Select Your Language

Notifications

webdunia
webdunia
webdunia
webdunia

ಭಾರತದ ಆರ್ಥಿಕ ಶಕ್ತಿ ಇದೀಗ ನಾಲ್ಕು ಟ್ರಿಲಿಯನ್ ಡಾಲರ್..!

ಭಾರತದ ಆರ್ಥಿಕ ಶಕ್ತಿ ಇದೀಗ ನಾಲ್ಕು ಟ್ರಿಲಿಯನ್ ಡಾಲರ್..!
2007 ಭಾರತೀಯ ವಾಣಿಜ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪರ್ವಕಾಲವಾಗಿತ್ತು. ಹತ್ತು ವರ್ಷಗಳ ಸತತ ಪರಿಶ್ರಮ, ಸಂಕಷ್ಟ, ತಾಳ್ಮೆ, ಸಹನೆ ಎಲ್ಲವೂ ಫಲಿತಗೊಂಡ ವರ್ಷವಿದು. ವಿದೇಶಿ ನೇರ ಬಂಡವಾಳಗಾರರ ದೃಷ್ಟಿ ಭಾರತದೆಡೆಗೆ ಬಿದ್ದಿದ್ದೇ ತಡ, ಒಂದೇ ವರ್ಷದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಬದಿಗೊತ್ತಿ, ಭರ್ಜರಿಯಾಗಿ ಮುನ್ನುಗ್ಗಿದೆ. ಒಂದು ವರ್ಷದ ಹಿನ್ನೋಟವನ್ನು ಗಮನಿಸಿದಾಗ ನಾವು ಜಾರಿದ್ದಕ್ಕಿಂತ ಏರಿದ್ದೇ ಹೆಚ್ಚು.

ಹೌದು, "ಒಂದು ಗೆಲುವು ನೂರು ಸೋಲುಗಳನ್ನು ಮರೆಸುತ್ತದೆ" ಎನ್ನುವ ಗಾದೆಯಂತೆ, ಒಂದು ಕಾಲದಲ್ಲಿ ಜನಸಂಖ್ಯಾ ಹೆಚ್ಚಳದಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಗಿ ಸೋಲುಂಡಿದ್ದ ಭಾರತ, ಇಂದು ಜಗತ್ತೇ ಆಶ್ಚರ್ಯಪಡುವ ರೀತಿಯಲ್ಲಿ ಆರ್ಥಿಕ ಸುಧಾರಣೆ ಕಂಡುಕೊಂಡು ಗೆಲುವನ್ನು ಸಾಧಿಸಿ ಹೆಮ್ಮೆಯಿಂದ ಬೀಗುತ್ತಿದೆ.

ಇದಕ್ಕೆ ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ಆರ್ಥಿಕ ತಜ್ಞ ಮತ್ತು ಚತುರ ವಿತ್ತ ಸಚಿವ ಪಳನಿಯಪ್ಪನ್ ಚಿದಂಬರಂ, ಮತ್ತೋರ್ವ ಆರ್ಥಿಕ ತಜ್ಞ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಸೇರಿದಂತೆ ಸಾವಿರಾರು ನಾಯಕರುಗಳ ನೂರಾರು ದೃಷ್ಟಿಕೋನಗಳು ಕಾರಣವಿರಬಹುದು.

ಇದಕ್ಕೆ ಪೂರಕವೆಂಬಂತೆ ನಮ್ಮ ಹಣಕಾಸು ಸಚಿವರು ಅಂಕಿ ಅಂಶಗಳ ಮಾಹಿತಿಯನ್ನು ಒದಗಿಸುತ್ತಾರೆ. ನಾಗಾಲೋಟದ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ಭಾರತ, ಪ್ರಸಕ್ತ ವರ್ಷದಲ್ಲಿ ತನ್ನ ಆರ್ಥಿಕತೆಯನ್ನು 4 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸಿಕೊಂಡಿದ್ದು, ಖರೀದಿಶಕ್ತಿ (ಪರ್ಚೇಸಿಂಗ್ ಪವರ್) ಮತ್ತು ಪಿಪಿಪಿ ಆಧಾರದ ಮೇಲೆ ಈ ಅಂಕಿ ಅಂಶಗಳು ದೇಶದ ಆರ್ಥಿಕ ಅಭಿವೃದ್ಧಿ ಪಥವನ್ನು ಸಕಾರಾತ್ಮಕವಾಗಿ ತೋರಿಸುತ್ತವೆ ಎನ್ನುತ್ತಾರೆ ಚಿದಂಬರಂ.

