Select Your Language

Notifications

webdunia
webdunia
webdunia
webdunia

ಅಬ್ಬಬ್ಬಾ, 'ಅಣ್ಣಾ ಬಾಂಡ್' 15 ಕೋಟಿ ರೂ.ಗೆ ಸೇಲ್!

ಅಬ್ಬಬ್ಬಾ, 'ಅಣ್ಣಾ ಬಾಂಡ್' 15 ಕೋಟಿ ರೂ.ಗೆ ಸೇಲ್!
SUJENDRA


ಕನ್ನಡ ಚಿತ್ರವೊಂದಕ್ಕೆ 15 ಕೋಟಿ ರೂಪಾಯಿಯೇ? ಯಾರಾದರೂ ಮೂಗಿನ ಮೇಲೆ ಬೆರಳಿಡಬೇಕಾದ ಅಚ್ಚರಿಯ ಸಂಗತಿಯಿದು. ಹೌದು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ 'ಅಣ್ಣಾ ಬಾಂಡ್' ಚಿತ್ರದ ವಿತರಣೆ ಹಕ್ಕುಗಳು 15 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆಯಂತೆ!

ಬರೀ ವಿತರಣೆ ಹಕ್ಕುಗಳು 15 ಕೋಟಿ ರೂ.ಗಳಿಗೆ ಮಾರಾಟವಾದರೆ, ಚಿತ್ರದ ಇತರ ಗಳಿಕೆ ಎಷ್ಟಿರಬಹುದು? ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳು ಯಾರ ಪಾಲಾಗಬಹುದು? ಇದು ವಿತರಣೆ ಹಕ್ಕುಗಳು ಮಾರಾಟವಾದ ನಂತರ ಗರಿಗೆದರಿರುವ ಕುತೂಹಲ.

ಅಂದ ಹಾಗೆ, ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ. ಇದುವರೆಗೆ ಕನ್ನಡದ ಯಾವ ಚಿತ್ರವೂ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದಿಲ್ಲ. ಹೀಗೆ ಕೋಟಿ ಕೋಟಿ ಸುರಿದು ವಿತರಣೆ ಹಕ್ಕು ಖರೀದಿ ಮಾಡಿರುವ ಮಹಾಶಯ ಯಾರು ಗೊತ್ತಾ? ಪ್ರಸಾದ್. ಕಿಚ್ಚ ಸುದೀಪ್ ನಾಯಕರಾಗಿದ್ದ 'ವಿಷ್ಣುವರ್ಧನ' ಚಿತ್ರದ ಮೈಸೂರು ವಲಯದ ವಿತರಣೆ ಹಕ್ಕುಗಳನ್ನು ಖರೀದಿಸಿ ಗೆದ್ದವರು.

'ವಿಷ್ಣುವರ್ಧನ' ಚಿತ್ರದಲ್ಲಿ ಗೆದ್ದ ಹುರುಪಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ 'ಚಿಂಗಾರಿ' ಹಕ್ಕುಗಳನ್ನು 9 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ. ಆ ಚಿತ್ರ ಫೆಬ್ರವರಿ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಅದರ ಫಲಿತಾಂಶಕ್ಕೂ ಮೊದಲೇ ಇನ್ನೊಂದು ಚಿತ್ರ ಖರೀದಿಸಿದ್ದಾರೆ ಪ್ರಸಾದ್.

ಚಿತ್ರರಂಗಕ್ಕೆ ಹೊಸಬರಾಗಿರುವ ಈ ಪ್ರಸಾದ್ ಯಾರು? ಇದಕ್ಕೆ ಸದ್ಯಕ್ಕೆ ಹೆಚ್ಚಿನ ಮಾಹಿತಿಯಿಲ್ಲ. ಅವರೊಬ್ಬ ಶೇರು ವ್ಯವಹಾರಸ್ಥ ಮತ್ತು ವಕೀಲ ಎಂದಷ್ಟೇ ಗೊತ್ತು. ಈಗಷ್ಟೇ ವಿತರಕರಾಗಿ, ಇತರ ವಿತರಕರಿಗೆ ನಡುಕ ಹುಟ್ಟಿಸಿದ್ದಾರೆ. ಇನ್ನಷ್ಟು ಚಿತ್ರಗಳ ವಿತರಣೆ ಹಕ್ಕುಗಳನ್ನು ಖರೀದಿಸುವುದಾಗಿ 'ಬೆದರಿಕೆ' ಕೂಡ ಹಾಕಿದ್ದಾರೆ.

ಸೂರಿ ನಿರ್ದೇಶನದ, ಪ್ರಿಯಾಮಣಿ-ನಿಧಿ ಸುಬ್ಬಯ್ಯ ನಾಯಕಿಯರಾಗಿರುವ ಅಣ್ಣಾ ಬಾಂಡ್ ಚಿತ್ರದ ವಿತರಣೆ ಹಕ್ಕುಗಳನ್ನು ತಾವು 15 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದೀರಂತೆ ಅಂತ ನೇರಾನೇರವಾಗಿ ಪ್ರಸಾದ್ ಅವರನ್ನು ಕೇಳಿದರೂ ಸ್ಪಷ್ಟ ಉತ್ತರ ಅವರಿಂದ ಬಂದಿಲ್ಲ. ವಿತರಣೆ ಹಕ್ಕುಗಳನ್ನು ಖರೀದಿಸಿದ್ದು ಹೌದು, ಆದರೆ ಮೊತ್ತ ಎಷ್ಟೆಂದು ಹೇಳಲಾರೆ. ನೀವು ಮಾಧ್ಯಮದವರೇ ಊಹಿಸಿ. ಅದು ನಿಮಗೆ ಬಿಟ್ಟದ್ದು. ನಮ್ಮ ಸಂಸ್ಥೆ ಇನ್ನು ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರುಗಳ ಚಿತ್ರಗಳನ್ನು ಖರೀದಿ ಮಾಡಲಿರುವುದಂತೂ ಹೌದು ಎಂದರು.

ಇಷ್ಟು ದೊಡ್ಡ ಮೊತ್ತ ನೀಡಿ ಕನ್ನಡ ಚಿತ್ರಗಳನ್ನು ಪ್ರಸಾದ್ ಖರೀದಿಸುತ್ತಿರುವುದೇನೋ ಸರಿ. ಈ ಚಿತ್ರಗಳೇನಾದರೂ ಸೋತರೆ? ಗೆದ್ದರೂ ಇಷ್ಟು ಗಳಿಕೆ ಸಾಧ್ಯವೇ? ಒಂದು ವೇಳೆ ಗೆದ್ದರೆ, ಆಗ ಉಳಿದ ವಿತರಕರ ಗತಿಯೇನು? ಈ ಪ್ರಶ್ನೆಗಳನ್ನು ಬದಿಗಿಟ್ಟು ನೋಡಿದರೆ, ಕನ್ನಡ ಚಿತ್ರರಂಗಕ್ಕೆ ಶುಕ್ರದೆಸೆ ಎಂದು ಕಣ್ಮುಚ್ಚಿ ಹೇಳಬಹುದಲ್ಲವೇ?!

Share this Story:

Follow Webdunia kannada