Select Your Language

Notifications

webdunia
webdunia
webdunia
webdunia

ಇ-ಕನ್ನಡ ಲೋಕ ಪ್ರಕಾಶಿಸುತ್ತಿದೆ...!!!

ಇ-ಕನ್ನಡ ಲೋಕ ಪ್ರಕಾಶಿಸುತ್ತಿದೆ...!!!
WD
ಅವಿನಾಶ್ ಬಿ.

ಕಾವೇರಿಯಿಂದಮಾ ಗೋದಾವರಿ
ವರಮಿರ್ಪ ನಾಡದಾ ಕನ್ನಡದೊಳ್‌
ಭಾವಿಸಿದ ಜನಪದಂ ವಸು
ಧಾವಲಯ ವಿಲೀನ ವಿಶದ ವಿಷಯ ವಿಶೇಷಂ।।

ಕವಿ ಶ್ರೀವಿಜಯ ಮತ್ತು ರಾಜಾ ನೃಪತುಂಗ ಇಬ್ಬರೂ ಸೇರಿ ರಚಿಸಿದ ಕವಿರಾಜ ಮಾರ್ಗದಲ್ಲಿ ಈ ಕಂದಪದ್ಯ ರೂಪದ ಹೊನ್ನುಡಿಯ ಉಲ್ಲೇಖವಿದೆ.

ವಸುಧೆಯ ವಲಯದಲ್ಲಿ ವಿಶದವಾದ ವಿಷಯ ವಿಶೇಷತೆಯೊಂದಿಗೆ ವಿಲೀನವಾಗಿರುವ, ಕಾವೇರಿಯಿಂದ ಗೋದಾವರಿ ವರೆಗೆ ವ್ಯಾಪಿಸಿರುವ ನಾಡು ಕನ್ನಡ ಅಂತ ಇದನ್ನು ಸಂಕ್ಷಿಪ್ತವಾಗಿ ಅರ್ಥೈಸಿಕೊಳ್ಳಬಹುದು.

ಕನ್ನಡ ನಾಡು ನುಡಿ ಅಧಃಪತನವಾಗಿದೆ, ಭಾಷೆ ಸಾಯುತ್ತಿದೆ, ಕೇಂದ್ರ ಸರಕಾರದವರು ನಮ್ಮ ಮಾತು ಕೇಳುತ್ತಿಲ್ಲ, ಶಾಸ್ತ್ರೀಯ ಸ್ಥಾನಮಾನ ಕೊಡುತ್ತಿಲ್ಲ ಎಂಬುದೇ ಮುಂತಾಗಿ ಕೂಗಾಡುವುದನ್ನು ನಾವು ಕೇಳಿದ್ದೇವೆ, ಕೇಳುತ್ತಿದ್ದೇವೆ ಮತ್ತು ಇನ್ನು ಮುಂದೆಯೂ ಕೇಳಲಿದ್ದೇವೆ. ದಯವಿಟ್ಟು ಒಂದು ಬಾರಿ ಈ ಕುರಿತಾಗಿ ದೀರ್ಘವಾಗಿ ಚಿಂತಿಸಿ ನೋಡಿ, ಆಲೋಚಿಸಿಕೊಳ್ಳಿ. ಹೀಗೇ ಒಂದು ಬಾರಿ ಅಂತರ್ಜಾಲದಲ್ಲಿ ವಿಹರಿಸಿ ನೋಡಿ. ನಮ್ಮ ಈ ಸವಿಗನ್ನಡವು ಇ-ಸವಿಕನ್ನಡವಾಗಿ ಅದೆಷ್ಟು ಕನ್ನಡದ ದೀಪಗಳು ಹೊತ್ತಿ ಉರಿಯುತ್ತಿವೆ.

