Select Your Language

Notifications

webdunia
webdunia
webdunia
webdunia

ಗಣೇಶ್ ಹೀಗೆ ಮಾಡಿರೋದು ಸರೀನಾ? ನೀವೇ ಹೇಳಿ

ಗಣೇಶ್ ಹೀಗೆ ಮಾಡಿರೋದು ಸರೀನಾ? ನೀವೇ ಹೇಳಿ
SUJENDRA
ಒಂದು ಕಾಲದಲ್ಲಿ ಚಿನ್ನದ ಹುಡುಗನಾಗಿದ್ದ ಗಣೇಶ್‌ ಈಗ ತುಕ್ಕು ಹಿಡಿದಿದ್ದರೂ, ಧಿಮಾಕು ಬಿಟ್ಟಂತಿಲ್ಲ. ಅಂದು ಬರೀ ಐದು ಲಕ್ಷ ರೂಪಾಯಿಗಳಿಗಾಗಿ ಹಾದಿ ಬೀದಿ ರಂಪ ಮಾಡಿದವರು ಇಂದು ಯಾಕೆ ಸುಮ್ಮನಿದ್ದಾರೆ? 'ಮದುವೆ ಮನೆ'ಯ ರೆಹಮಾನ್ ಸಂಭಾವನೆ ಕೊಟ್ಟಿಲ್ಲವೆಂದು ಯಾಕೆ ಗಲಾಟೆ ಮಾಡುತ್ತಿಲ್ಲ? ನನ್ನ ಮೇಲಿನ ದ್ವೇಷವೇ ಇದಕ್ಕೆ ಕಾರಣ? ಹೀಗೆಂದು ಪ್ರಶ್ನಿಸುತ್ತಾ ಗೋಲ್ಡನ್ ಸ್ಟಾರ್ ಮೇಲೆ ಮುಗಿ ಬಿದ್ದಿರುವುದು ನಿರ್ಮಾಪಕ ಎಂ. ಚಂದ್ರಶೇಖರ್.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿದ್ದ ಬಿಂದಾಸ್ ನಿರ್ಮಿಸಿ ಮುಖ-ಮೂತಿ ಜಜ್ಜಿಸಿಕೊಂಡಿದ್ದ ಚಂದ್ರಶೇಖರ್, ಗಣೇಶ್-ಪ್ರಿಯಾಮಣಿ ತಾರಾಗಣದ 'ಏನೋ ಒಂಥರಾ' ಚಿತ್ರದ ನಿರ್ಮಾಪಕ. ಇಲ್ಲೂ ಅವರಿಗೆ ಸೋಲಾಗಿತ್ತು. ಇಂತಹ ಕಷ್ಟಕಾಲದಲ್ಲಿ ಕೈ ಹಿಡಿಯುವ ಬದಲು, ಗಣೇಶ್ ಪ್ರಪಾತಕ್ಕೆ ನೂಕಲು ಯತ್ನಿಸಿದ್ದರು ಎನ್ನುವುದು ಚಂದ್ರಶೇಖರ್ ಆರೋಪ. ಅಂದ ಹಾಗೆ, ಈ ಆರೋಪವನ್ನು ನಿರ್ಮಾಪಕರು ಇದೇ ಮೊದಲು ಮಾಡುತ್ತಿರುವುದಲ್ಲ. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಣೇಶ್ ವಿರುದ್ಧ ಅವರು ಹರಿ ಹಾಯ್ದಿದ್ದರು.

ಮೊನ್ನೆ ಮಾತಿಗೆ ಸಿಕ್ಕವರು, 'ಮದುವೆ ಮನೆ'ಯಲ್ಲಿ ಸೂತಕ ಛಾಯೆ ಆವರಿಸಿದನ್ನು ಉಲ್ಲೇಖಿಸಿ ಮತ್ತೆ ಗಣೇಶ್‌ರನ್ನು ತರಾಟೆಗೆ ತೆಗೆದುಕೊಂಡರು.

