Select Your Language

Notifications

webdunia
webdunia
webdunia
webdunia

ಕನ್ನಡ ಉತ್ಸವ- ಆಗಲಿದು ನಿತ್ಯೋತ್ಸವ!

ಕನ್ನಡ ಉತ್ಸವ- ಆಗಲಿದು ನಿತ್ಯೋತ್ಸವ!
WD
ಚಂದ್ರಾವತಿ ಬಡ್ಡಡ್

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಅದರದೇ ಆದ ಇತಿಹಾಸವಿದೆ, ಸಂಸ್ಕೃತಿ ಇದೆ, ಸೊಗಡಿದೆ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿಕೊಂಡಿರುವ ಏಕೈಕ ಭಾರತೀಯ ಭಾಷೆ ಎಂಬ ಹೆಗ್ಗಳಿಕೆಯೂ ಇದೆ.

'ಕನ್ನಡ ರಾಜ್ಯ ಉತ್ಸವ' ಒಂದೇ ದಿನ ಅಥವಾ ಒಂದೇ ತಿಂಗಳು ಆಚರಿಸಿದರೆ ಸಾಕೇ? ಇಲ್ಲ. ಕನ್ನಡ ಉತ್ಸವ- ಅದು ನಿತ್ಯೋತ್ಸವ! ಕರ್ನಾಟಕದಲ್ಲಿ ಮಾತ್ರವಲ್ಲ, ಎಲ್ಲೆಲ್ಲ ಕನ್ನಡ ಇದೆಯೋ ಅಲ್ಲೆಲ್ಲ ಅದು ಬೆಳಗುತ್ತಿದೆ.

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮನ್ನಣೆ ಇಲ್ಲ ಎಂಬ ಕೂಗು ಕೇಳುತ್ತಲೇ ಬಂದಿದ್ದೇವೆ. ಆದರೆ ಇದಕ್ಕೆ ನೆಟ್ಟಗಿನ ಎಲ್ಲರೂ ಒಪ್ಪುವಂತಹ ಒಮ್ಮತದ ಪರಿಹಾರ ಇನ್ನೂ ಮೂಡಿ ಬಂದಿಲ್ಲ. ಕನ್ನಡಾಭಿಮಾನ ಅಥವಾ "ಕನ್ನಡ ಉಳಿಸೋ, ಬೆಳೆಸೋ ಆಂದೋಲನ ಅಂದರೆ ಇತರೇ ಭಾಷೆಗಳ ವಿರೋಧವೇ" ಎಂದು ಪ್ರಶ್ನೆ ಮಾಡುವಂತಹ ಬೆಳವಣಿಗೆಗಳು ಕಾಣಿಸಿಕೊಳ್ಳುತ್ತವೆ.

ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಆರಂಭಿಸುವ ಸರಕಾರದ ನಿರ್ಧಾರಕ್ಕೆ ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳನ್ನು ಕೇಳಿದ್ದೇವೆ. ಇಷ್ಟಕ್ಕೂ ಸರಕಾರ ಸಂಪೂರ್ಣ ಬೋಧನಾ ಮಾಧ್ಯಮವನ್ನು ಆಂಗ್ಲೀಕರಿಸಿಲ್ಲ. ಬದಲಿಗೆ ಐದನೆ ತರಗತಿಯಲ್ಲಿ ಆರಂಭಗೊಳ್ಳುತ್ತಿದ್ದ ಎ, ಬಿ, ಸಿ, ಡಿ ಒಂದನೇ ತರಗತಿಯಿಂದ ಆರಂಭ ಅಷ್ಟೆ. ಸಾಮಾನ್ಯವಾಗಿ ಸರಕಾರಿ ಶಾಲೆಗಳಿಗೆ ತೆರಳೋದು ಸಿರಿವಂತರ ಮಕ್ಕಳಲ್ಲ. ಆರ್ಥಿಕವಾಗಿ ಬಡವರ ಮಕ್ಕಳು. ಪುಸ್ತಕದ ಹೊರೆ, ಯೂನಿಫಾರಂ ಕೊಡಿಸಲು ಕಷ್ಟವಾದವರು ಅಥವಾ ತೀರಾ ಕುಗ್ರಾಮದವರು.

