Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರರಂಗವನ್ನು ಝಾಡಿಸಿದ ಡೈಸಿ ಬೋಪಣ್ಣ!

ಕನ್ನಡ ಚಿತ್ರರಂಗವನ್ನು ಝಾಡಿಸಿದ ಡೈಸಿ ಬೋಪಣ್ಣ!
PR
ವರನಟ ಡಾ. ರಾಜ್‌ಕುಮಾರ್ ಕಾಲದಲ್ಲಿ ಹೇರಳವಾಗಿದ್ದ ಕ್ರಿಯಾಶೀಲತೆ ಮತ್ತು ಪ್ರತಿಭೆಗಳು ಸ್ಯಾಂಡಲ್‌ವುಡ್‌ನಲ್ಲಿ ಈಗ ಇಲ್ಲವೇ ಇಲ್ಲ. ಕನ್ನಡದಲ್ಲೀಗ ಗುಣಮಟ್ಟದ ಸಿನಿಮಾಗಳು ಬರುತ್ತಿಲ್ಲ. ಈಗಿನ ಕನ್ನಡದ ಕಥೆಗಳ ಮೇಲೆ ನಂಬಿಕೆಯೇ ಇಲ್ಲ -- ಹೀಗಂತ ಹತ್ತಿದ ಏಣಿಯನ್ನೇ ಒದ್ದಿರುವುದು ಇದೀಗ ಮುಂಬೈ ಪಾಲಾಗಿರುವ ಕೊಡಗಿನ ಬೆಡಗಿ ಡೈಸಿ ಬೋಪಣ್ಣ.

ಒಂದು ರೀತಿಯಿಂದ ನೋಡಿದರೆ ಡೈಸಿ ಬೋಪಣ್ಣ ಹೇಳಿರುವುದು ಸರಿ. ಇಡೀ ಕನ್ನಡ ಚಿತ್ರರಂಗ ರಿಮೇಕ್ ಹುಚ್ಚಿನಲ್ಲಿ ಮುಳುಗೇಳುತ್ತಿದೆ. ರಿಮೇಕ್ ಬೇಡ ಎಂದವರು ಲಾಂಗು-ಮಚ್ಚುಗಳ ಹಿಂದೆ ಬಿದ್ದಿದ್ದಾರೆ. ಇದನ್ನು ಬಿಟ್ಟು ಕ್ರಿಯಾಶೀಲತೆಯಿರುವ ಚಿತ್ರಗಳು ಬರುವುದು ಅಪರೂಪ. ಬಂದರೂ ಅದನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುವುದಿಲ್ಲ.

ಇದನ್ನೆಲ್ಲ ಕಳೆದ ಕೆಲವು ವರ್ಷಗಳಿಂದ ಹತ್ತಿರದಿಂದ ನೋಡಿರುವ ಡೈಸಿ ಬೋಪಣ್ಣ ವಿಷಾದದ ಮಾತುಗಳನ್ನಾಡಿದ್ದಾರೆ. ಕನ್ನಡದಲ್ಲಿ ಉತ್ತಮ ಕಥೆಗಳೇ ಇಲ್ಲ ಎಂದಿದ್ದಾರೆ.

ಪ್ರಿಯಾಂಕಾ ಛೋಪ್ರಾ ಮಾಜಿ ಕಾರ್ಯದರ್ಶಿ ಪ್ರಕಾಶ್ ಜಾಜು ಪುತ್ರ ಅಮಿತ್ ಜಾಜು ಜತೆಗಿನ ವಿವಾಹದ ನಂತರ ಬೆಂಗಳೂರಿನಿಂದ ಕಣ್ಮರೆಯಾಗಿದ್ದ ಡೈಸಿ ಈಗೀಗ ಅಪರೂಪಕ್ಕೆಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜಿ ಲೋಕ'ಕ್ಕಾಗಿ. ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್‌ಗೆ ಅವರು ಜೋಡಿ. ಟೀಕೆಗಳೇನೇ ಇದ್ದರೂ, ತವರಿಗೆ ಮರಳಿರುವ ಖುಷಿ ಅವರಲ್ಲಿದೆ.

