Select Your Language

Notifications

webdunia
webdunia
webdunia
webdunia

ನಾವಾಡುವ ನುಡಿಯೇ ಕನ್ನಡ ನುಡಿ......

ನಾವಾಡುವ ನುಡಿಯೇ ಕನ್ನಡ ನುಡಿ......
WD
ರಶ್ಮಿ.ಪೈ

"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು
ಕನ್ನಡಗೋವಿನ ಓ ಮುದ್ದಿನಕರು, ಕನ್ನಡತನವೊಂದಿದ್ದರೆ ನೀನೆಮ್ಮಗೆ ಕಲ್ಪತರು"

ಎಂದು ಕುವೆಂಪುರವರ ಭಾವಾತೀತವಾದ ಕವನದ ಸಾಲುಗಳಿಗೆ ಕಿವಿನವಿರೇಳದ ಕನ್ನಡಿಗರು ಬಹುಶಃ ಇರಲಾರರು. ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮಾತೃಭಾಷೆಯಲ್ಲಿ ಎಂದೂ ಒಲವು ಇದ್ದೇ ಇರುತ್ತದೆ.

ನಮ್ಮ ಭಾಷೆಗೆ ನಾವು ತಾಯಿಯಂತೆ ಗೌರವ ಸ್ಥಾನವನ್ನು ನೀಡಿದ್ದು ಆದರೆ ಇಂದು ಅದರ ಸ್ಥಿತಿ ಏನಾಗಿದೆ ಎಂದು ಎಲ್ಲಾ ಕನ್ನಡಿಗರಿಗೆ ತಿಳಿದ ವಿಷಯ. ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಬೊಬ್ಬೆ ಹಾಕುತ್ತಿದ್ದರೂ ನಾವಾಡುವ ಕನ್ನಡ ಮಾತ್ರ ಇಂಗ್ಲಿಷ್ ಮಿಶ್ರಿತವಾದ ಕಂಗ್ಲೀಷ್. ಅತ್ತ ಕನ್ನಡವೂ ಅಲ್ಲ ಇತ್ತ ಇಂಗ್ಲೀಷ್ ಅಲ್ಲ ಎಂದು ಹೇಳುವಷ್ಟರ ಮಟ್ಟಿಗೆ ನಮ್ಮ ಕನ್ನಡ ಭಾಷೆ ಸ್ಥಿತ್ಯಂತರ ಹೊಂದಿದೆ. ತಮ್ಮ ಮಾತೃಭಾಷೆಯನ್ನಾಡಲು ಹಿಂಜರಿಯುತ್ತಿರುವ ಕನ್ನಡಿಗರು ನಮ್ಮಲ್ಲಿರುವಾಗ ಭಾಷೆಯ ಉಳಿವು ಹೇಗೆ ಸಾಧ್ಯ?.

ಇಂದು ಕನ್ನಡ ಭಾಷೆಯು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಐಟಿ, ಬಿಟಿ ಎಂದು ಜನರು ನೂಕುನುಗ್ಗುತ್ತಿರುವ ಈ ಕಾಲದಲ್ಲಿ ಕನ್ನಡವು ಕೇವಲ ಹಳ್ಳಿಗರ ಭಾಷೆಯಾಗಿ ಉಳಿದುಕೊಂಡಿದೆ. ಮಹಾನಗರಗಳಲ್ಲಂತೂ ಕನ್ನಡದ ಸ್ಥಿತಿ ಅತೀ ಶೋಚನೀಯವಾಗಿ ಕಂಡು ಬರುತ್ತದೆ. ಈ ಕಾಲಘಟ್ಟದಲ್ಲಿ ಆಧುನಿಕತೆಗೆ ಮಾರು ಹೋದ ಯುವಜನಾಂಗ ಕನ್ನಡದ ಬಗ್ಗೆ ಆಸಕ್ತಿ ತೋರುವುದಿಲ್ಲ ಎಂಬುದು ನೂರರಷ್ಟು ಸತ್ಯ. ಕನ್ನಡವನ್ನಾಡುವುದು ತಮ್ಮ ಘನತೆಗೆ ಸರಿಹೊಂದುವುದಿಲ್ಲ ಎಂಬ ತಪ್ಪು ಭಾವನೆ ಜನರಲ್ಲಿ ಮನೆಮಾಡಿಕೊಂಡಿರುವಾಗ ನಮ್ಮ ಭಾಷೆ ಹೇಗೆ ತಾನೆ ಬೆಳೆಯಲು ಸಾಧ್ಯ?.