1950-51ರಲ್ಲಿ ಮಾರುಕಟ್ಟೆ ದರದಲ್ಲಿ 20 ಶತಕೋಟಿ ಡಾಲರ್ ಇದ್ದ ಜಿಡಿಪಿ ದರ, 2006-07ರ ಇಲ್ಲಿಯವರೆಗೆ 912 ಶತಕೋಟಿ ಡಾಲರ್ ತಲುಪಿದ್ದು, ವರ್ಷಾಂತ್ಯದ ವೇಳೆಗೆ ಒಂದು ಟ್ರಿಲಿಯನ್ ಗುರಿ ದಾಟುವ ನಿರೀಕ್ಷೆ ಇದೆ ಎಂಬ ಆಶಾಭಾವನೆಯನ್ನು ಅವರು ಹೊಂದಿದ್ದಾರೆ.

ಈ ಪಿಪಿಪಿ ಆರ್ಥಿಕ ಅಭಿವೃದ್ಧಿ ದರವನ್ನು ವಿವಿಧ ದೇಶಗಳ ಕರೆನ್ಸಿಗಳ ಖರೀದಿ, ಸಾಮಗ್ರಿಗಳ ಸರಾಸರಿ ದರಮತ್ತು ವಿವಿಧ ದೇಶಗಳ ನಡುವಿನ ಹಣಕಾಸು ಸೇವೆಗಳ ಆಧಾರದ ಮೇಲೆ ಅಳೆಯಲಾಗುವುದು ಎನ್ನಾತ್ತಾರೆ ಅವರು.

1999-2000 ದಿಂದ 2004-05ರವರೆಗೆ ಭಾರತ ಪ್ರತಿವರ್ಷ 12 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಇದು ಅಸಾಧಾರಣವಾದ ಸಾಧನೆ ಎಂದು ಹೆಮ್ಮೆಯಿಂದ ಹೇಳುವ ಅವರು, ಇಂದಿನ ದಿನಮಾನಗಳಲ್ಲಿ ಉದ್ಯೋಗ ಅಭಿವೃದ್ಧಿ ದರ ವರ್ಷದಿಂದ ವರ್ಷಕ್ಕೆ ಶೇಕಡಾ 2.9ರಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ.

ಚೀನಾದ ನಂತರ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವೆಂಬ ಖ್ಯಾತಿಯನ್ನು ಭಾರತ, ಬ್ರೆಜಿಲ್ ದೇಶದೊಂದಿಗೆ ಹಂಚಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲಾಗುವುದು, ಇದಕ್ಕೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದಿದ್ದಾರವರು.

ಹೆಚ್ಚುತ್ತಿರುವ ಆರ್ಥಿಕತೆಯಿಂದಾಗಿ ಭಾರತದ ಬಡತನವನ್ನು ಕ್ರಮೇಣವಾಗಿ ಹೋಗಲಾಡಿಸಲು ಶ್ರಮಿಸುತ್ತಿದ್ದು, 1977- 78ರ ಹೊತ್ತಿಗೆ ಶೇಕಡಾ 51.3ರಷ್ಟಿದ್ದ ಭಾರತದ ಬಡತನದ ಪ್ರಮಾಣ 2004-05ರ ವೇಳೆಗೆ ಶೇಕಡಾ 22ಕ್ಕೆ ಇಳಿದಿದ್ದು, ಇದೊಂದು ಅದ್ವಿತೀಯ ಸಾಧನೆ ಎಂದು ಹೆಮ್ಮೆಯಿಂದ ಬೀಗುತ್ತಾರೆ.

Share this Story:

Follow Webdunia kannada