ಮಕ್ಕಳು: ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ.
ಈ ಮಕ್ಕಳನ್ನು ತುಂಬ ಕೀಳಾಗಿ ಕಾಣಬೇಡಿ. ಇದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗುತ್ತದೆ. ಮಕ್ಕಳ ಗುಂಪಿನಲ್ಲಿ ಬಾಸ್ ಆಗಿ ಬೀಗಿದರೆ ಅದು ಅವರ ಹುಟ್ಟುಗುಣ. ಅದನ್ನು ಏನು ಮಾಡಿದರೂ ಹೋಗಲಾಡಿಸಲು ಸಾಧ್ಯವಾಗೋದಿಲ್ಲ. ಅಗತ್ಯ ಬಂದರೆ, ಬೈಯ್ಯದೆ, ಹೊಡೆಯದೆ, ಹಾಗೆಲ್ಲಾ ಬಾಸ್ ಥರ ಆಡಬಾರದು ಪುಟ್ಟಾ, ಇನ್ನೊಬ್ಬರ ಮೇಲೆ ಡಾಮಿನೇಟ್ ಮಾಡಬಾರದೆಂದು ತಿಳಿಸಿ ಹೇಳಿ.
ಸ್ವಲ್ಪ ತೋರಿಕೆಯ ಸ್ವಭಾವ ಇವರಲ್ಲಿ ಜಾಸ್ತಿ. ಎಡವಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನ ಇವರದ್ದು. ಇನ್ನೊಬ್ಬರ ಗಮನ ಸೆಳೆಯುವುದು ಇವರಿಗಿಷ್ಟ. ಅಷ್ಟೇ ಅಲ್ಲ, ಮನೆಯಲ್ಲಿ ಶುದ್ಧ ಸೋಮಾರಿಗಳಿವರು. ಒಂದು ವಸ್ತುವನ್ನು ಕೂಡಾ ಆಚೀಚೆ ಇಡಲಾರರು. ಇಂಥ ಸಂದರ್ಭ ಅವರಿಗೆ, ಅವರವರ ಕೆಲಸ ಅವರವರೇ ಮಾಡಬೇಕೆಂಬುದನ್ನು ಸೂಚ್ಯವಾಗಿ ಹೇಳುತ್ತಾ ಬನ್ನಿ. ಗಿಡವಿರುವಾಗಲೇ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸೋದು ಕಷ್ಟ.
ಇನ್ನು ಸಿಂಹ ರಾಶಿಯ ಮಕ್ಕಳ ಹೆತ್ತವರು ಮೊದಲು ಮಾಡಬೇಕಾದ ಕೆಲಸ ತಮ್ಮ ಮಗುವಿಗೆ ಇನ್ನೊಬ್ಬರ ಮನೋಭಾವಕ್ಕೂ ಗೌರವ ನೀಡಬೇಕೆಂಬುದನ್ನು. ಇನ್ನೊಬ್ಬರನ್ನು ಹಗುರವಾಗಿ ಕಾಣದಂತೆ ಅವರಿಗೆ ತಿಳಿ ಹೇಳಬೇಕು. ಸಿಂಹ ರಾಶಿಯ ಮಕ್ಕಳು ತುಂಬ ನಾಚಿಕೆಯ ಸ್ವಭಾವವಿರೋದು ಕಡಿಮೆ. ಹಾಗಿದ್ದರೂ, ಅವರಿಗೆ ತುಂಬ ಪ್ರೇತ್ಸಾಹ ನೀಡಿ ಮಕ್ಕಳಾಗಿದ್ದಾಗಲೇ ಅವರನ್ನು ತೆರೆದುಕೊಳ್ಳಲು ಹೇಳಿಕೊಡಿ.
