Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್: ಮೌನಗಾಳ

ವೆಬ್‌ದುನಿಯಾ ವಾರದ ಬ್ಲಾಗ್: ಮೌನಗಾಳ
ಅಭಿಮನ್ಯು
WD
ಅಂತರ್ಜಾಲದ ಬ್ಲಾಗುದಾಣಗಳಲ್ಲಿ ಭಾವನೆಗಳು ಹೇಗೆ ಹರಿದಾಡುತ್ತವೆ ಎನ್ನುವುದಕ್ಕೆ ಮತ್ತೊಂದು ಕುರುಹು ಇಲ್ಲಿದೆ. ಈ ಬಾರಿ ವಾರದ ಬ್ಲಾಗ್ ಶೋಧಕ್ಕಾಗಿ ತೆರಳಿದಾಗ ತಟ್ಟನೇ ಗಮನ ಸೆಳೆದದ್ದು 'ಮೌನಗಾಳ' (hisushrutha.blogspot.com). ಅದ್ರಲ್ಲಿರೋ ಪೋಸ್ಟ್‌ನ ತಲೆ ಬರಹವೇ ಗಮನ ಸೆಳೆಯಿತು- 'ಅಮ್ಮ ಬಂದಿದ್ದಳು' ಅಂತ. ಅದು ಪ್ರಕಟವಾದ ಬರೇ ಒಂದು ದಿನದೊಳಗೆ ಅದಕ್ಕೆ ಬಂದಿರೋ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸಾಕು, ಆ ಬರಹದ ಭಾವನಾತ್ಮಕ ಸೆಳೆತ ಎಷ್ಟಿರಬಹುದು ಎಂಬುದು ವೇದ್ಯವಾಗಬಹುದು. ಸುಶ್ರುತರ ಬರಹ ಆಪ್ಯಾಯಮಾನವಾಗುವುದು ಇಲ್ಲಿ.

ಕಾಲಾತೀತದಲ್ಲಿ ಗಾಳ ಹಾಕಿ ಮೌನವಾಗಿ ಕುಳಿತಿದ್ದೇನೆ. ಸಿಕ್ಕಷ್ಟು, ಹಿಡಿದಷ್ಟು: ಈ ಬ್ಲಾಗೆಂಬ ಬುಟ್ಟಿಗೆ... ಎಂಬ ಪಂಚ್ ಲೈನಿನೊಡನೆ, ಮನಸ್ಸಿಗೆ ತಟ್ಟುವ, ನೆನಪುಗಳನ್ನು ಕೆದಕುವ, ಭಾವನೆಗಳನ್ನು ಬಡಿದೆಬ್ಬಿಸುವ ಆತ್ಮೀಯ ಬರಹಗಳನ್ನು ಉಣಬಡಿಸುತ್ತಾರೆ ಸುಶ್ರುತ.

ಸಾಹಿತ್ಯಾಸಕ್ತಿಯನ್ನು ತಣಿಸಲೋಸುಗ ಓದಿದ, ಓದುತ್ತಿರುವ ಫಲವಾಗಿ ಈಗೀಗ ಅಷ್ಟಿಷ್ಟು ಬರೆಯುತ್ತಿದ್ದೇನೆ ಎನ್ನುವ ಅವರು, ಓದುತ್ತೋದುತ್ತಲೇ, ಬರವಣಿಗೆಯ ಮೇಲೂ ಹಿಡಿತ ಸಾಧಿಸಿ, ಇತ್ತೀಚೆಗಷ್ಟೇ ಗೆಳೆಯರೊಂದಿಗೆ ಸೇರಿಕೊಂಡು ಚಿತ್ರಚಾಪ ಎಂಬ ಪುಸ್ತಕವೊಂದನ್ನೂ ಬಿಡುಗಡೆ ಮಾಡಿದ್ದಾರೆ. ಅದು ಒತ್ತಟ್ಟಿಗಿರಲಿ. ಈಗ ಅವರ ಬ್ಲಾಗಿನ ಬಗ್ಗೆ ಮಾತಾಡೋಣ.