ನಮ್ಮ ಭಾಷೆಯು ದಿನೇ ದಿನೇ ಅದರ ಸುಗಂಧವನ್ನು ಕಳೆದುಕೊಂಡು ಬರುತ್ತಿದೆ. ಅದು ಹೇಗೆಂದರೆ ನಾವಾಡುವ ಪ್ರತಿಯೊಂದು ಪದವೂ ಕಂಗ್ಲೀಷೇ. ಉದಾಹರಣೆಗೆ "ನಾವು ಡೈಲೀ ಆಫೀಸ್‌ಗೆ ಹೋಗುವ ಬಸ್ ಇವತ್ತು ಹಾಫ್ಎನವರ್ ಲೇಟು. ವೈಟ್ ಮಾಡಿ ಮಾಡಿ ಟೈಯರ್ಡ್ ಆಯ್ತು. ಹಾಗೆ ಆಫೀಸ್‌ಗೆ ರೀಚ್ ಆಗುವಾಗ ಟೈಮ್ ಇಲೆವನ್ ಥರ್ಟಿ." ಇಂತಹ ಮಾತು ನಾವು ಸರ್ವೇ ಸಾಮಾನ್ಯವಾಗಿ ಬಳಸುತ್ತೇವೆ. ಇದರಲ್ಲಿ ಕನ್ನಡ ಎಲ್ಲಿದೆ ಎಂಬುದನ್ನು ಭೂತಕನ್ನಡಿ ಹಿಡಿದು ಹುಡುಕಬೇಕಷ್ಟೇ. ಕೆಲವರಂತೂ ಕೆಲವು ಇಂಗ್ಲೀಷ್ ಪದಗಳನ್ನು ಸಿಕ್ಕಾಪಟ್ಟೆ ಉಪಯೋಗಿಸಿ ತಮ್ಮ ಪ್ರೌಢಿಮೆಯನ್ನು ತೋರಿಸಲು ಸದಾ ಪ್ರಯತ್ನಿಸುತ್ತಿರುತ್ತಾರೆ.

ಆಯಾ ಪ್ರದೇಶಗಳಲ್ಲಿನ ಸ್ಥಿತಿಗತಿಗನುಸಾರವಾಗಿ ಭಾಷೆಯಲ್ಲಿ ಬದಲಾವಣೆಗಳು ಕಂಡುಬರಬಹುದು. ಉದಾಹರಣೆಗೆ ಆಂಧ್ರ ಪ್ರದೇಶಕ್ಕೆ ಹತ್ತಿರವಿರುವವರು ಕನ್ನಡದಲ್ಲಿ ತೆಲುಗು, ಹಾಗೆ ಕೇರಳ ಗಡಿಯಲ್ಲಿರುವರು ತಮ್ಮ ಭಾಷೆಯಲ್ಲಿ ಮಲಯಾಳಂನ ಪದಗಳನ್ನು ಬಳಸುವುದನ್ನು ನಾವು ಕಾಣಬಹುದು. ಇದೆಲ್ಲವೂ ಸರ್ವೇ ಸಾಮಾನ್ಯ. ಆದರೆ ಎಲ್ಲದಕ್ಕೂ ಮಿತಿಯಿದೆ. ನಮ್ಮ ಭಾಷೆಯನ್ನಾಡುವಾಗ ಇಂಗ್ಲೀಷ್ ಪದವನ್ನು ಬಳಸುವುದರಲ್ಲಿ ತಪ್ಪೇನಿಲ್ಲ. ಕೆಲವು ಪದಗಳನ್ನು ನಾವು ಇಂಗ್ಲೀಷಿನಲ್ಲೇ ಹೇಳಬೇಕಾದಂತವುಗಳು ಅದೆಷ್ಟೋ ಇವೆ. ಆದರೆ ಎಲ್ಲಕ್ಕೂ ಇಂಗ್ಲೀಷನ್ನು ಸೇರಿಸಿ, ನಮ್ಮ ನುಡಿಯನ್ನು ನಾವೇ ಹಾಳು ಮಾಡುತ್ತಿದ್ದೇವೆ.

