Select Your Language

Notifications

webdunia
webdunia
webdunia
webdunia

ಯೋಗ ಮುಪ್ಪಿಗೆ ಮದ್ದೇ?

ಯೋಗ ಮುಪ್ಪಿಗೆ ಮದ್ದೇ?
ಮುಪ್ಪು ತಡೆಯಲು ಎಲ್ಲರೂ ಒಂದಿಲ್ಲೊಂದು ಪ್ರಯತ್ನ ಮಾಡುವವರೇ. ಮುಪ್ಪು ಮರೆಮಾಚಲು ಸರ್ಕಸ್ಸು ನಡೆಸಿ ಜೇಬಿನಿಂದ ಧಾರಾಳ ದುಡ್ಡು ಸುರಿದು ಸಪ್ಪೆ ಮೋರೆ ಹಾಕಿದ ಸುಂದರ ಸುಂದರಿಯರೇ ಹೆಚ್ಚು. ಹಾಗಾದರೆ ಮುಪ್ಪು ತಡೆಯಲು ಮದ್ದಿದೆಯೇ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಮಾತ್ರ ಉತ್ತರ ಸಿಗುವುದು ಸ್ವಲ್ಪ ಕಷ್ಟ.

ಆದರೂ, ವಿದೇಶೀಯರನ್ನೂ ಆಕರ್ಷಿಸಿರುವ ಭಾರತದ ಪುರಾತನ ಹೆಮ್ಮೆಯ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮುಪ್ಪನ್ನು ನಿಯಂತ್ರಿಸುವಲ್ಲಿ ತಮ್ಮ ಪಾತ್ರ ವಹಿಸುತ್ತವೆ ಎನ್ನುವುದಕ್ಕೆ ಈಗ ವಿಜ್ಞಾನಿಗಳೂ ಹೌದೆನ್ನುತ್ತಾರೆ. ಕೇವಲ ಯೋಗ ಮಾತ್ರವಲ್ಲ, ನಿಯಮಿತ ವ್ಯಾಯಾಮವೂ ದೇಹವನ್ನು ಆರೋಗ್ಯವಾಗಿರಿಸುವುದಲ್ಲದೆ ಯೌವನವನ್ನೂ ಕಾಪಾಡುತ್ತದೆ ಎಂಬುದು ವಿಜ್ಞಾನಿಗಳ ಪರಿಶೋಧನೆ.

ಮಾನವನ ವಂಶವಾಹಿನಿಯನ್ನು ಹೊತ್ತ ಕ್ರೋಮೋಸೋಮ್‌ಗಳ ಎರಡೂ ತುದಿಗಳಲ್ಲಿ ಕವಚದಂತಹ ರಚನೆ ಹೊಂದಿರುವ ಟೆಲೊಮೇರ್‌ಗಳಿಗೂ ಯೌವನಕ್ಕೂ ಸಂಬಂಧವಿದೆ ಎಂಬುದು ವಿಜ್ಞಾನಿಗಳ ಈಗಿನ ಸಂಶೋಧನೆ.

ವಿಶ್ವದ ಪ್ರಖ್ಯಾತ ವಿಜ್ಞಾನಿ ಎಲಿಝಬೆತ್ ಬ್ಲ್ಯಾಕ್‌ಬರ್ನ್ ಹೇಳುವಂತೆ, ಪ್ರತಿ ಟೆಲೋಮೇರ್‌ ಕೂಡಾ ಟೆಲೋಮರೇಸ್ ಎಂಬ ಎನ್‌ಜೈಮ್‌ಗಳನ್ನು ಬಿಡುಗಡೆ ಮಾಡುತ್ತವೆ. ಟೆಲೋಮೇರ್ ಕವಚ ತೆಳುವಾಗುತ್ತಾ ಹೋದಂತೆ, ಡಿಎನ್ಎಯೂ ಸವೆಯುತ್ತಾ ಹೋಗುತ್ತದೆ. ಅಲ್ಲದೆ ಟೆಲೋಮೇರ್ ಬಿಡುಗಡೆ ಮಾಡುವ ಟೆಲೋಮರೇಸ್ ಪ್ರಮಾಣ ಕೂಡಾ ಕಡಿಮೆಯಾಗುತ್ತಾ ಸಾಗುತ್ತದೆ. ಹೀಗಾಗಿ ಸಹಜವಾಗಿಯೇ ವ್ಯಕ್ತಿ ಯೌವನದಿಂದ ಮುಪ್ಪಿನೆಡೆಗೆ ಸಾಗುತ್ತಾನೆ. ಜತೆಗೆ, ಕ್ಯಾನ್ಸರ್, ಹೃದಯದ ಕಾಯಿಲೆ, ಮಧುಮೇಹದಂತಹ ರೋಗಗಳಿಗೂ ಸುಲಭವಾಗಿ ತುತ್ತಾಗುತ್ತಾನೆ.