ಬೇರೆ ಭಾಷೆಗಳಿಗೆ ಹೋಲಿಸಿದರೆ, ಕನ್ನಡದಲ್ಲಿ ಅಂತರ್ಜಾಲ ಕ್ಷೇತ್ರವು ಅಷ್ಟೊಂದು ವ್ಯಾಪಕವಾಗಿಲ್ಲ ಎಂಬುದು ನಾವು ಗಂಭೀರವಾಗಿ ಆಲೋಚಿಸಬೇಕಾದ ಸತ್ಯ. ತಮಿಳು, ಮಲಯಾಳ ಹಾಗೂ ತೆಲುಗಿನಲ್ಲಿ ಕಂಡು ಬರುವ ಅಂತರ್ಜಾಲ ತಾಣಗಳು, ಬ್ಲಾಗುಗಳೇ ಇದಕ್ಕೆ ಸಾಕ್ಷಿ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನಮ್ಮ ಯುವಜನಾಂಗ, ವಿಶೇಷವಾಗಿ ಐಟಿ ಕ್ಷೇತ್ರ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಕಂಪ್ಯೂಟರು ಕೀಲಿಮಣೆಗಳಲ್ಲಿ ಬೆರಳಾಡಿಸುತ್ತಲೇ ಕನ್ನಡಕ್ಕಾಗಿ ಕೈ ಎತ್ತುತ್ತಿರುವ ಸತ್ಯವನ್ನೊಮ್ಮೆ ಗಮನಿಸಿ ನೋಡಿದರೆ ಕನ್ನಡಕ್ಕಳಿವಿಲ್ಲ ಎಂಬುದು ಧುತ್ತನೆ ಎದುರಾಗುವ ಅಂಶ.

ತಂತ್ರಜ್ಞಾನ ಕ್ಷೇತ್ರ ತ್ವರಿತ ಬದಲಾವಣೆಗಳನ್ನು ಕಾಣುತ್ತಿದೆ. ತತ್ಪರಿಣಾಮವಾಗಿ ಕನ್ನಡದಲ್ಲಿ ಸಾಕಷ್ಟು ಅಂತರ್ಜಾಲ ತಾಣಗಳು ಮೂಡಿಬಂದವು. ಅವುಗಳು ನೀಡುತ್ತಿರುವ ಸುದ್ದಿ, ಸಾಹಿತ್ಯದ ಹೂರಣಗಳನ್ನೊಮ್ಮೆ ನೋಡಿದರೆ, ಕನ್ನಡದ ಸುಗಂಧವು ವಿಶ್ವಾದ್ಯಂತ ಪಸರಿಸುತ್ತಿರುವುದು ಮತ್ತು ತನ್ನದೇ ಸುಂದರ ಲಿಪಿಯ ಮೂಲಕ ಕನ್ನಡವು ಕೂಡ ವಿಶ್ವ ಭಾಷೆಯಾಗಿ ರೂಪುಗೊಳ್ಳುತ್ತಿರುವುದು ಮನದಟ್ಟಾಗುತ್ತದೆ. ಭಾಷಾ ತಂತ್ರಜ್ಞಾನ ಅದ್ಭುತ ಪ್ರಗತಿ ಸಾಧಿಸುತ್ತಿರುವಾಗ ಅಕ್ಷರ(ಫಾಂಟ್)ಗಳ ಸಮಸ್ಯೆಯು ಅಂತರ್ಜಾಲದಲ್ಲಿ ಕನ್ನಡದ ಬೆಳವಣಿಗೆಗೆ ಒಂದು ದೊಡ್ಡ ಅಡ್ಡಿಯಾಗಿತ್ತು ಎಂದುಕೊಳ್ಳಬಹುದು. ಅಂದರೆ ಆಯಾ ಅಂತರ್ಜಾಲ ತಾಣದಲ್ಲಿರುವ ಫಾಂಟ್ ಯಾವುದೇ ಓದುಗರ ಕಂಪ್ಯೂಟರಿನಲ್ಲೂ ಇದ್ದರೆ ಮಾತ್ರವಷ್ಟೇ ಅದನ್ನು ಓದಬಹುದಾಗಿತ್ತು. ಈ ಸಮಸ್ಯೆ ನಿವಾರಣೆಗೆ ಆಯಾ ಅಂತರ್ಜಾಲ ತಾಣಗಳು ಫಾಂಟ್‌ಗಳನ್ನು ಅವರವರ ಕಂಪ್ಯೂಟರಿಗೆ ಇಳಿಸಿಕೊಳ್ಳುವ ಸಂಪರ್ಕಕೊಂಡಿಗಳನ್ನು ನೀಡಲಾರಂಭಿಸಿದವು. ಈ ತಂತ್ರಜ್ಞಾನದ ವಿನೂತನ ಪ್ರಗತಿಯಾಗಿ ರೂಪುಗೊಂಡಿದೆ ಯುನಿಕೋಡ್ ಫಾಂಟ್. ಅಂದರೆ ಇದು ಹೊಸ (ವಿಂಡೋಸ್ ಎಕ್ಸ್‌ಪಿ ಮತ್ತು ಆನಂತರದ ಕಾರ್ಯಾಚರಣಾ ವ್ಯವಸ್ಥೆ ಆವೃತ್ತಿಗಳಿರುವ) ಕಂಪ್ಯೂಟರುಗಳಲ್ಲಿ ಅಡಕವಾಗಿಯೇ ಬರುತ್ತದೆ.

