Select Your Language

Notifications

webdunia
webdunia
webdunia
webdunia

ಈ ವರ್ಷ ಏನೂ ಇಲ್ಲ...ಮುಂದಿನ ವರ್ಷ ನೋಡೋಣ ಎಲ್ಲಾ?

ಈ ವರ್ಷ ಏನೂ ಇಲ್ಲ...ಮುಂದಿನ ವರ್ಷ ನೋಡೋಣ ಎಲ್ಲಾ?
ಸುಖೇಶ. ಪಿ. ವಿಟ್ಲ
PTI
ನಾಲ್ಕನೇ ಸೆಮಿಸ್ಟರ್ ಪ್ರಾರಂಭವಾದ ಆ ದಿನವನ್ನು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ, ಪ್ರಾರಂಭವಾದುದು ಜ.1 ರಂದು. ಅದು 2007 ನೇ ಜನವರಿ 1. ಅಂದು ಬರುವಾಗ ನಮ್ಮ ಶಂಶೋಧನಾ ಪ್ರಬಂಧಕ್ಕೆ ಸಂಬಂಧಿಸಿ ಕೆಲವು ಕೆಲಸಗಳನ್ನು ಮುಗಿಸಿಕೊಂಡು ಬರುವಂತೆ ಪ್ರಾಧ್ಯಾಪಕರು ತಿಳಿಸಿದ್ದೂ,.. ನಾವು ಒಂದು ಸಣ್ಣ ಕೆಲಸವನ್ನೂ ಸರಿಯಾಗಿ ಪೂರ್ತಿ ಮಾಡದೆ ಹೋದದ್ದು. ಅದನ್ನು ಬದಿಗಿಡೋಣ. ಯಾಕೆಂದರೆ ಅದು ಸರ್ವೇ ಸಾಮಾನ್ಯ.......

ಇದೀಗ ಅದೇ ವರ್ಷದ ಕೊನೆಯ ತಿಂಗಳ ಕೊನೆಯ ದಿನಗಳು. ನಾವು ಎಲ್ಲಿ ಈ ಪ್ರಬಂಧ, ಪರೀಕ್ಷೆ, ಪೀಡೆ, ಪಿಶಾಚಿ..... ಇದನ್ನೆಲ್ಲಾ ನಿಭಾಯಿಸಿ ಕೋರ್ಸ್ ಮುಗಿಸುತ್ತೇವೋ? ಈ ವರ್ಷ ನಮ್ಮ ಪಾಲಿನ ಕರಾಳ ಎಂದು ಯೋಚಿಸಿದ್ದಿತ್ತು. ಈಗ 2007 ಅಂತಿಮ ಹಂತ, 2008ರ ಸ್ವಾಗತಕ್ಕೆ ಕ್ಷಣಗಣನೆ. ಈಗ ಯೋಚನಾ ಲಹರಿಯೇ ಬೇರೆ.

ಛೆ.... ಎಷ್ಟು ಬೇಗ ಮುಗಿದು ಹೋಯಿತು, ಗೊತ್ತಾಗಲೇ ಇಲ್ಲ (ಜತೆಗೆ ನನಗೂ ಒಂದು ವರ್ಷ ಹೆಚ್ಚಾಗಿರುವುದು). ಮೊದಲ ಹಂತದಲ್ಲಿ ನಿಂತು ಯೋಚಿಸಿದರೆ 'ದೂರದ ಬೆಟ್ಟ'ದ ಹಾಗೆ ಅಲ್ಲ. ಬೆಟ್ಟ ಹತ್ತಿರದ್ದೇ. ಹೇಗೆ ಹತ್ತಿ ಮುಗಿಸಿಯೇನು. ಅದೂ ಇಷ್ಟೊಂದು ಕಷ್ಟಗಳನ್ನು ಹೊತ್ತುಕೊಂಡು? ನಂತರ ಗೊತ್ತಾಗುವುದು ವರ್ಷ ಮುಗಿದ ಮೆಲೇನೆ. ಅಯ್ಯೋ! ಮುಗಿದು ಹೋಯಿತಾ ? ಈ ವರ್ಷ ನಾನು ಕೆಲವು ಯೋಜನೆ ಹಾಕಿದ್ದೆ. ಒಂದೂ ಆಗಲಿಲ್ಲ. (ಇದೂ ಕೂಡಾ ಹೆಚ್ಚಿನವರ ಪಾಡೇ).

