Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್: ಓ ನನ್ನ ಚೇತನಾ

ವೆಬ್‌ದುನಿಯಾ ವಾರದ ಬ್ಲಾಗ್: ಓ ನನ್ನ ಚೇತನಾ
ಅಭಿಮನ್ಯು
WD
ಕನ್ನಡ ಬ್ಲಾಗ್ ಲೋಕ ವಿಹರಿಸುತ್ತಿದ್ದರೆ, ಒಂದು ಕಡೆಯಿಂದ ಸಾಹಿತ್ಯದ ಹೂರಣವುಳ್ಳ, ಅಲ್ಲಿಂದ ಇಲ್ಲಿಂದ ಕೇಳಿದ ನೋಡಿದ ಸಾಹಿತ್ಯ ಕೃತಿಗಳ ಬಗ್ಗೆ ಚರ್ಚೆ ನಡೆಸುವ ತಾಣಗಳ ಜತೆಗೆ ಪಕ್ಕನೇ ಸಿಕ್ಕಿದ್ದು, ಚೇತನಾ ತೀರ್ಥಹಳ್ಳಿ ಅವರ 'ಓ ನನ್ನ ಚೇತನಾ' (chetanachaitanya.wordpress.com) ಹೆಸರಿನ ಬ್ಲಾಗು.

ಚೇತನಾ ಅವರು ಬ್ಲಾಗ್ ಲೋಕದಲ್ಲಂತೂ ಪರಿಚಿತ ಹೆಸರು. ಅಲೆಮಾರಿಯ ಹಾಡು ಎಂಬೋ ಪಂಚ್‌ಲೈನ್‌ಗೆ ತಕ್ಕಂತೆ ಬ್ಲಾಗಿನಲ್ಲಿರುವ ವಿವರಗಳು ಕೂಡ, ಜೀವನದಲ್ಲಿ ಅಲೆಮಾರಿಗಳೇ ಆಗಿರುವ ನಮಗೆ ಹಾದಿಯಲ್ಲೆಲ್ಲೋ ಒಂದು ಕಡೆ ಥಟ್ಟನೇ ಎದುರಾಗುವ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತಿದೆ ಮತ್ತು ವಿಶೇಷವೆಂದರೆ, ಅದರ ಜತೆಗೇ ಒಳ್ಳೆಯ ಚರ್ಚೆಯ ವೇದಿಕೆಯಾಗಿಯೂ ಇದು ಕಾರ್ಯ ನಿರ್ವಹಿಸುತ್ತಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗಾಗಿ ಚೇತನಾ ಬರೆದಿರುವ ಸಕಾಲಿಕ ಲೇಖನವೊಂದು ತಕ್ಷಣವೇ ಚರ್ಚೆಯ ವೇದಿಕೆಯಾಗಿಬಿಟ್ಟಿದೆ. ಅದರಲ್ಲಿನ ಒಂದು ಪ್ಯಾರಾ ಹೀಗೆ ಹೇಳುತ್ತದೆ:

"ಕೆಲವೊಮ್ಮೆ ಮಜಾ ಅನಿಸುತ್ತೆ. ಮೂವತ್ತೂ ಮುಟ್ಟಿರದ ಈ ಲೈಫಿನಲ್ಲಿ ನಂಗೂ “ಹಿಂದೆಲ್ಲಾ….” ಅಂತ ಹೇಳಿಕೊಳ್ಳುವ ಕಥೆಗಳಿವೆ. ಆ 'ಹಿಂದಿನ’ ದಿನಗಳಲ್ಲಿ ನಾನು ಹೆಣ್ಣಾಗಿ ಹುಟ್ಟಬಾರದಿತ್ತು ಅಂತ ಪರಿತಪಿಸಿದ್ದಿದೆ. ಈ ಹಳಹಳಿ ಮತ್ತೂ ಮುಂದುವರಿದು, ‘ಗಂಡೇ ಹುಟ್ಟಲಿ’ ಅಂತ ಹರಕೆ ಹೊತ್ತು, ಮಗ ಪ್ರಣವ ಹುಟ್ಟಿದಾಗ ಬೆಳ್ಳಿ ಕೃಷ್ಣನ್ನ ಒಪ್ಪಿಸಿದ್ದೂ ಇದೆ! ಈಗ ಅದನ್ನೆಲ್ಲ ನೆನೆದು ನಾಚಿಕೆಯಾಗತ್ತೆ."

ಹೌದಲ್ಲ... ಹೆಣ್ಣು ತನಗೆ ಗಂಡು ಮಗುವೇ ಬೇಕು ಎಂಬ ಮನೋಭಾವ ಬೆಳೆಸಿಕೊಂಡಿದ್ದು ಕೂಡ ಮಹಿಳೆಯರ ಬಗ್ಗೆ ಕೀಳು ಭಾವನೆ ಮೂಡಲು ಕಾರಣಗಳಲ್ಲೊಂದು...?

