Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್: ನವಿಲುಗರಿ

ವೆಬ್‌ದುನಿಯಾ ವಾರದ ಬ್ಲಾಗ್: ನವಿಲುಗರಿ
, ಗುರುವಾರ, 3 ಏಪ್ರಿಲ್ 2008 (19:18 IST)
'ಅಭಿ'ಮನ್ಯು

ಕನ್ನಡದಲ್ಲಿರುವ ಬ್ಲಾಗು ನಕ್ಷತ್ರಗಳಲ್ಲಿ ಸದ್ದಿಲ್ಲದೆಯೇ ಸುದ್ದಿ ಮಾಡುತ್ತಿರುವ ಬ್ಲಾಗುಗಳಲ್ಲಿ ನವಿಲುಗರಿ (navilagari.wordpress.com) ಎಂಬ ಭಾವನೆಗಳ ಮಹಾಪೂರವೇ ಹರಿಯುತ್ತಿರುವ ಬ್ಲಾಗೊಂದು ಗಮನ ಸೆಳೆಯುತ್ತದೆ. ಅದರ ಒಡೆಯ ಸೋಮು ಅವರೇ ಹೇಳಿಕೊಂಡಂತೆ, ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ. ಮಲೆನಾಡಿನ ಸಾಗರದವರಾದ ಅವರ ಈ ಬ್ಲಾಗಿನಲ್ಲಿರುವ ಕವನಗಳು ಎದೆಯಾಳಕ್ಕೆ ಮಿದುವಾಗಿ ಚುಚ್ಚಿ ಬಿಡುತ್ತವೆ. ಆದರೆ ಆಗುವ ಅನುಭೂತಿಯಂತೂ ನೋವೋ, ನಲಿವೋ ಎಂಬುದು ಥಟ್ಟನೆ ಅರ್ಥವಾಗದ ವಿಷಯ.

ಅವರ ಭರಪೂರ ಭಾವನೆಗಳ ಸಂಗಮವೇ ಆಗಿರುವ ಕವನಗಳತ್ತ ಒಂದು ಕಣ್ನೋಟ ಹಾಯಿಸಿದರೆ, ಕವನಗಳಲ್ಲಿ ಹೆಚ್ಚು ಆಪ್ಯಾಯಮಾನವಾಗಿರುವವುಗಳಲ್ಲಿ ಒಂದು 'ಅಮ್ಮ ಸುಳ್ಳು ಹೇಳುತ್ತಾಳೆ'. ಹೊಟ್ಟೆಗಿಲ್ಲದಿದ್ದರೂ ಪುಟ್ಟ ಮಗುವಿಗೋಸ್ಕರ ತಾನು ಸರ್ವ ಸುಖವನ್ನೂ ತ್ಯಾಗ ಮಾಡುತ್ತಾ, ಮಗು ಅರೆಕ್ಷಣವೂ ವೇದನೆ ಪಡಬಾರದು, ನೋವಾಗಬಾರದು ಎಂಬ ಆಸೆ ಅಮ್ಮನಿಗೆ. ಇದು ಬಿಂಬಿತವಾಗಿರೋ ಸಾಲುಗಳನ್ನೇ ನೋಡಿ:

ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು| ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ| ಭೂಮಿ ತೂಕದ ಅಮ್ಮಾ..ನೀನು ಸುಳ್ಳಿಯಲ್ಲವೆ?

ಗುಮ್ಮಾ ಬಂದಾ ಎನ್ನುತ್ತಾ | ತುತ್ತು ತುತ್ತು ಅಮೃತವನ್ನು
ಮೋಸದಿಂದ ಬಾಯಿಗಿಟ್ಟು| ತಿನಿಸಿ ತನ್ನ ನೋವ ಮರೆಯುತ್ತಿದ್ದ ನೀನು ಸುಳ್ಳಿಯಲ್ಲವೆ?

