Select Your Language

Notifications

webdunia
webdunia
webdunia
webdunia

ವಿಘ್ನ ನಿವಾರಿಸುವ ಸಂಕಷ್ಟಹರ ಚತುರ್ಥಿ ವ್ರತ

ವಿಘ್ನ ನಿವಾರಿಸುವ ಸಂಕಷ್ಟಹರ ಚತುರ್ಥಿ ವ್ರತ
WDWD
ರಜನಿ
ಶಬ್ದವೇ ಸೂಚಿಸುವಂತೆ ಸಂಕಷ್ಟ ಪರಿಹಾರಕ್ಕಾಗಿ, ಸಂಕಷ್ಟ ವಿನಾಶಕ್ಕಾಗಿ ಮಾಡುವ ವ್ರತ ಸಂಕಷ್ಟಹರ ವ್ರತ. ವಿಘ್ನಗಳೆಲ್ಲವನ್ನೂ ನಿವಾರಿಸುವ ಅಧಿದೇವತೆ ಗಣಪತಿ, ವಿಘ್ನವಿನಾಶಕ, ವಿನಾಯಕ. ವಿಘ್ನಗಳ ಜಯಿಸುವವನು ವಿನಾಯಕ. ಈ ವಿನಾಯಕನ ಅನುಗ್ರಹಕ್ಕಾಗಿ ಮಾಡುವ ವ್ರತವೇ ಸಂಕಷ್ಟಹರ ವ್ರತ.

ಬಾಲಕರಿಂದ ಹಿಡಿದು ವೃದ್ಧರವರೆಗೆ ಭಾರತದಾದ್ಯಂತ ಆಚರಿಸುವ ಸರಳ ರೀತಿಯ ವ್ರತವಿದು. ಅದೇ ರೀತಿ ಸುಲಭವಾದ ರೀತಿಯಲ್ಲಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ನೀಡುವ ವ್ರತವಾಗಿದೆ.

ಇನ್ನೊಂದು ಕಡೆ, ಈ ವ್ರತವು ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸುತ್ತದೆ. ಇದು ಮಕ್ಕಳಿಗೆ ವಿದ್ಯೆ ಕೊಟ್ಟರೆ, ಹದಿಹರೆಯದವರಿಗೆ ಕಂಕಣಭಾಗ್ಯವನ್ನು ನೀಡುತ್ತದೆ.

ಮುತ್ತೈದೆಯರಿಗೆ ಮಾಂಗಲ್ಯರಕ್ಷಣೆ ಮತ್ತು ವೃದ್ಧರಿಗೆ ಮನಃಶಾಂತಿಯನ್ನು ಈ ವ್ರತವು ನೀಡುತ್ತದೆ. ಒಟ್ಟಿನಲ್ಲಿ ಇದು ಸಾಮಾಜಿಕವಾಗಿ, ಕೌಟುಂಬಿಕವಾಗಿ, ವೃತ್ತಿಯಲ್ಲಿ ನೆಮ್ಮದಿಯನ್ನು , ಯಶಸ್ಸನ್ನೂ ನೀಡುತ್ತದೆ.

ಇದರಿಂದ ಫಲಪ್ರಾಪ್ತಿಯನ್ನು ಪಡೆದವರಿಗೆ ಲೆಕ್ಕವೇ ಇಲ್ಲ. ಆದ್ದರಿಂದ ಇದನ್ನು ಆಬಾಲವೃದ್ಧರಾಗಿ ಎಲ್ಲರೂ ಆಚರಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕಾಲದ ಕಟ್ಟುಪಾಡುಗಳು ಏನೂ ಇಲ್ಲ. ಯಾವ ವಾರ ಬಂದರೂ, ಯಾವ ಮಾಸ ಬಂದರೂ ಶುಭವೇ.

ಇದನ್ನು ಪ್ರತಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯಂದು ಆಚರಿಸುತ್ತಾರೆ. ಇದರಲ್ಲೂ ಮಂಗಳವಾರ ಬಂದರೆ ಅದಕ್ಕೆ ವಿಶೇಷ ಮನ್ನಣೆ. ಈ ವ್ರತವನ್ನು ಪ್ರಾರಂಭಿಸುವವರು ಅಂಗಾರಕ ಚತುರ್ಥಿಯ ದಿನದಿಂದಲೇ ಪ್ರಾರಂಭಿಸುತ್ತಾರೆ. 21 ಚತುರ್ಥಿಗಳಂದು ನಿರಂತರವಾಗಿ ಈ ವ್ರತ ಆಚರಿಸಿದಲ್ಲಿ ವಿಶೇಷ ಫಲ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇದೆ.