ಜಾಗತೀಕರಣದ, ಅಭಿವೃದ್ಧಿಯ ತುಡಿತದ ಕೊಡುಗೆಯಾಗಿ ನೇರ ಬಂಡವಾಳ ಹೂಡಿಕೆಗೆ ನಮ್ಮರಾಷ್ಟ್ರ ತೆರೆದುಕೊಂಡಿರುವ ಫಲವಾಗಿ, ಇಂಗ್ಲಿಷ್ ಭಾಷೆಯೇ ಮುಖ್ಯವಾಗಿರುವ ಬಹುರಾಷ್ಟ್ರೀಯ ಕಂಪೆನಿಗಳು ಧಾಂಗುಡಿ ಇಟ್ಟಿವೆ. ಇವುಗಳಲ್ಲಿರುವ ಆರ್ಥಿಕಾನುಕೂಲತೆಗಳ ಸೆಳೆತಕ್ಕೆ ಒಳಗಾಗುವುದು ಮಾನವ ಸಹಜ ಗುಣ. ಹೀಗಿರುವಾಗ ಬೇರೆ ಭಾಷೆಯನ್ನು ವಿರೋಧಿಸುವುದರ ಬದಲು, ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವುದರತ್ತ ಗಮನ ಹರಿಸುವುದು ಒಳಿತಲ್ಲವೇ?

ಒಂದು ವಿಷಯ ಗಮನಿಸಬೇಕು. ಕನ್ನಡದಲ್ಲೇ ಪರೀಕ್ಷೆಗಳನ್ನು ಬರೆದವರಿಗೆ ಸರಕಾರ ಅಥವಾ ಇತರ ಯಾವುದೇ ಸಂಸ್ಥೆಗಳು ಆದ್ಯತೆಯಿಂದ ಉದ್ಯೋಗ ನೀಡಿದ ಉದಾಹರಣೆಗಳು ಇಲ್ಲ. ಸಾಕಷ್ಟು ಪರಾಮರ್ಶನ ಸಾಮಾಗ್ರಿಗಳು ಇಲ್ಲದಾಗಲೂ ಕನ್ನಡದಲ್ಲೇ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳೊಂದಿಗೆ ಪಡೆದು ಪಾಸಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಯಾರಾದರೂ, ಅಥವಾ ಯಾವುದಾದರೂ ಸಂಘಟನೆಗಳು ಮಾಡುತ್ತಿವೆಯಾ? ಎಲ್ಲೋ ಅಲ್ಲೊಂದು ಇಲ್ಲೊಂದು ಇದ್ದಿರಬಹುದು!

ಬದಲಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುತ್ತೇನೆ ಎಂದಾಗ ಇಂಗ್ಲೀಷ್ ಬರೋದಿಲ್ವೇ ಎಂಬ ತಾತ್ಸಾರ ಸಹಪಾಠಿಗಳಿಂದ. ಕೆಲವೊಮ್ಮೆ ಇಂತಹ ವಿದ್ಯಾರ್ಥಿಗಳನ್ನು ತುಚ್ಛೀಕರಿಸುವ ಅಧ್ಯಾಪಕರುಗಳೂ ಇದ್ದಾರೆ. ಎಲ್ಲಿ ಒಂದು ಪ್ರೋತ್ಸಾಹದ ಮಾತಿಗಾಗಿ ನೀವು ಎದುರು ನೋಡುತ್ತೀರೋ ಅಲ್ಲಿಯೇ ನಿಮ್ಮನ್ನು ಹೀಗಳೆದರೆ, ತಾತ್ಸಾರ ಮಾಡಿದಲ್ಲಿ ನಿಮ್ಮ ಮನಸ್ಥಿತಿ ಹೇಗಾಗಬಹುದು?