ಸಿಂಹ ರಾಶಿಯ ಮಕ್ಕಳಲ್ಲಿ ಹುಡುಗರು ತುಂಬ ಗಟ್ಟಿಮುಟ್ಟಾದ ಶರೀರ ಹೊಂದಿರುತ್ತಾರೆ. ಹುಡುಗಿಯರು ಚೆಂದದ ಶರೀರ, ಮುಖ ಹೊಂದಿರುತ್ತಾರೆ. ತುಂಬ ಬೇಗ ಯಾವುದನ್ನೂ ಕಲಿತುಕೊಳ್ಳಬಲ್ಲ ಬುದ್ಧಿಮತ್ತೆ ಇವರಿಗಿರುತ್ತದೆ. ಆದರೆ ತಮಗಿಷ್ಟವಾದರೆ ಮಾತ್ರ ಕಲಿಯುತ್ತಾರೆ. ಇಲ್ಲವಾದರೆ ಒತ್ತಾಯಿಸಿದರೂ ಇವರು ಕಲಿಯುವುದಿಲ್ಲ. ಆದರೆ ಇವರು ಕಲಿತಾಗ ಇವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಆಗ ಅವರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ತಮ್ಮ ಗೆಳೆಯರಿಗೆ, ಗೆಳತಿಯರಿಗೆ ಹಣವನ್ನು ಸಾಲವಾಗಿಯೂ ಇವರು ಕೆಲವೊಮ್ಮೆ ನೀಡುತ್ತಾರೆ. ಆದರೆ, ಅದನ್ನು ವಾಪಸ್ ಪಡೆಯಲು ಮರೆತೇ ಹೋಗುತ್ತದೆ. ಪಾರ್ಟಿಗೆ ಹೋಗುವುದು, ಮಜಾ ಮಾಡೋದು ಎಲ್ಲ ಇವರಿಗಿಷ್ಟ. ಇಂಥ ಮಕ್ಕಳನ್ನು ತುಂಬ ಪ್ರೀತಿಯಿಂದ, ಸ್ವಲ್ಪ ಸ್ಟ್ರಿಕ್ಟ್ ಆಗಿ ಬೆಳೆಸಬೇಕು. ಹಾಗಾದರೆ ಇವರು ಸರಿಯಾಗಿ ಮುಂದೆ ಸಾಗಬಲ್ಲರು.
ಪುರುಷ: ಸಿಂಹ ರಾಶಿಯ ಪುರುಷ ಯಾವತ್ತೂ ಏಕಾಂಗಿಯಾಗಿ ಕೂತಿರುವುದು ಕಾಣಸಿಗುವುದಿಲ್ಲ. ಹೆಚ್ಚಿನ ಸಮಯವನ್ನೆಲ್ಲ ಗುಂಪಿನ ಜತೆಗೇ ಇರುತ್ತಾನೆ. ಅಷ್ಟೇ ಅಲ್ಲ, ಆ ಗುಂಪಿನಲ್ಲಿ ಆತ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುತ್ತಾನೆ. ಸಿಂಹ ರಾಶಿಯ ಪುರುಷ ಗುಂಪಿಗೆ ನಾಯಕನಂತಿರುತ್ತಾನಲ್ಲದೆ, ಆತನ ಮಾತನ್ನು ಕೇಳುವವರ ಇರುತ್ತಾರೆ. ಯಾರೇ ಆದರೂ ಸಿಂಹ ರಾಶಿಯ ಪುರುಷನನ್ನು ಗೆಳೆಯನಾಗಿ ಪಡೆದರೆ, ಆತನ ಪ್ರೇಕ್ಷಕನಾಗಿ ಬಿಡಬೇಕಾಗುತ್ತದೆ. ಅಂದರೆ ಸಿಂಹ ರಾಶಿಯ ಪುರುಷ ಹೆಚ್ಚು ಹೇಳುತ್ತಾನೆ. ಗೆಳೆಯ ಕೇಳುತ್ತಾನೆ. ಆತನನ್ನು ಸ್ವಲ್ಪ ಡಾಮಿನೇಟ್ ಮಾಡಲು ನೋಡಿದರೂ ತೊಂದರೆಗೆ ಒಳಗಾಗುವುದು ಗೆಳೆಯನೇ. ಸಿಂಹ ರಾಶಿಯ ಪುರುಷರು ಯಾವತ್ತೂ ತಮ್ಮನ್ನು ಇನ್ನೊಬ್ಬರು ಡಾಮಿನೇಟ್ ಮಾಡುವುದನ್ನು (ನಿಯಂತ್ರಿಸುವುದನ್ನು) ಸಹಿಸುವುದಿಲ್ಲ.