರನನ್ನು ಹರಸಿ ವಿಷ್ಣು ಮಾಯವಾಗುತ್ತಾನೆ.

ಈ ದಿನವನ್ನೇ ನಾವು ಬಲಿಪಾಡ್ಯಮಿ ಎಂದು ಆಚರಿಸುವುದು ಪ್ರತೀತಿ. ಈ ದಿನವನ್ನು ಅಯ್ಯೋಧ್ಯಾಧಿಪತಿ ಶ್ರೀರಾಮ ಸೀತೆ, ಲಕ್ಷ್ಮಣರೊಡಗೂಡಿ ವನವಾಸ ಮುಗಿಸಿ ವಾಪಾಸು ಬಂದ ದಿನವೆಂದೂ ಉತ್ತರ ಭಾರತದೆಡೆ ಆಚರಿಸಲಾಗುತ್ತದೆ. ಕೇರಳದಲ್ಲಿ 'ಓಣಂ' ಹಬ್ಬದ ಹೆಸರಿನಲ್ಲೂ ಬಲಿಯನ್ನು ನೆನೆಯಲಾಗುತ್ತದೆ. ಬಲೀಂದ್ರನನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಎಲ್ಲರೂ ಆರಾಧಿಸುತ್ತಾರೆ.

ತುಳುನಾಡಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಬಲಿಯೇಂದ್ರ ಮರ ಹಾಕುವುದು ಪ್ರತಿ ಮನೆಯಲ್ಲಿ ಸಾಮಾನ್ಯ. ವ್ಯವಸಾಯ ಪರಿಕರಗಳಾದ ನೊಗ, ನೇಗಿಲು, ಹಾರೆ, ಪಿಕ್ಕಾಸು, ಹಟ್ಟಿಗೊಬ್ಬರ ತೆಗೆಯುವ ಬುಟ್ಟಿ-ಮುಳ್ಳಿನ ಪಿಕ್ಕಾಸು, ಮುಟ್ಟಾಳೆ, ಕತ್ತಿ, ಕಳಸೆ, ಸೇರು, ಪಾವು, ಸೆಗಣಿ ಮೆತ್ತಿದ ಬುಟ್ಟಿಗಳನ್ನು ಶುಚಿಗೊಳಿಸಿ ಒಂದೆಡೆ ಒಪ್ಪ ಓರಣವಾಗಿ ಜೋಡಿಸಿ ಕಾಡಿನಲ್ಲಿ ದೊರೆಯುವ ಹಲವು ಬಗೆಯ ಹೂ-ಬಳ್ಳಿಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವುದು ಈಗಲೂ ನಡೆಯುತ್ತದೆ. ಮೂರು ದಿನಗಳ ಕಾಲ ದೀಪವನ್ನು ಉರಿಸಿ ಬಲಿಯೇಂದ್ರನನ್ನು ನೆನೆಯಲಾಗುತ್ತದೆ. ಭತ್ತದ ರಾಶಿ, ಗದ್ದೆ, ತೋಟ, ಹಟ್ಟಿ ಗೊಬ್ಬರದ ಗುಂಡಿಗಳಲ್ಲಿ ಅಗೆಲು ಹಾಕುತ್ತಾರೆ. ಗೋವುಗಳನ್ನು ಸ್ನಾನ ಮಾಡಿಸಿ ಮೈಯೆಲ್ಲಾ ಎಳ್ಳೆಣ್ಣೆ ಪೂಸಲಾಗುತ್ತದೆ. ನಂತರ ಹೂ ಮಾಲೆ ಹಾಕಿ, ಕಾಲಿಗೆ ನೀರು ಹೊಯ್ದು, ಆರತಿ ಮಾಡಿ, ಅಗೆಲು ಕೊಟ್ಟು ಪೂಜಿಸುತ್ತಾರೆ. ಇತ್ತೀಚಿನ ದಿನಗಳ ನಗರೀಕರಣದ ಪ್ರಭಾವದಿಂದಾಗಿ ಇಂತಹ ಆಚರಣೆಗಳು ಕ್ಷೀಣಿಸಿದರೂ ಪೂರ್ತಿಯಾಗಿ ನಿಂತಿಲ್ಲ ಎನ್ನುವುದು ಸಮಾಧಾನಕರ.

ಈ ಸಂದರ್ಭ ಪಟಾಕಿ, ಬಾಣ-ಬಿರುಸುಗಳ ಸದ್ದು-ಗದ್ದಲ ಕೇಳದ-ಕಾಣದ ಮನೆ ಬೀದಿಗಳೇ ಇರುವುದಿಲ್ಲ. ಅಲ್ಲಲ್ಲಿ ಎಣ್ಣೆ ದೀಪ, ಹಣತೆಗಳನ್ನು ಉರಿಸಿಟ್ಟು ದೀಪಗಳ ಹಬ್ಬ ದೀಪಾವಳಿ ಎಂದು ಆಚರಿಸಲಾಗುತ್ತದೆ. ಜಾತಿ, ಮತ, ಬೇಧವಿಲ್ಲದೆ ಎಲ್ಲರೂ ಸಂಭ್ರಮವನ್ನಾಚರಿಸುವುದು ದೀಪಾವಳಿ ವಿಶೇಷ. ನರಕಚತುರ್ದಶಿ, ಲಕ್ಷ್ಮಿಪೂಜೆ ಮತ್ತು ಬಲಿಪಾಡ್ಯಮಿಯನ್ನು ಭಕ್ತಿಯಿಂದ ಆಚರಿಸಿದರೆ ಸಕಲ ಕಷ್ಟಗಳೂ ಪರಿಹಾರವಾಗುವುದೆಂಬ ನಂಬಿಕೆಯಿದೆ.

ನಮಗಂತೂ ದೀಪಾವಳಿ ಸಂಭ್ರಮ ಯಾವತ್ತೂ ಮೇರೆ ಮೀರಿರುತ್ತದೆ. ಆದರೆ ಈ ಬಾರಿ ಯಾವುದೂ ಇಲ್ಲ. ಹುಳಿ ದೋಸೆ, ಅವಲಕ್ಕಿ ಬೆಲ್ಲ-ಕಜ್ಜಾಯ, ಬಾಳೆಹಣ್ಣು ಇತರ ತಿಂಡಿಗಳ ಸಹಿತ ಪಟಾಕಿಯನ್ನೂ ಮಿಸ್ ಮಾಡಿಕೊಂಡಿದ್ದೇವೆ.

ನೀವು ಮಿಸ್ ಮಾಡಿಕೊಂಡಿಲ್ಲ ತಾನೇ?

Share this Story:

Follow Webdunia kannada