ಇಲ್ಲಿ ನಾನು ಕನ್ನಡವನ್ನು ಕಡೆಗಣಿಸಿ ಇತರ ಭಾಷೆಯನ್ನು ಅರಗಿಸಿಕೊಳ್ಳಬೇಕೆಂದು ವಾದಿಸುತ್ತಿಲ್ಲ. ಪ್ರಸಕ್ತ ಕಾಲಾವಸ್ಥೆಯಲ್ಲಿ ಕನ್ನಡಕ್ಕೆ ಈ ಸ್ಥಿತಿ ಉಂಟಾಗಲು ಕಾರಣ ಎಂಬುದರತ್ತ ಯೋಚಿಸಬೇಕು. ಇಂದು ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದರೆ, ಇವರಲ್ಲಿ ಎಷ್ಟೋ ಮಂದಿ, ನಾವು ಅನುಭವಿಸಿದ ಸಂಕಟ ನಮ್ಮ ಮಕ್ಕಳು ಅನುಭವಿಸಬಾರದು ಅಂತನ್ನುವುದನ್ನು ಕಿವಿಯಾರೆ ಕೇಳಿದ್ದೇನೆ. ಇಂಗ್ಲಿಷ್ ಶಾಲೆಗಳಿಗೆ ತೆರಳುವ ಮಕ್ಕಳಿಗೆ ಕನ್ನಡವನ್ನು ತಾವೇ ಹೇಳಿಕೊಡುವ ಹೆತ್ತವರು ಅನೇಕರಿದ್ದಾರೆ. ಯಾಕೆಂದರೆ ಭವಿಷ್ಯದ ಭದ್ರತೆಗೆ ಇಂಗ್ಲಿಷ್, ಮಾತೃಭಾಷೆಯ ತುಡಿತಕ್ಕಾಗಿ ಕನ್ನಡ.

ಭಾಷಾಭಿಮಾನ ಅಂದಾಗ ನಾವು ತಟಕ್ಕನೆ ತಮಿಳರನ್ನು ನೋಡಿ ಕಲೀಬೇಕು ಅಂತೇವೆ. ರಾಜಕೀಯ ಪುಢಾರಿಗಳ ನವೆಂಬರ್ ಭಾಷಾಭಿಮಾನವನ್ನು ಬದಿಗೊತ್ತಿ. ನಮ್ಮಂತಹ ಜನಸಾಮಾನ್ಯರ ಉದಾಹರಣೆಯನ್ನು ತೆಗೆದುಕೊಂಡಾಗ, ಅಲ್ಲಿಯೂ ಭಾಷಾ ಹಿಂಜರಿಕೆಯಿಂದ ತಳಮಳ ಪಡುವವರು ಅನೇಕ ಮಂದಿ ಇದ್ದಾರೆ. ತಮಿಳು ಬಿಟ್ಟರೆ ಬೇರೆ ಯಾವ ಭಾಷೆಯ ಗೊಡವೆಗೂ ಹೋಗದ ಅವರೆದುರು ಕನ್ನಡ ಮಾತಾಡಿದರೆ "ಇದ್ ಕನ್ನಡಮಾ ಇಲ್ಲೆ ತೆಲ್ಲುಂಗಾ" ಅಂತ ಕೇಳುವ, ಭಾಷಾ ವ್ಯತ್ಯಾಸವನ್ನು ಗೊತ್ತು ಪಡಿಸಿಕೊಳ್ಳಲಾರದವರೂ ಇದ್ದಾರೆ.

ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನಗಳ ಕುರಿತು ಸಾಕಷ್ಟು ಸಾಮಾಗ್ರಿಗಳು ಇಲ್ಲ ಎಂಬ ಅಳಲೂ ಇದೆ. ಕನ್ನಡ ಸಾಹಿತ್ಯವೂ ಇವುಗಳನ್ನು ಹೊರಗಿಟ್ಟಂತೆ ಕಾಣುತ್ತದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಹಾಸ್ಯ ಸಾಹಿತ್ಯ... ಎಂಬೆಲ್ಲ ಗೋಷ್ಠಿಗಳಿರುವಂತೆ ವಿಜ್ಞಾನ ಸಾಹಿತ್ಯ ಯಾಕಿಲ್ಲ ಎಂಬ ಪ್ರಶ್ನೆಯನ್ನು ಕನ್ನಡ ತಂತ್ರಾಂಶ ಕ್ಷೇತ್ರದಲ್ಲಿ ಮೊದಲ ಹೆಸರಾಗಿರುವ ಡಾ. ಪವನಜ ಅವರು ಸೂಕ್ತವಾಗಿಯೇ ಎತ್ತಿದ್ದಾರೆ.