ಈ ಯುನಿಕೋಡ್ ವಿಧಾನ ಬಂದ ಮೇಲೆ ಕನ್ನಡದ ಅಂತರಜಾಲ ತಾಣ ಜಗತ್ತಿನಲ್ಲಿ ಅದ್ಭುತ ಪ್ರಗತಿಯಾಗಿದೆ. ವೆಬ್ ಲಾಗ್‌ಗಳು "ಬ್ಲಾಗ್" ಎಂಬ ಸಂಕ್ಷಿಪ್ತನಾಮಧೇಯ ಪಡೆದು ಸೃಷ್ಟಿಸಿದ ಸಂಚಲನೆ ಅದ್ಭುತ. ನೂರಾರು ಮಂದಿ ತಂತ್ರಾಂಶ ಉದ್ಯೋಗಿಗಳು ತಮ್ಮದೇ ಆದ ಪುಟ್ಟ ಜಾಲತಾಣದಂತಿರುವ ಬ್ಲಾಗುಗಳನ್ನು ಆರಂಭಿಸಿದರು. ಇದರೊಂದಿಗೆ ಇತ್ತೀಚೆಗೆ ಮಾಧ್ಯಮ ಮಿತ್ರರೂ ನಾಮುಂದು ತಾ ಮುಂದು ಅಂತ ಬ್ಲಾಗುಗಳನ್ನು ಆರಂಭಿಸಿದರು. ಅವುಗಳಲ್ಲಿ ಕನ್ನಡ ನಾಡು-ನುಡಿಯ ಕುರಿತ ಕಾಳಜಿ, ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಅನಿಸಬಹುದಾದ ಕೃತಿಗಳು ಪುಂಖಾನುಪುಂಖವಾಗಿ ಹರಿದುಬಂದವು, ಇನ್ನೂ ಹರಿಯುತ್ತಲೇ ಇವೆ. ಇವೆಲ್ಲವುಗಳ ಒಟ್ಟಾರೆ ಫಲ ಎಂದರೆ ಇ-ಕ್ಷೇತ್ರದಲ್ಲಿ ಕನ್ನಡ ಬೆಳಗುತ್ತಿದೆ...!!!

