Select Your Language

Notifications

webdunia
webdunia
webdunia
webdunia

ಕಥೆ: ಆ ಪ್ಲಾಸ್ಟಿಕ್ ಧ್ವಜದ ಗುಂಗಲ್ಲಿ...

ಕಥೆ: ಆ ಪ್ಲಾಸ್ಟಿಕ್ ಧ್ವಜದ ಗುಂಗಲ್ಲಿ...
ಕೃಷ್ಣವೇಣಿ ಕುಂಜಾರು
WD

ಕದಂ ಕದಂ ಬಡಾಯೆಗ
ಖುಷೀ ಸೆ ಗೀತ್ ಗಾಯೆಗ...
ಇಷ್ಟೇ ಇದ್ದಿದ್ದು ಚಿಂಟು ಮನದಲ್ಲಿ. ಸ್ವಾತಂತ್ರ್ಯ ದಿನಾಚರಣೆಯಂದು ಪದ್ಯ ಹೇಳ್ಳಿಕುಂಟು ಅಂತ ಅಮ್ಮನತ್ರ ಕಾಡಿಸಿ ಪೀಡಿಸಿ ಹೊಸ ಬಿಳಿ ಡ್ರೆಸ್ಸು, ಕೈಗೆ ಕೇಸರಿ ಬಿಳಿ ಹಸಿರು ಬಣ್ಣದ ಬಳೆ, ಕೆಂಪು ರಿಬ್ಬನ್ ಹಾಕಿಸಿಕೊಂಡಾಗಿತ್ತು. ಮತ್ತೆ ಅಪ್ಪ ಬೆಳಿಗ್ಗೆ ಬಾಯಿ ಕೆಂಪು ಮಾಡಿ ಉಗಿವ ಹೊತ್ತಿಗೆ ಮೆಲ್ಲನೆ ಹೆದರಿ ಹೆದರಿ ಹಿಂದಿನಿಂದ ನಿಂತು ಒಂದು ಧ್ವಜ ತೆಗಿಲಿಕ್ಕೆ ಎಂಟಾಣೆ ಕೇಳಿ ಬೈಸಿಕೊಂಡಾಗಿತ್ತು. ಹಾಗೆಲ್ಲಾ ಪ್ಲಾಸ್ಟಿಕ್ ಬಾವುಟ ಹಿಡ್ದು ಆಡ್ಬಾರ್ದು ಅಂತ ಅಜ್ಜನ ಬುಧ್ಧಿವಾದಕ್ಕೆ ಮನಸ್ಸಿಲ್ಲದ ಮನಸ್ಸಿಂದ ಹೂಂಗುಟ್ಟುವಾಗ ಅಮ್ಮನಿಗೆ ಯಾಕೋ ತಡೆಯಲಾಗಲಿಲ್ಲ, ತನ್ನ ಡಬ್ಬಿಯಿಂದ ಯಾರಿಗೂ ಕಾಣದ ಹಾಗೆ ಎಂಟಾಣೆ ತೆಗೆದು ಕೊಟ್ಟಿದ್ದೇ ತಡ ಖುಷಿಯಿಂದ ಶಾಲೆಗೆ ಹೊರಟ್ಳು ಚಿಂಟು.

ಎಲ್ಲಕ್ಕಿಂತ ಹೆಚ್ಚು ಖುಷಿ ಯಾಕೆಂದರೆ ಅವಳಿಗೆ ಈವತ್ತು ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಏರ್ಪಡಿಸಿದ್ದ ದೇಶಭಕ್ತಿ ಗೀತೆಯಲ್ಲಿ ಹಾಡ್ಲಿಕುಂಟು. ಕದಂ ಕದಂ ಬಡಾಯೆಗ.. ಅಂತ ಬೆಳಿಗ್ಗಿನಿಂದ ಅಜ್ಜ ಐದಾರು ಸಾರಿ ಹಾಡಿಸಿ ಚೆನ್ನಾಗಿ ಅಭ್ಯಾಸ ಮಾಡಿಸಿದ್ದರು. ಒಳಗೊಳಗೆ ಅವಳಿಗೆ ಹೆಮ್ಮೆ, ಉತ್ಸಾಹ. ಯಾಕಂದ್ರೆ ಯಾವಾಗ್ಲೂ ಶಾಲೆಯಲ್ಲಿ ಹಾಡೋದರಲ್ಲಿ ಅವಳೇ ಫಸ್ಟ್!

