Select Your Language

Notifications

webdunia
webdunia
webdunia
webdunia

2012ರ ಡಿಸೆಂಬರ್ 21ರಂದು ಭೂಮಿ ನಾಶವಾಗುತ್ತಾ?

2012ರ ಡಿಸೆಂಬರ್ 21ರಂದು ಭೂಮಿ ನಾಶವಾಗುತ್ತಾ?
PTI
'2012ನೇ ಇಸವಿಗೆ ಪ್ರಳಯವಾಗುತ್ತಾ? ಭೂಮಿಯೇ ನಾಶವಾಗುತ್ತಾ?' ಇಂತಹ ಪ್ರಶ್ನೆಯೀಗ ಅತ್ಯಂತ ಚರ್ಚಿತ ವಿಷಯ. ಎಲ್ಲಿ ಹೋದರೂ, ಜನರಲ್ಲೊಂದು ಇಂತಹ ಆತಂಕ ಮನೆ ಮಾಡಿದೆ. ಹಾಗಾದರೆ ನಿಜವಾಗಿಯೂ ಪ್ರಳಯ ಸಂಭವಿಸುತ್ತಾ? ಭೂಮಿ ಎಂಬ ಗ್ರಹವೇ ನಾಶವಾಗಿ ಹೋಗುತ್ತಾ ಅಂತ ಜ್ಯೋತಿಷಿಗಳ, ವಿಜ್ಞಾನಿಗಳ ಮಾತಲ್ಲೇ ಕೇಳೋಣ.

2012ರ ಡಿಸೆಂಬರ್ 21ರಂದು ಭೂಮಿಯ ಕಥೆ ಮುಗಿದಂತೆ ಎಂಬುದು ಜ್ಯೋತಿಷಿಗಳ ಭವಿಷ್ಯವಾಣಿಯೇ ಆಗಿದ್ದರೂ, ಹಲವು ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರು, ವಿಜ್ಞಾನಿಗಳು ಇಂಥದ್ದೊಂದು ಪ್ರಕ್ರಿಯೆ ನಡೆಯುವುದೇ ಇಲ್ಲ ಎಂದಿದ್ದಾರೆ. ಹಲವರು, ಇದೊಂದು ಭಯ ಕಲ್ಪಿಸಲು ಉಂಟುಮಾಡಿದ ಸನ್ನಿವೇಶ ಎಂದೂ ವಿವರಿಸಿದ್ದಾರೆ.

ಆದರೂ, 21 ಡಿಸೆಂಬರ್ 2012ರಂದು ನಡೆಯುವ ಘಟನೆ ಕೇವಲ ಖಗೋಳವಲಯದಲ್ಲಿ ನಡೆಯುವಂಥಾದ್ದು. ಭೂಮಿಯ ಸಮೀಪದಲ್ಲೇ ಹಾದುಹೋಗುವ ಕ್ಷುದ್ರಗ್ರಹಗಳು ಅಥವಾ ಇತರ ಕೆಲವು ಗ್ರಹಗಳಿಗೆ ಈ ಸಂದರ್ಭದಲ್ಲಿ ಗುರುತ್ವಾಕರ್ಷಣಾ ಶಕ್ತಿ ಹೆಚ್ಚಾಗಿ ಇದರ ಫಲಸ್ವರೂಪವಾಗಿ ಸಮುದ್ರದಲ್ಲಿ ಭಾರೀ ಅಲೆಗಳೇಳಬಹುದು, ಸಮುದ್ರ ಉಕ್ಕೇರಬಹುದು, ಅಥವಾ ವಾತಾವರಣದಲ್ಲಿ ಭಾರೀ ಬದಲಾವಣೆಗಳಾಗಬಹುದು. ಅಥವಾ ಭೂಮಿಯೇ ಈ ಗ್ರಹಗಳ ಕಥೆಯನ್ನು ಮುಗಿಸಿಬಿಡಲೂಬಹುದು. ಭೂಮಿಯ ಮೇಲೆ ಪರಿಣಾಮವಂತೂ ಖಂಡಿತ ಆಗುತ್ತದೆ. ಆದರೆ ಯಾರೂ ಇಲ್ಲಿ ಭಯಪಡುವ ಅಗತ್ಯವಂತೂ ಇಲ್ಲ ಎಂದೂ ಅಭಿಪ್ರಾಯಪಡುತ್ತಾರೆ.