ಈ ವ್ರತವನ್ನು ಮಾಡುವವರು ಆ ದಿನ ಮುಂಜಾನೆ ಎದ್ದು ಉತ್ತರಣೆ ಅಥವಾ ಅಪಾಮಾರ್ಗದ ಕಡ್ಡಿಯಿಂದ ಹಲ್ಲನ್ನುಜ್ಜಿ, 365 ಸಲ ಸ್ನಾನ ಮಾಡಿ ( 365 ತಂಬಿಗೆ ನೀರು) ನಂತರ ದೇವರಿಗೆ ದೀಪ ಹಚ್ಚಿ 21 ನಮಸ್ಕಾರ ಮಾಡಬೇಕು. ಆ ದಿನ ಮಧ್ಯಾಹ್ನ ಉಪವಾಸವಿರಬೇಕು. ರಾತ್ರಿ ಚಂದ್ರನನ್ನು ನೋಡಿದ ಬಳಿಕ ಎಳ್ಳು ಅಕ್ಕಿ ತರ್ಪಣ ಬಿಟ್ಟು ನಂತರ ಉಪವಾಸವನ್ನು ಕೈಬಿಡಬೇಕು.(ಸಂಪೂರ್ಣ ಉಪವಾಸ ಕೈಗೊಳ್ಳಲಾಗದವರು ಹಾಲು ಹಣ್ಣುಗಳನ್ನು ಸೇವಿಸಬಹುದು).

ಇಷ್ಟು ವಿಧಿವತ್ತಾಗಿ ಈಗ ಈ ವ್ರತ ಆಚರಣೆಯಲ್ಲಿಲ್ಲದಿದ್ದರೂ, ಚಂದ್ರದರ್ಶನ ಮಾಡಿ ಉಪವಾಸ ಕೈ ಬಿಡುವ ಸರಳ ವಿಧಾನ ಆಚರಣೆಯಲ್ಲಿದೆ. ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ಮನೆಯಲ್ಲಿ ಮೋದಕಗಳನ್ನು ಮಾಡಿ ಗಣಪತಿಗೆ ಅರ್ಪಿಸಿ, ಆಮೇಲೆ ಅದನ್ನು ಪ್ರಸಾದ ರೂಪದಲ್ಲಿ ಹಂಚುತ್ತಾರೆ.

ಈ ದಿನ ಬಹಳ ಶುಭವಾದ್ದರಿಂದ ತಮ್ಮ ಮನೆಗಳಲ್ಲಿ ಗಣಪತಿಗೆ ಪ್ರೀತ್ಯರ್ಥವಾದ ಗಣಹೋಮ,ಅಥವಾ ಇತರ ಯಾವುದೇ ಗಣಪತಿ ಪೂಜೆಗಳನ್ನು ಮಾಡುತ್ತಾರೆ.

ಒಟ್ಟಿನಲ್ಲಿ ವಿಘ್ನವಿನಾಶಕನಾದ ಗಣಪತಿಯ ಅನುಗ್ರಹವನ್ನು ಪಡೆದುಕೊಳ್ಳಲು ಇರುವ ನೂರಾರು ಮಾರ್ಗಗಳಲ್ಲಿ ಸುಲಭವಾದ ದಾರಿ ಇದೊಂದು. ಆತನನ್ನು ಸಂತುಷ್ಟಿಗೊಳಿಸಿ ಫಲವನ್ನು ಪಡೆದವರ ಸಂಖ್ಯೆ ಅಪಾರ. ಆದುದರಿಂದ ಶಿವಸುತನನ್ನು ಸಂಪ್ರೀತಿಗೊಳಿಸಲು ಪ್ರತಿಯೊಬ್ಬರೂ ಇದನ್ನು ತನುಮನದಿಂದ ಆಚರಿಸಿದರೆ ನಮ್ಮ ಶ್ರೇಯಸ್ಸಿಗೆ ಒಳ್ಳೆಯದು.

Share this Story:

Follow Webdunia kannada