Select Your Language

Notifications

webdunia
webdunia
webdunia
webdunia

ಸುದೀಪ್-ರಮ್ಯಾ ಮೂರು ವರ್ಷ ಮಾತಿಲ್ಲ, ಕತೆಯಿಲ್ಲ!

ಸುದೀಪ್-ರಮ್ಯಾ ಮೂರು ವರ್ಷ ಮಾತಿಲ್ಲ, ಕತೆಯಿಲ್ಲ!
PR
ಎರಡು ಪ್ರತಿಭೆಗಳ ಸಂಗಮವೆಂದರೆ ಅಲ್ಲಿ ಸಂಘರ್ಷ ಇದ್ದೇ ಇರುತ್ತದೆ ಮತ್ತು ಇರಬೇಕು. ಕಿಚ್ಚ ಸುದೀಪ್ ಮತ್ತು ಲಕ್ಕಿ ಸ್ಟಾರ್ ರಮ್ಯಾ ಕೂಡ ಇದರಿಂದ ಹೊರತಲ್ಲ. ಸದಾ ಕಚ್ಚಾಡಿಕೊಳ್ಳುತ್ತಲೇ ಒಂದೊಳ್ಳೆ ಸಿನಿಮಾ ಮಾಡುವವರು. ಆದರೆ ಕಳೆದ ಮೂರು ವರ್ಷಗಳಿಂದ ಅವರಿಬ್ಬರೂ ಮೌನವಾಗಿದ್ದರು. ಈಗ ಮತ್ತೆ ಶುರುವಾಗಿದೆ ಕಲರವ!

ಯೋಗರಾಜ್ ಭಟ್ ನಿರ್ದೇಶನದ 'ರಂಗ ಎಸ್‍‌ಎಸ್‌‍ಎಲ್‌ಸಿ'ಯಲ್ಲಿ ಸುದೀಪ್-ರಮ್ಯಾ ಜೋಡಿ ಮೊದಲ ಬಾರಿ ಜತೆಯಾಗಿತ್ತು. ಅಲ್ಲೇ ಶುರುವಾಗಿತ್ತು ಇಬ್ಬರ ನಡುವಿನ ಸಂಘರ್ಷ. ಈ ಸುದೀಪ್‌ಗೆ ಸರಿಯಾಗಿ ಅಪ್ಪಿಕೊಳ್ಳೋದಿಕ್ಕೂ ಬರೋದಿಲ್ಲ ಎಂದು ರಮ್ಯಾ ಬಹಿರಂಗವಾಗಿ ಟೀಕಿಸಿದ್ದೂ ಆಗಿತ್ತು.

ನಂತರ ಒಂದಷ್ಟು ವರ್ಷ ಸುಮ್ಮನಿದ್ದವರನ್ನು ಒಂದು ಮಾಡಿದ್ದು 'ಮುಸ್ಸಂಜೆ ಮಾತು' ಚಿತ್ರದಲ್ಲಿ ಮುಸ್ಸಂಜೆ ಮಹೇಶ್. ಅಲ್ಲೂ ಸುದೀಪ್-ರಮ್ಯಾ ಕಿತ್ತಾಡಿಕೊಂಡರು. ಆದರೆ ಮತ್ತೆ ತನ್ನ ನಿರ್ದೇಶನದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಕ್ಕೆ ರಮ್ಯಾರನ್ನೇ ನಾಯಕಿಯನ್ನಾಗಿ ಮಾಡಿಕೊಂಡರು ಸುದೀಪ್. ಈ ಬಾರಿ ಗಲಾಟೆ ಜೋರಾಗಿತ್ತು. ನೃತ್ಯ ನಿರ್ದೇಶಕ ಹರ್ಷಾ ವಿಚಾರದಲ್ಲಿ ರಮ್ಯಾ ಮೇಲೆ ನಿಷೇಧ ಹೇರುವ ಹಂತಕ್ಕೆ ಪ್ರಕರಣ ತಲುಪಿತ್ತು. ಇಲ್ಲೂ ರಮ್ಯಾ ವಿರುದ್ಧ ಸುದೀಪ್ ಚಾಟಿ ಬೀಸಿದ್ದರು.

ಈ ನಡುವೆ ಗುರುದತ್ ನಿರ್ದೇಶನದ 'ಕಿಚ್ಚ ಹುಚ್ಚ'ದಲ್ಲೂ ಸುದೀಪ್ ಜತೆ ರಮ್ಯಾ ನಟಿಸಿದ್ದರು.

ಅದಾಗಿ ಹೆಚ್ಚು ಕಡಿಮೆ ಮೂರು ವರ್ಷಗಳೇ ಸಂದಿವೆ. ಈ ಅವಧಿಯಲ್ಲಿ ಸುದೀಪ್ ಮತ್ತು ರಮ್ಯಾ ಸುಮ್ಮನಿದ್ದರು. ಒಬ್ಬರನ್ನೊಬ್ಬರು ಮಾತನಾಡಿಸುವ ಗೋಜಿಗೂ ಹೋಗಿರಲಿಲ್ಲ. ತಾವಾಯಿತು, ತಮ್ಮ ಕೆಲಸವೂ ಆಯ್ತು ಎಂಬಂತಿದ್ದರು. ಇದನ್ನು ಇತ್ತೀಚೆಗೆ ಬ್ರೇಕ್ ಮಾಡಿದ್ದು ರಮ್ಯಾ. ಕಿಚ್ಚನ ಜತೆಗಿರುವ ಫೋಟೋ ಒಂದನ್ನು ಅವರು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಅತ್ತ ಕಡೆಯಿಂದ ಸುದೀಪ್ ಕೂಡ ಪ್ರತಿಕ್ರಿಯಿಸಿದರು.

ಇಬ್ಬರೂ ಮುಖ ಊದಿಸಿಕೊಂಡವರಲ್ಲವೇ? ಬಹಿರಂಗವಾಗಿಯೇ ಗಲಾಟೆ ಮಾಡಿಕೊಂಡಿದ್ದಿರಲ್ಲ? ಈಗ ಇದ್ದಕ್ಕಿದ್ದಂತೆ ಏನು ಬದಲಾವಣೆ? ಈ ಪ್ರಶ್ನೆಗೆ ಸುದೀಪ್ ನೀಡೋ ಉತ್ತರ ಹೀಗಿದೆ.

"ಕೋಪವನ್ನು ಸದಾ ಕಾಲ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ನನ್ನ ಮತ್ತು ರಮ್ಯಾ ನಡುವೆ ಸುಮಾರು ಮೂರು ವರ್ಷಗಳ ಮೌನವಿತ್ತು. ಇತ್ತೀಚೆಗಷ್ಟೇ ಆಕೆ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿನ ಫೋಟೋ ಒಂದನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಇದೂ ಒಳ್ಳೆಯದೇ ಅಂದುಕೊಂಡೆ. ಹಾಗಾಗಿ ಪ್ರತಿಕ್ರಿಯಿಸಿದೆ. ಬರೀ ಟ್ವೀಟ್ ಮಾಡಿದ ಕಾರಣಕ್ಕೆ ನಾವಿಬ್ಬರೂ ಆತ್ಮೀಯರು ಎಂದರ್ಥವಲ್ಲ!"

ಅಂದ್ರೆ, ಮತ್ತೆ ಸುದೀಪ್-ರಮ್ಯಾ ಜೋಡಿಯನ್ನು ಬೆಳ್ಳಿತೆರೆಯಲ್ಲಿ ನೋಡುವ ಕಾಲ ಸನ್ನಿಹಿತವಾಗಿದೆಯೇ?

Share this Story:

Follow Webdunia kannada