Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್: ಹರಿವ ಲಹರಿ

ವೆಬ್‌ದುನಿಯಾ ವಾರದ ಬ್ಲಾಗ್: ಹರಿವ ಲಹರಿ
ಅಭಿಮನ್ಯು
ಕನ್ನಡ ಬ್ಲಾಗು ಲೋಕದಲ್ಲಿ ಅರಳುತ್ತಿರುವ ಕುಸುಮಗಳು ಬೀರುತ್ತಿರುವ ಕಂಪನ್ನು ಆಸ್ವಾದಿಸಿಯೇ ತೀರಬೇಕು. ಉದ್ದುದ್ದ ಲೇಖನಗಳು/ಕಾವ್ಯಗಳನ್ನು ಓದಲು ಪುರುಸೊತ್ತಿಲ್ಲದವರಿಗೆ ಆತ್ಮೀಯವಾಗುತ್ತಿರುವ, ಕವನ ಪ್ರಿಯರನ್ನು ಮಿಂಚಿನಂತೆ ಸೆಳೆಯುತ್ತಿರುವ ಬ್ಲಾಗುಗಳಲ್ಲಿ 'ಸುಪ್ತದೀಪ್ತಿ' ಅವರ 'ಹರಿವ ಲಹರಿ' (suptadeepti.blogspot.com) ಬ್ಲಾಗ್ ಕೂಡ ಒಂದು.

"ಹರಿವ ತೊರೆ ತೀರದಲಿ.... ಎಲೆ ಹಸಿರು ಬಳ್ಳಿಯಲಿ...." ಎಂಬ ಪಂಚ್ ಲೈನ್‌ನೊಂದಿಗೆ 'ಸುಪ್ತದೀಪ್ತಿ' ನಾಮದಲ್ಲಿ ಬ್ಲಾಗಿಸುತ್ತಿರುವ ಅವರ ಕವನಗಳು ಇಷ್ಟವಾಗುವುದು ಅದರಲ್ಲಿರುವ ವಾಸ್ತವತೆಯ ತುಡಿತಕ್ಕೆ. ಹೆಚ್ಚಿನ ಕವನಗಳು ಅಂತ್ಯಪ್ರಾಸದೊಂದಿಗೆ ಲಯಬದ್ಧವಾಗಿರುತ್ತವೆ.

ಇತ್ತೀಚಿನ ಪೋಸ್ಟಿಂಗ್‌ಗಳನ್ನು ಗಮನಿಸಿದರೆ, ಭೂಕಂಪವು ಗುಜರಾತನ್ನು ನಡುಗಿಸಿದ ಸಂದರ್ಭ ಅವರ ಲೇಖನಿಯಿಂದ ಮೂಡಿಬಂದ ಕವನಗಳು, ನಂತರ ಈ ಕವನಗಳ ಸುಧಾರಿತ ರೂಪವಾಗಿ, ಪಶ್ಚಾತ್ ಕಂಪನದಂತೆ ಮಾನವಜೀವಿಗೆ ಎಚ್ಚರಿಕೆ ನೀಡುವಂತಹ ಕವನದ ಸಾಲು ನೋಡಿ:

'ಬಹಳವಾಯ್ತೀ ಮೌನ' ಎಂದು ನಿರ್ಧರಿಸಿ,
ಸಹನೆ ಕಟ್ಟೆಯ ಬಿರುಕ ಮತ್ತಷ್ಟು ಬಿರಿಸಿ,
ಮಹತ್ತಾದ ಹೊರೆಭಾರದಿಂದೊಮ್ಮೆ ನಡುಗಿ,
'ಅಹಮಿಕೆ'ಯ ಅನರ್ಥ ತೋರಿದೆ ಗುಡುಗಿ.

ಪ್ರಕೃತಿ ಮಾತೆಯನ್ನು ಮಾನವರು ಯಾವ ರೀತಿ ದುರುಯೋಗಪಡಿಸಿಕೊಳ್ಳುತ್ತಿದ್ದಾರೆ, ಇದರಿಂದ ದೈತ್ಯಶಕ್ತಿ ಹೊಂದಿರುವ, ಕ್ಷಮಯಾ ಧರಿತ್ರಿಯು ಮನುಷ್ಯರ ಅಹಮಿಕೆ ತಗ್ಗಿಸಲು ಮೌನ ಮುರಿದದ್ದನ್ನು ಅವರು ಬಿಂಬಿಸಿದ್ದಾರೆ.

'ಗ್ರಾಫ್ಟಿಂಗ್' ಅನ್ನೋ ಮತ್ತೊಂದು ಕವನದಲ್ಲಿ ಕಸಿಕಟ್ಟುವಿಕೆಯ ಕಥನವು ವಾಚ್ಯವಾದರೂ ಸೂಚ್ಯರ್ಥದಲ್ಲಿ ಅದು ಅಲೆಮಾರಿಯ ಮನದ ಮಾತಿನಂತಿರುತ್ತದೆ. ವಿದೇಶದಲ್ಲಿರುವ ಲೇಖಕಿ ಕೂಡ, ಉದ್ಯೋಗ ನಿಮಿತ್ತ ನೆಲೆ ಬದಲಾಯಿಸುವಾಗಿನ ಮನದ ತುಮುಲಗಳನ್ನೂ ಈ ಕವನ ಸೂಸುತ್ತದೆ.

ಹದವಾದ ನೆಲದಲ್ಲಿ ದೃಢವಾಗಿ ಬೇರೂರಿ
ಚೆನ್ನಾಗಿ ಬೆಳೆಯುವಾಸೆ
ಊರಿಂದ ಊರಿಗೆ ಅಲೆಯುವೀ ಬಾಳಲ್ಲಿ
ನೆಲೆಯೆಂಬುದೊಂದು ಕನಸೆ?

ಹಸುರು ಹೂವಾಗಿ, ಕಾಯಾಗಿ, ಹಣ್ಣಾಗಿ
ಮಾಗುವುದು ಲೋಕ ನಿಯಮ
ಬಿಸಿಲ ಹೀರುತ್ತ ಸುತ್ತೆಲ್ಲ ನೆರಳೂಡಿ
ಹಾಡುವುದು ನನ್ನ ಧರ್ಮ

ಅನ್ನುವಲ್ಲಿಗೆ ಲೋಕ ನಿಯಮಕ್ಕೆ ಶರಣಾಗಿ ಬದುಕಿನ ಅನಿವಾರ್ಯತೆಯೂ ಚೆನ್ನಾಗಿ ಬಿಂಬಿತವಾಗಿದೆ.

ಸಾಕಷ್ಟು ಆನ್‌ಲೈನ್ ಮಿತ್ರ ಬಳಗವನ್ನೂ ಸಂಪಾದಿಸಿರುವ ಲೇಖಕಿ, ಹಲವು ಚರ್ಚೆಗೆ ಆಸ್ಪದ ನೀಡುವ ಲೇಖನಗಳನ್ನೂ ಆಗಾಗ್ಗೆ ಪೋಸ್ಟಿಸುತ್ತಾರೆ. "ದೇವ ದೇವಾ... ಎಲ್ಲರಿಗೂ ಒಂದಿಷ್ಟು ಜ್ಞಾನ ಕೊಡಪ್ಪಾ" ಎಂಬ ಯೋಚನೆಯಲ್ಲಿರುವ ಅವರ ಬರಹಗಳ ಕಣಜಕ್ಕೆ ಇಣುಕಲು ಒಮ್ಮೆ ಭೇಟಿ ಕೊಡಿ ಹರಿವ ಲಹರಿಗೆ.

Share this Story:

Follow Webdunia kannada