ಅಂತೂ ಮೊದಲು ಹೇಗೆ ಮುಗಿಸಿಯೇನು ಎಂದು ಯೋಚಿಸಿದವ ಅದ್ಹೇಗೆ ವರ್ಷಮುಗಿಸಿದೆ. ಈ ರೀತಿ ಒಂದು ಮಂಜಾನೆ ಹಾಸಿಗೆಯಿಂದ ಎದ್ದಾಗ ತಲೆಗೆ ಧಕ್ಕನೆ ಹೊಕ್ಕಿತ್ತು. ಹೌದು, ಕಳೆದ ಜನವರಿಯಂದು ಮುಂಜಾನೆ ತೋಟದ ಬದಿಯ ಜಾಗದಲ್ಲಿ ಕಬ್ಬು ಕಡಿದು ಉಳಿದ ದಂಟೊಂದನ್ನು ನೆಟ್ಟಿದ್ದೆ. ಕೆಲವು ಸಮಯದ ಹಿಂದೆ ನೋಡಿದರೆ ಹುಲಸಾಗಿ ಬೆಳೆದು ನನ್ನನ್ನು ಅಣಕಿಸುತ್ತಿತ್ತು. ಮೊನ್ನೆ ಮೊನ್ನೆ ಹತ್ತಿರದ ಮನೆಯವ ಗಣಹೋಮದ ಕಜ್ಜಾಯಕ್ಕಾಗಿ ಎಂದು ಕಬ್ಬನ್ನು ಕೊಂಡೋಗಿದ್ದ. ಯೋಚನೆಯು ಮುಂದುವರಿದಂತೆ ನಾಚಿಕೆಯಾಗಬಹುದು.... ಆದರೂ ಎಂದಿಷ್ಟು ನಿಮಗೆ ಹೇಳಿ ಬಿಡೋಣ ಅಂತ ಅನಿಸುತ್ತಿದೆ. ಯಾಕೆಂದರೆ ನೀವು ನನ್ನ ಹಾಗೆ ಆಗಿರಲಿಕ್ಕಿಲ್ಲ? ಕಳೆದ ಜನವರಿಯಲ್ಲಿ ಬೆಳೆದ ಕಬ್ಬು ಒಂದು ಗಣಹೋಮವನ್ನಾದರೂ ಸುಧಾರಿಸಿತು. ಆದರೆ ಇಂತಹ 24 ಜನವರಿ ಕಂಡ ನಾನು ........ ಸಾಕು.

ಒಂದು ವರ್ಷ ಮುಗಿಸಿದ ವಿಜಯೋತ್ಸವ ಮಾಡಬೇಕು ಎಂದು ಅನಿಸಿತು. ಅಂದರೆ ಡಿ.31 ರಂದು ಆಚರಿಸುವ ಭರ್ಜರಿ ಆಚರಣೆ. ಏನೇನೂ...ಎಲ್ಲಾ ಮಾಡುತ್ತಾರೆ. ಅಬ್ಬಾ.. ಆ ದಿನ ಪ್ರಪಂಚದಾದ್ಯಂತ ನಡೆಸುವ ಗಮ್ಮತ್ತಿನ ಹಬ್ಬ. ಒಂದು ವರ್ಷ ಸಣ್ಣ ಒಳ್ಳೆಯ ಕೆಲಸ ಮಾಡದಿದ್ದರೂ, ಪ್ರಪಂಚದ ಎಲ್ಲಾ ಭಾರವನ್ನು ಇವನೊಬ್ಬನೇಹೊತ್ತುಕೊಂಡಿದ್ದಂತೆ ಆ ದಿನ ರಾತ್ರಿ ಎಲ್ಲಾ ಧೂಮ್ ಧಾಮ್ ಸೆ ಕಳೆದು ಮರುದಿವಸ ಮತ್ತೆ ಹಿಂದಿನದೇ ಚಾಳಿ. ನನಗ್ಯಾಕೋ ಅದೆಲ್ಲಾ ಬೇಡ ಎನ್ನಿಸಿತು. ನಾನೆಂದಾರೊಂದು ಸಣ್ಣ ಸಾಧನೆ ಮಾಡಿದ್ದರೂ ಅದಕ್ಕೆ ಅರ್ಹ. ನಾನೇನು ಮಾಡಲಿಲ್ಲ.