ನಮ್ಮದೇ ಭಾಷೆಯಲ್ಲಿ ಮಾತಾಡೋಣ, ಅದರ ಕಂಪನ್ನು ಹರಿಸೋಣ, ಕಥೆಗಳನ್ನು ಹೆಣೆಯೋಣ, ಕವಿತೆಗಳನ್ನು ಕಟ್ಟೋಣ. ಮಾಹಿತಿ ತಂತ್ರಜ್ಞಾನದ ಕ್ಷಿಪ್ರ ವೃದ್ಧಿ ಜಗತ್ತಿನಾದ್ಯಂತ ಕನ್ನಡ ಕಂಪನ್ನು ಬೀರುತ್ತಿದೆ. ಗೂಗಲ್ ತಾಣ ಅಥವಾ ಅಂತರ್ಜಾಲದ ಯಾವುದೇ ಶೋಧ ಯಂತ್ರವನ್ನು ಬಳಸಿ ಒಮ್ಮೆ ನೀವು 'ಕನ್ನಡ' ಅಂತ ಬೆರಳಚ್ಚಿಸಿ ನೋಡಿ. ಪುಟದ ತುಂಬ ಎಷ್ಟೊಂದು ಕನ್ನಡಗಳು ಬಿಚ್ಚಿಟ್ಟುಕೊಳ್ಳುತ್ತದೆ! ಪುಟ ತುಂಬ ಕನ್ನಡ ಕನ್ನಡ ಕನ್ನಡ...

ಇದೆಲ್ಲ ಸರಿ, ಆದರೆ ಕನ್ನಡ ರಾಜ್ಯವಾಗಿರುವ ಇಡೀ ಕರ್ನಾಟಕಕ್ಕೆ ಏಕರೀತಿಯ ಕನ್ನಡ ಇದೆಯಾ? ಆಡು ಭಾಷೆಯ ಮೇಲೆ ಆಯಾ ಪ್ರಾಂತ್ಯಗಳು ಪ್ರಭಾವ ಬೀರುತ್ತವೆ ಎಂದಾದರೆ, ಕನಿಷ್ಠಪಕ್ಷ ಪಠ್ಯ ಕನ್ನಡವನ್ನು ಏಕರೀತಿಯಾಗಿಸಲು ಸಾಧ್ಯವಿಲ್ಲವೇ? ಉತ್ತರ ಕರ್ನಾಟಕದ, ಇಲ್ಲ ದಕ್ಷಿಣ ಕರ್ನಾಟಕದ ಅಥವಾ ಹಳೆ ಮೈಸೂರು ಪ್ರಾಂತ್ಯದ್ದು ಯಾವುದಾದರೂ ಸರಿ ಒಂದೇ ಕನ್ನಡವನ್ನು ಬಳಸಲು ಅಥವಾ ಒಪ್ಪಿಕೊಳ್ಳಲು ನಮಗೇಕೆ ಸಾಧ್ಯವಾಗುತ್ತಿಲ್ಲ? ನನ್ನ ಪುಟ್ಟ ಗೆಳತಿಯೊಬ್ಬಳಿದ್ದಳು. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾವು ಒಂದೇ ಕಡೆಯಲ್ಲಿ ತಂಗುತ್ತಿದ್ದೆವು ಮತ್ತು ಒಂದೇ ಡಬ್ಬದಲ್ಲಿ ಊಟ ಒಯ್ದು ಒಟ್ಟಿಗೆ ಊಟಮಾಡುತ್ತಿದೆವು. ನಾವೊಂದುಸಲ ಊಟ ಮಾಡುತ್ತಿರುವ ವೇಳೆ ನಮ್ಮ ಮಾತನ್ನು ಆಲಿಸುತ್ತಿದ್ದ ನಮ್ಮ ಸಹೋದ್ಯೋಗಿಯೊಬ್ಬರು (ಅವರು ಕನ್ನಡಿಗರಲ್ಲ) ನಿಮ್ಮಿಬ್ಬರ ಕನ್ನಡ ಬೇರೆಬೇರೆಯಾ ಎಂಬ ಸಹಜ ಪ್ರಶ್ನೆ ಎಸೆದರು. ನಾನು ಹಿರಿತನ(ವಯಸ್ಸಿನ) ವಹಿಸಿ, ನಮ್ಮ ಕಡೆಯ ಕನ್ನಡ ಸಾಮಾನ್ಯಕ್ಕೆ ಪುಸ್ತಕ... ಅಂದಿದ್ದೆ ಅಷ್ಟೆ. ಅಷ್ಟರಲ್ಲೇ ದಿಮಿಗುಟ್ಟಿದ ನನ್ನ ಗೆಳತಿ, ಮೂಗು ಕೆಂಪಗಾಗಿಸಿ ಇಲ್ಲ ನಮ್ಮ ಕನ್ನಡವೇ ಸರಿ, ಅವರ ಕನ್ನಡ ಕಚ್ಚಾ ಅನ್ನುತ್ತಾ ಒಂದಿಷ್ಟು ಮೂದಲಿಸಿಯೇ ಸಿಟ್ಟಿನಿಂದ ವಾದಿಸತೊಡಗಿದಳು. ನಂಗೆ ಆಶ್ಚರ್ಯದೊಂದಿಗೆ ಪಿಚ್ಚೆನಿಸಿತು. ಮೂರನೆಯವರ ಎದುರು ನಾವು ಈ ರೀತಿ ಏಕಿರಬೇಕು ಅನ್ನುವುದು ಎಲ್ಲರೂ ಯೋಚಿಸಬೇಕಾದ ವಿಷಯ.