ದೆಹಲಿ ಮೂಲದ ಖ್ಯಾತ ಜ್ಯೋತಿಷಿ ಸಂಜಯ್ ದಲ್ಹಾನಿ ಅವರು ಹೇಳುವಂತೆ, ಮಾಯನ್ ಕ್ಯಾಲೆಂಡರ್ ಕೇವಲ 2012ರವರೆಗೆ ಮಾತ್ರ ಮಾಡಲಾಗಿದೆ. ಇದನ್ನು ಆಧರಿಸಿಯೇ ಬಹುತೇಕ ಜ್ಯೋತಿಷಿಗಳು ನಂತರ ಭೂಮಿಯೇ ಇರುವುದಿಲ್ಲ ಎಂದು ಅಭಿಪ್ರಾಯಪಡುತ್ತಿದ್ದಾರೆ. 2012 ಸಂಖ್ಯೆ ಬುಧನದ್ದು. ಹಾಗಾಗಿ 2012ರಲ್ಲಿ ಭೂಮಿಯಲ್ಲಿ ಏನಾದರೂ ಕೋಲಾಹಲವೋ, ಯುದ್ಧವೋ ಸಂಭವಿಸಲೂ ಬಹುದು. ಇಂಥದ್ದೇ ಎಂದು ಹೇಳಲಾಗುವುದಿಲ್ಲ. ದುರ್ಘಟನೆಗಳ ಸಂಖ್ಯೆ ಹೆಚ್ಚಬಹುದು. ಆಶ್ತಿ ಪಾಸ್ತಿಗಳ ನಷ್ಟ ಉಂಟಾಗಬಹುದು ಎನ್ನುತ್ತಾರೆ.

ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿ ಗಂಭೀರ್ ಶ್ರೀವಾಸ್ತವ್ ಹೇಳುವಂತೆ, 2012 ಡಿಸೆಂಬರ್ 21ರಂದು ಸೂರ್ಯ ಹಾಗೂ ಚಂದ್ರನ ಪ್ರಭಾವವಿರುತ್ತದೆ. ಸೂರ್ಯ ಸೃಷ್ಟಿಯ ಪಾಲನಕರ್ತನಾಗಿರುವುದರಿಂದ ಈ ದಿನ ಕೆಲವು ಅಶುಭ ಘಟನೆಗಳು ಸಂಭವಿಸುವ ಅವಕಾಶವೇ ಸೃಷ್ಟಿಯಾಗೋದಿಲ್ಲ. ಚಂದ್ರ ಕುಂಡಲಿಯ ಅನುಸಾರ ಡಿ.21ರಂದು ಚಂದ್ರ ಮೀನ ರಾಶಿಯಲ್ಲಿರುತ್ತಾನೆ. ಆ ದಿನ ನವಗ್ರಹಗಳೂ ಕೂಡಾ ಶುಭ ಸ್ಥಿತಿಯಲ್ಲೇ ಇರುವುದರಿಂದ ಯಾವುದೇ ಅನಿಷ್ಟಗಳು ಅಂದು ಸಂಭವಿಸದು ಎನ್ನುತ್ತಾರೆ.

ಆದರೂ, ಹಲವರ ಭವಿಷ್ಯದ ಪ್ರಕಾರ 2012ರಲ್ಲಿ ಭೂಮಿಯಲ್ಲಿ ಮಾನವ ಜೀವಿಗಳ ನಾಶವಾಗುತ್ತದೆ. ಕ್ಷುದ್ರಗ್ರಹಗಳು ಭೂಮಿಗಪ್ಪಳಿಸಿ ಭೂಮಿ ಸರ್ವನಾಶವಾಗುತ್ತದೆ. ಇಲ್ಲವೇ, ಭಾರೀ ಭೂಕಂಪಗಳೋ, ಜ್ವಾಲಾಮುಖಿಗಳೋ, ಸುನಾಮಿಯೋ ಸಂಭವಿಸಿ ಭೂಮಿ ಸರ್ವನಾಶವಾಗಿ ಹೋಗಲಿದೆ ಎನ್ನಲಾಗುತ್ತಿದೆ. 250ರಿಂದ 900ನೇ ಇಸವಿಯ ಸಂದರ್ಭ ಮಾಯನ್ ನಾಗರಿಕತೆ ಬೆಳೆದು ಬಂತು. ಮಾಯನ್ ಜನಾಂಗದ ನಾಗರಿಕರು ಅಂದಿನ ಕಾಲದಲ್ಲೇ ಈಗಿನವರೆಗೂ ದಿನಾಂಕಗಳ ಕ್ಯಾಲೆಂಡರ್ ಮಾಡಿಟ್ಟಿದ್ದರು. ಅವರ ಕ್ಯಾಲೆಂಡರ್ 2012ನೇ ಡಿಸೆಂಬರ್ 21ಕ್ಕೆ ಅಂತ್ಯವಾಗುತ್ತದೆ. ಅಲ್ಲಿಂದ ನಂತರದ ದಿನಾಂಕಗಳ ಕ್ಯಾಲೆಂಡರ್ ಅವರು ರಚಿಸಿಲ್ಲ. ಅಲ್ಲದೆ, ಮಾಯನ್ ನಂಬಿಕೆಗಳ ಪ್ರಕಾರ, ಅವರ ಕ್ಯಾಲೆಂಡರ್ ಯಾವ ಇಸವಿಯಲ್ಲಿ ನಿಂತಿದೆಯೋ ಅದು ಬೂಮಿಯ ಅಂತ್ಯದ ದಿನ. ನಂತರ ಭೂಮಿಯಲ್ಲಿ ಪ್ರಳಯವಾಗಿ ಎಲ್ಲವೂ ವಿನಾಶ ಹೊಂದುತ್ತವೆ ಎಂದು ನಂಬಿದ್ದರು. ಇವಿಷ್ಟೇ ಅಲ್ಲದೆ, 14ನೇ ಶತಮಾನಲ್ಲಿದ್ದ ನಾಸ್ಟ್ರಡಾಮಸ್ ಎಂಬ ಜ್ಯೋತಿಷಿ ಕೂಡಾ 2012ಕ್ಕೆ ಭೂಮಿ ಸರ್ವನಾಶವಾಗುತ್ತದೆ ಎಂದು ಬರೆದಿದ್ದ ಎನ್ನಲಾಗಿದೆ. ಈ ಎಲ್ಲ ಅಂಶಗಳೂ ಇದೀಗ ಜನರಲ್ಲಿ ಭಯ ಸೃಷ್ಟಿ ಮಾಡಲು ಮೂಲ ಕಾರಣವಾಗಿದೆ.

