Select Your Language

Notifications

webdunia
webdunia
webdunia
webdunia

'ಕನ್ನಡ ಉಳಿಸಿಕೊಳ್ಳಬೇಕು; ಇಂಗ್ಲಿಷ್ ಕೊಲೆಗಡುಕ ಭಾಷೆ'

'ಕನ್ನಡ ಉಳಿಸಿಕೊಳ್ಳಬೇಕು; ಇಂಗ್ಲಿಷ್ ಕೊಲೆಗಡುಕ ಭಾಷೆ'
ಬೆಂಗಳೂರು , ಶುಕ್ರವಾರ, 4 ಫೆಬ್ರವರಿ 2011 (16:10 IST)
ಕನ್ನಡ ಭಾಷೆ ಈಗ ನಿಜಕ್ಕೂ ಕಷ್ಟಕ್ಕೆ ಸಿಲುಕಿದೆ. ಅದರ ಮೇಲೆ ಇಂಗ್ಲಿಷಿನಂಥ ಕೊಲೆಗಡುಕ ಭಾಷೆಯ ಕಣ್ಣು ಬಿದ್ದಿದೆ. ಜಾಗತೀಕರಣದ ಪರಿಣಾಮವಾಗಿ ಕನ್ನಡವನ್ನು ಮಾತನಾಡುವ ಎಲ್ಲ ಪ್ರದೇಶಗಳಲ್ಲಿಯೂ ಇಂಗ್ಲಿಷ್ ನುಗ್ಗುತ್ತ ಇದೆ ಎಂದು 77ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ.ಜಿ.ವಿ.ಆತಂಕ ವ್ಯಕ್ತಪಡಿಸಿದರು.

ನಮ್ಮ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪರದೇಶಗಳ ಬೋಧನ ಪದ್ಧತಿಗಳನ್ನು ಆಮದು ಮಾಡುತ್ತಾ ಸ್ವಂತಿಕೆಯನ್ನು ಶಿಕ್ಷಕರು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲಾರದೆ ಹೋದರೆ ಅಪಾಯ ತಪ್ಪಿದ್ದಲ್ಲ ಎಚ್ಚರಿಸಿದ ಅವರು, ಈ ಆಕ್ರಮಣಶೀಲದಿಂದ ನಗರಪ್ರದೇಶಗಳಲ್ಲಿ ಕನ್ನಡದ ಪ್ರಯೋಗ ಕಡಿಮೆಯಾಗುತ್ತಾ ಇದೆ. ಈ ಸ್ಥಿತಿಯನ್ನು ಜನಾಂದೋಳನದ ಮೂಲಕ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಎರಡನೆಯೇ ಸ್ಥಾನಕ್ಕೆ ತಳ್ಳಲ್ಪಡುವ ಅಪಾಯವಿದೆ. ಇಂಗ್ಲಿಷ್ ಭಾಷೆಯೇ ಪ್ರಧಾನವಾಗಿ ಬೆಳೆಯುತ್ತಿರುವ ಎಲ್ಲ ದೇಶಗಳಲ್ಲಿಯೂ ಈ ಹೆದರಿಕೆ ಇದೆ. ಕೆನಡಾ ದೇಶದಲ್ಲಿ ಫ್ರೆಂಚ್ ಪ್ರಥಮ ಭಾಷೆಯಾದರೂ ಇಂಗ್ಲಿಷ್ ಭಾಷೆಯಿಂದ ಅದಕ್ಕೆ ಹೆದರಿಕೆ ಇದೆ. ಇದನ್ನು ಆ ದೇಶದಲ್ಲಿ ಪ್ರಮುಖ ಸಮಸ್ಯೆ ಎಂದು ಪರಿಗಣಿಸಿದ್ದಾರೆ ಎಂದು ಉದಾಹರಣೆ ಮೂಲಕ ಹೇಳಿದರು.