ದಾರಿಯಲ್ಲಿ ನಡೀತಾ ಇರ್ಬೇಕಾದ್ರೆ ಕಾಕಾನ ಅಂಗಡಿಯಿಂದ ಎಂಟಾಣೆಗೆ ಧ್ವಜ ತೆಗೆದು ಎಲ್ಲರಿಗೂ ಕಾಣುವ ಹಾಗೆ ಎತ್ತಿ ಹಿಡಿದು ನಡೀತಾ ಇದ್ದಳು. ಅದು ಅವಳ ಸುಮಾರು ದಿನದ ಕನಸಾಗಿತ್ತು. ಧ್ವಜ ಹೊತ್ತು ಮೆರಿಬೇಕು, ಎಲ್ಲರಂತೆ ನಾನೂ ಒಮ್ಮೆ'ದೊಡ್ಡ ಜನ' ಆಗಬೇಕೆಂದೇನಲ್ಲ. ಇಷ್ಟು ದಿನ ಆಗಿರಲಿಲ್ಲ. ಪ್ರತೀ ವರ್ಷ ಅಜ್ಜನ ಅದೇ ಉಪದೇಶಕ್ಕೆ ಕರಗಿ ಮನೆಯವರು ಅವಳ ಆಸೆಗೆ ತಣ್ಣೀರೆರಚುತ್ತಿದ್ದರು. ಹಾಗಾಗಿ ಇಂದವಳಿಗೆ ಸ್ವಾತಂತ್ರ್ಯ ಬಂದಷ್ಟೇ ಸಂಭ್ರಮ! ಜತೆಗೆ ಹಾಡುವಾಗ ನಮ್ಮ ವೇಷಭೂಷಣವನ್ನೂ ನೋಡ್ತಾರೇಂತ ಕ್ಲಾಸ್ ಟೀಚರ್ ನಿನ್ನೇನೇ ಹೇಳಿದ್ರು. ಹಾಗಾಗಿ ಅವಳ ಪಾಲಿಗೀಗ ಆ ಧ್ವಜವೇ ನಿರ್ಣಾಯಕ ಎನಿಸಿಬಿಟ್ಟಿತ್ತು.

ಸ್ಪರ್ಧೆ ನಡೆಯುವಲ್ಲಿ ಟೀಚರ್ ಎಲ್ಲ ಮಕ್ಕಳನ್ನೂ ಕರೆದು ಕೂರಿಸಿದ್ದರು.ಚಿಂಟು ಒಮ್ಮೆ ಎಲ್ಲರತ್ತ ನೋಡಿದಳು.ಎಲ್ಲರೂ ಅವಳ ಹಾಗೇ ಸಮವಸ್ತ್ರದಲ್ಲಿದ್ದಾರೆ, ಆದರೆ ಯಾರ ಕೈಯಲ್ಲೂ ಧ್ವಜ ಇಲ್ಲ. ಅವಳಿಗೆ ಒಳಗೊಳಗೆ ಖುಷಿ. ನಾನು ಮಾತ್ರ ವಿಶೇಷ ರೀತಿಯಲ್ಲಿದ್ದೇನೆಂದು ಕಲ್ಪಿಸಿದ ಅವಳಿಗೆ ಬಹುಮಾನ ಗ್ಯಾರಂಟಿ ಅಂತ ಅನಿಸಿಬಿಟ್ಟಿತ್ತು. ಸ್ಫರ್ಧೆ ಪ್ರಾರಂಭವಾಗಿ ಅವಳ ಸರದಿ ಬಂದಾಗ ಹೋಗಿ ಸುಶ್ರಾವ್ಯವಾಗಿ ಹಾಡಿ ಬಂದಿದ್ದಳು ಚಿಂಟು. ಬಹುಮಾನ ಅವಳಿಗೆ ಗ್ಯಾರಂಟಿ ಅಂತ ಅಲ್ಲೆಲ್ಲ ಮಾತಾಡುತ್ತಿದ್ದನ್ನು ಕೇಳಿಸಿಕೊಂಡು ಜಂಬ ಬಂದಿತ್ತವಳಿಗೆ.

