Select Your Language

Notifications

webdunia
webdunia
webdunia
webdunia

ಬ್ರಹ್ಮಾಂಡದೊಡೆಯನ ಬ್ರಹ್ಮೋತ್ಸವ ವೈಭವ

ಬ್ರಹ್ಮಾಂಡದೊಡೆಯನ ಬ್ರಹ್ಮೋತ್ಸವ ವೈಭವ

ಅವಿನಾಶ್ ಬಿ.

WD
ಭೂಲೋಕದ ವೈಕುಂಠ ಎಂದೇ ಜನಜನಿತವಾಗಿರುವ ಪರಮ ಪವಿತ್ರ ತಾಣ ತಿರುಮಲ ಬೆಟ್ಟದ ಶ್ರೀ ಶ್ರೀನಿವಾಸನ ಸನ್ನಿಧಿ. ಸಂಕಟ ಬಂದರೆ ವೆಂಕಟರಮಣನಿದ್ದಾನೆ ಎಂಬ ಮಾತಿನಂತೆ, ಕಲಿಯುಗದಲ್ಲಿ ಇಷ್ಟಾರ್ಥ ಸಿದ್ಧಿಸುವ ವೆಂಕಟೇಶ್ವರನ ವೈಭವ ಜಗತ್ಪ್ರಸಿದ್ಧ. ಇಂತಹ ತಿರುಮಲ ಶ್ರೀವಾರಿ ಸನ್ನಿಧಿಯಲ್ಲಿ ಜರುಗುವ ವಾರ್ಷಿಕ ಬ್ರಹ್ಮೋತ್ಸವವು ವಿಶ್ವಾದ್ಯಂತ ಭಕ್ತರನ್ನು ಕೈಬೀಸಿ ಕರೆಯುತ್ತದೆ.

ವಾಸ್ತವವಾಗಿ ತಿರುಮಲದಲ್ಲಿ ಮೂರು ವಿಧದ ಉತ್ಸವಗಳು ನಡೆಯುತ್ತವೆ. ಚೂರ್ಣೋತ್ಸವ, ಆರ್ಚಿತ ಸೇವೆ, ಮತ್ತಿತರ ಸೇವೆಗಳನ್ನೊಳಗೊಂಡು ದಿನಂಪ್ರತಿ ನಡೆಯುವ ಶ್ರದ್ಧಾ ಉತ್ಸವ, ಲೋಕಕಲ್ಯಾಣಕ್ಕಾಗಿ ಯಜ್ಞ-ಯಾಗಾದಿಗಳ ಸಹಿತ ಆಗಾಗ್ಗೆ ನಡೆಯುವ ನಿಮಿತೋತ್ಸವ ಮತ್ತು ವಿಶೇಷ ದಿನಗಳಂದು ನಡೆಯುವ ಕಾಲೋತ್ಸವ. ಈ ಕಾಲೋತ್ಸವದ ಅಡಿಯಲ್ಲಿ ಬ್ರಹ್ಮೋತ್ಸವ ಬರುತ್ತದೆ.

ಈ ಬಾರಿ ಅಧಿಕ ಮಾಸ ಪ್ರಯುಕ್ತ ಎರಡು ಬ್ರಹ್ಮೋತ್ಸವಗಳು ನಡೆಯಲಿದೆ. ಮೊದಲ ಸಾಲಕಟ್ಲ ಬ್ರಹ್ಮೋತ್ಸವವು ಸೆ.15ರಿಂದ 23, 2007ವರೆಗೆ ನಡೆಯಲಿದ್ದರೆ, ಎರಡನೇ ನವರಾತ್ರಿ ಬ್ರಹ್ಮೋತ್ಸವವು ಅಕ್ಟೋಬರ್ 12ರಿಂದ 20, 2007ರವರೆಗೆ ನಡೆಯಲಿದೆ.

ತಿರುಮಲಗಿರಿಯಲ್ಲಿ ಕನ್ಯಾಮಾಸದ ಶ್ರವಣ ನಕ್ಷತ್ರ ದಿನ ಭಗವಾನ್ ಶ್ರೀನಿವಾಸನು ವಿಶೇಷವಾಗಿ ತಿರುಮಲಗಿರಿಯಲ್ಲಿ ಆರೂಢನಾಗಿರುತ್ತಾನೆ ಎಂಬ ಪ್ರತೀತಿ. ಚಾಂದ್ರಮಾನದ ಪ್ರಕಾರ ಆ ದಿನ ವಿಜಯ ದಶಮಿ ಆಗಿರುತ್ತದೆ.

webdunia
WD
ಸೆ.14ರಂದು ಅಂಕುರಾರ್ಪಣೆ, ಸೆ.15ರಿಂದ ಧ್ವಜಾರೋಹಣದೊಂದಿಗೆ ಆರಂಭವಾಗುವ ಮೊದಲ ಸಾಲಕಟ್ಲ ಬ್ರಹ್ಮೋತ್ಸವವು 9 ದಿನಗಳ ಪರ್ಯಂತ ನಡೆಯಲಿದ್ದು, ಒಂದೊಂದು ದಿನವೂ ಒಂದೊಂದು ವಾಹನದ ಮೇಲೆ ಶ್ರೀನಿವಾಸನ ಅದ್ದೂರಿಯ ಮೆರವಣಿಗೆ ನಡೆಯುತ್ತದೆ.