ನಮ್ಮ ಭಾಷೆ ಕನ್ನಡವೆಂದು ಹೇಳಲು ನಾಚಿಕೊಳ್ಳುವಾಗ ಕನ್ನಡದ ಬೆಳವಣಿಗೆ ಹೇಗೆ ಸಾಧ್ಯ?. ತಾವು ಆಡಿ ಕಲಿತಂತಹ ಕನ್ನಡ ಭಾಷೆಯನ್ನು ತಮ್ಮ ಮಕ್ಕಳಿಗೆ ಕಲಿಸಲು ಹಿಂಜರಿಯುವ ಹೆತ್ತವರು ಹೆಚ್ಚಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಸೀಟು ಕೊಡಿಸುತ್ತಾರೆ. ಪರಿಣಾಮವಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಕೊರತೆಯಿಂದಾಗಿ ಶಾಲೆ ಮುಚ್ಚಬೇಕಾದಂತಹ ಸ್ಥಿತಿ ಬಂದೊದಗಿದೆ.ಜಾಗತೀಕರಣ, ವಾಣಿಜ್ಯೀಕರಣಗಳ ಬೆನ್ನಟ್ಟಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಇಂಗ್ಲೀಷ್ ಕಲಿಕೆ ಅತೀ ಮುಖ್ಯ. ಆದರೆ ತಮ್ಮ ಮಕ್ಕಳಿಗೆ ಕನ್ನಡದ ಗಾಳಿಯೂ ತಾಗಬಾರದೆಂದು ದೂರವಿರಿಸುವುದು ಸರಿಯೇ? ಕನ್ನಡ ಭಾಷೆಯ ಉಳಿವಿಗಾಗಿ ಗಂಟೆಗಟ್ಟಲೆ ಭಾಷಣ ಬಿಗಿಯುವ ಮಹನೀಯರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿ ಕನ್ನಡದಿಂದ ದೂರವಿರಿಸುತ್ತಾರೆ ಇಂತಹ ವಿಪರ್ಯಾಸಗಳಿಂದಾಗಿಯೇ ಕನ್ನಡವು ಕ್ಷೀಣಿಸುತ್ತಿದೆ.

ಕನ್ನಡದ ಬಗ್ಗೆ ಇರುವ ತಿರಸ್ಕಾರದ ಭಾವನೆಯೇ ನಮ್ಮ ಭಾಷೆಗೆ ಕುತ್ತು ತಂದಿದೆ. ಕೇವಲ ಸ್ಥಳನಾಮಗಳನ್ನೋ, ದಾಖಲೆ ಪತ್ರ, ಪ್ರಣಾಳಿಕೆಗಳನ್ನು ಮಾತ್ರ ಕನ್ನಡಕ್ಕೆ ಭಾಷಾನುವಾದ ಮಾಡುವುದರಿಂದ ಮಾತ್ರ ಕನ್ನಡ ಭಾಷೆಯು ಏಳಿಗೆಯಾಗಲಾರದು, ಅದರ ಬದಲಾಗಿ ಜನರಲ್ಲಿ ಭಾಷೆಯ ಬಗ್ಗೆ ಒಲವು ಮೂಡಿಸಿ ಅದನ್ನು ಅಳವಡಿಸಿಕೊಂಡರೆ ಮಾತ್ರ ಅದು ಜೀವಂತವಾಗಿರಲು ಸಾಧ್ಯ. ಬೆಳೆದು ಬರುತ್ತಿರುವಂತಹ ಯುವ ಜನಾಂಗವನ್ನು ಕನ್ನಡ ಕಲಿಯಲು ಪ್ರೇರೇಪಿಸಿದರೆ ಮಾತ್ರ ಮುಂಬರುವ ಕಾಲಗಳಲ್ಲಿ ಕನ್ನಡವನ್ನು ವಿನಾಶದಂಚಿನಿಂದ ಪಾರು ಮಾಡಲು ಸಹಾಯಕವಾಗಬಹುದು.