ಸಿಂಹ ರಾಶಿಯ ಹುಡುಗರು ಪ್ರೀತಿಯಲ್ಲಿ ಬೀಳಲು ಅವರಿಗೆ ಕಾರಣ ಬೇಕಿಲ್ಲ. ಅವರನ್ನು ತಮ್ಮ ಪ್ರೀತಿಯಲ್ಲಿ ಕೆಡವಿಕೊಳ್ಳಲು ಹುಡುಗಿಯರು ಏನೆಲ್ಲಾ ಕಸರತ್ತು ನಡೆಸಬೇಕಿಲ್ಲ. ಕೆಲವೊಂದು ಆತ್ಮೀಯ ಮಾತುಕತೆ, ಭಾವುಕ ಘಳಿಗೆ, ಜತೆಗೇ ಕೂತಾಗ ಒಂದು ಇಂಪಾದ ಸಂಗೀತ, ಹಿಡಿಯಷ್ಟು ಪ್ರೀತಿ ಇವಿಷ್ಟಿದ್ದರೆ ಸಿಂಹರಾಶಿಯ ಪುರುಷರಿಗೆ ಸ್ವರ್ಗವೇ ತೆರೆದಂತೆ. ಆದರೆ ರೊಮ್ಯಾನ್ಸ್ ವಿಷಯದಲ್ಲಿ ಸಿಂಹ ರಾಶಿಯ ಪುರುಷರು ಎತ್ತಿದ ಕೈ. ರೊಮ್ಯಾನ್ಸ್ ಇಲ್ಲದೆ ತುಂಬ ಸಮಯ ಖಾಲಿಯಾಗಿ ಕೂರಲು ಅವರಿಗೆ ಆಗುವುದೇ ಇಲ್ಲ. ಅಲ್ಲದೆ ತಮ್ಮ ಪ್ರೇಮಿಯಿಂದ ಯಾವಾಗಲೂ ಬೊಗಸೆ ತುಂಬ ಪ್ರೀತಿ ಹಾಗೂ ಕಾಳಜಿ ಬಯಸುವವರು ಇವರು.ತಮ್ಮ ಸಂಗಾತಿಗೂ ಅಷ್ಟೆ. ಧಾರಾಳವಾಗಿ ಪ್ರೀತಿಯ ಮಳೆ ಸುರಿಸುತ್ತಾರೆ ಇವರು. ಆಗಾಗ ಹೂವು, ಗಿಫ್ಟ್ಗಳನ್ನು ಸರ್ಪ್ರೈಸ್ ಆಗಿ ಕೊಟ್ಟು ತಾವೂ ಕೂಡಾ ಖುಷಿಪಟ್ಟು ಸಂಗಾತಿಯನ್ನೂ ಖುಷಿಯಾಗಿ ಇಟ್ಟುಕೊಳ್ಳುತ್ತಾರೆ. ಆಗಾಗ ಪ್ರೇಮ ಪತ್ರ ನೀಡುವುದರಲ್ಲೂ ಇವರು ಸಿದ್ಧ ಹಸ್ತರು. ಇವರು ಯಾವಾಗಲೂ ಉತ್ತಮ ಹೊಟೇಲಿನ ಊಟವನ್ನೇ ಬಯಸುತ್ತಾರೆ. ಸಾದಾ ಕ್ಯಾಂಟೀನ್ಗಳು ಇವರಿಗೆ ಇಷ್ಟವಾಗುವುದಿಲ್ಲ. ಇಷ್ಟೆಲ್ಲಾ ಸರ್ವ ಗುಣ ಸಂಪನ್ನರಾಗಿರುವ ಸಿಂಹ ರಾಶಿಯ ಪುರುಷ ತನಗೆ ಸಂಗಾತಿಯಾಗಿ ಸಿಕ್ಕನಲ್ಲ ಎಂದು ಹುಡುಗಿಯರು ಖುಲ್ಲಂಖುಲ್ಲಾ ಆಗಿ ಖುಷಿಯ ಹವಾದಲ್ಲಿ ಮೀಯಬೇಡಿ. ಒಮ್ಮೆ ಇಂಥ ಪುರುಷರ ಹೃದಯಕ್ಕೆ ನೀವು ಲಗ್ಗೆಯಿಟ್ಟಿರೆಂದರೆ ಮತ್ತೆ ಎಂದೆಂದಿಗೂ ನೀವು ಅವರ ಹೃದಯೊಳಗಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅರ್ಥಾತ್ ಸಿಕ್ಕಾಪಟ್ಟೆ ಪೊಸೆಸಿವ್ ಆಗಿರುತ್ತಾರೆ ಸಿಂಹ ರಾಶಿಯ ಪುರುಷರು. ನೀವೇ ಹೊರಹೋಗುತ್ತೇವೆಂದು ಹೊರಟರೂ, ಅವರು ಅಷ್ಟು ಸುಲಭವಾಗಿ ನಿಮ್ಮನ್ನು ಹೊರ ಹೋಗಲು ಬಿಡೋದಿಲ್ಲ.