Select Your Language

Notifications

webdunia
webdunia
webdunia
webdunia

ಮೈಸೂರ ನಗರ ನೋಡಬನ್ನಿ

ಮೈಸೂರ ನಗರ ನೋಡಬನ್ನಿ
ನ್ಯೂಸ್ ರೂಮ್ ವಿಶೇಷ
WD
ನೆಮ್ಮದಿ ಬೇಕೆನ್ನಿಸಿದರೆ ನೀವು ಮೈಸೂರನ್ನು ಅರಸಲೇ ಬೇಕು. ಹಳೆಯ ಸೊಗಡಿನ ತಾಳಕ್ಕೆ ನೀವು ಮನಸೋಲಲೇ ಬೇಕು. ಪಾರಂಪರಿಕ ಸೌಧಗಳು, ಅರಮನೆಯ ವೈಭೋಗದ ಕುರುಹುಗಳು, ಭವ್ಯ ಪ್ರಾಕಾರ ಮಂದಿರ, ಮಂಟಪಗಳು, ಹಸಿರುಡುಗೆಯಲ್ಲಿ ಮಿಂದ ಉದ್ಯಾನಗಳು ಒಂದೇ ಎರಡೇ ಮನಗಳ ಸೂರೆಗೊಳ್ಳುವುದಕ್ಕೆ, ಮುದುಡಿದ ಮನಗಳಿಗೆ ಚೇತನ ಕೊಟ್ಟು ಒಂದು ಮಾಡುವುದಕ್ಕೆ!

ಅರಮನೆಯ ಮುಂದಿನ ವಿಶಾಲ ರಹದಾರಿಯಲ್ಲಿ ಹಳೆಯ ಕುರುಹುಗಳಲ್ಲೊಂದಾದ ಟಾಂಗಾಗಳನ್ನೇರಿ ಸವಾರಿ ಹೊರಟರೆ ಆಹಾ ಏನು ಮಜಾ.. ಅನುಭವಿಸಿಯೇ ತೀರಬೇಕು. ಮೈಸೂರಲ್ಲಿ ವಿಶೇಷವಾದ ಮುಂಬಯಿಯ ವಿಕ್ಟೋರಿಯಾ ಟಾಂಗಾ ಹಾಗೂ ಮೈಸೂರು ಮಹರಾಜರ ಕಾಲದ ಷಾ ಪಸಂದ್ ಟಾಂಗಾಗಳಿವೆ. ಈಗಲೂ ಮೈಸೂರ ಮೂಲೆ ಮೂಲೆಗಳಲ್ಲಿ ತಡಕಾಡಿದರೆ ಅಲ್ಲೊಂದು ಇಲ್ಲೊಂದು ಟಾಂಗಾಗಳಲ್ಲಿ ಆ ದಿನಗಳನ್ನು ನೆನಪಿಗೆ ತರುವಂತಹ ಟಾಂಗಾಗಳಿದ್ದು ಅವುಗಳಲ್ಲಿ ದೀಪಗಳಿವೆ. ದಸರಾ ದಿನಗಳಲ್ಲಿ ಮೈಸೂರ ಸುತ್ತಲು ಟಾಂಗಾಗಳಿಗೆ ಎಲ್ಲಿಲ್ಲದ ಬೇಡಿಕೆ.

ದಸರೆಯ ಈ ದಿನಗಳಲ್ಲಿ ಮೈಸೂರಲ್ಲಿ ನೋಡಲೇನಿದೆ ಅಂತ ಹುಬ್ಬೇರಿಸಬೇಡಿ. ನೋಡುತ್ತಾ ಹೋದರೆ ದಿನಗಳೇ ಸಾಲದು. ಚಾಮುಂಡಿ ಬೆಟ್ಟದ ಬುಡದಲ್ಲಿನ ನಂದಿ, ಮೇಲಿರುವ ಮಹಿಷಾಸುರನಿಂದ ಹಿಡಿದು ಅರಮನೆ, ವಸ್ತು ಪ್ರದರ್ಶನ ಕ್ರೀಡಾಂಗಣ, ಲಲಿತಮಹಲ್ ಪ್ಯಾಲೇಸ್ ಹೀಗೆ ಹತ್ತು ಹಲವಾರು.

webdunia
WD
ಬಾಂಬೆ ಟಿಫಾನಿಸ್, ಇಂದ್ರ ಭವನ್, ರಾಘವೇಂದ್ರ ಭವನ್, ಬಾಂಬೆ ಪರಾಸ್‌ನಂತಹ ಹಳೆಯ ಹೋಟೆಲ್‌ಗಳು ರಾಜರ ಕಾಲದಿಂದಲೂ ಇದ್ದು, ಇಂದಿಗೂ ತನ್ನ ರುಚಿಗೆ, ಅಚ್ಚುಕಟ್ಟುತನಕ್ಕೆ ಜನಪ್ರಿಯವಾಗಿದೆ. ಇನ್ನು ಮೇಯೋ ಹಾಲ್, ಕ್ಲಾಕ್ ಟವರ್, ಜಗನ್ಮೋಹನ ಪ್ಯಾಲೇಸ್, ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರ, ವೀಣೆ ಶೇಷಣ್ಣನವರ ಗಾನಭಾರತೀ ಹೀಗೆ ಹತ್ತು ಹಲವಾರು ಹಳೆಯ ಕಟ್ಟಡಗಳು ಕಣ್ಮನ ಸೆಳೆಯುತ್ತವೆ.