ಒಂದು ವರ್ಷದಲ್ಲಿ ಕೋರ್ಸ್ ಮುಗಿಸಿದ್ದು, ಪರೀಕ್ಷೆ ಬರೆದದ್ದೂ, ಫಲಿತಾಂಶ ಬಂದಾಗ ಜಸ್ಟ್ ಪಾಸ್ ಎಂದು ತಿಳಿದು ಮನೆಯಂಗಳದಲ್ಲಿ 'ಮೈಕಲ್ ಜಾಕ್ಸನ್' ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದೂ. ಕೆಲಸ ಹುಡುಕಿ ಹುಡುಕಿ ಸಿಗದಾದಾಗ, ಒಂದು ಕಡೆ 'ಎಲ್ಲಿಯೂ ಸಲ್ಲದವ ಇಲ್ಲಿ ಸಂದ' ಎಂಬ ರೀತಿಯಲ್ಲಿ ಕೆಲಸ ದೂರಕಿಸಿಕೊಂಡದ್ದು. ಇದು ವರ್ಷದ ಡೈರಿಯ ಮುಖ ಪುಟದ ದಾಖಲೆಗಳು.

ಇನ್ನೂ ಮರೆತು ಬಿಡಬೇಕೆನಿಸಿದ್ದು ಹಲವು ಇತ್ತು. ಗೆಳೆಯನ ಜೊತೆ ಗಲಾಟೆ. ಬಸ್ ಕಂಡಕ್ಟರ್‌ಗೆ ಧಮ್ಕಿ ಹಾಕಿದ್ದು, ಅಪ್ಪನಿಂದ ಫೈನಲ್ ವಾರ್ನಿಂಗ್ (ಅದನ್ನು ಕ್ಷಣದಲ್ಲೇ ಮರೆತಿದ್ದೆ). ಸರಿ ಈ ಎಲ್ಲಾ ಪಟ್ಟಿ ಬಹಳವಾಯಿತು. ಯಾಕೆಂದರೆ ಹೊಸವರ್ಷದ ಆಚರಣೆಯ ದ್ವಂದ್ವದಲ್ಲಿದ್ದೇನೆ.

ಈ ಎಲ್ಲಾ ವಿಷಯ ತಿರುಗಿ ಮರುಗಿ ನನ್ನ ಹತ್ತಿರ ಬರುವಾಗ ಹೊಸ ವರ್ಷದ ಆಚರಣೆಯ ದಿನ ಹತ್ತಿರದಲ್ಲಿತ್ತು,

ಹೇಗೂ ಆಗಲಿ. ಈ ವರ್ಷ ಏನೂ ಮಾಡಲಿಲ್ಲ. ಮಂದಿನ ವರ್ಷವಾದರೂ ಕೆಲವು ಒಳ್ಳೆಯ ಕೆಲಸವನ್ನು ಮಾಡಿ ಪುಣ್ಯ ಕಟ್ಟಿಕೊಳ್ಳುತ್ತೇನೆ ಎಂದು ಯೋಚಿಸುತ್ತಾ, ಎಲ್ಲರಿಗೂ ಹೊಸ ವರ್ಷದ ಶುಭಾಶಯ ಹೇಳಿ ಮುಗಿಯುವುದರ ಜೊತೆಗೆ, ನಾನೂ ಆಚರಣೆಗೆ ಮಾಡಲು ತಯಾರಾಗಬೇಕಾಗಿತ್ತು.

ಧನ್ಯವಾದ...

Share this Story:

Follow Webdunia kannada