ಸ್ಫರ್ಧೆ ಎಲ್ಲ ಮುಗಿದು ಬಹುಮಾನ ವಿತರಣೆಯ ಸಮಯ... ಎಲ್ಲ ಸ್ಫರ್ಧಾಳುಗಳಿಗೂ ಫಲಿತಾಂಶದ ಬಗ್ಗೆ ಕುತೂಹಲವಿದ್ದರೆ ಚಿಂಟುಗೆ ಪೂರ್ತಿ ಭರವಸೆಯಿತ್ತು ಬಹುಮಾನ ತನಗೇ ಬರುವುದೆಂದು..

ಶಾಲಾ ಮುಖ್ಯೋಪಾಧ್ಯಾಯರು ಅಸೆಂಬ್ಲಿ ಸೇರುವ ಹೊತ್ತಿಗೆ ಬಹುಮಾನ ಘೋಷಣೆ ಮಾಡುತ್ತಿದ್ದರು. ದೇಶಭಕ್ತಿಗೀತೆಯ ವಿಭಾಗ ಬಂದಾಗ ಬಹುಮಾನ ಸ್ವೀಕರಿಸಲು ರೆಡಿಯಾಗಿ ನಿಂತ ಚಿಂಟು, ಪ್ರಥಮ ಬಹುಮಾನಕ್ಕೆ ತನ್ನ ಹೆಸರಿನ ಬದಲು ಇನ್ಯಾರದ್ದೋ ಹೆಸರು ಹೇಳಿದ್ದು ಕೇಳಿ ದಂಗಾದಳು.

ಅವಳಿಗೆ ಅಳುವೇ ಬಂದು ಬಿಟ್ಟಿತು. ಜತೆಗೆ ಪಕ್ಕದಲ್ಲಿ ನಿಂತಿದ್ದ ಅವಳ ಕ್ಲಾಸ್ ಟೀಚರ್ ಹೇಳೋದು ಕೇಳಿಸಿತ್ತು. ನಿಜವಾಗ್ಲೂ ಪ್ರಥಮ ಬಹುಮಾನ ಚಿಂಟೂಗೇ ಬರಬೇಕಿತ್ತು; ಆದರೆ ಅವಳು ಪ್ಲಾಸ್ಟಿಕ್ ಧ್ವಜ ಹಿಡಿದ ಕಾರಣ ತೀರ್ಪುಗಾರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಶಿವರಾಮಣ್ಣನಿಗೆ ಇಷ್ಟ ಆಗ್ಲಿಲ್ಲ, ಪ್ಲಾಸ್ಟಿಕ್ ಧ್ವಜ ಹಿಡಿಯೋದಕ್ಕಿಂತ ಬಟ್ಟೆಯಿಂದ ಮಾಡಿದ ಧ್ವಜವಾಗಿದ್ದರೂ ಕೊಡಬಹುದಿತ್ತಂತೆ. ಪ್ಲಾಸ್ಟಿಕ್ ಧ್ವಜ ಒಳ್ಳೆದಲ್ಲಾಂತ ಅವರುಗಳ ಅಭಿಪ್ರಾಯವಂತೆ.

ಇದನ್ನೆಲ್ಲಾ ಕೇಳುತ್ತಿದ್ದಂತೆ ಚಿಂಟು ಮನಸ್ಸಿಗೆ ಚಿವುಟಿದಂತಾಯಿತು. ಜತೆಗೆ ಅಜ್ಜ ತನ್ನ ಸಂಗ್ರಹಗಳೆಡೆಯಿಂದ ಕೊಡಲು ಹೊರಟ ಬಟ್ಟೆಯ ಧ್ವಜ, ಅದನ್ನು ತಾನು ನಿರಾಕರಿಸಿದ್ದು ನೆನಪಾಗಿ ಅಳುವೇ ಬಂತು.... ಮತ್ತೆ ಟೀಚರು ಗೆಳತಿಯರೆಲ್ಲ ತಾನು ಅತ್ತಿದ್ದನ್ನು ನೋಡಿದರೆ? ಎಂಬ ಅನುಮಾನದಿಂದ ಕಣ್ಣೀರೊರೆಸಿ ಪೆಚ್ಚಾಗಿ ನಿಂತಳು ಚಿಂಟೂ.

Share this Story:

Follow Webdunia kannada