Select Your Language

Notifications

webdunia
webdunia
webdunia
webdunia

ನೋ ಆಪ್ಷನ್....!!!

ನೋ ಆಪ್ಷನ್....!!!
PTI
ದರಿದ್ರ ಮಾರ್ಕ್ವಿಜ್ ! ಧೋ... ಎಂದು ಸುರಿಯುವ ಪ್ರೀತಿಗೆ ಹರಿದು ನಿನ್ನ ತಲುಪಲು ಅವಕಾಶ ನೀಡುತ್ತಿಲ್ಲವಲ್ಲ, ಬಿದ್ದ ಮಳೆ ನೀರೆಲ್ಲ ಕೋಟೆ ಕೆರೆಯಲ್ಲಿ ನಿಲ್ಲುವಂತೆ ನನ್ನ ಪ್ರೀತಿಯದೂ ಅದೇ ಪರಿಸ್ಥಿತಿ. ಎಷ್ಟು ಇದ್ದರೂ ಕೊನೆಗೆ ಎಲ್ಲಿಯಾದರೂ ನಿಲ್ಲಲೇಬೇಕಲ್ಲ!!

ಅದೇ ಕಾರಣಕ್ಕೆ ಇನ್ನೂ ನನ್ನಲ್ಲೇ ಅದು ಮಡುಗಟ್ಟಿಕೊಂಡಿದೆ. ನಾನು ಎಷ್ಟೇ ಪ್ರಯತ್ನ ಪಟ್ಟರೂ ನಿನಗೆ ತಿಳಿಸಲಿಕ್ಕಾಗುವುದಿಲ್ಲ. ಇದು ಹೊಣೆಗೇಡಿಯೊಬ್ಬನ ಹೊಣೆಗೇಡಿತನದ ಕೆಲಸ. ಅದ್ಯಾಕೆ ಪ್ರತಿಸಾರಿ ನಾನು ಹೇಳಬೇಕು, ನನ್ನ ಪ್ರೀತಿಯನ್ನ ನಿನ್ನೆದುರು ಬಿಚ್ಚಿಡಬೇಕು ಎಂದಾಗಲೆಲ್ಲ, ಲವ್ ಇನ್ ಕಾಲರಾದ ಗ್ಯಾಬ್ರಿಯೆಲ್ ಮಾರ್ಕ್ವಿಜ್ ಅಡ್ಡ ಬರುತ್ತಾನೆ.

ಅದರಲ್ಲಿನ ನಾಯಕ ಪ್ರೇಮದ ಯಶಸ್ಸಿಗೆ 64 ವಸಂತಗಳಷ್ಟು ಕಾಯುತ್ತಾನೆ ಅಂತ ಪದೇ ಪದೇ ಹೇಳ್ತಾ ಇರ್ತಿಯಲ್ಲ. ಅವನೊಬ್ಬ ಹೊಣೆಗೇಡಿ ಅಷ್ಟೆ, ಮತ್ತೇನಲ್ಲ. ಪ್ರೀತಿ ಕುರುಡು ಅಂತಾರೆ, ಒಪ್ಕೊಳೋಣ. ಆದರೆ ಬದುಕು ಕುರುಡು ಅಲ್ವಲ್ಲ, ಅದ್ಯಾಕೆ ಅವನಿಗೆ ತಿಳಿಯಲಿಲ್ಲ?

ನನಗೂ ಒಬ್ಬಳು ಚೆಂದದ ಹುಡುಗಿ ಇದಾಳೆ, ಅವಳಿಗೆ ಬರಿ ನವಿಲುಗರಿ ಕೊಟ್ಟರೆ ಸಾಲದು. ಇನ್ನೂ ನನ್ನಿಂದ ನಿರೀಕ್ಷಿಸುತ್ತಾಳೆ. ಬದುಕು ಕಟ್ಟೋದನ್ನು ಬಿಟ್ಟು ಅವಳ ಮನೆ ಎದುರು ಕೊಳಲು ಊದ್ತಾ ಕುಂತಕಂಡರೆ ಬಿಟ್ಟು ಹೋಗದೇ ಮತ್ತೇನು ಮಾಡ್ತಾಳೆ?

ಹಂಗೆ ಸುಮ್ಮಾಕೆ ಕಾದಂಬರಿಯಲ್ಲಿನ ಅಮರ ಪ್ರೇಮದ ಬಗ್ಗೆ ವಿಚಾರ ಮಾಡುವ ನಿನ್ನಂತಹ ಮಾರಾಯ್ತಿಗೆ ಏನು ಅನ್ನಬೇಕು? ಅದೇನೊ ಅಂತಾರಲ್ಲ... ಇದ್ದುದೆಲ್ಲವ ಬಿಟ್ಟು ಇಲ್ಲದೆಡೆಗೆ ತುಡಿಯುವುದೇ ಜೀವನ ಅಂತ.

ಇಲ್ಲದ ಕತೆಗಳಿಗೆ ತಲೆ ಕೆಡಿಸಿಕೊಳ್ಳುವ ನಿನ್ನಂತಹವರು ಏಕ್ ಬಾರ್ ನಜರ್ ಮಿಲಾಕೆ ದೇಖೊ, ಏ ತರಸ್ತೀ ಆಂಖೆ ಸಬಕುಛ್ ಕೆಹ ದೇತಿ ಹೈ. ಹುಡುಗರು ಪ್ರೀತಿಯ ಲೆಕ್ಕದಲ್ಲಿ ಜುಗ್ಗು ಮಾರವಾಡಿಗಳು. ಇಲ್ಲಮ್ಮಾ... ಬಾಯಿ ಬಿಟ್ಟರೆ ಇದ್ದುದೂ ಕಳಕೊಂಡು ಬಿಟ್ಟರೆ ತಿಮ್ಮಪ್ಪನೇ ಗತಿ ಅಂದ್ಕೊಂಡು ಸುಮ್ಮಾಕೆ ಇರ್ತಾರೆ. ಅದನ್ನ ತಿಳಕೊಳ್ಳೋದು ಹುಡುಗಿಯಾದವಳಿಗೆ ಆಗಲಿಲ್ಲ ಅಂದರೆ ನನ್ನ ಕೆಮಿಸ್ಟ್ರಿ ತಪ್ಪಾ ?

ಇಲ್ಲಮ್ಮ... ನನ್ನ ಲೆಕ್ಕ ತಪ್ಪಿಲ್ಲ.. ತಪ್ಪಿದ್ದು ಒಂದೇ, ಆ ದರಿದ್ರ ಮಾರ್ಕ್ವಿಜ್‌ನ ಲವ್ ಇನ್ ಕಾಲರಾ ಕೊಟ್ಟು ತಪ್ಪು ಮಾಡಿದೆ. ಅದಕ್ಕೆ ಅವನು ನನ್ನಂತೆ ನೀನು ಕಾಯ್ತಾ ಮುದುಕನಾಗು ಅಂತ ಆಶೀರ್ವಾದ ಮಾಡಿದ್ದೀ... ಕಾಯಬೇಕಷ್ಟೆ ನೋ ಆಪ್ಶನ್....!!

- ಸತೀಶ್ ಪಾಗಾದ್

Share this Story:

Follow Webdunia kannada