ಮೈಸೂರು ಅರಮನೆಯನ್ನು ಇಂಡೋಸಾರ್ಸನಿಕ್ ಶೈಲಿಯಲ್ಲಿ 1897ರಲ್ಲಿ ನಿರ್ಮಿಸಲಾರಂಭಿಸಿ 1912ರಲ್ಲಿ ಪೂರ್ಣಗೊಳಿಸಲಾಯಿತು. ಅಂಬಾವಿಲಾಸ (ಖಾಸಗಿ ದರ್ಬಾರು ನಡೆಯುವ ಸ್ಥಳ), ದಸರಾ ಮೆರವಣಿಗೆಯ ಬೃಹತ್ ತೈಲವರ್ಣದ ಚಿತ್ರಣ, ಕಲ್ಯಾಣ ಮಂಟಪದ ಕೊಠಡಿಗಳನ್ನು ಅರಮನೆ ಒಳಗೊಂಡಿದೆ. ದಸರಾ ಅವಧಿಯಲ್ಲಿ ಮಾತ್ರ ಅರಮನೆಯಲ್ಲಿ ಚಿನ್ನದ ಸಿಂಹಾಸನ ನೋಡಲು ಅವಕಾಶವಿದೆ. ರಾತ್ರಿ ವೇಳೆ ಅರಮನೆಯು 96 ಸಾವಿರ ಬಲ್ಬುಗಳಿಂದ ಬೆಳಗುತ್ತದೆ.

ಇನ್ನು ಚಾಮರಾಜೇಂದ್ರ ಮೃಗಾಲಯ 250 ಎಕೆರೆ ಸ್ಥಳಾವಕಾಶದಲ್ಲಿದೆ. ಇದನ್ನು ರಾಷ್ಟ್ತ್ರದ ಪ್ರಥಮ ಮೃಗಾಲಯವೆಂದೂ ಕರೆಯುತ್ತಾರೆ.

ಜಗನ್ಮೋಹನ ಅರಮನೆ 1900ರಲ್ಲಿ ಕಟ್ಟಿದ್ದಾದರೂ ಇಂದಿಗೂ ಮನಮೋಹಕವಾಗಿದೆ. ಇದನ್ನು ನಾಲ್ಕನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕಲಾ ಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು. 1954ರಲ್ಲಿ ಅಧಿಕೃತವಾಗಿ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಇಲ್ಲಿ ರಾಜ ಮನೆತನದವರ ವರ್ಣಚಿತ್ರಗಳು, ರಾಜಾ ರವಿವರ್ಮ ಮತ್ತು ಭಾರತೀಯ ಮತ್ತು ಪಾಶ್ಚಾತ್ಯ ವರ್ಣಚಿತ್ರಗಳನ್ನು ನೋಡಬಹುದಾಗಿದೆ.

ಚಾಮುಂಡಿ ಬೆಟ್ಟ ನೆಲ ಮಟ್ಟದಿಂದ 3,489 ಅಡಿ ಎತ್ತರದಲ್ಲಿದ್ದು 1000 ಮೆಟ್ಟಿಲುಗಳನ್ನು ಹೊಂದಿದೆ. ರಾಜ ಮನೆತನದವರ ಆರಾಧ್ಯದೇವಿಯಾದ ಚಾಮುಂಡೇಶ್ವರಿಯ ಬೃಹತ್ ದೇವಾಲಯವು ಬೆಟ್ಟದ ಮೇಲಿದ್ದು ದ್ರಾವಿಡ ಶೈಲಿಯಲ್ಲಿದೆ.

ಕೆ.ಆರ್.ಎಸ್.ನ ಬೃಂದಾವನ ಮೈಸೂರಿನಿಂದ 15 ಕಿ.ಮಿ. ದೂರದಲ್ಲಿದೆ. ಕೆ.ಆರ್.ಎಸ್. ನ ರೂವಾರಿ ಸರ್.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಈ ಪ್ರಾಂತ್ಯಕ್ಕೆ ಅತಿ ದೊಡ್ಡದು. ಈ ಅಣೆಕಟ್ಟೆ 2621 ಮೀಟರಿಷ್ಟು ಉದ್ದ ಮತ್ತು 39 ಮೀಟರಿಷ್ಟು ಎತ್ತರವಿದೆ. ಜಲಾಶಯವು ಸುಮಾರು 130 ಚದರ ಅಡಿ ಕಿ.ಮೀ.ನಷ್ಟು ಪ್ರದೇಶದಲ್ಲಿದೆ. ಜಲಾಶಯದ ಸುತ್ತಲಿರುವ ಉದ್ಯಾನವನ, ಪುಟಿದೇಳುವ ಸಂಗೀತ ಕಾರಂಜಿ, ದೀಪಾಲಂಕಾರದಿಂದ ಅತ್ಯಾಕರ್ಷಕವಾಗಿದೆ.

ಮೈಸೂರು ಎಷ್ಟು ಸುಂದರವೋ ಅಷ್ಟೇ ಸುಂದರವಾದ ಸ್ಥಳಗಳ ಅದರ ಸುತ್ತಮುತ್ತಲಿವೆ. ಅವುಗಳಲ್ಲಿ ಪ್ರಮುಖವಾಗಿ ಶ್ರೀರಂಗಪಟ್ಟಣ, ರಂಗನತಿಟ್ಟು, ನಂಜನಗೂಡನ್ನು ಹೆಸರಿಸಬಹುದು.

Share this Story:

Follow Webdunia kannada