ಪುರಾಣ ಕಥನದ ಪ್ರಕಾರ, ತೊಂಡಮಾನ ಚಕ್ರವರ್ತಿಯು ತಿರುಮಲಗಿರಿಯಲ್ಲಿ ಸ್ಥಾಪಿಸಿದ ದೇವಾಲಯದಲ್ಲಿ ಬ್ರಹ್ಮನು ಎರಡು ಜ್ಯೋತಿಗಳನ್ನು ಸ್ಥಾಪಿಸುತ್ತಾನೆ. ಈ ಅಖಂಡ ಜ್ಯೋತಿಗಳು ಕಲಿಯುಗಾಂತದವರೆಗೂ ಬೆಳಗುತ್ತಿರುತ್ತವೆ ಎಂದು ಬ್ರಹ್ಮ ಅಭಯ ನೀಡಿರುತ್ತಾನೆ. ಅಲ್ಲಿ ನೆಲೆಸಿದ ಶ್ರೀನಿವಾಸನ ಉತ್ಸವವನ್ನು ಲೋಕಹಿತಕ್ಕಾಗಿ ನೆರವೇರಿಸಲು ಬ್ರಹ್ಮ ದೇವನು ನಿಶ್ಚಯಿಸುತ್ತಾನೆ.
webdunia
WD
ಈ ಉತ್ಸವ ಪ್ರಯುಕ್ತ ವಿಶ್ವಕರ್ಮನು ಶ್ರೀನಿವಾಸನಿಗೆ ತಕ್ಕುದಾದ ವಾಹನ ನಿರ್ಮಿಸಿಕೊಡುತ್ತಾನೆ. 9 ದಿನಗಳ ಕಾಲ ಈ ಉತ್ಸವ ನಡೆದು, ಇದರಿಂದ ಸಂಪ್ರೀತನಾದ ಶ್ರೀನಿವಾಸನು, ಇದು ಬ್ರಹ್ಮದೇವ ಆರಂಭಿಸಿದ ಉತ್ಸವವಾದುದರಿಂದ ಇದಕ್ಕೆ ಬ್ರಹ್ಮೋತ್ಸವ ಎಂದೇ ಅಭಿದಾನ ಮಾಡಿದ. ಬ್ರಹ್ಮೋತ್ಸವಗಳಂದು ನಡೆಯುವ ವಿವಿಧ ವಾಹನ ಉತ್ಸವಗಳು ರಥದ ಮೇಲೆ ನಡೆಯುತ್ತವೆ. ಈ ರಥಕ್ಕೆ ಎರಡು ಚಕ್ರಗಳಿರುತ್ತವೆ. ಇವು ಅನುಕ್ರಮವಾಗಿ ಧರ್ಮ ಮತ್ತು ಭಕ್ತಿಯ ಸಂಕೇತ.

ಅಲ್ಲಿರುವ ಪುಷ್ಕರಿಣಿಯಲ್ಲಿ ಶುಚಿರ್ಭೂತರಾಗಿ ಈ ವೈಭವೋಪೇತ ಬ್ರಹ್ಮೋತ್ಸವ ವೀಕ್ಷಿಸಿದಲ್ಲಿ ಭಕ್ತರ ಸಕಲ ಪಾಪಗಳೂ ನಿವಾರಣೆಯಾಗುತ್ತವೆ. ಅವರು ಪುನರ್ಜನ್ಮದತ್ತ ತೆರಳದೆ, ಸ್ವರ್ಗ ಸೇರುತ್ತಾರೆ ಮತ್ತು ಈ ಮೂಲಕ ಶಾಶ್ವತ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.

ಈ ಬ್ರಹ್ಮೋತ್ಸವ ವೈಭವವನ್ನು ನೋಡಬನ್ನಿರಿ. ವೆಬ್‌ದುನಿಯಾ ಕನ್ನಡ ತಾಣವು ನಿಮಗಾಗಿ ಒಂಬತ್ತು ದಿನಗಳ ಪರ್ಯಂತ ಲೇಖನಗಳೊಂದಿಗೆ ಬ್ರಹ್ಮೋತ್ಸವ ವೈಭವವನ್ನು ವೀಡಿಯೋ ಮೂಲಕ ವೀಕ್ಷಿಸಲು ಓದುಗರಿಗೆ ಅವಕಾಶ ಕಲ್ಪಿಸಿಕೊಡಲಿದೆ. ನಿರೀಕ್ಷಿಸಿ.

Share this Story:

Follow Webdunia kannada