ಈ ರೀತಿಯ ಎಲ್ಲಾ ಬ್ಲಾಗುಗಳನ್ನು ಒಂದೆಡೆ ಕಲೆ ಹಾಕಿ ತೋರಿಸುವ "ಬರಹ" ಮತ್ತು "ಸಂಪದ" ತಾಣಗಳನ್ನು ನೋಡಿದರೆ ಅಂತರಜಾಲದಲ್ಲಿ ಕನ್ನಡ ಈ ಪರಿಯಾಗಿ ಬೆಳಗುತ್ತಿರುವುದನ್ನು, ಬೆಳೆಯುತ್ತಿರುವುದನ್ನು ಕಣ್ಣಾರೆ ಕಾಣಬಹುದು. ಕೆಲವೊಂದು ಬ್ಲಾಗ್ ಲೇಖನಗಳಂತೂ ಓದುಗರನ್ನು ಕಟ್ಟಿಹಾಕಿದಂತೆ ಹಿಡಿದಿಟ್ಟು ಒದಿಸುತ್ತಿರುವಂತಿವೆ. ಬ್ಲಾಗುಗಳಲ್ಲಿ ಮೂಡಿ ಬರುವ ನಿಜಜೀವನಕ್ಕೆ ತೀರಾ ಹತ್ತಿರವೆನಿಸುವ ಕಥೆಗಳು, ಕಣ್ಣೀರು ತರಿಸುವ ವಿರಹ ಗೀತೆಗಳು, ಪ್ರೇಮಿಗಳಲ್ಲಿ ಹೊಸ ಆಶಾಭಾವನೆ ಮೂಡಿಸುವ ಕವನಗಳು, ದೈನಂದಿನ ಆದರೆ ನಾವು ಕ್ಷುಲ್ಲಕ ಎಂದು ಪರಿಗಣಿಸುವ ಘಟನೆಗಳ ಬಗ್ಗೆ ಮತ್ತೊಮ್ಮೆ ಯೋಚನೆಗೀಡುಮಾಡಬಲ್ಲ ದಿನಚರಿಯ ಪುಟಗಳು, ಅಚ್ಚರಿ ಹುಟ್ಟಿಸುವ ಆಕಸ್ಮಿಕ ಘಟನೆಗಳು, ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳು, ಸಾಹಿತ್ಯದ ಕುರಿತ ಚರ್ಚೆಗಳು, ವಿಮರ್ಶೆಗಳು, ವೀಡಿಯೋ ತುಣುಕುಗಳು, ಹಾಸ್ಯ ಲೇಖನಗಳು, ನುಡಿಮುತ್ತುಗಳು, ಹಿರಿಯ ಕವಿಗಳ ಕವನದ ತುಣುಕುಗಳು... ಅಬ್ಬಾ... ಏನುಂಟು ಏನಿಲ್ಲ...

ಮಾಧ್ಯಮ ಕ್ಷೇತ್ರವೂ ಅಂತರ್ಜಾಲದಲ್ಲಿ ತಮ್ಮದೇ ಆದ ಇರುವಿಕೆ ತೋರಿಸುತ್ತಿವೆ. ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಮುಂತಾದ ಪತ್ರಿಕೆಗಳು ತಮ್ಮದೇ ಅಂತರ್ಜಾಲ ತಾಣಗಳನ್ನೂ ಹೊಂದಿದ್ದರೆ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಮತ್ತು ಕ್ರಾಂತಿ, ಇನ್ನೂ ಕೆಲವು ಸಂಜೆ ಪತ್ರಿಕೆಗಳು ಇ-ಪೇಪರ್ ರೂಪದಲ್ಲಿ ಅಂದಂದಿನ ಪತ್ರಿಕೆಗಳನ್ನು ವಿಶ್ವಾದ್ಯಂತ ಓದುಗರಿಗೆ ತಲುಪಿಸಲಾರಂಭಿಸಿದವು.

ಇದರ ಜತೆಗೆ ದಟ್ಸ್ ಕನ್ನಡ, ಯಾಹೂ ಕನ್ನಡ, ಎಂಎಸ್ಎನ್ ಕನ್ನಡ ಸುದ್ದಿ ತಾಣಗಳಿವೆ, ಹೊಸದಾಗಿ ವೆಬ್‌ದುನಿಯಾ ಕನ್ನಡವೂ ರೂಪುತಳೆದು ಓದುಗ ವಲಯದಲ್ಲಿ ಭರವಸೆ ಮೂಡಿಸುತ್ತಿವೆ. ನಾಡು ನುಡಿಯ ಬಗ್ಗೆ ವಿವರ ನೀಡುತ್ತಲೇ ಇರುವ ಕನ್ನಡ ವಿಕಿಪೀಡಿಯ ಇದೆ. ಸಾಹಿತ್ಯ ಸಮೃದ್ಧಿಯಿರುವ ಕನ್ನಡ ಸಾಹಿತ್ಯ ಡಾಟ್ ಕಾಂ ಮತ್ತು ಅವರ್ ಕರ್ನಾಟಕ ಡಾಟ್ ಕಾಂ ಇವೆ.