ನಮ್ಮ ಭಾಷೆಗೆ ಅರ್ಹ ಸ್ಥಾನಮಾನ ಸಿಗುವುದಿಲ್ಲ ಎಂದು ಹೇಳಿದರೂ, ಇಂದು ಕನ್ನಡ ಭಾಷೆಯು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರುವಂತೆ ಕಂಡುಬರುತ್ತದೆ. ಕನ್ನಡ ಸಾಹಿತ್ಯವು ಹೆಚ್ಚು ಬೆಳೆದಿದ್ದರೂ ಕನ್ನಡಿಗರು ಕನ್ನಡತನವನ್ನು ತಮ್ಮಲ್ಲಿ ಅಳವಡಿಸಿಕೊಳ್ಳದಿರುವುದು ಖೇದಕರ. ಆಧುನಿಕತೆಯ ಭರಾಟೆಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಆದರೂ ನಮ್ಮ ಭಾಷೆಯ ಶೈಲಿ, ಸಂಸ್ಕೃತಿಗಳನ್ನು ಕಾಯ್ದುಕೊಂಡು ಬರಬೇಕಾದದ್ದು ನಮ್ಮ ಕರ್ತವ್ಯ. ಇಂದು ಕನ್ನಡವು ಅಂತರ್ಜಾಲದಲ್ಲಿ ಸಜೀವವಾಗಿರುವುದು ಕನ್ನಡಕ್ಕೆ ಸಂದ ಗೌರವಗಳಲ್ಲೊಂದು.

ಹೆಚ್ಚುತ್ತಿರುವ ಅಂತರ್ಜಾಲ ಜಾಲಿಗರು, ಅದೇ ರೀತಿ ಬ್ಲಾಗುಗಳು ಕನ್ನಡಕ್ಕೆ ಪ್ರೋತ್ಸಾಹವನ್ನು ನೀಡುತ್ತಿದ್ದು ಇದು ಭಾಷೆಯನ್ನು ಪುಷ್ಠೀಕರಿಸಲು ಸಹಾಯ ಮಾಡುತ್ತದೆ. ಇಂತಹ ಬದಲಾವಣೆಗಳು ನಮ್ಮ ಭಾಷೆಯನ್ನು ಹೆಚ್ಚು ಸಮೃದ್ಧವಾಗುವಂತೆ ಮಾಡುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿಕೊಂಡಿದೆ. ಕನ್ನಡದ ಉಳಿವಿಗಾಗಿ ಜನರನ್ನು ಜಾಗೃತರನ್ನಾಗಿ ಮಾಡುವುದರ ಜೊತೆಗೆ ಭಾಷೆಯನ್ನು ಪ್ರೋತ್ಸಾಹಿಸುವುದು ಅಷ್ಟೇ ಮುಖ್ಯ. ಇದು ಕೇವಲ ಚರ್ಚೆ,ಭಾಷಣಗಳಿಗೆ ಮಾತ್ರ ಸೀಮಿತವಾಗಿರದೆ ನಮ್ಮ ದೈನಂದಿನ ಜೀವನದಲ್ಲಿ ಭಾಷೆಯ ಅಳವಡಿಕೆಯಾದರೆ ಮಾತ್ರ ಭಾಷೆಯ ಉಳಿವು ಸಾಧ್ಯ. ಇತರ ಭಾಷೆಗಳು ನಮ್ಮ ಮೇಲೆ ಅಧಿಕಾರ ಸ್ಥಾಪಿಸುವ ಮೊದಲು ಕನ್ನಡಿಗರೇ ಕನ್ನಡ ಭಾಷೆಯ ಉಳಿವಿಗಾಗಿ ಎಚ್ಚೆತ್ತು ಕೊಳ್ಳಬೇಕು. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುಣವನ್ನು ಕನ್ನಡಿಗರು ಮೈಗೂಡಿಸಿಕೊಂಡರೆ ಮಾತ್ರ ಕನ್ನಡ ಭಾಷೆಯನ್ನು ಉದ್ಧಾರ ಸಾಧ್ಯ.

Share this Story:

Follow Webdunia kannada