'ಅಮ್ಮ ಬಂದಿದ್ದಳು' ಎಂಬ ಬರಹದಲ್ಲಿ ಅವರು ಕಟ್ಟಿಕೊಟ್ಟಿರುವ ಭಾವನೆಗಳಿಗೆ ಬ್ಲಾಗೋದುಗರ ಕಣ್ಣುಗಳು ಮಂಜಾಗಿವೆ ಎಂಬುದಕ್ಕೆ ಅಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳೇ ಸಾಕ್ಷಿ. ಅಮ್ಮ ಎಂಬ ವಾತ್ಸಲ್ಯದ ಸಾಗರದ ಬಗೆಗಿನ ಪ್ರತಿ ಪದದಲ್ಲೂ ಓದುಗರಿಗೆ ಅವರವರ ಅಮ್ಮನನ್ನು ನೆನಪಿಸುತ್ತಿರುವಂತಿದೆ. ಉದರ ನಿಮಿತ್ತ ಪರವೂರಿಗೆ ತೆರಳಿದ ಮಕ್ಕಳ ಬಗೆಗೆ ಅಮ್ಮನ ಕಾಳಜಿಯೆಷ್ಟು, ಹಳ್ಳಿಯಿಂದ ಸಿಟಿಗೆ ಬಂದಾಗ ಆ ಮುಗ್ಧತೆಯ ಮೂರ್ತಿಗೆ ಆಗುವ ಅಚ್ಚರಿಯನ್ನು ಸುಶ್ರುತರು ನವಿರಾದ ಹಾಸ್ಯದೊಂದಿಗೆ ಬಿಚ್ಚಿಟ್ಟಿದ್ದಾರೆ.

ಅಮ್ಮನನ್ನು ಬರಮಾಡಿಕೊಳ್ಳುವ ಮಗನ ಸಂಭ್ರಮ, ಮನೆಯನ್ನು ಆದಷ್ಟು ಚೊಕ್ಕಟವಾಗಿ ಇರಿಸಿಕೊಳ್ಳಬೇಕೆಂಬ ತುಡಿತದೊಂದಿಗೆ, ರೂಂಮೇಟ್ ಜತೆಗಿನ ಆತ್ಮೀಯ ಒಡನಾಟವೂ ಚಕ್ಕನೇ ಮಿಂಚಿ ಮಾಯವಾಗುವ ಒಂದು ವಾಕ್ಯ: "ಆ ಭಾನುವಾರ ನಾನೂ ನನ್ನ ರೂಂಮೇಟೂ ಸೇರಿ ಇಡೀ ಮನೆಯನ್ನು ಗುಡಿಸಿ, ಸಾರಿಸಿ, ಫಿನಾಯಿಲ್ ಹಾಕಿ ತೊಳೆದು ಸ್ವಚ್ಚ ಮಾಡಿದೆವು. ಹೇಗ್‍ಹೇಗೋ ತುರುಕಿಟ್ಟಿದ್ದ ಬಟ್ಟೆಗಳನ್ನು ಚಂದ ಮಾಡಿ ಮಡಿಚಿ ಜೋಡಿಸಿಟ್ಟೆವು. ಅಂಡರ್‌ವೇರನ್ನು ಎಲ್ಲೆಂದರಲ್ಲಿ ನೇತುಹಾಕಿದರೆ ಕೊಲೆ ಮಾಡುವುದಾಗಿ ರೂಂಮೇಟಿಗೆ ಬೆದರಿಕೆ ಹಾಕಿದೆ. ಹಳೆಯ ನ್ಯೂಸ್‍ಪೇಪರುಗಳನ್ನು ಮಾರಿದೆವು. ನನ್ನ ಲೈಬ್ರರಿಯಲ್ಲಿ ಮನೆ ಮಾಡಿಕೊಂಡಿದ್ದ ಜಿರಲೆಗಳು ಸ್ವರ್ಗದ ದಾರಿ ಹಿಡಿದವು. ಗ್ಯಾಸ್ ಕಟ್ಟೆ ಫಳಫಳನೆ ಹೊಳೆಯಲಾರಂಭಿಸಿತು. ಅಮ್ಮನನ್ನು ಬರಮಾಡಿಕೊಳ್ಳಲಿಕ್ಕೆ ನಮ್ಮ ಮನೆ ಸಜ್ಜಾಗಿ ನಿಂತಿತು!"

ಪಟ್ಟಣಕ್ಕೆ ಬಂದ ಅಮ್ಮನಿಗೆ ಮಾಲ್‌ನಲ್ಲಿ ಎಸ್ಕಲೇಟರ್, ಬೇಕಾದ್ದನ್ನು ಹೆಕ್ಕಿಕೊಂಡು ಹಣ ನೀಡದೆ ಬರೇ ಕಾರ್ಡ್ ಉಜ್ಜಿದರೆ ಕೆಲಸ ಆಗೋ ಶಾಪಿಂಗ್ ಇತ್ಯಾದಿಗಳನ್ನು ಪರಿಚಯಿಸುವುದೇ ಒಂದು ಸಂಭ್ರಮದ ಕಾರ್ಯ. ಲಿಫ್ಟ್‌ನೊಳಗೆ ಹೋಗುವಾಗ ಅಮ್ಮನ ಮುಗ್ಧತೆಯನ್ನು ಸಾರುವ ಈ ಒಂದು ಸಾಲು ಗಮನಿಸಿ:

"ಲಿಫ್ಟ್ ಬಾಗಿಲು ತೆರೆದುಕೊಂಡಕೂಡಲೇ ಒಳನುಗ್ಗಿ ಅಮ್ಮನನ್ನು 'ಬಾ' ಅಂತ ಒಳಗೆಳೆದುಕೊಂಡೆ. ತಕ್ಷಣ ಬಾಗಿಲು ಮುಚ್ಚಿಕೊಂಡು ನಾವು ಕೆಳಹೋಗತೊಡಗಿದಾಗ ಅಮ್ಮನ ಕೈಯಲ್ಲಿದ್ದ ಸ್ವೀಟ್‍ಕಾರ್ನ್ ಕಪ್ಪು ಬೀಳುವಂತಾಗಿ 'ಅಯ್ಯೋ ಇದೆಂಥಾತು?' ಎಂದಳು. 'ನಾವೀಗ ಲಿಫ್ಟಲ್ಲಿದ್ದು! ಕೆಳಗಡೆ ಹೋಗ್ತಾ ಇದ್ದು' ಎಂದೆ. ಅಮ್ಮ ಕಂಗಾಲಾದಳು. 'ನಾನು ಎಸ್.ಟಿ.ಡಿ. ಬೂತ್ ಒಳಗೆ ಕರ್ಕಂಡ್ ಬಂದೆ ಅಂದ್ಕಂಡಿ' ಎಂದಳು."

ಆನಂದ, ನಗು, ನೋವು, ಸಂಭ್ರಮ.... ಇಷ್ಟು ಸಾಕಲ್ಲವೇ ಈ ಮೌನವಾಗಿ ಗಾಳ ಹಾಕುವವರು ಮನಸ್ಸಿಗೇ ಯಾವ ರೀತಿ ಗಾಳ ಹಾಕುತ್ತಾರೆಂಬುದನ್ನು ಹೇಳಲು? ಇನ್ನಷ್ಟು ಮನ ಸೆಳೆಯುವ ಕಥೆ, ವಿಶ್ಲೇಷಣೆ, ವಿಚಾರಗಳು ಇಲ್ಲಿವೆ. ನೀವೇ ಓದಿ ನೋಡುವಿರಂತೆ hisushrutha.blogspot.com.

Share this Story:

Follow Webdunia kannada