Select Your Language

Notifications

webdunia
webdunia
webdunia
webdunia

ಗಣೇಶ ಚತುರ್ಥಿ ಮತ್ತು ವಿಘ್ನ...

ಗಣೇಶ ಚತುರ್ಥಿ ಮತ್ತು ವಿಘ್ನ...
ನಾಗೇಂದ್ರ ತ್ರಾಸಿ
ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು.

WD
ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ, ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ. ಸ್ವಾತಂತ್ರ್ಯದ ಬಳಿಕವೂ ಧಾರ್ಮಿಕವಾಗಿ ಬಹಳಷ್ಟು ಮಹತ್ವ ಪಡೆದ ಗಣೇಶೋತ್ಸವನ್ನು ಇಂದು ಬೀದಿ-ಬೀದಿಗಳಲ್ಲಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಣೇಶೋತ್ಸವ ಮುಂಬೈಯಲ್ಲಿ ತಿಲಕರ ನೇತೃತ್ವದಲ್ಲಿ ಪಡೆದ ಮಹತ್ವಕ್ಕೂ ಇಂದು ಮಹಾರಾಷ್ಟ್ರದಲ್ಲಿ ಕೋಟ್ಯಂತರ ರೂಪಾಯಿಗಳ ವಂತಿಗೆ(ಹಫ್ತಾ)ವಸೂಲಿಯೊಂದಿಗೆ ನಡೆಯುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಭಯ-ಭಕ್ತಿ, ಶ್ರದ್ಧೆ, ಧರ್ಮಕ್ಕೆ ಮಹತ್ವ ಇಲ್ಲ, ಪ್ರತಿಷ್ಠೆ-ಹಣಬಲ-ತೋಳ್ಬಲವೇ ಪ್ರಧಾನ.

ಅದೇ ರೀತಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಾಗಲಿ, ಪಟ್ಟಣದಲ್ಲಾಗಲಿ ನಿಸರ್ಗಕ್ಕೆ ಯಾವುದೇ ಧಕ್ಕೆ ತಾರದ ರೀತಿಯಲ್ಲಿ ಕುಂಬಾರರು ಜೇಡಿಮಣ್ಣಿನಲ್ಲಿ ತಯಾರಿಸಿದ ಗಣಪನ ಮೂರ್ತಿ ಪೂಜಿಸಲ್ಪಡುತ್ತಿತ್ತು. ಕಾಲಚಕ್ರ ಉರುಳಿದ ಹಾಗೆ ಗಣೇಶೋತ್ಸವ ಕೂಡ ನವ್ಯ ಹಾದಿ ತುಳಿದ ಪರಿಣಾಮ ಇವತ್ತು ಜೇಡಿಮಣ್ಣಿನ ಗಣೇಶನ ಮೂರ್ತಿಗೂ ಬೆಲೆ ಇಲ್ಲದಂತಾಗಿದೆ.

ಅದರ ಬದಲು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಮೂಲಕ ಗಣಪತಿ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಆ ಮೂರ್ತಿಗೆ ಕೆಮಿಕಲ್ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಗಣಪನ ಮೂರ್ತಿಗೆ ಮೆಟಲ್ಸ್‌ಗಳನ್ನ ಉಪಯೋಗಿಸುತ್ತಾರೆ. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಜೇಡಿಮಣ್ಣಿನ ಗಣಪತಿ ಮೂರ್ತಿ ಅಲ್ಲಲ್ಲಿ ಕಾಣಸಿಗುತ್ತದೆ, ಆದರೆ ನಗರ-ಮಹಾನಗರಗಳಲ್ಲಿನ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ರಾರಾಜಿಸುವ ಗಣಪನ ಹುಟ್ಟು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್‌‌ನದ್ದು.

webdunia
WD
ವಾಣಿಜ್ಯ ನಗರಿ ಮುಂಬೈಯಲ್ಲಿ ಹತ್ತು ದಿನಗಳ ಕಾಲ ನಡೆಯುವ ಸಾರ್ವಜನಿಕ ಗಣೇಶೋತ್ಸವ ಇಂದು ಭಾರೀ ಜನಪ್ರಿಯತೆ ಪಡೆದಿದೆ. ಪ್ರತಿವರ್ಷ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ. ಮೂರ್ತಿಗಳ ಎತ್ತರ ಕೂಡ ಹಲವು ಅಡಿಗಳಷ್ಟಿರುತ್ತೆ. ಇಂತಹ ಪ್ರತಿಷ್ಠಿತ ವೈಭವದ ಗಣೇಶೋತ್ಸವ ನೋಡಲು ಪ್ರತಿದಿನ 10ಲಕ್ಷ ಮಂದಿ ಆಗಮಿಸುತ್ತಾರೆ.