ಆದರೂ ವಿಜ್ಞಾನಿಗಳ ಪ್ರಕಾರ, ಪ್ಲಾನೆಟ್ ಎಕ್ಸ್ ಹೆಸರಿನ ಕ್ಷುದ್ರ ಗ್ರಹ 2012ರಲ್ಲಿ ಭೂಮಿಯ ಪಕ್ಕದಲ್ಲೇ ಹಾದುಹೋಗಲಿದೆ. ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದು ಅಪ್ಪಳಿಸಿದರೆ ಈ ಹಿಂದೆ ಡೈನೋಸಾರ್ ಎಂಬ ಸಸ್ತನಿಯ ವರ್ಗವೇ ಭೂಮಿಯಿಂದ ಅಳಿಸಿಹೋದಂತೆ ಏನಾದರೂ ಅವಘಡಗಳು ಸಂಭವಿಸಲೂಬಹುದು. ಅಷ್ಟೇ ಅಲ್ಲ, 2012ರಲ್ಲೇ ಸೂರ್ಯ ಮಿಲ್ಕೀ-ವೇ ಮಧ್ಯದಲ್ಲಿರಲಿದ್ದಾನೆ. ಇದು ಭಾರೀ ಶಕ್ತಿಗಳನ್ನು ಹೊರಹಾಕುವ ಸಂಭವವೂ ಇದೆ ಎಂದು ವೈಜ್ಞಾನಿಕವಾಗಿಯೂ ಇದನ್ನು ವಿಮರ್ಶಿಸಲಾಗುತ್ತಿದೆ.

ಇದರ ಜೊತೆಜೊತೆಗೇ ಇಸ್ರೋ ವಿಜ್ಞಾನಿಗಳೂ ಸೇರಿದಂತೆ ಬಹುತೇಕ ವಿಜ್ಞಾನಿ ಸಮೂಹವೇ ಪ್ರಳಯ ಎಂಬುದೊಂದು ಕಲ್ಪನೆ ಮಾತ್ರವೇ. ಭವಿಷ್ಯದ್ಲಲಿ ಇಂಥದ್ದೊಂದು ಪ್ರಳಯ ನಡೆಯಲಿದೆ ಎಂಬುದು ತಲೆತಲಾಂತರದಿಂದ ಬಂದ ಕಲ್ಪನೆ. ಇಂಥದ್ದೊಂದು ಪ್ರಕ್ರಿಯೆ ನಡೆಯಲಾರದು. ಜನರು ಅನವಶ್ಯಕ ಭಯಭ್ರಾಂತಿಗಳಿಗೆ ಒಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ. ಹಾಗಾಗಿ ಅನಗತ್ಯ ಭಯ, ಚಿಂತೆ ಬೇಡ. ಭಯವಿಲ್ಲದೆ ಬದುಕನ್ನು ಸಂಭ್ರಮಿಸಿ, ಆನಂದಿಸಿ, ಆಸ್ವಾದಿಸಿ.

Share this Story:

Follow Webdunia kannada