ಈ ಕನ್ನಡದ ಹುಡುಗಿಯೀಗ ತಮಿಳು ಮತ್ತು ತೆಲುಗಿನ ಒಂದಷ್ಟು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಹಾಗಾಗಿ ಕೊಂಚ ಬ್ಯುಸಿ ಅಂತಾನೇ ಹೇಳಬಹುದು. ಪರಭಾಷೆಗಳಲ್ಲಿ ಹೊಸಬರಿಗೆ ಜತೆಯಾಗಿರುವುದು ವಿಶೇಷ. ಆದರೆ ಅದಕ್ಕಿಂತಲೂ ಡೈಸಿಗೆ ಖುಷಿಯಾಗಿರುವುದು ಚಿತ್ರದ ಕಥೆಗಳು. ಸಿನಿಮಾ ಮತ್ತು ತನ್ನ ಪಾತ್ರ ವಿಭಿನ್ನವಾಗಿದೆ ಎಂಬ ಕಾರಣಕ್ಕೆ ತಮಿಳು-ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ.

ತಮಿಳು-ತೆಲುಗುಗಳೇನೋ ಸರಿ, ಕನ್ನಡದಲ್ಲಿ ಯಾಕೆ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ? ಈ ಪ್ರಶ್ನೆಗೆ ಡೈಸಿಯಿಂದ ಚಾಟಿಯೇಟಿನಂತಹ ಉತ್ತರ ಬಂದಿದೆ. ಕನ್ನಡದಲ್ಲಿ ಉತ್ತಮ ಕಥೆಗಳೇ ಇಲ್ಲ. ಹಾಗಾಗಿ ನನಗೆ ಕನ್ನಡದ ಕಥೆಗಳ ಮೇಲೆ ನಂಬಿಕೆಯಿಲ್ಲ. ಕನ್ನಡ ಚಿತ್ರರಂಗ ಈ ಹಿಂದೆ ಇದ್ದಂತೆ ಈಗಿಲ್ಲ. ರಾಜ್‌ಕುಮಾರ್ ಅವಧಿಯಲ್ಲಿದ್ದ ಕ್ರಿಯಾಶೀಲತೆ ಈಗಿಲ್ಲ. ಕಳೆದೆರಡು ವರ್ಷಗಳಲ್ಲಿ ಬಿಡುಗಡೆಯಾದ ಗುಣಮಟ್ಟದ ಸಿನಿಮಾಗಳನ್ನು ಸುಲಭವಾಗಿ ಹೇಳಿ ಬಿಡಬಹುದಾದಷ್ಟು ಮಟ್ಟಕ್ಕೆ ಚಿತ್ರರಂಗ ತಲುಪಿದೆ ಎಂದು ಅವಲೋಕಿಸಿದರು.

ಹಾಗಿದ್ರೆ ಇನ್ನು ಸ್ಯಾಂಡಲ್‌ವುಡ್‌ ಚಿತ್ರಗಳಿಗೆ ಬೆನ್ನು ತೋರಿಸುತ್ತೀರಾ? ಹಾಗೇನಿಲ್ಲ. ನನ್ನನ್ನು ವಿಭಿನ್ನವಾಗಿ ತೋರಿಸುವ ಗುಣಮಟ್ಟದ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ. ಈಗಾಗಲೇ ಎರಡು ಚಿತ್ರಗಳನ್ನು ಮುಗಿಸಿದ್ದೇನೆ. ಆದಿತ್ಯ ಜತೆಗಿನ ಮಾಸ್ ಮತ್ತು ರಮೇಶ್ ಅರವಿಂದ್‌ರ ಮಾಯಾ. ಇವೆರಡೂ ಬಿಡುಗಡೆಗೆ ಸಿದ್ಧವಾಗಿವೆ ಎಂದು ಮಾತು ಮುಗಿಸಿದರು.

Share this Story:

Follow Webdunia kannada