ಇನ್ನೊಂದೆಡೆ ಅವರು ಬರೆದಿದ್ದಾರೆ: "ಇವತ್ತು ಹೆಣ್ಣು ಹೊರಗಿನ ಸವಾಲುಗಳನ್ನ ಸುಲಭವಾಗಿ ಗೆಲ್ಲುತ್ತಿದ್ದಾಳೆ. ಯಾಕೆಂದರೆ ಕಂಪೆನಿಗಳಿಗೆ ಕ್ವಾಲಿಟಿ ಬೇಕಿದೆ. ಪ್ರಾಮಾಣಿಕತೆ ಬೇಕಿದೆ. ಯಾವುದೇ ಕೆಲಸವನ್ನಾದರೂ ಅಚ್ಚುಕಟ್ಟಾಗಿ ಮಾಡುವ ಹೆಣ್ಣುಗುಣ ಇಲ್ಲಿ ಗೆಲ್ಲುತ್ತಿದೆ. ಹೆಣ್ಣು ಚಂಚಲೆ ಅಂದರೂ ಮತ್ತೆ ಮತ್ತೆ ಕೆಲಸ ಬದಲಿಸುವ ವಿಷಯದಲ್ಲಿ ಹೆಣ್ಣಿಗಿಂತ ಗಂಡೇ ಮುಂಚೂಣಿಯಲ್ಲಿರೋದು ಆಕೆಯ ಮೇಲಿನ ವಿಶ್ವಾಸ ಹೆಚ್ಚುವಹಾಗೆ ಮಾಡಿದೆ. ಒಟ್ಟಿನಲ್ಲಿ ಟ್ಯಾಲೆಂಟ್‌ಗೆ ಬೆಲೆ ಸಿಗ್ತಿರುವ ಇವತ್ತಿನ ದಿನ ಹೆಣ್ಣು ಸುಸೂತ್ರವಾಗಿ ಗೆಲ್ಲುತ್ತ ಹೋಗುತ್ತಿದ್ದಾಳೆ."

ಈ ವಾಕ್ಯ ನಿಜಕ್ಕೂ ಚಿಂತಿಸಬೇಕಾದ ವಿಷಯ. ತೀರಾ ನಿರ್ಲಕ್ಷಿತಳಾಗಿದ್ದ ಹೆಣ್ಣೊಬ್ಬಳು ಇಂದು ಎತ್ತರೆತ್ತರಕ್ಕೆ ಬೆಳೆಯುತ್ತಿರುವುದೇತಕ್ಕೆ ಎಂಬುದಕ್ಕೊಂದು ಕಾರಣ ನೀಡಿದಂತಿದೆ.

ದೈನಂದಿನ ಜೀವನದಲ್ಲಿ ಎದುರಾಗುವ ಗೊಂದಲ, ಹಪಹಪಿಕೆ, ಬದಲಾವಣೆಗಳು... ಇತ್ಯಾದಿಗಳ ಕುರಿತು ಆರೋಗ್ಯಕರ ಚರ್ಚೆಯ ವೇದಿಕೆಯಾಗಿಯೂ ಈ ಬ್ಲಾಗು ಕೆಲಸ ಮಾಡುತ್ತಿದೆ ಅಂದರೆ ಅತಿಶಯೋಕ್ತಿಯಾಗದು. ಅದೇ ಬ್ಲಾಗಿನಲ್ಲಿ ಪ್ರಕಟವಾದ "ಲೈಸೆನ್ಸ್ ಪಡೆದ ಅಮೃತಾ ಮತ್ತು ನನ್ನ ಆತಂಕ…" ಎಂಬ ಲೇಖನ ಓದಿದರೆ ಮತ್ತು ಅದನ್ನು ಅನುಸರಿಸಿದ ಕಾಮೆಂಟ್‌ಗಳ ಎಳೆ ಹಿಡಿದು ಹೊರಟರೆ, ಕಳೆದುಹೋಗುವ ಬಾಲ್ಯ ಹಾಗೂ ವಯಸ್ಸಿಗೆ ಬರುವ ನಡುವಿನ ಅವಧಿಯ ತಾಕಲಾಟದ ಚಿತ್ರಣವೊಂದು ನಮ್ಮ ಯೋಚನೆಗೂ ಆಹಾರ ಒದಗಿಸುವಂತಿರುತ್ತದೆ.

ಇನ್ನೇನು ಹೇಳೋದು... ನೀವೇ ಓದಿ ನೋಡಿ.

Share this Story:

Follow Webdunia kannada