ಕನ್ನಡ ಸಿನಿಮಾ -ಡಬ್ಬಿಂಗ್ ಕಲೆಯೇ ಅಲ್ಲ!
ಕನ್ನಡ ಸಿನಿಮಾ ಪ್ರಪಂಚವನ್ನು ನೆನೆದಾಗ ಈ ಲೋಕಕ್ಕೆ ಅಪಾಯ ಸಂಭವಿಸುತ್ತ ಇರುವುದು ನನ್ನ ಗಮನಕ್ಕೆ ಬಂದಿದೆ. ಇಷ್ಟು ದಿನಗಳೂ ಡಬ್ಬಿಂಗ್ ಎಂಬ ಅವ್ಯವಹಾರದಿಂದ ದೂರವಾಗಿದ್ದು ಸುಖವಾಗಿದ್ದ ಪ್ರಪಂಚಕ್ಕೆ ಈಗ ಡಬ್ಬಿಂಗ್ ಮತ್ತೆ ನುಗ್ಗುವ ಪ್ರಯತ್ನ ಮಾಡುತ್ತಿದೆಯಂತೆ. ಡಬ್ಬಿಂಗ್ ನಿಜವಾಗಿ ಕಲೆಯೇ ಅಲ್ಲ!ಅದು ಮತ್ತೆ ಕನ್ನಡ ಸಿನಿಮಾ-ದೂರದರ್ಶನಗಳಿಗೆ ತಲೆ ಹಾಕದಂತೆ ಕನ್ನಡಿಗರೆಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದರು.

ಪತ್ರಿಕಾ ವೃತ್ತಿ ತುಂಬಾ ಪವಿತ್ರವಾದದ್ದು:
ಪತ್ರಿಕಾ ವೃತ್ತಿಯು ಬಹು ಪವಿತ್ರವಾದ ವೃತ್ತಿ. ಕನ್ನಡದ ಪತ್ರಿಕಾಕರ್ತರ ಹಿಂದಿನ ಚರಿತ್ರೆಯನ್ನು ಓದಿದರೆ ಎಂಥ ಶ್ರೀಮಂತ ಮನಸ್ಸಿನ ಮೇಧಾವಿಗಳೂ, ನಿಸ್ವಾರ್ಥ ಪರೋಪಕಾರಿಗಳೂ ವೃತ್ತಿಯಲ್ಲಿ ಪ್ರಾಮಾಣಿಕತೆ , ಧರ್ಮಶ್ರದ್ಧೆ, ಸಾಮಾಜಿಕ ನ್ಯಾಯಪರತೆ ಮತ್ತು ಬಾಳಿನಲ್ಲಿ ಸಂದರ್ಶಕತೆ ಮೆರೆದಿದ್ದಾರೆ ಎಂಬುದು ಕಣ್ಮುಂದೆ ಕಟ್ಟುತ್ತದೆ. ಆ ಹಿರಿಯರ ಮಾದರಿ ಈಗಲೂ ಅನುಸರಿಸಲು ಅರ್ಹವಾಗಿದೆ. ಜನರ ತಪ್ಪನ್ನು ಜನರಿಗೆ ತಿಳಿಸಿ, ಸರಕಾರದ ತಪ್ಪನ್ನು ಸರಕಾರಕ್ಕೆ ತಿಳಿಸಿ ನವಜೀವನಕ್ಕೆ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಈಗ ನಮ್ಮ ಪತ್ರಿಕಾಕರ್ತರು ಅದೇ ರೀತಿ ಕನ್ನಡ ಭಾಷೆಯ ಬಗ್ಗೆ ದುಡಿಯಬೇಕಾದ ಕಾಲ ಒದಗಿ ಬಂದಿದೆ. ಪರಿಷತ್ತು ಪತ್ರಿಕಾ ಪ್ರಪಂಚದ ಬಗ್ಗೆ ಅದೇ ರೀತಿ ತುಂಬು ವಿಶ್ವಾಸದಿಂದ ಭಾಷಾ ಬಾಂಧವ್ಯ ಬೆಳೆಸಬೇಕು ಎಂದು ಪ್ರೊ.ಜಿ.ವಿ.ಸಲಹೆ ನೀಡಿದರು.

Share this Story:

Follow Webdunia kannada