ನನ್ನ ನಿರ್ಮಾಣದ ಏನೋ ಒಂಥರಾ ಚಿತ್ರದಲ್ಲಿ ಗಣೇಶ್‌ಗೆ 95 ಲಕ್ಷ ರೂಪಾಯಿ ಸಂಭಾವನೆ ಮಾತುಕತೆಯಾಗಿತ್ತು. ನಾನು 90 ಲಕ್ಷ ರೂಪಾಯಿ ನೀಡಿದ್ದೆ. ಉಳಿದ ಐದು ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಹೇಳಿದ್ದೆ. ಆದರೆ ಇದನ್ನೇ ದೊಡ್ಡದಾಗಿ ಮಾಡಿದ್ದ ಗಣೇಶ್, ಮಾಧ್ಯಮಗಳ ಮುಂದೆ ಬಂದು ನನ್ನನ್ನು ಅವಮಾನಿಸಿದರು ಎಂದು ಹಳೆ ವಿಚಾರವನ್ನು ಕೆದಕಿದ ಚಂದ್ರಶೇಖರ್, ಅದೇ ಗಣೇಶ್ ಈಗ ಸುಮ್ಮನೆ ಕುಳಿತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಚಂದ್ರಶೇಖರ್ ಪ್ರಕಾರ, ಮಕಾಡೆ ಮಲಗಿರುವ 'ಮದುವೆ ಮನೆ'ಯ ನಿರ್ಮಾಪಕ ರೆಹಮಾನ್ ಅವರಿಂದ ಗಣೇಶ್‌ಗೆ ಸಂದಾಯವಾಗಿರುವ ಸಂಭಾವನೆ ಮೊತ್ತ ಕೇವಲ 11 ಲಕ್ಷ ರೂಪಾಯಿ ಮಾತ್ರ. ಹೆಚ್ಚುಕಡಿಮೆ 80 ಲಕ್ಷ ರೂಪಾಯಿ ಇನ್ನೂ ಪಾವತಿಯಾಗಿಲ್ಲ. ಚಂದ್ರಶೇಖರ್ ತಲೆಗೆ ಹೊಕ್ಕಿರುವ ಹುಳ ಇದೇ. ಅಂದು ರಂಪಾಟ ಮಾಡಿದವರು, ಇಂದು ಯಾಕೆ ಸುಮ್ಮನಿದ್ದಾರೆ ಅನ್ನೋದೇ ಅವರ ಪ್ರಶ್ನೆ. ಈಗ ಗಣೇಶ್ ಯಾಕೆ ಮಾಧ್ಯಮಗಳ ಮುಂದೆ ಬರುತ್ತಿಲ್ಲ? ಅಂದು ನನಗೆ ಸಮಸ್ಯೆಯಾದಾಗ ಗಣೇಶ್ ಹಾಗೆ ನಡೆದುಕೊಂಡದ್ದು ಯಾಕೆ? ಅವರ ಪತ್ನಿ ಶಿಲ್ಪಾ ಗಣೇಶ್ ಕೊಟ್ಟ ಚೆಕ್‌ನ್ನೂ ನಿರಾಕರಿಸಿದ್ದು ಯಾಕೆ? ಇಂತಹ ಹಲವು ಪ್ರಶ್ನೆಗಳು ಚಂದ್ರಶೇಖರ್ ಅವರಿಂದ ಬರುತ್ತಿವೆ.

'ಏನೋ ಒಂಥರಾ' ವಿವಾದಗಳಿಂದಲೇ ದೊಡ್ಡ ಸುದ್ದಿಯಾಗಿದ್ದ ಚಿತ್ರ. ಮುಸ್ಸಂಜೆ ಮಹೇಶ್ ನಿರ್ದೇಶಿಸಿದ್ದ ಈ ಚಿತ್ರದ ಚಿತ್ರೀಕರಣ ಮುಗಿಯುವ ಮೊದಲೇ ನಿರ್ದೇಶಕರನ್ನು ಹೊರ ದಬ್ಬಲಾಗಿತ್ತು. ಇದಕ್ಕೆ ಕಾರಣ, ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಎಂದು ಆರೋಪಿಸಲಾಗಿತ್ತು.

ಅಂದ ಹಾಗೆ, ಚಂದ್ರಶೇಖರ್ ಈಗ ಹೊಸ ಚಿತ್ರವೊಂದರ ಸಿದ್ಧತೆಯಲ್ಲಿದ್ದಾರೆ. ಕಿಚ್ಚ ಸುದೀಪ್ ನಾಯಕರಾಗಿರುವ ಈ ಚಿತ್ರವನ್ನು ಎಂ.ಎನ್. ಕುಮಾರ್ ನಿರ್ದೇಶಿಸಲಿದ್ದಾರೆ. ಇದರ ಮೂಲಕವಾದರೂ ಕಳೆದುಕೊಂಡ ಹಣವನ್ನು ವಾಪಸ್ ಪಡೆಯುವ ನಿರೀಕ್ಷೆ ಅವರದ್ದು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada