Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್: ಅಲೆಮಾರಿಯ ಅನುಭವ

ವೆಬ್‌ದುನಿಯಾ ವಾರದ ಬ್ಲಾಗ್: ಅಲೆಮಾರಿಯ ಅನುಭವ
- ಉದಯಸಿಂಹ

ಕ್ರೀಡಾಸಕ್ತ ಮತ್ತು ಪ್ರವಾಸಾಸಕ್ತರೊಬ್ಬರಿಂದ ಕನ್ನಡದಲ್ಲಿ ಒಂದು ಬ್ಲಾಗ್. ರಾಜೇಶ್ ನಾಯ್ಕ್ ಎಂಬ ಅಲೆಮಾರಿಯ ಅನುಭವಗಳು (rajesh-naik.blogspot.com) ನಿಮ್ಮ ಕುತೂಹಲ ತಣಿಸಲು ಬೇಕಾದ ಸರಕುಗಳನ್ನು ಹೊಂದಿವೆ.

ಉಡುಪಿ ಜಿಲ್ಲೆಯವರಾದ ರಾಜೇಶ್ ನಾಯ್ಕ್ ಅವರು ಈ ಬ್ಲಾಗ್ ಆರಂಭಿಸಿದ್ದು 2006 ರ ಅಕ್ಟೋಬರ್‌ನಂದು. ಆಗಿನಿಂದ ಅವರು ನಿರಂತರವಾಗಿ ಪ್ರವಾಸೀ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ನಡುನಡುವೆ ಕ್ರಿಕೆಟ್ ಬಗೆಗಿನ ಅಮೂಲ್ಯ ವಿವರ ಮತ್ತವರ ವಿಚಾರಗಳನ್ನೂ ಬರಹ ರೂಪಕ್ಕೆ ಇಳಿಸುತ್ತಾರೆ. ಅದು ಪ್ರವಾಸ ಲೇಖನವೇ ಆಗಲೀ ಅಥವಾ ಕ್ರೀಡಾ ಬರಹವೇ ಆಗಲೀ ಅವರ ಯಾವುದೇ ಲೇಖನವು ವ್ಯರ್ಥವೆನಿಸುವುದಿಲ್ಲ. ಇದಕ್ಕೆ ಕಾರಣ ಅವರ ಗಟ್ಟಿ ಅನುಭವಗಳು ಮತ್ತು ವಿಚಾರಗಳನ್ನು ಸ್ಪಷ್ಟವಾಗಿ ಬರೆವಣಿಗೆಗೆ ಇಳಿಸುವ ಅವರ ಕಲೆ ಎಂಬುದು ನಿಸ್ಸಂಶಯ.

ರಾಜೇಶ್ ನಾಯ್ಕ್ ಅವರ ಪ್ರವಾಸೀ ಕಥನಗಳನ್ನು ಓದುತ್ತಿದ್ದರೆ ನಿಜವಾಗಿಯೂ ನಾವೇ ಪ್ರವಾಸದಲ್ಲಿದ್ದೇವೆಯೋ ಎಂಬ ಅನುಭವವಾಗುತ್ತದೆ. ಈ ಮಾತು ಖಂಡಿತ ಅತಿಶಯೋಕ್ತಿಯಲ್ಲ. ಒಮ್ಮೆ ನೀವು ಅವರ ಬ್ಲಾಗಿಗೆ ಪ್ರವಾಸ ತೆರಳಿ ಓದಿ ಅನುಭವಿಸಿ ನೋಡಿ.

ರಾಜೇಶ್ ಅವರು ಹಿಂದೊಮ್ಮೆ "ಕರ್ನಾಟಕ ಮುಕುಟಕ್ಕೆ ಪ್ರವಾಸ" ಎಂದು ಒಂದು ಲೇಖನಮಾಲೆಯನ್ನು ಬ್ಲಾಗಿನಲ್ಲಿ ಹಾಕಿದ್ದರು. ರಾಜ್ಯದ ಮುಕುಟ ಭಾಗವಾದ ಗುಲ್ಬರ್ಗ, ಬಸವ ಕಲ್ಯಾಣ ಮತ್ತು ಬೀದರ್‌ಗೆ ಅವರು ಮಾಡಿದ್ದ ಪ್ರವಾಸದ ಅನುಭವಗಳನ್ನು ಅವರು ರಸವತ್ತಾಗಿ, ವಿಚಾರಪ್ರಚೋದಕರಾಗಿ, ಹಾಗೂ ಸವಿವರವಾಗಿ ಹಂಚಿಕೊಂಡಿದ್ದರು. ಸ್ಥಳದ ಬಣ್ಣನೆ, ಅದರ ಇತಿಹಾಸದ ವಿವರಗಳು, ಆ ಪ್ರದೇಶದ ಮತ್ತದರ ಜನರ ಆಚಾರ ವಿಚಾರಗಳು ಮೊದಲಾದವನ್ನೂ ಸೇರಿ ಒಬ್ಬ ಪ್ರವಾಸಿಗನ ಮನಸ್ಸಿನಲ್ಲಿ ಹೊಗೆಯಾಡಬಹುದಾದ ಕುತೂಹಲಗಳನ್ನು ತಣಿಸುವಷ್ಟು ವಿವರಗಳು ಈ ಲೇಖನಮಾಲೆಯಲ್ಲಿ ಕಾಣಬಹುದಾಗಿತ್ತು.

ಬೆಳಗಾವಿಯ ಭರ್ಜಿ ನಾಲಾ ಜಲಪಾತ, ಹೊನ್ನಾವರ ಸಮೀಪದ ಮಲೆಮನೆ ಜಲಪಾತ, ಆಗುಂಬೆ, ಸುಳ್ಯ ಸಮೀಪದ ಲೈನ್ಕಜೆ ಜಲಪಾತ, ಶಿರಸಿ ಬಳಿಯ ವಾಟೆ ಹೊಳೆ ಜಲಪಾತ, ಹೊಸಘಟ್ಟದಲ್ಲಿ ಎಲೆಮರೆ ಕಾಯಿಯಂತಿರುವ ಒಂದು ಜಲಪಾತ, ಕೈಗಾಗೆ ಜೋಡಿಸಿದಂತೆ ಇರುವ ದೇವಕಾರ, ಉಡುಪಿ ಸಮೀಪದ ಚಕ್ರಾ ಮತ್ತು ಸಾವೆಹಕ್ಲು ಅಣೆಕಟ್ಟು ಹೀಗೆ ಹಲವಾರು ಸ್ಥಳಗಳು ನಮ್ಮ ರಾಜ್ಯದ ಪ್ರವಾಸಿಗರಿಗೇ ಅಪರಿಚಿತವಾಗಿ ಉಳಿದುಕೊಂಡಿವೆ. ಇಂಥ ಹಲವಾರು ಸ್ಥಳಗಳಿಗೆ ಪ್ರವಾಸ ಮಾಡಿರುವ ರಾಜೇಶ್ ಅವರು ಆ ಎಲ್ಲಾ ಸ್ಥಳಗಳೂ ನಿಮ್ಮ ಕಣ್ಮುಂದೆ ಸಾಗುತ್ತಿದೆಯೆನ್ನುವಷ್ಟು ಸೊಗಸಾಗಿ ವಿವರಿಸುತ್ತಾರೆ.

ಕರ್ನಾಟಕದ ಕ್ರಿಕೆಟ್ ಬಗ್ಗೆಯೂ ರಾಜೇಶ್ ಅವರಿಗೆ ಅಪರೂಪದ ಆಸಕ್ತಿಯಿದೆ. ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯು ಭಾರತೀಯ ಕ್ರಿಕೆಟ್‌ನ ಬಗ್ಗೆ ಮಾತನಾಡಿದರೆ ರಾಜೇಶ್ ಅವರು ಕರ್ನಾಟಕದ ರಾಜ್ಯ ಕ್ರಿಕೆಟ್ ಬಗ್ಗೆ ಮನೋಜ್ಞ ಚಿತ್ರಣ ಮುಂದಿಡುತ್ತಾರೆ. ಕರ್ನಾಟಕದ ರಣಜಿ ಆಟಗಾರರು, ಅವರ ಸಾಮರ್ಥ್ಯ, ಅಸಾಮರ್ಥ್ಯ, ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಹೊಗೆಯಾಡುವ ರಾಜಕೀಯ ಇತ್ಯಾದಿ ನೈಜ ಕ್ರಿಕೆಟ್ ಪ್ರೇಮಿಗೆ ಕುತೂಹಲ ಮೂಡಿಸುವ, ನೆನಪು ಕೆದಕುವ ಬರಹಗಳು ರಾಜೇಶ್ ಅವರಿಂದ ಮೂಡಿಬರುತ್ತವೆ.

ಕೆಲವೇ ವರ್ಷಗಳ ಹಿಂದೆ ಎಲ್ಲರ ಕುತೂಹಲ ಕೆರಳಿಸಿ ಇದ್ದಕ್ಕಿದ್ದಂತೆ ಕಣದಿಂದ ಮರೆಯಾಗಿಬಿಟ್ಟ ಮುಲೇವಾ ಧರ್ಮಿಚಂದ್, ರಾಜ್ಯ ಕ್ರಿಕೆಟ್ ತಂಡ ತೊರೆದು ಬೇರೆ ರಾಜ್ಯಗಳಿಗೆ ಆಡುತ್ತಿರುವ ಅರುಣ್ ಕುಮಾರ್, ಮಿಥುನ್ ಬೀರಾಲ, ಸುಜಿತ್ ಸೋಮಸುಂದರ್ ಮುಂತಾದವರ ಬಗ್ಗೆ ಪ್ರಸ್ತಾಪಿಸುವ ರಾಜೇಶ್ ಅವರ ಕ್ರಿಕೆಟ್ ಆಸಕ್ತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ರಾಜೇಶ್ ಅವರ ಅಲೆಮಾರಿಯ ಅನುಭವಗಳಿಂದಾಗಿ ಕನ್ನಡ ಬ್ಲಾಗ್ ಜಗತ್ತಿಗೆ ಒಂದು ಗಟ್ಟಿ ಸ್ಥಳ ಸೇರ್ಪಡೆಯಾದಂತಾಗಿದೆ. ಅವರ ಅನುಭವಗಳು ಹೀಗೇ ನಿರಂತರವಾಗಿ ಸಾಗಲೆಂದು ವೆಬ್‌ದುನಿಯಾ ಹಾರೈಸುತ್ತದೆ.

Share this Story:

Follow Webdunia kannada