Select Your Language

Notifications

webdunia
webdunia
webdunia
webdunia

ಹೇಮಾಶ್ರೀ ಅಸಹಜ ಸಾವು: ಕೊಲೆಯೋ, ಆತ್ಮಹತ್ಯೆಯೋ?

ಹೇಮಾಶ್ರೀ ಅಸಹಜ ಸಾವು: ಕೊಲೆಯೋ, ಆತ್ಮಹತ್ಯೆಯೋ?
PR
ಸಿನಿಮಾ ಹಾಗೂ ಧಾರಾವಾಹಿ ನಟಿ ಹೇಮಾಶ್ರೀ ಸಾವು ಸಹಜವಲ್ಲ ಅನ್ನೋದು ಖಾತ್ರಿಯಾಗಿದೆ. ಶವದ ಮರಣೋತ್ತರ ಪರೀಕ್ಷೆಯಿಂದ ಲಭ್ಯವಾದ ಪ್ರಾಥಮಿಕ ಮಾಹಿತಿಯ ಪ್ರಕಾರ, ಆಕೆಯ ಹೊಟ್ಟೆಯಲ್ಲಿ ಕಪ್ಪು ದ್ರಾವಣ ಪತ್ತೆಯಾಗಿದೆ. ತಲೆ ಸೇರಿದಂತೆ ಒಟ್ಟು ಮೂರು ಕಡೆ ಗಾಯವಾಗಿರುವುದೂ ಕಂಡು ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದ ಅಂಶಗಳ ಪ್ರಕಾರ, ಇದೊಂದು ಅಸಹಜ ಸಾವು ಅನ್ನೋದು ಖಚಿತವಾಗಿದೆ. ಹೊಟ್ಟೆಯಲ್ಲಿ ರಾಸಾಯನಿಕ ಪತ್ತೆಯಾಗಿರುವುದರಿಂದ ವಿಷಪ್ರಾಶನವಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಹೊಟ್ಟೆ ಮತ್ತು ತಲೆಯ ಮೇಲೆ ಒಟ್ಟು ಮೂರು ಗಾಯಗಳಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಮಾರ್ಗ ಮಧ್ಯೆ ಏನಾಯ್ತು?
ನಟಿ ಹೇಮಾಶ್ರೀ ತನ್ನ ಪತಿ ಸುರೇಂದ್ರ ಬಾಬು ಜತೆ ಆಂಧ್ರಪ್ರದೇಶದ ಅನಂತಪುರಕ್ಕೆ ಹೋಗಿದ್ದರು. ಅಲ್ಲಿ ಗೆಳೆಯರ ಮನೆಯಲ್ಲಿ ತಂಗಿದ್ದ ದಂಪತಿ, ವಾಪಸ್ ಬೆಂಗಳೂರಿಗೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಹೇಮಾಶ್ರೀ ಪ್ರಜ್ಞೆ ತಪ್ಪಿದರು. ತಕ್ಷಣವೇ ಅವರನ್ನು ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಲಿಲ್ಲ. ಅಷ್ಟು ಹೊತ್ತಿಗೆ ಹೇಮಾಶ್ರೀ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಪತಿ ಸುರೇಂದ್ರ ಬಂಧನ:
ಹೇಮಾಶ್ರೀ ಸಾವಿನ ಹಿಂದೆ ಆಕೆಯ ಪತಿ ಸುರೇಂದ್ರ ಬಾಬು ಕೈವಾಡವಿದೆ ಎಂದು ಆಕೆಯ ತಾಯಿ ಲೀಲಾವತಿ ದೂರು ನೀಡಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರವಾಸಕ್ಕೆ ಹೋದಲ್ಲಿ ಹೇಮಾಶ್ರೀ ಸಾವು ಹೇಗೆ ಸಂಭವಿಸಿತು? ಸಾವಿನ ಹಿಂದೆ ಆತನ ಕೈವಾಡವಿದೆಯೇ ಎಂಬ ಕುರಿತು ವಿಚಾರಣೆ ನಡೆಯುತ್ತಿದೆ.

