Select Your Language

Notifications

webdunia
webdunia
webdunia
webdunia

'ಟ್ರಾಫಿಕ್'ನಲ್ಲಿ ರವಿಚಂದ್ರನ್; 'ಮಂಜಿನ ಹನಿ' ಏನಾಯ್ತು?

'ಟ್ರಾಫಿಕ್'ನಲ್ಲಿ ರವಿಚಂದ್ರನ್; 'ಮಂಜಿನ ಹನಿ' ಏನಾಯ್ತು?
PR


ಕೋಟಿಗಟ್ಟಲೆ ಸುರಿದು ಹಲವು ವರ್ಷಗಳೇ ಕಳೆದಿರುವ ಕನ್ನಡದ ಕನಸುಗಾರನ ಕನಸು 'ಮಂಜಿನ ಹನಿ' ಮತ್ತೆ ಏನಾಯ್ತು? ಮರು ಚಿತ್ರೀಕರಣ ನಡೆಸಿದ ನಂತರವೂ ರವಿಚಂದ್ರನ್‌ಗೆ ಚಿತ್ರ ಇಷ್ಟವಾಗಿಲ್ಲವೇ? ಇನ್ನೂ ಯಾಕೆ ಚಿತ್ರ ಬಿಡುಗಡೆಯಾಗುತ್ತಿಲ್ಲ? ಈ ಯಾವುದೇ ಪ್ರಶ್ನೆಗಳಿಗೂ ಕ್ರೇಜಿ ಸ್ಟಾರ್ ಉತ್ತರಿಸುತ್ತಿಲ್ಲ. ಬದಲಿಗೆ ತಾನು ಇನ್ನೊಂದು ರಿಮೇಕ್ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬ ಮಾಹಿತಿ ನೀಡಿ ರೈಲು ಹತ್ತಿಸುತ್ತಾರೆ!

ಚಿತ್ರಮಂದಿರಕ್ಕೆ ಹಾಗೆ ಬಂದು ಹೀಗೆ ಹೋಗುವ ರವಿಚಂದ್ರನ್ ಸಾಲು ಸಾಲು ರಿಮೇಕ್ ಚಿತ್ರಗಳ ಪಟ್ಟಿಗೆ ಈಗ ಸೇರ್ಪಡೆಯಾಗಿರುವುದು ಮಲಯಾಳಂನ 'ಟ್ರಾಫಿಕ್'. ರಾಜೇಶ್ ಪಿಳ್ಳೈ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿವಾಸನ್, ಕುಂಜಕೋ ಬಾಬನ್, ವಿನೀತ್ ಶ್ರೀನಿವಾಸನ್, ಸಂಧ್ಯಾ ಮತ್ತು ರಮ್ಯಾ ನೆಂಬೀಸನ್ ನಟಿಸಿದ್ದರು. ಅದ್ಭುತವೆಂಬಂತೆ ಮೂಡಿಬಂದಿದ್ದ ಟ್ರಾಫಿಕ್ ಕೇರಳದಲ್ಲಿ ಸೂಪರ್ ಹಿಟ್ ಆಗಿತ್ತು.

ಈ ಚಿತ್ರವನ್ನು ರಿಮೇಕ್ ಮಾಡಬೇಕೆಂದು ಸ್ವತಃ ರವಿಚಂದ್ರನ್ ಆಸಕ್ತಿ ತೋರಿಸಿದ್ದರಂತೆ. ಅವರೇ ಸ್ವತಃ ನಿರ್ಮಿಸುವ ಸಾಧ್ಯತೆಗಳೂ ಇವೆ ಎನ್ನುತ್ತಿವೆ ಮೂಲಗಳು. ಕಥೆ ಚೆನ್ನಾಗಿರುವುದರಿಂದ ಇಲ್ಲೂ ಯಶಸ್ವಿಯಾಗುವುದರಲ್ಲಿ ಸಂಶಯವೇ ಇಲ್ಲ ಅನ್ನೋ ಭರವಸೆಯೇ ಇದಕ್ಕೆ ಕಾರಣ.

ಈ ನಡುವೆ ರವಿಚಂದ್ರನ್‌ರನ್ನು ಹಾಕಿಕೊಂಡು ಚಿತ್ರವೊಂದನ್ನು ನಿರ್ಮಿಸಲು ಮುನಿರತ್ನ ಕೂಡ ಹೊರಟಿದ್ದಾರೆ. ಪ್ರಸಕ್ತ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಲಕ್ಕಿ ಸ್ಟಾರ್ ರಮ್ಯಾ ತಾರಾಗಣದ 'ಕಠಾರಿ ವೀರ ಸುರಸುಂದರಾಂಗಿ'ಯಲ್ಲಿ ಬ್ಯುಸಿಯಾಗಿರುವ ಮುನಿರತ್ನ ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಇದನ್ನು ಸಾಧು ಕೋಕಿಲಾ ನಿರ್ದೇಶನ ಮಾಡಲಿದ್ದಾರಂತೆ.

ರವಿಚಂದ್ರನ್ ನಾಯಕರಾಗಿರುವ ನಟ-ನಿರ್ದೇಶಕ ಮೋಹನ್‌ರ 'ನರಸಿಂಹ' ಮತ್ತು ರವಿ ಶ್ರೀವತ್ಸ ನಿರ್ದೇಶನದ 'ದಶಮುಖ' ತೆರೆಗೆ ಅಪ್ಪಳಿಸಲು ರೆಡಿಯಾಗಿವೆ. ಇನ್ನೇನು ಕೆಲವೇ ವಾರಗಳಲ್ಲಿ ಚಿತ್ರಗಳು ಬೆನ್ನು ಬೆನ್ನಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಕವಿತಾ ಲಂಕೇಶ್ ನಿರ್ದೇಶನದ ಕ್ರೇಜಿ ಲೋಕ ಇನ್ನೂ ಚಿತ್ರೀಕರಣದಲ್ಲೇ ಇದೆ. ಉಳಿದಂತೆ ಅಣಜಿ ನಾಗರಾಜ್ ನಿರ್ಮಾಣದ, ಮಹೇಶ್ ಬಾಬು ನಿರ್ದೇಶನದ ಪರಮಶಿವ, ಕೀಚಕ ಚಿತ್ರಗಳು ಕೈಯಲ್ಲಿವೆ. ಹೀಗೆ ಸಾಲು ಸಾಲಾಗಿ ನಟಿಸುತ್ತಲೇ ಇರುವ ರವಿಚಂದ್ರನ್ ಮತ್ತೆ ಮಂಜಿನ ಹನಿಯನ್ನು ಮರೆತಂತಿದೆ!

Share this Story:

Follow Webdunia kannada