Select Your Language

Notifications

webdunia
webdunia
webdunia
webdunia

ಕನ್ನಡ ಡಬ್ಬಿಂಗ್ ವಿವಾದಕ್ಕೆ ಅಮೀರ್ ಖಾನ್ ಬ್ರೇಕ್?

ಕನ್ನಡ ಡಬ್ಬಿಂಗ್ ವಿವಾದಕ್ಕೆ ಅಮೀರ್ ಖಾನ್ ಬ್ರೇಕ್?
IFM
IFM
ಪ್ರಸಕ್ತ ಪರಿಸ್ಥಿತಿಯಲ್ಲಿ ಅಲಿಖಿತ ನಿಯಮವೊಂದನ್ನು ಬ್ರೇಕ್ ಮಾಡುವವರ ಅಗತ್ಯ ಹಲವರಿಗಿದೆ. ಕನ್ನಡದ್ದೇ ಹತ್ತಾರು ನಿರ್ಮಾಪಕರು ಅದಕ್ಕಾಗಿ ಕಾಯುತ್ತಿದ್ದಾರೆ. ಆ ವ್ಯಕ್ತಿ ಅಮೀರ್ ಖಾನ್ ಆಗ್ತಾರಾ? ಅಂತಹ ಸಾಧ್ಯತೆಗಳು ನಿಚ್ಚಳವಾಗಿವೆ. ಸ್ಯಾಂಡಲ್‌ವುಡ್‌ನ ಡಬ್ಬಿಂಗ್ ಜ್ವರವನ್ನು ಖಾನ್ ಬಿಡಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಅಂದರೆ ಈಗಾಗಲೇ ಕನ್ನಡಕ್ಕೆ ಡಬ್ಬಿಂಗ್‌ಗೆ ರೆಡಿಯಾಗಿರುವ ನೂರಾರು ತಮಿಳು-ತೆಲುಗು ಚಿತ್ರಗಳ ಹಕ್ಕುಗಳನ್ನು ಪಡೆದುಕೊಂಡವರದ್ದು ಶುಕ್ರದೆಸೆ? ಹಾಗಾಗುವುದೇ? ಕಾದು ನೋಡಬೇಕು.

ಇದೆಲ್ಲ ಹೇಗೆ ಅಂತೀರಾ? ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ತನ್ನ ಸಿನಿಮಾವನ್ನೇನಾದ್ರೂ ಕನ್ನಡಕ್ಕೆ ಡಬ್ ಮಾಡ್ತಿದ್ದಾರೆ ಅಂದ್ಕೊಂಡ್ರಾ? ಇಲ್ಲ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಅವರೀಗ ಟಿವಿ ಲೋಕಕ್ಕೆ ಪ್ರವೇಶಿಸಿದ್ದಾರೆ. 'ಸತ್ಯಮೇವ ಜಯತೇ' ಎಂಬ ರಿಯಾಲಿಟಿ ಶೋ ನಡೆಸಲು ಮುಂದಾಗಿದ್ದಾರೆ. ಇಲ್ಲಿ ಎಲ್ಲವೂ ಅವರದ್ದೇ. ಹಾಗಾಗಿ ಕನ್ನಡ ಸೇರಿದಂತೆ ದಕ್ಷಿಣ ನಾಲ್ಕು ಭಾಷೆಗಳಿಗೆ ಕಾರ್ಯಕ್ರಮ ಡಬ್ ಆಗಲಿದೆ ಅಂತ ಘೋಷಿಸಿದ್ದಾರೆ.

ಏನಿದು ಕಾರ್ಯಕ್ರಮ?
ಅಮೀರ್ ಖಾನ್ ಯಾವತ್ತೂ ಬರೀ ಮಸಾಲೆಯನ್ನು ಪ್ರೋತ್ಸಾಹಿಸಿದವರಲ್ಲ. ಅದೇ ಕಾರಣಕ್ಕೆ ಬಾಲಿವುಡ್ ಖಾನ್‌ಗಳಲ್ಲಿ ಅಮೀರ್ ಬೇರೆಯಾಗಿ ನಿಲ್ಲುತ್ತಾರೆ. ಈ ಬಾರಿ ಟಿವಿಗೆ ಎಂಟ್ರಿ ಕೊಡುತ್ತಿರುವುದರ ಹಿಂದೆಯೂ ಅಂತಹುದ್ದೇ ಕಾರಣಗಳಿವೆ. ಆದರೆ ಅದೇನು ಅನ್ನೋದನ್ನು ಮಾತ್ರ ಅಮೀರ್ ಬಹಿರಂಗಪಡಿಸುತ್ತಿಲ್ಲ.