ಬಲವಂತದ ಮದುವೆ?
ಹೇಮಾಶ್ರೀ ವಯಸ್ಸು 26 ವರ್ಷ. ಆಕೆಯ ಪತಿ ಸುರೇಂದ್ರ ಬಾಬು ವಯಸ್ಸು 48 ವರ್ಷ. ಅಂದರೆ ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಬರೋಬ್ಬರಿ 22 ವರ್ಷ. 2008ರ ಜೂನ್ 26ರಂದು ಇವರ ಮದುವೆ ನಡೆದಿತ್ತು. ಮದುವೆಯ ಮರುದಿನವೇ ಪತಿ ವಿರುದ್ಧ ತಿರುಗಿ ಬಿದ್ದಿದ್ದ ಹೇಮಾಶ್ರೀ, ಪೊಲೀಸರಿಗೆ ದೂರು ನೀಡಿದ್ದರು. ಆದರೆ ಎರಡೇ ದಿನಗಳಲ್ಲಿ ದೂರನ್ನು ವಾಪಸ್ ಪಡೆದಿದ್ದರು.

ಅದರ ನಂತರವೂ ಪತಿಯ ವಿರುದ್ಧ ಹಲವು ಬಾರಿ ಹೇಮಾಶ್ರೀ ದೂರಿದ್ದರು. ತನ್ನ ತಂದೆ ಬ್ಲ್ಯಾಕ್‌ಮೇಲ್ ಮಾಡಿದರು. ಮದುವೆಯಾಗದೇ ಇದ್ದರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಹೇಳಿದ್ದರು. ಹಾಗಾಗಿ ಒಲ್ಲದ ಮನಸ್ಸಿನಿಂದ ನಾನು ಸುರೇಂದ್ರ ಬಾಬುವನ್ನು ಮದುವೆಯಾಗಿದ್ದೆ. ಸುರೇಂದ್ರ ಬಾಬು ಅವರಿಗೆ ಮೊದಲೇ ಒಂದು ಮದುವೆಯಾಗಿತ್ತು ಅನ್ನೋದು ನನ್ನನ್ನು ಮದುವೆಯಾದ ನಂತರ ಗೊತ್ತಾಯಿತು ಎಂದು ಆಕೆ ದಾಖಲಿಸಿದ್ದ ದೂರೊಂದರಲ್ಲಿ ಉಲ್ಲೇಖವಿದೆ.

ಇಷ್ಟೊಂದು ಅಸಮಾಧಾನಗಳಿದ್ದರೂ ಆಗಾಗ ನಡೆಯುತ್ತಿದ್ದ ಸಂಧಾನಗಳಿಂದ ದಾಂಪತ್ಯದ ಬಂಡಿ ಹೇಗೋ ಮುಂದಕ್ಕೆ ಹೋಗುತ್ತಿತ್ತು. ಅವರಿಬ್ಬರು ಬನಶಂಕರಿಯ ನಿವಾಸದಲ್ಲಿ ವಾಸಿಸುತ್ತಿದ್ದರು.

ಬಹುಮುಖ ಪ್ರತಿಭೆ...
ಹೇಮಾಶ್ರೀ ಒಂದಲ್ಲ, ಎರಡಲ್ಲ... ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿದ್ದ ಅಪ್ಪು, ವೀರ ಪರಂಪರೆ, ಸಿರಿವಂತ, ಮರ್ಮ, ಉಗ್ರಗಾಮಿ, ವರ್ಷ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.

ಅದಕ್ಕಿಂತಲೂ ಅವರು ಹೆಚ್ಚು ಜನಪ್ರಿಯರಾಗಿದ್ದು ಧಾರಾವಾಹಿಗಳಲ್ಲಿ. ಗೋಲ್ಡನ್ ಸ್ಟಾರ್ ಗಣೇಶ್ ಪ್ರಮುಖ ಪಾತ್ರದಲ್ಲಿದ್ದ ವಠಾರ ಧಾರಾವಾಹಿಯಿಂದ ಆರಂಭಿಸಿ ತುಳಸಿ, ಉತ್ತರಾಯಣ, ಮಹಮಾಯಿ ಸೇರಿದಂತೆ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರ ವ್ಯಾಪ್ತಿ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಟಿವಿ ಕಾರ್ಯಕ್ರಮಗಳು ಮತ್ತು ಸ್ಟೇಜ್ ಶೋ ಕಾರ್ಯಕ್ರಮಗಳ ನಿರೂಪನೆಯಲ್ಲೂ ಸೈ ಎನಿಸಿಕೊಂಡಿದ್ದರು.

Share this Story:

Follow Webdunia kannada