ವಿಷಯ ಅದಲ್ಲ, ಒಂದು ಅಂದಾಜಿನ ಪ್ರಕಾರ ಗಣೇಶ ಚತುರ್ಥಿಯ ಅಂಗವಾಗಿ ಮುಂಬೈಯಲ್ಲಿ 8 ರಿಂದ 9ಸಾವಿರ ಗಣಪತಿ ಮೂರ್ತಿಗಳು ಪೂಜಿಸಲ್ಪಡುತ್ತವೆ. ಹಬ್ಬದ ಕೊನೆಯ ದಿನ ಇವುಗಳನ್ನು ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ಭಾರೀ ಪ್ರಮಾಣದಲ್ಲಿ ಸಮುದ್ರ ಅಥವಾ ನದಿಗಳಲ್ಲಿ ಗಣಪನ ಮೂರ್ತಿಗಳನ್ನು ವಿಸರ್ಜಿಸುವುದರಿಂದ ಪರಿಸರಕ್ಕೆ ಧಕ್ಕೆಯಾಗುವುದಲ್ಲದೆ, ನೀರು ವಿಷಯುಕ್ತವಾಗುವ ಮೂಲಕ ಜಲಚರಕ್ಕೆ ತೊಂದರೆ ಉಂಟಾಗುತ್ತಿರುವುದಾಗಿ ಪರಿಸರವಾದಿಗಳು, ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಆ ಕಾರಣಕ್ಕಾಗಿಯೇ ಕೆಲವು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಗಣೇಶೋತ್ಸವವನ್ನು ಆಚರಿಸುವ ಸಂಘಟನೆಗಳು ನಿಸರ್ಗಕ್ಕೆ ಬಾಧಕವಾಗದ ರೀತಿಯಲ್ಲಿ ಜೇಡಿಮಣ್ಣಿನ ಗಣೇಶನ ಮೂರ್ತಿಯನ್ನು ಮತ್ತು ಬಣ್ಣಗಳನ್ನು ಉಪಯೋಗಿಸುವಂತೆ ಸೂಚಿಸಿವೆ. ಆದರೆ ಪೈಪೋಟಿಗೆ ಬಿದ್ದಿರುವ ಇಂದಿನ ಸಮಾಜ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಂತಿಲ್ಲ, ಕೋಟ್ಯಂತರ ರೂಪಾಯಿಗಳಲ್ಲಿ ಹಣವನ್ನು ವ್ಯಯಿಸಿ ಅದ್ಧೂರಿಯಾಗಿ 'ಗಣಪತಿ ಬೊಪ್ಪ ಮೋರ್ಯಾ' ಎಂದು ಕೂಗುತ್ತ ಮೆರವಣಿಗೆ ಸಾಗಿ ನೀರಿನಲ್ಲಿ ವಿಸರ್ಜಿಸುವ ಪರಿಪಾಠ ಮುಂದುವರಿದಿದೆ.

ಮುಂಬೈ ಸೇರಿದಂತೆ ಹಲವಾರು ಮಹಾನಗರಗಳಲ್ಲಿ ಗಣೇಶ ಚತುರ್ಥಿ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಆತಂಕಕ್ಕೂ ಕಾರಣವಾಗಿದ್ದರೆ, ಬಂದೋಬಸ್ತ್ ಹೊರೆ ಬೇರೆ. ಮೆರವಣಿಗೆ ಸಂದರ್ಭದಲ್ಲಿ ಏನಾಗುತ್ತೋ ಎಂಬ ಅವ್ಯಕ್ತ ಭಯ ಜನರನ್ನು ಒಳಗೊಳಗೆ ಕಾಡುವುದು ಒಂದೆಡೆಯಾದರೆ, ಮತ್ತೊಂದೆಡೆ ಉಗ್ರರ ಅಟ್ಟಹಾಸ ಹೀಗೆ ಇಂತಹ ವಿಘ್ನಗಳನ್ನು ನಿವಾರಿಸಿಕೊಂಡು ಚೌತಿ ಶಾಂತಿಯುತವಾಗಿ ಮುಕ್ತಾಯಗೊಳ್ಳುವುದೇ 'ವಿಘ್ನ' ನಿವಾರಕನಿಗೊಂದು ಸವಾಲಾಗಿದೆ....

Share this Story:

Follow Webdunia kannada