ನಾವು ಬೇರೆಯವರ, ಬೇರೆ ಭಾಷಿಗರ ಆಕ್ರಮಣ ನಮ್ಮ ಮೇಲೆ ಆಗುತ್ತಿದೆ ಎಂಬುದನ್ನು ಪ್ರತಿಭಟಿಸುತ್ತೇವೆ. ಇದು ಅಗತ್ಯ. ಆದರೆ ನಮ್ಮನಮ್ಮೊಳಗಿನ ಆಕ್ರಮಣವನ್ನು ತಡೆಯುವ ಬಗೆ ಹೇಗೆ? ಕರ್ನಾಟಕ ರಾಜ್ಯದ ಬೆಂಗಳೂರನ್ನೇ ಉದಾಹರಣೆಯಾಗಿಸಿಕೊಂಡಲ್ಲಿ ಅಲ್ಲಿ ಇತರ ಶೈಲಿಯ ಕನ್ನಡ ಮಾತಾಡುವವರು ಹಾಸ್ಯಕ್ಕೆ, ಅಪಹಾಸ್ಯಕ್ಕೆ ತುತ್ತಾಗುತ್ತಾರೆ. ಕನ್ನಡ ಸಿನಿಮಾವನ್ನೇ ತೆಗೆದುಕೊಳ್ಳಿ. ಮೆದು ಭಾಷಾ ಶೈಲಿಯ ಮಾತುಗಳನ್ನು ತಿರುಚಿ, ಪಾತ್ರಗಳ ಬಾಯಲ್ಲಿ ಆಡಿಸಿ ಒಂದು ಪ್ರಾಂತ್ಯದವರ ಮಾತಿನ ಶೈಲಿಯನ್ನು ಅಪಹಾಸ್ಯಕ್ಕೀಡು ಮಾಡಿ ವೀಕ್ಷಕರಲ್ಲಿ ಅಲ್ಲಿನ ಭಾಷೆಯೇ ಹೀಗೆ ಎಂಬ ಭಾವನೆ ಮೂಡುವಂತೆ ಮಾಡಲಾಗುತ್ತಿದೆ. ಅದೇ ರೀತಿ ಇನ್ನೊಂದು ರೀತಿಯ ಒರಟು ಶೈಲಿಯ ಮಾತುಗಳನ್ನಾಡಿಸಿ ಇನ್ನೊಂದು ಪ್ರಾಂತ್ಯದವರನ್ನು ಅಪಹಾಸ್ಯಕ್ಕೀಡುಮಾಡಿ, ಇಂತಹ ಅಪಾಯಕಾರಿ ಕ್ರಮವನ್ನು ಉತ್ತಮ ಹಾಸ್ಯವೆಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಸಿನಿಮಾಗಳು ನಮ್ಮ ಊರುಗಳಿಗೆ ಬಂದಾಗ ರೊಕ್ಕ ತೆತ್ತು ಇವುಗಳನ್ನು ವೀಕ್ಷಿಸಿ ನಾವೇ ಅವಮಾನಿಸಿಕೊಳ್ಳುತ್ತೇವೆ. ಆದರಿದು ನಮಗೆ ಗೊತ್ತೇ ಆಗುತ್ತಿಲ್ಲ!

ನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ. ಹಲವು ಭಾಷೆಗಳು, ಹಲವು ಸಂಸ್ಕೃತಿಗಳು ಮೇಳೈಸುತ್ತಿವೆ. ಇವುಗಳೆಲ್ಲವನ್ನು ಪ್ರೀತಿಸುವ ಮತ್ತು ಗೌರವಿಸುವ ಔದಾರ್ಯ ಸಾಮೂಹಿಕವಾಗಿ ಇದ್ದಾಗ ಸಾಮರಸ್ಯ ತನ್ನಿಂತಾನೆ ಮೂಡುತ್ತದೆ. ದೇಶದ ಯಾವುದೇ ಮೂಲೆಗೆ ಹೋದರೂ ಸಂವಹನಕ್ಕೆ ಸಮಸ್ಯೆಯಾಗದಂತಹ ಒಂದು ಏಕಭಾಷಾ ಸೂತ್ರದ ಶಿಕ್ಷಣ ಇಂತಹ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?

ಯಾವುದೇ ಮಾತೃಭಾಷೆಯ ವಿದ್ಯಾರ್ಥಿ ದೇಶದ ಯಾವುದೇ ಭಾಗಕ್ಕೆ ತೆರಳಿದರೂ, ಆತ ಅಥವಾ ಆಕೆಗೆ ಭಾಷಾ ಸಮಸ್ಯೆ ಎದುರಾಗದಂತಹ ಮತ್ತು ಅವರು ಯಾವುದೇ ಎಗ್ಗಿಲ್ಲದೆ, ಪರೀಕ್ಷೆಗಳಲ್ಲಿ, ಸಂದರ್ಶನಗಳಲ್ಲಿ, ಸಭೆ ವಿಚಾರಗೋಷ್ಠಿಗಳಲ್ಲಿ ಸಮರ್ಥವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಹ, ಇಂಗ್ಲೀಷ್ ಬರೋದಿಲ್ಲವೆ ಎಂಬ ಮುಜುಗರದ ಪ್ರಶ್ನೆಯನ್ನು ತಪ್ಪಿಸುವಂತಹ, ಸರಕಾರಿ ನೌಕರರು ದೇಶದ ಯಾವುದೇ ಪ್ರದೇಶಕ್ಕೆ ವರ್ಗಾವಣೆಗೊಂಡಾಗ, ಅಥವಾ ಉದ್ಯೋಗ ನಿಮಿತ್ತ ಯಾರೇ ಯಾವುದೇ ಸ್ಥಳದಲ್ಲಿ ನೆಲೆ ನಿಂತಾಗ ಅವರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತಹ ಶಿಕ್ಷಣ ವ್ಯವಸ್ಥೆ ಅಥವಾ ಭಾಷಾ ವ್ಯವಸ್ಥೆ ನಮಗೆ ಅಗತ್ಯವಿಲ್ಲವೇ? ಇಲ್ಲಿ ಭಾಷೆ ಅಂದಾಗ, ಅದು ಶಿಕ್ಷಣ, ಉದ್ಯೋಗಕ್ಕೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಎದುರಾಗಬಹುದು. ಆದರೆ, ಸಮಾಜದಲ್ಲಿ ಇವುಗಳು ಎಲ್ಲಕ್ಕೂ ಮೂಲವಲ್ಲವೆ.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇದೆಂತಹ ವ್ಯತ್ಯಸ್ಥ ಚಿಂತನೆ ಎಂಬ ಪ್ರಶ್ನೆ ಮೂಡಬಹುದು. ಆದರೆ ಇತರೆಲ್ಲ ಭಾಷೆಗಳನ್ನು ದೂರವಿಟ್ಟು ಬರಿಯ ಕಟ್ಟಾ ಕನ್ನಡಾಭಿಮಾನಿಗಳಾಗಬೇಕಿದ್ದರೆ ಎದುರಾಗುವ ಈ ಸಮಸ್ಯೆಗಳ ಕುರಿತು ನಾವು ಯೋಚಿಸಬೇಕಲ್ಲವೇ?

ನವೆಂಬರ್ ಒಂದು ಬರುತ್ತಲೇ ಕನ್ನಡದ ವಾಂಛೆ ಚಿಗಿತುಕೊಂಡು ನವೆಂಬರ್ 30 ಆಗುತ್ತಲೇ ಸೊರಗುತ್ತದೆ ಎಂಬ ಮಾತು ಕೇಳಿಬರತೊಡಗಿರುವುದು ದುರದೃಷ್ಟಕರ. ಹಾಗಾಗದಂತೆ ಕನ್ನಡ ಪ್ರೇಮ ಬೆಳೆಸಿಕೊಳ್ಳುವುದು ಅಚ್ಚ ಕನ್ನಡಿಗರಾದ ನಮ್ಮ ಹೊಣೆ.

Share this Story:

Follow Webdunia kannada