ಆದರೂ ಕಪ್ಪೆ-ಚೇಳು ಹಿಡಿಯೋದು, ಯಾರನ್ನೋ ಕಿಚಾಯಿಸೋದು ಮುಂತಾದ 'ಗಿಮಿಕ್'ಗಳು ಇಲ್ಲಿರೋದಿಲ್ಲ ಅನ್ನೋದು ಗ್ಯಾರಂಟಿ. ಸಾಮಾಜಿಕ ಸಮಸ್ಯೆಗಳ ಸುತ್ತ ಸುತ್ತುವ ಕಾರ್ಯಕ್ರಮ 'ಸತ್ಯಮೇವ ಜಯತೇ'. ಇಡೀ ಭಾರತದಲ್ಲಿನ ಸಾಮಾಜಿಕ ಸಮಸ್ಯೆಗಳನ್ನು ಇಲ್ಲಿ ತೋರಿಸಲಾಗುತ್ತದೆ. ಆ ಮೂಲಕ ಪರಿಹಾರಕ್ಕೂ ಯತ್ನಿಸಲಾಗುತ್ತದೆ. ಅಂತಹ ಕಾರ್ಯಕ್ರಮವೇ ಅಮೀರ್ ಖಾನ್ ಮಾಡುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಡಬ್ಬಿಂಗ್ ಮುರಿಯುತ್ತಾ?
ಕರ್ನಾಟಕದ ಅಲಿಖಿತ ನಿಯಮದ ಪ್ರಕಾರ, ಇಲ್ಲಿ ಯಾವುದೇ ಭಾಷೆಯ ಸಿನಿಮಾ ಅಥವಾ ಕಾರ್ಯಕ್ರಮಗಳ ಕನ್ನಡ ಡಬ್ಬಿಂಗ್ ಪ್ರಸಾರ ಮಾಡಲು ಅವಕಾಶವಿಲ್ಲ. ಇದು ದಶಕಗಳ ಹಿಂದಿನ ಹೋರಾಟದ ಫಲ. ಆದರೆ ಈಗ ಅದರ ಅಗತ್ಯವಿಲ್ಲ ಎಂಬ ವಾದ ಜೋರಾಗಿದೆ. ಅದೇ ನಿಟ್ಟಿನಲ್ಲಿ ಅಲಿಖಿತ ನಿಯಮವನ್ನು ಮುರಿಯಲು ಕಾಯುತ್ತಿರುವ ನಿರ್ಮಾಪಕರ ಸಂಖ್ಯೆ ದೊಡ್ಡದು.

ಈಗಾಗಲೇ ತಮಿಳು, ತೆಲುಗು ಭಾಷೆಗಳಲ್ಲಿ ಸೂಪರ್ ಹಿಟ್ ಆದ ಚಿತ್ರಗಳ ಕನ್ನಡ ಡಬ್ಬಿಂಗ್ ಹಕ್ಕುಗಳನ್ನು ಕನ್ನಡದ ಹತ್ತಾರು ನಿರ್ಮಾಪಕರು ಖರೀದಿಸಿದ್ದಾರೆಂಬ ವರದಿಗಳಿವೆ. ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿರುವ ಈ ಹಕ್ಕುಗಳನ್ನು ಅವರು ಖಂಡಿತಾ ವೇಸ್ಟ್ ಮಾಡಲು ಸಿದ್ಧರಿಲ್ಲ. ಡಬ್ಬಿಂಗ್ ಕಾರ್ಯಕ್ಕೆ ಯಾರಾದರೂ ಅಧಿಕೃತವಾಗಿ ಮುನ್ನಡಿಯಿಟ್ಟರೆ, ನಂತರ ನಾವು ಹಿಂದೆ ಬರುತ್ತೇವೆ ಎಂಬಂತೆ ಕಾಯುತ್ತಿದ್ದಾರೆ.

ಈಗ 'ಸತ್ಯಮೇವ ಜಯತೇ'ಯನ್ನು ಅಮೀರ್ ಖಾನ್ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಮಾಡುವುದಾಗಿ ಹೇಳಿದ್ದಾರೆ. ಇಲ್ಲಿ ತೊಡಕಿರುವುದು ಕನ್ನಡದಲ್ಲಿ ಮಾತ್ರ. ಬೇರೆ ಎಲ್ಲಾ ಚಿತ್ರರಂಗಗಳಲ್ಲೂ ಡಬ್ಬಿಂಗ್‌ಗೆ ಅವಕಾಶವಿದೆ. ಇದು ಬಹುಶಃ ಅಮೀರ್ ಖಾನ್‌ಗೂ ಗೊತ್ತಿರಬೇಕು. ಸಾಮಾಜಿಕ ಸಮಸ್ಯೆಗಳ ಕಾರ್ಯಕ್ರಮದಲ್ಲಿ ಡಬ್ಬಿಂಗ್ ನಿಷೇಧವೂ ಒಂದು ಸಮಸ್ಯೆ ಎಂದು ಪರಿಗಣಿಸಿ ಅಲಿಖಿತ ನಿಯಮಗಳನ್ನು ಅಮೀರ್ ಬ್ರೇಕ್ ಮಾಡಲಿದ್ದಾರೆಯೇ? ಇದು ಕಾದು ನೋಡಿ, ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ.

ಅಂದ ಹಾಗೆ, ಅಮೀರ್ 'ಸತ್ಯಮೇವ ಜಯತೇ' ಸ್ಟಾರ್ ಪ್ಲಸ್ ಮತ್ತು ದೂರದರ್ಶನ-1ರಲ್ಲಿ ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಹೀಗೆ ಖಾಸಗಿ ಮತ್ತು ಸರಕಾರಿ ಚಾನೆಲ್‌ನಲ್ಲಿ ಕಾರ್ಯಕ್ರಮವೊಂದು ಏಕಕಾಲದಲ್ಲಿ ಪ್ರಸಾರವಾಗುತ್ತಿರುವುದು ಇದೇ ಮೊದಲಂತೆ. ಕನ್ನಡದಲ್ಲಿ ಯಾವ ಚಾನೆಲ್‌ಗಳು ಇದನ್ನು ಪ್ರಸಾರ ಮಾಡುತ್ತಿವೆ ಎಂಬ ಮಾಹಿತಿ ಸದ್ಯಕ್ಕಿಲ್ಲ.

Share this Story:

Follow Webdunia kannada