Select Your Language

Notifications

webdunia
webdunia
webdunia
webdunia

ಗಂಜಿ ಊಟ, ನೆಲದಲ್ಲೇ ನಿದ್ದೆ; ರವಿಚಂದ್ರನ್ ದಿನಚರಿ!

ಗಂಜಿ ಊಟ, ನೆಲದಲ್ಲೇ ನಿದ್ದೆ; ರವಿಚಂದ್ರನ್ ದಿನಚರಿ!
SUJENDRA
ಅರೆರೆ, ಇದೇನಪ್ಪ. ಕ್ರೇಜಿ ಸ್ಟಾರ್ ರವಿಚಂದ್ರನ್ ಶೋಕಿಲಾಲಾನೆಂದೇ ಹೆಸರುವಾಸಿಯಾದವರು. ಅವರು ಗಂಜಿ ಊಟ ಮಾಡೋದೇ? ಅದರಲ್ಲೂ ನೆಲದಲ್ಲಿ ಬರೀ ನೆಲದಲ್ಲಿ ಮಲಗೋದು ಅಂದ್ರೇನು? ನಿಜವಲ್ಲ, ಬಿಡಿ. ಇದು 'ನರಸಿಂಹ' ಪಾತ್ರದಲ್ಲಿ ಕನ್ನಡದ ಕನಸುಗಾರ ಮಾಡುತ್ತಿರುವ ಪಾತ್ರ. ಮತ್ತೆ ಹಂಸಲೇಖ ಜತೆ ಸೇರಿರುವ ರವಿಚಂದ್ರನ್‌ರ ಈ ಚಿತ್ರ ಇದೇ ಯುಗಾದಿಯಂದು ತೆರೆಗೆ ಬರುತ್ತಿದೆ.

ಸಾಮಾನ್ಯವಾಗಿ ರವಿಚಂದ್ರನ್ ತಾನು ನಟಿಸಿದ ಚಿತ್ರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಪ್ರಚಾರದ ವಿಚಾರವಂತೂ ತುಂಬಾ ದೂರ. ಆದರೆ ಇಲ್ಲಿ ಕೊಂಚ ಮಾರ್ಪಾಡು ಮಾಡಿಕೊಂಡಿದ್ದಾರೆ. ಟಿವಿ ಚಾನೆಲ್‌ಗೆ ಪ್ರಚಾರದ ಕಾರ್ಯಕ್ರಮವನ್ನೂ ಮಾಡಿದ್ದಲ್ಲದೆ, ಈಗ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಗೂ
ಬಂದಿದ್ದಾರೆ. ಕೆ. ಮಂಜು ಆಕ್ಷೇಪ ಈ ರೀತಿಯಲ್ಲಾದರೂ ಫಲ ಕೊಟ್ಟಿದೆ ಎಂದು ಭಾವಿಸೋಣ!

ಈ ಚಿತ್ರ ಯಶಸ್ವಿಯಾಗುವುದರಲ್ಲಿ ಸಂಶಯವೇ ಇಲ್ಲ. ಕಾರಣ, ಮಾತೃಪ್ರೇಮದ ಕಥೆಯನ್ನು ಹೊಂದಿರುವ ನನ್ನ ಯಾವುದೇ ಚಿತ್ರ ಸೋತಿಲ್ಲ. ಹಾಡುಗಳು ಕೂಡ ಚೆನ್ನಾಗಿವೆ. ಒಟ್ಟಾರೆ ಪ್ರೇಕ್ಷಕರ ಮನಸ್ಸಿಗೆ ನಾಟುವಂತಹ ಭಾವನಾತ್ಮಕ ಕಥೆ ಚಿತ್ರದಲ್ಲಿದೆ ಅನ್ನೋದು ಸ್ವತಃ ರವಿಚಂದ್ರನ್ ಮಾತು.

ಅಂದ ಹಾಗೆ, 'ನರಸಿಂಹ' ಚಿತ್ರವನ್ನು ನಿರ್ದೇಶಿಸಿರುವುದು ನಟ ಮೋಹನ್. ಅವರಿಗೆ ನಿರ್ದೇಶನದ ಇದೇ ಮೊದಲಲ್ಲ. ರವಿಚಂದ್ರನ್‌ರ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದ, ನಿರ್ದೇಶಿಸಿದ ಅನುಭವವೂ ಅವರಲ್ಲಿದೆ. ಆದರೆ ಈ ಚಿತ್ರ ಅವೆಲ್ಲಕ್ಕಿಂತಲೂ ಭಿನ್ನವಂತೆ. ಕಾರಣ, ಅಂತಹ ಕಥೆ. ಇದಕ್ಕೆ ಪುಷ್ಠಿ ಎಂಬಂತೆ ಜಯಂತಿ ತಾಯಿ ಪಾತ್ರದಲ್ಲಿ ನಟಿಸಿದ್ದಾರಂತೆ.

ಈ ಪಾತ್ರ ಮಾಡುವಲ್ಲಿ ರವಿಚಂದ್ರನ್ ತುಂಬಾ ಶ್ರಮವಹಿಸಿದ್ದಾರೆ. ರೊಮ್ಯಾಂಟಿಕ್ ದೃಶ್ಯಗಳ ಜತೆ ಭಾವನಾತ್ಮಕ ಸನ್ನಿವೇಶಗಳನ್ನೂ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ರವಿಶಂಕರ್ ಖಳನಾಗಿರುವುದು ಚಿತ್ರದ ಇನ್ನೊಂದು ಆಕರ್ಷಣೆ. ಸಾಧು ಕೋಕಿಲಾ ಹಾಸ್ಯವೂ ಗಮನ ಸೆಳೆಯಲಿದೆ. ಹಂಸಲೇಖ ಸಂಗೀತದ ಬಗ್ಗೆ ಎರಡನೇ ಮಾತೇ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ನಿರ್ದೇಶಕ ಮೋಹನ್.

'ನರಸಿಂಹ'ನಿಗೆ ನಿಕೇಶಾ ಪಟೇಲ್ ನಾಯಕಿ. 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಎರಡನೇ ನಾಯಕಿ. ರವಿಚಂದ್ರನ್ ಸಾರ್ ಜತೆ ಅಭಿನಯಿಸಬೇಕೆನ್ನುವುದು ನನ್ನ ಬಹುಕಾಲದ ಕನಸು. ಈ ಚಿತ್ರದ ಮೂಲಕ ಅದು ಈಡೇರಿದೆ. ಉತ್ತಮ ಪಾತ್ರವೂ ನನಗೆ ಸಿಕ್ಕಿದೆ. ನಾನೆಂತಹ ಭಾಗ್ಯವತಿ ಎಂದು ಹಲ್ಲು ಬಿಟ್ಟರು ಸಂಜನಾ.

'ನರಸಿಂಹ'ನನ್ನು ಹಬ್ಬದ ದಿನವೇ ಬಿಡುಗಡೆ ಮಾಡಬೇಕು ಅನ್ನೋದು ನಿರ್ಮಾಪಕ ಎನ್. ಕುಮಾರ್ ಯೋಜನೆಯಾಗಿತ್ತು. ಅದೀಗ ನಡೆಯುತ್ತಿದೆ. ಯುಗಾದಿಯ ಶುಕ್ರವಾರದಂದೇ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. 125ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನರಸಿಂಹಾವತಾರ ಆಗಲಿದೆ.

Share this Story:

Follow Webdunia kannada