ಮುಪ್ಪಿನಲ್ಲಿ ಮರೆಗುಳಿ ಕಾಯಿಲೆ ಹೊಂದಿರುವ ಡಿಮೆನ್ಶಿಯಾ ರೋಗಿಗಳಲ್ಲಿ ಟೆಲೋಮೇರ್‌ನ ಸವೆತ ಜಾಸ್ತಿ ಹಾಗೂ ಟೆಲೋಮರೇಸ್‌ನ ಪ್ರಮಾಣ ಕಡಿಮೆ. ಹಾಗಾಗಿ, ಮುಪ್ಪಿಗೂ ಟೆಲೋಮರೇಸ್‌ನ ಪ್ರಮಾಣಕ್ಕೂ ಸಂಬಂಧವಿದೆ ಎನ್ನುತ್ತಾರೆ ಎಲಿಝಬೆತ್.

ಹೆಚ್ಚಿನ ಮಾನಸಿಕ ಒತ್ತಡವೂ ಟೆಲೋಮೇರ್‌ನ ಕ್ರಿಯಾಶೀಲತೆಗೆ ಧಕ್ಕೆ ಉಂಟು ಮಾಡುತ್ತದೆ. ಆಗ ರೋಗಗಳ ದಾಳಿಯಾಗುವ ಸಂಭವ ಹೆಚ್ಚು. ಜತೆಗೆ ಮುಪ್ಪೂ ಕೂಡಾ. ಅಧ್ಯಯನದ ಪ್ರಕಾರ, ಹೆಚ್ಚಿನ ಮಾನಸಿಕ ಒತ್ತಡ ಹೊಂದಿರುವವರಲ್ಲಿ ಸಾಮಾನ್ಯ ವ್ಯಕ್ತಿಗಿಂತ ಶೇ.50ರಷ್ಟು ಟೆಲೋಮರೇಸ್‌ ಕಡಿಮೆ. ದೇಹಕ್ಕೆ ವ್ಯಾಯಾಮ ದೊರೆತರೆ ದೇಹದಲ್ಲಿರುವ ಟೆಲೋಮೇರ್ ಕವಚ ಸವೆಯುವುದಿಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಜತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ, ಪ್ರಾಣಾಯಾಮಗಳು ಸಹಕಾರಿಯಾಗುತ್ತದೆ. ನಿಯಮಿತ ವ್ಯಾಯಾಮ, ಯೋಗ ಆರೋಗ್ಯವನ್ನೂ ಕಾಪಾಡುತ್ತದೆ. ಮಾನಸಿಕ ಸಮತೋಲನ, ದೇಹಾರೋಗ್ಯ ಕಾಯ್ದುಕೊಂಡಲ್ಲಿ ಟೆಲೋಮೇರ್ ಕೂಡಾ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತದೆ. ಮುಪ್ಪು ಬೇಗನೆ ಹತ್ತಿರವೂ ಸುಳಿಯುವುದಿಲ್ಲ. ಯೌವನ ಕಾಪಿಡಲು ಇದೇ ಸೂಕ್ತ ಮದ್ದು ಎನ್ನುತ್ತಾರೆ ಎಲಿಝಬೆತ್.

Share this Story:

Follow Webdunia kannada