ಬ್ಲಾಗಿನ ತಲೆಬರಹವೇ ಸಾಕು ಈ ಬ್ಲಾಗು ಏನೆಂಬುದನ್ನು ತಿಳಿಸಲು. "ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು". ಹೌದು ಅಲ್ಲಿರೋ ಪ್ರತಿಯೊಂದು ಸಾಲುಗಳೂ ಓದುಗನ ಮನದಲ್ಲಿ ಯಾವತ್ತಾದರೊಮ್ಮೆ ಸುಳಿದಾಡಿದಂತಿರುತ್ತದೆ. ಇಲ್ಲಿರುವುದೆಲ್ಲವೂ ಹುಚ್ಚು ಮನಸ್ಸಿನ ಭೋರ್ಗರೆತಗಳು ಎಂದು ಸೋಮು ಹೇಳಿಕೊಳ್ಳುತ್ತಾರಾದರೂ, ಎಸ್ಸೆಸ್ಸೆಲ್ಸಿಯಷ್ಟೇ ಓದಿರುವ ಅವರ ಪದ ಪ್ರಯೋಗದ ಮೇಲಿನ ಹಿಡಿತವಂತೂ ಅಚ್ಚರಿ ಹುಟ್ಟಿಸುತ್ತದೆ.

'ಕವಿತೆ ಹುಟ್ಟುತ್ತಿಲ್ಲ' ಎಂಬ ಕವನದಲ್ಲಿ ಹೀಗೆ ತಿಳಿಸುತ್ತಾರೆ.

ಕವಿತೆಗಳೇ ಹಾಗೆ, ಎಷ್ಟು ಗೋಗರೆದರು
ಬೇಡಿಕೊಂಡರು,ಯಾರ ಮಾತು ಕೇಳುವುದಿಲ್ಲ
ಪ್ರೀತಿಯಿಲ್ಲದೆ ಕರೆದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿ ಇಲ್ಲದೆ ಬರೆದರೆ ಅದು ಆದೀತೆ ಕವಿತೆ !!!

ಅವರ ಕವನ ಓದಿದವರಿಗೆ ಇದು ವೇದ್ಯವಾಗುತ್ತದೆ. ಹೃದಯ ಮಾತಾಡಿದಾಗ ಎಂಬ ಕವನವಂತೂ ವಾಸ್ತವವನ್ನು ಅತ್ಯದ್ಭುತವಾಗಿ ಬಿಡಿಸಿಡುತ್ತದೆ. ಇಲ್ಲಿ ನೋಡಿ:

ಎರೆಡು ದಿನ ಅಮ್ಮ ಜೊತೆಯಿರಲಿಲ್ಲವೆಂಬ
ಕಾರಣಕ್ಕೆ ಇಪ್ಪತ್ತು ದಿನ ಅಮ್ಮನ ಜೊತೆ ಮಾತನಾಡಲಿಲ್ಲ
ಕೊಬ್ಬಿದ ಹುಡುಗಿ!!….ಪಾಪ ತನ್ನಪ್ಪ ಸತ್ತು ಇಪ್ಪತ್ತು ವರ್ಷವಾಗಿದ್ದು
ನೆನೆಪಾಗಿ ಅಮ್ಮನ ಮಡಿಲು ಸೇರಿ ಮಮ್ಮಲ ಮರುಗಿದಳು…!!!

ಕಣ್ಸೆಳೆಯುತ್ತಾ ಹೃದಯಕ್ಕೇ ಲಗ್ಗೆ ಹಾಕುವ ಮತ್ತೊಂದು ಕವನ 'ನೆನಪಿಗೆ ಬರಬಾರದು ನೀನು'. ಅದರಲ್ಲಿ ಹೃದಯದ ನೋವು ಹೊರಬೀಳುವುದು ಹೀಗೆ:

ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ!

ಇಷ್ಟು ಸಾಕಲ್ಲ... ಈ ಬ್ಲಾಗೆಂಬ ಭಾವ ಬುತ್ತು ಕೊಡುವ ಕವನಗಳನ್ನು ಆಘ್ರಾಣಿಸಲು? ನೀವೇ ನೋಡಿಬಿಡಿ navilagari.wordpress.com.

Share this Story:

Follow Webdunia kannada