ಇದೆಲ್ಲದರ ಜತೆಗೆ, ಇಂದು ಕನ್ನಡದಲ್ಲೇ ಚಾಟಿಂಗ್ ವ್ಯವಸ್ಥೆಯೂ ಲಭ್ಯವಿದೆ. ತೀರಾ ಇತ್ತೀಚೆಗಿನ ಸೇರ್ಪಡೆಯಾಗಿ ಗೂಗಲ್‌ನವರು ಇತ್ತೀಚೆಗೆ ವಿಶೇಷ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿದ್ದು, ಕನ್ನಡ ಬೆರಳಚ್ಚಿಸುವಿಕೆಗೆ ಇದು ಅತ್ಯಂತ ಸಹಕಾರಿಯಾಗಿದೆ. ಅದುವೇ ಗೂಗಲ್‌ನವರ ಲಿಪ್ಯಂತರ ತಂತ್ರಾಂಶ (http://www.google.com/transliterate/indic/KANNADA). ಇಲ್ಲಿ ನೀವು ಕಂಪ್ಯೂಟರಿನ ಮೂಲ ಭಾಷೆಯಾದ ಇಂಗ್ಲಿಷಿನಲ್ಲೇ ಬೆರಳಚ್ಚಿಸಿದರೆ ಅದು ಕನ್ನಡಕ್ಕೆ ಪರಿವರ್ತನೆಯಾಗುತ್ತದೆ. ತಪ್ಪಾದರೆ ತಿದ್ದಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಇಷ್ಟು ವಿಶಾಲವಾಗಿರುವ, ಹೃದಯವೈಶಾಲ್ಯ ತುಂಬಿರುವ, ವಿಷಯ ವಿಶೇಷತೆಗಳೊಂದಿಗೆ ತುಂಬಿ ತುಳುಕಾಡುತ್ತಿರುವ ನಮ್ಮ ನಾಡು ಕನ್ನಡದ ಬಗ್ಗೆ ಕನ್ನಡಿಗರಿಗೇ ಹೆಮ್ಮೆ ಇರಬೇಕು.

ಕವಿರಾಜ ಮಾರ್ಗದಲ್ಲೇ ಮತ್ತೊಂದು ನಲ್ನುಡಿಯಿದೆ.:
ಪದನರಿದು ನುಡಿಯಲುಂ, ನುಡಿದುದನು ಅರಿದು,
ಆರಯಲುಂ ಅರ್ಮದು ಆ ನಾಡವರ್ಗಳ್‌; ಚದುರರ್‌, ನಿಜದಿಂ,
ಕುರಿತು ಓದದೆಯುಂ ಕಾವ್ಯ-ಪ್ರಯೋಗ-ಪರಿಣತಮತಿಗಳ್‌।।

ಈ ನಮ್ಮ ನಲುಮೆಯ ಒಲುಮೆಯ ನಾಡು, ನುಡಿಗೆ ಸುಮಾರು 2000 ವರ್ಷಗಳ ಪರಂಪರೆಯಿದೆ. ರಾಷ್ಟ್ರಭಾಷೆಯಾದ ಹಿಂದಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ 7 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ಏಕೈಕ ಪ್ರಾದೇಶಿಕ ಭಾಷೆ ಕನ್ನಡ. ಇಂತಹ ಹೆಮ್ಮೆಯ ಭಾಷೆಯನ್ನು ಮಾತನಾಡುವ, ಓದುವ, ಬರೆಯುವ ನಾವು ಧನ್ಯರು.

ಇಂಥ ಕನ್ನಡ ರಾಜ್ಯದ ಉತ್ಸವ ನವೆಂಬರ್ 1ನೇ ತಾರೀಕಿಗೆ ಮಾತ್ರವೇ ಸೀಮಿತವಾಗದಿರಲಿ,
ರಾಜ್ಯೋತ್ಸವ ನಿತ್ಯೋತ್ಸವವಾಗಿರಲಿ.
ಜೈ ಭಾರತ ಜನನಿಯ ತನುಜಾತೆ!

Share this Story:

Follow Webdunia kannada